
ಐತಿಹಾಸಿಕವಾಗಿ ಮಹತ್ವ ಪಡೆದಿರುವ ಸ್ಥಳಗಳನ್ನು ವೀಕ್ಷಣೆ ಮಾಡುವುದು ಅದ್ಭುತ ಅನುಭವ ನೀಡುವ ಕಾರ್ಯ. ಇದು ಜ್ಞಾನ ಹೆಚ್ಚಿಸಿಕೊಳ್ಳುವ ಕಾರ್ಯವೂ ಹೌದು, ಸೋಜಿಗಪಡುವ ಸಮಯವೂ ಹೌದು. ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕ ಪ್ರದೇಶಗಳಲ್ಲಿ ರೋಮ್ ನಗರ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಇಟಲಿಯ ರೋಮ್ ಸಿಟಿಯ ಬಗ್ಗೆ ಕೇಳದವರಿಲ್ಲ. ಇತಿಹಾಸ ಓದಿದವರಿಗೆ ರೋಮ್ ನೆನಪಿನಲ್ಲಿ ಉಳಿಯುವ ಹೆಸರು. ಐತಿಹಾಸಿಕ ಪ್ರದೇಶವಾಗಿರುವ ರೋಮ್ ನಗರದಲ್ಲಿ ವಿಶ್ವದ ನಾನಾ ಮೂಲೆಯ ಪ್ರವಾಸಿಗರು ಯಾವಾಗಲೂ ತುಂಬಿರುತ್ತಾರೆ. ಇದೀಗ, ರೋಮ್ ನಗರಕ್ಕೆ ಮತ್ತೊಂದು ಸೌಂದರ್ಯ ಸೇರ್ಪಡೆಯಾಗಿದೆ. ರೋಮ್ ನ ಅತ್ಯಂತ ಪ್ರಾಚೀನ ಕರಾಕಲ್ಲಾ ಸ್ನಾನಗೃಹದ ಪ್ರದೇಶವನ್ನು ಬರೋಬ್ಬರಿ ಒಂದು ಸಾವಿರ ವರ್ಷಗಳ ಬಳಿಕ ಈಗ ಪುನಃ ನೀರಿನಿಂದ ತುಂಬಿಸಲಾಗಿದೆ. ಈ ಮೂಲಕ ಐತಿಹಾಸಿಕ ಸ್ನಾನಗೃಹಗಳನ್ನು ಹೊಂದಿರುವ ಕರಾಕಲ್ಲಾ ಮತ್ತೊಮ್ಮೆ ಸುದ್ದಿಯಲ್ಲಿದೆ. ಪುರಾತನ ರೋಮ್ ಜನರು ಇಲ್ಲಿ ಸ್ನಾನ ಮಾಡುತ್ತಿದ್ದರು. ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲ, ಮನೋರಂಜನೆಗಾಗಿಯೂ ಈ ಸಾರ್ವಜನಿಕ ಸ್ನಾನಗೃಹಗಳು ಬಳಕೆಯಾಗುತ್ತಿದ್ದವು. ಮಧ್ಯಾಹ್ನದವರೆಗೂ ಕೆಲಸ ಮಾಡಿ ದಣಿದ ಜನರು ಮಧ್ಯಾಹ್ನದ ಬಳಿಕ ಸ್ನಾನ ಮಾಡುವುದು ಅಂದಿನವರ ಅಭ್ಯಾಸವಾಗಿತ್ತು ಎಂದು ಇತಿಹಾಸ ಹೇಳುತ್ತದೆ.
ಕರಾಕಲ್ಲಾ (Caracalla) ವಿಶ್ವದ ಅತಿದೊಡ್ಡ ಥರ್ಮಲ್ ಕಾಂಪ್ಲೆಕ್ಸ್ (Thermal Complex) ಎನಿಸಿಕೊಂಡಿದೆ. ಇಲ್ಲಿ AD 212 ಸಮಯದಲ್ಲಿ ರಾಜ ಸೆಪ್ಟಿಮಿಯರ್ ಸೆವೆರಸ್ ಎಂಬಾತ ಸ್ನಾನಗೃಹಗಳನ್ನು (Baths) ನಿರ್ಮಿಸಲು ಆರಂಭಿಸಿದ್ದ. ಅವನ ಉತ್ತರಾಧಿಕಾರಿಯಾಗಿದ್ದ ಕರಾಕಲ್ಲಾ ಇದನ್ನು ಪೂರ್ಣಗೊಳಿಸಿದ್ದ. ಹೀಗಾಗಿ, ಇದು ಕರಾಕಲ್ಲಾ ಸ್ನಾನಗೃಹ ಎನ್ನುವ ಹೆಸರನ್ನು ಪಡೆದುಕೊಂಡಿತ್ತು.
Hodophobia: ವಿಮಾನದ ಹೆಸರು ಕೇಳ್ತಿದ್ದಂತೆ ಶುರುವಾಗೋ ಭಯ ಒಂದು ಖಾಯಿಲೆ!
