ದೇಶದ ಪ್ರವಾಸೋದ್ಯಮ ವಲಯಕ್ಕೆ ವರವಾಗಿರುವ ಸ್ಮಾರಕಗಳು!

By Web DeskFirst Published Oct 18, 2019, 1:47 PM IST
Highlights

ಪ್ರತಿಯೊಂದು ಸ್ಮಾರಕಗಳ ಹಿಂದೆಯೂ ಹಲವಾರು ಕತೆಗಳಿರುತ್ತವೆ. ಸ್ಮಾರಕಗಳ ಸೌಂದರ್ಯದಷ್ಟೇ, ಅವುಗಳ ಇತಿಹಾಸವೂ ಜನರನ್ನು ಸೆಳೆಯುತ್ತದೆ. ಹೀಗೆ ಹೆಚ್ಚು ಪ್ರವಾಸಿಗರನ್ನು ಸೆಳೆದು ಸರಕಾರದ ಬೊಕ್ಕಸಕ್ಕೆ ಹೆಚ್ಚು ಹಣ ಮಾಡಿಕೊಡುವ ದೇಶದ ಸ್ಮಾರಕಗಳಿವು...
 

ಭಾರತದಲ್ಲಿ ಸ್ಮಾರಕಗಳಿಗೆ ಕೊರತೆಯೇ ಇಲ್ಲ. ಅವುಗಳಲ್ಲಿ ನೂರಕ್ಕೂ ಹೆಚ್ಚು ಸ್ಮಾರಕಗಳು ಪ್ರವಾಸಿಗರಿಂದ ಪ್ರವೇಶ ಶುಲ್ಕ ವಸೂಲಿ ಮಾಡುತ್ತವೆ. ಹೀಗೆ ಪ್ರವೇಶ ಶುಲ್ಕವಾಗಿ ಸಂಗ್ರಹವಾದ ಹಣ ಸರಕಾರದ ಬೊಕ್ಕಸಕ್ಕೆ ಸೇರುತ್ತದೆ. ಈ ನೂರರಲ್ಲಿ ಕೆಲ ಸ್ಮಾರಕಗಳು ಎಲ್ಲಕ್ಕಿಂತ ಹೆಚ್ಚು ಹಣ ಗಳಿಸಿಕೊಡುತ್ತವೆ. ಅಂಥ ಪ್ರಖ್ಯಾತ ಸ್ಮಾರಕಗಳ ಪಟ್ಟಿ ಇಲ್ಲಿದೆ...

ತಾಜ್ ಮಹಲ್

ಜಗತ್ತಿನ ಏಳು ಅದ್ಭುತಗಳಲ್ಲಿ ಒಂದೆನಿಸಿರುವ ತಾಜ್ ಮಹಲ್ ಉತ್ತರ ಪ್ರದೇಶದ ಆಗ್ರಾದಲ್ಲಿದೆ. ಪತ್ನಿ ಮಮ್ತಾಜ್ ಮೇಲಿನ ಶಹಜಹಾನ್ ಪ್ರೀತಿಯ ದ್ಯೋತಕವಾಗಿ ಈ ಸ್ಮಾರಕವನ್ನು ನೋಡಲಾಗುತ್ತದೆ. ಮಮ್ತಾಜ್‌ಳ ಸಮಾಧಿಯಾಗಿ ಇದನ್ನು ಯಮುನಾ ನದಿ ತೀರದಲ್ಲಿ ನಿರ್ಮಿಸುವ ಐಡಿಯಾ ಶಹಜಹಾನ್‌ನದ್ದೇ. ಈ ಸ್ಮಾರಕ ಸಂಪೂರ್ಣ ಕಟ್ಟಿ ಮುಗಿಯಲು 22 ವರ್ಷಗಳು ಬೇಕಾಗಿದ್ದು, ಭಾರತದಲ್ಲೇ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಸ್ಮಾರಕ ಇದಾಗಿದೆ. ಅಂದ ಮೇಲೆ ಕಲೆಕ್ಷನ್ ಕೂಡಾ ಇದರದ್ದು ಹೆಚ್ಚಿರಲೇಬೇಕಲ್ಲ...

ಇದೇನು ಅಚ್ಚರಿ! ದೆಹಲಿಯಲ್ಲಿ ಟಾಯ್ಲೆಟ್ ಗಾಗಿಯೇ ಇದೆ ಒಂದು ಮ್ಯೂಸಿಯಂ!

ರೆಡ್ ಫೋರ್ಟ್ 

ತಾಜ್ ಮಹಲ್ ಕಟ್ಟಿಸಿದ ಅದೇ ಮೊಘಲ್ ದೊರೆ ಶಹಜಹಾನ್ 1638ರಲ್ಲಿ ದೆಹಲಿಯಲ್ಲಿ ಶತ್ರುಗಳನ್ನು ದೂರವಿಡುವ ಸಲುವಾಗಿ ಕೆಂಪು ಕೋಟೆ ಕಟ್ಟಿಸಿದ. ಸುಮಾರು 2 ಕಿಲೋಮೀಟರ್ ಹರಡಿರುವ ರೆಡ್ ಫೋರ್ಟ್ ರಾಜಧಾನಿಯಲ್ಲಿರುವ ಅತಿ ಉದ್ದದ ಪಾರಂಪರಿಕ ಕಟ್ಟಡ. ಬ್ರಿಟಿಷರು ಹಾಗೂ ಸಿಖ್ಖರು ವಶಪಡಿಸಿಕೊಳ್ಳುವವರೆಗೂ ಈ ಕೋಟೆ ಯಾರಿಂದಲೂ ಬೇಧಿಸಲಾಗದ್ದು ಎನಿಸಿಕೊಂಡಿತ್ತು. ಸಧ್ಯ ಇದು ವಿಶ್ವ ಪಾರಂಪರಿಕ ತಾಣವೆಂದು ಯುನೆಸ್ಕೋದಿಂದ ಕರೆಸಿಕೊಂಡಿದ್ದು, ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ. ದೆಹಲಿಯ ಕತೆ ತಿಳಿಯಬಯಸುವವರು ಚಾಂದಿನಿ ಚೌಕ್‌ನಲ್ಲಿರುವ ರೆಡ್ ಫೋರ್ಟ್‌ಗೆ ಹೋಗಿಯೇ ಹೋಗುತ್ತಾರೆ.

ಕುತುಬ್ ಮಿನಾರ್

ಪ್ರಾಚೀನ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿರುವ ಕುತುಬ್ ಮಿನಾರ್ ಜಗತ್ತಿನಲ್ಲೇ ಅತಿ ಎತ್ತರದ ಇಟ್ಟಿಗೆಯ ಮಿನಾರ್ ಹೊಂದಿದೆ. 13ನೇ ಶತಮಾನದಲ್ಲಿ ದೆಲ್ಲಿ ಸುಲ್ತಾನ ಕುತುಬುದ್ದೀನ್ ಐಬಕ್ ಇದನ್ನು ನಿರ್ಮಿಸಿದ ಎಂದು ನಂಬಲಾಗಿದೆ. ಆದರೆ, ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಕೆಲ ಇತಿಹಾಸಕಾರರು ಇದು ಹಿಂದೂ ಸ್ಮಾರಕವೆಂದು ವಾದಿಸುತ್ತಾರೆ. ಈ ಮಿನಾರೆಟ್ ದೆಹಲಿಯ ಅತಿ ಹಳೆಯ, ಅತಿ ಪಾಶ್ ಆದ ಮೆಹ್ರಾಲಿ ಪ್ರದೇಶದಲ್ಲಿದೆ. 

ದೇಶದಲ್ಲೇ ಅತಿ ಉದ್ದದ ರೈಲುಗಳಿವು; ನೀವು ಪಯಾಣಿಸಿದ್ದೀರಾ?

ಹುಮಾಯೂನ್ಸ್ ಟೋಂಬ್

ಎರಡನೇ ಮೊಘಲ್ ಚಕ್ರವರ್ತಿ ಹುಮಾಯೂನ್ ಶವವನ್ನು ಕಾಪಾಡುವ ಸಲುವಾಗಿ 1570ರಲ್ಲಿ ಈ ಸಮಾಧಿ ನಿರ್ಮಿಸಲಾಗಿದೆ. ಇದೇ ಸ್ಮಾರಕ ತಾಜ್‌ಮಹಲ್ ನಿರ್ಮಾಣಕ್ಕೆ ಸ್ಪೂರ್ತಿ ಎನ್ನಲಾಗುತ್ತದೆ. ಇದರ ಕಟ್ಟಡ ಹಾಗೂ ಉದ್ಯಾನಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ.