ಇದೊಂದು ಐತಿಹಾಸಿಕ (Historic) ಮಹತ್ವದ ಸ್ಥಳವಾಗಿದ್ದರಿಂದ ಸದಾಕಾಲ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರಾಚೀನ ರೋಮಿನ್ (Rome) ಅತಿದೊಡ್ಡ ಸಾರ್ವಜನಿಕ (Public) ಸ್ನಾನಗೃಹಗಳು ಇವಾಗಿದ್ದವು. ಬರೋಬ್ಬರಿ 33 ಎಕರೆ ಪ್ರದೇಶದಲ್ಲಿರುವ ಈ ಸ್ನಾನಗೃಹಗಳಲ್ಲಿ ಏಕಕಾಲಕ್ಕೆ 1600 ಮಂದಿ ಸ್ನಾನ ಮಾಡುವ ವ್ಯವಸ್ಥೆ ಇತ್ತು. ನೀರಿನ (Water) ಸಂಪತ್ತು ಇಲ್ಲಿ ಹೇರಳವಾಗಿತ್ತು. ಶುದ್ಧ ನೀರು, ಕೊಳಕು ನೀರು ಹರಿದು ಹೋಗುವ ವ್ಯವಸ್ಥೆಯಿತ್ತು. ಆದರೆ, ಕಾಲಕ್ರಮೇಣ ಈ ಸ್ನಾನಗೃಹಗಳು ಬಳಕೆಯಾಗದೇ ಹಾಗೆಯೇ ಉಳಿದವು. ಅಲ್ಲಿನ ಜಲಮೂಲಗಳು ಬತ್ತಿದವು ಹಾಗೂ ನೀರಿನ ಪೂರೈಕೆಯೂ ಇಲ್ಲದಂತಾಯಿತು.
ಸಾವಿರ ವರ್ಷಗಳ ಬಳಿಕ ನೀರು
ಇದೀಗ, ಬರೋಬ್ಬರಿ ಒಂದು ಸಾವಿರ (Thousand) ವರ್ಷಗಳ (Years) ಬಳಿಕ ಕೃತಕವಾಗಿ ಇಲ್ಲೊಂದು ಸರೋವರ (Lake) ನಿರ್ಮಿಸಲಾಗಿದೆ. ಕಳೆದ ಶುಕ್ರವಾರವಷ್ಟೇ ಅದನ್ನು ಉದ್ಘಾಟಿಸಲಾಗಿದ್ದು, ಸಮಾರಂಭದ ಅಂಗವಾಗಿ, ಸರೋವರದ ತಟದಲ್ಲಿ ಬ್ಯಾಲೆ ನೃತ್ಯಪಟುಗಳು ಪ್ರದರ್ಶಿಸಿದ ನೃತ್ಯ (Dance) ಮನಸೂರೆಗೊಳ್ಳುವಂತೆ ಇತ್ತು. ಕೃತಕ ಸರೋವರ ನಿರ್ಮಿಸುವ ಮೂಲಕ ಐತಿಹಾಸಿಕ ತಾಣದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಇಲ್ಲಿನ ಹಳೆಯ ಪುರಾತನ ಕಟ್ಟಡಗಳು ನೀರಿನಲ್ಲಿ ಪ್ರತಿಫಲಿಸುತ್ತವೆ. ಈ ದೃಶ್ಯ ಪ್ರವಾಸಿಗರಿಗೆ ಮುದ ನೀಡುವುದು ಗ್ಯಾರೆಂಟಿ. ಈ ಸರೋವರ 42 ಮೀಟರ್ ಅಗಲ, 32 ಮೀಟರ್ ಉದ್ದದಲ್ಲಿದೆ. ನತಾಶಿಯೊ ಮಾದರಿಯಂತೆ ಇದನ್ನು ನಿರ್ಮಿಸಿರುವುದು ವಿಶೇಷ. ನತಾಶಿಯೊ ಎಂದರೆ, ಪುರಾತನ ಕಾಲದಲ್ಲಿದ್ದ ಪ್ರಮುಖ ಸ್ನಾನಗೃಹದ ಹೆಸರು, ಇದು ಕೇಂದ್ರ (Centre) ಸ್ಥಾನದಲ್ಲಿತ್ತು.
ಭೂಮಿ ಮೇಲಿನ ಪಾತಾಳ ಲೋಕ ನೋಡಿದ್ದೀರಾ? ಇಲ್ಲಿ 100ಕ್ಕೂ ಅಧಿಕ ಜನ ವಾಸಿಸ್ತಾರೆ!
“ಸಾವಿರ ವರ್ಷಗಳಿಂದ ಇಲ್ಲಿ ಕಾಣೆಯಾಗಿದ್ದ ನೀರನ್ನು ಪುನರ್ ಸೃಷ್ಟಿಸಲಾಗಿದೆ. ಇತಿಹಾಸಕ್ಕೆ ಈ ಮೂಲಕ ಗೌರವ ಸಲ್ಲಿಸಲಾಗಿದೆʼ ಎಂದು ಈ ಸೈಟ್ ನಿರ್ದೇಶಕ ಮಿರೆಲ್ಲಾ ಸೆರ್ಲೊಜೆಂಝಿ ಹೇಳಿದ್ದಾರೆ. ಸರೋವರದ ಅಡಿಯಲ್ಲಿ ವಾಟರ್ ಜೆಟ್ ಅಳವಡಿಸಲಾಗಿದ್ದು, ಲೈಟಿಂಗ್ ವ್ಯವಸ್ಥೆಯೂ ಇದೆ. ಹಾಲಿ ಚೈತ್ರ ಮಾಸ ಮತ್ತು ಬೇಸಿಗೆಯಲ್ಲಿ ಪ್ರತಿದಿನ ಪ್ರವಾಸಿಗರಿಗೆ ಸಂಗೀತ-ನೃತ್ಯದ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.