ಆಗ್ರಾ ಫೋರ್ಟ್

ತಾಜ್ ಮಹಲ್‌ನಷ್ಟು ಜನಪ್ರಿಯವಲ್ಲದಿರಬಹುದು, ಆದರೆ ಆಗ್ರಾಕ್ಕೆ ಹೋದವರು ಆಗ್ರಾ ಫೋರ್ಟ್ ನೋಡದೆ ಹಿಂದಿರುಗಲಾರರು. ರಜಪೂತ ರಾಜರ ಇಟ್ಟಿಗೆಯ ಕೋಟೆ ಇದು. ಆದರೆ, ನಂತರದಲ್ಲಿ ಮೊಘಲರು ಇದನ್ನು ವಶಪಡಿಸಿಕೊಂಡರು. ನಂತರದಲ್ಲಿ ಕೋಟೆಯನ್ನು ಮೊಘಲ್ ವಾಸ್ತುಶಿಲ್ಪಕ್ಕೆ ಸರಿಯಾಗಿ ಬದಲಾಯಿಸಲಾಯಿತು. ಆ ಬಳಿಕ ಮೊಘಲ್ ಚಕ್ರವರ್ತಿ ಅಕ್ಬರ್ ತನ್ನ ರಾಜಧಾನಿಯನ್ನು ಆಗ್ರಾಕ್ಕೆ ಸ್ಥಳಾಂತರಿಸಿ, ಇದೇ ಕೋಟೆಯಲ್ಲಿ ವಾಸ ಮಾಡತೊಡಗಿದ. ಬಹಳ ಸುಂದರವಾಗಿರುವ ಈ ಕೋಟೆಯ ಒಂದು ಭಾಗ ಮಾತ್ರ ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಗಿಲ್ಲ.

ರಾಜ್ಯದ 20 ಪ್ರವಾಸಿ ಸ್ಥಳಗಳು ಶೀಘ್ರ ವಿಶ್ವದರ್ಜೆಗೆ!

ಫತೇಪುರ್ ಸಿಕ್ರಿ

ಈ ಪಟ್ಟಣವು ಈಗ ಕುಡಿಯುವ ನೀರಿನ ಕೊರತೆಯಿಂದಾಗಿ ವಾಸಯೋಗ್ಯವಾಗಿಲ್ಲ. ಆದರೆ ಇದು ಅಕ್ಬರ್ ಆಡಳಿತದ ಕಾಲದಲ್ಲಿ ಬಹಳ ಪ್ರಮುಖವಾದ ಪಟ್ಟಣವಾಗಿತ್ತು. ಆಗ್ರಾದಿಂದ 40 ಕಿಲೋಮೀಟರ್ ದೂರವಿರುವ ಈ ಪಟ್ಟಣಕ್ಕೀಗ ಕುತೂಹಲ ಹೆಚ್ಚಿರುವ ಪ್ರವಾಸಿಗರು ಮಾತ್ರ ಪ್ರವೇಶಿಸುತ್ತಾರೆ.

ಖಜುರಾಹೋ

ನಗ್ನ ಶಿಲ್ಪಕಲೆ ಹೊಂದಿದ ದೇವಾಲಯಗಳಿಗೆ ಖಜುರಾಹೋ ಫೇಮಸ್. ಮಧ್ಯಪ್ರದೇಶದ ಈ ನಗರಕ್ಕೆ ಖರ್ಜೂರದಿಂದಾಗಿ ಈ ಹೆಸರು ಬಂದಿದೆ. ಅಂದರೆ, ಖರ್ಜೂರದ ಮರಗಳು ಹೆಚ್ಚಾಗಿರುವುದರಿಂದ ಖಜುರಾಹೋ ಹೆಸರು ಬಂದಿದೆ. 1850ರವರೆಗೂ ಶತಮಾನಗಳ ಕಾಲ ಖಜುರಾಹೋ ಕಡೆಗಣನೆಗೆ ಒಳಗಾಗಿತ್ತು. ಮಾತಂಗೇಶ್ವರ ಶಿವ ಫೆಸ್ಟಿವಲ್ ಹಾಗೂ ಪನ್ನಾ ರಾಷ್ಟ್ರೀಯ ಉದ್ಯಾನವನದಿಂದಾಗಿ ಈ ನಗರಕ್ಕೆ ಹೆಚ್ಚಾಗಿ ಪ್ರವಾಸಿಗರು ಬರುತ್ತಾರೆ.

ಅಜಂತಾ ಹಾಗೂ ಎಲ್ಲೋರಾ ಗುಹೆಗಳು

2 ಹಾಗೂ 11ನೇ ಶತಮಾನದ ನಡುವಿನ ರಾಜರು ಈ ಗುಹೆಗಳನ್ನು ಕಟ್ಟಿಸಿದ್ದಾರೆ. ಎಲ್ಲೋರಾದಲ್ಲಿ ಸುಮಾರು 34 ಗುಹೆಗಳಿದ್ದರೆ, ಅಜಂತಾದಲ್ಲಿ 29 ಗುಹೆಗಳಿವೆ. ಬೌದ್ಧ ಭಿಕ್ಷುಗಳ ಆವಾಸಸ್ಥಾನವಾಗಿದ್ದವು ಈ ಗುಹೆಗಳು. ಎಲ್ಲೋರಾ ಗುಹೆಗಳು ಜಗತ್ತಿನಲ್ಲೇ ಅತಿ ದೊಡ್ಡ ಏಕಶಿಲಾ ಕೆತ್ತನೆಗಳಾಗಿ ಖ್ಯಾತಿ ಪಡೆದಿವೆ.

click me!