ಆನ್‌ಲೈನ್ ಗೇಮ್ ಆಡುವಾಗ ನಕಲಿ ಸಂದೇಶ ಕ್ಲಿಕ್ ಮಾಡಿ ಅಮ್ಮನ ಖಾತೆಯಿಂದ 2 ಲಕ್ಷ ರೂ. ಹಣ ಕಳೆದಿರುವ ಬಾಲಕ ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಬೈ: ನಲಸೋಪರದ 18 ವರ್ಷದ ವಿದ್ಯಾರ್ಥಿಯೊಬ್ಬ ಸೈಬರ್ ವಂಚನೆಯಲ್ಲಿ 2 ಲಕ್ಷ ರೂಪಾಯಿ ವಂಚನೆಗೊಳಗಾದ ಕೆಲವೇ ಗಂಟೆಗಳ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕ ತನ್ನ ತಾಯಿಯ ಸೆಲ್‌ಫೋನ್‌ನಲ್ಲಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದನು ಮತ್ತು ಅವನ ತಾಯಿಯ ಬ್ಯಾಂಕ್ ಖಾತೆಯಿಂದ ಹಣವನ್ನು ತೆಗೆವ ಮೋಸದ ಲಿಂಕ್ ಅನ್ನು ತಿಳಿಯದೆ ಕ್ಲಿಕ್ ಮಾಡಿದ್ದಾನೆ. ಪರಿಣಾಮವಾಗಿ ತಂದೆ ತಾಯಿ ಬಯ್ಯುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಊಹಿಸಲಾಗಿದೆ.
ಫಸ್ಟ್ ಪಿಯುಸಿ ವಿದ್ಯಾರ್ಥಿಯು ತಿಳಿಯದೆ ವಂಚನೆಯ ಲಿಂಕ್ ಕ್ಲಿಕ್ ಮಾಡಿದ್ದಾನೆ. ಹಣ ಕಟ್ ಆಗಿದ್ದು ತಿಳಿಯುತ್ತಿದ್ದಂತೆಯೇ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಮೃತಪಟ್ಟಿದ್ದಾನೆ. ಆತ ಈ ವಿಷಯವಾಗಿ ಪೋಷಕರಿಗೆ ತಿಳಿಸಿಲ್ಲ.
ಒಂದು ವೇಳೆ ವಿದ್ಯಾರ್ಥಿಯು ತಾನು ಹೀಗೆ ಸೈಬರ್ ವಂಚನೆಗೆ ಒಳಗಾಗಿರುವ ವಿಷಯವನ್ನು 24 ಗಂಟೆಗಳ ಒಳಗೆ ಸೈಬರ್ ಕ್ರೈಮ್ ಸೆಲ್‌ಗೆ ತಿಳಿಸಿದ್ದರೆ ಹಣ ಮರಳಿ ಪಡೆಯುವ ಸಾಧ್ಯತೆ ಹೆಚ್ಚಿತ್ತು. ಆದರೆ, ಈ ಬಗ್ಗೆ ಮಾಹಿತಿ ಇಲ್ಲದೆ ವಿದ್ಯಾರ್ಥಿ ಭಯ ಪಟ್ಟಿದ್ದಾನೆ ಎಂದು ಪೋಲೀಸರು ಶಂಕಿಸಿದ್ದಾರೆ.
ಪೋಷಕರು ಮಾಡಬೇಕಾದ್ದೇನು?
ಇಂಥ ಸೈಬರ್ ವಂಚನೆ ಪ್ರಕರಣಗಳು ನಡೆದಾಗ ಮೊದಲು ತಮ್ಮ ಗಮನಕ್ಕೆ ತರುವಂತೆ ಮಕ್ಕಳಿಗೆ ತಿಳಿ ಹೇಳಬೇಕು. ಸೈಬರ್ ಕ್ರೈಂ ವಿಭಾಗಕ್ಕೆ ತಿಳಿಸಿದರೆ ಕೂಡಲೇ ಆ ಹಣ ಯಾವ ಖಾತೆಗೆ ಹೋಗಿದೆ ಎಂಬುದನ್ನು ಬ್ಯಾಂಕ್ ಸಹಕಾರದಿಂದ ತಿಳಿದು ಖಾತೆಯನ್ನು ಸ್ಥಗಿತಗೊಳಿಸುತ್ತಾರೆ ಮತ್ತು ಹಣ ಮರಳುವಂತೆ ಮಾಡುತ್ತಾರೆ. www.cybercrime.gov.in ಈ ವೆಬ್‌ಸೈಟ್‌ನಲ್ಲಿ ವಂಚನೆ ರಿಪೋರ್ಟ್ ಮಾಡಬಹುದು. ಇಲ್ಲವೇ 1930 ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ ಸೈಬರ್ ಅಪರಾಧದ ವಿಷಯ ತಿಳಿಸಿದರೆ ಮುಂದಿನ ಕ್ರಮ ಅವರು ಕೈಗೊಳ್ಳುತ್ತಾರೆ.
ಮಕ್ಕಳ ಆನ್‌ಲೈನ್ ಚಟುವಟಿಕೆ ಬಗ್ಗೆ ಗಮನವಿರಲಿ
ಇಂದಿನ ಡಿಜಿಟಲ್ ಯುಗದಲ್ಲಿ, ನಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ವಿಶೇಷವಾಗಿ ಮೊಬೈಲ್ ಗೇಮಿಂಗ್ ಮತ್ತು ಅಪ್ಲಿಕೇಶನ್‌ನಲ್ಲಿನ ಖರೀದಿಗಳ ಬಗ್ಗೆ ಎಚ್ಚರದಿಂದಿರುವುದು ಅತ್ಯಗತ್ಯ. ಮೊಬೈಲ್ ಪಾವತಿಗಳ ಅನುಕೂಲತೆಯೊಂದಿಗೆ, ಪರಿಣಾಮಗಳನ್ನು ಅರಿತುಕೊಳ್ಳದೆ ನಮ್ಮ ಮಕ್ಕಳು ಅಜಾಗರೂಕತೆಯಿಂದ ಖರೀದಿಗಳನ್ನು ಮಾಡಬಹುದು. ಆದ್ದರಿಂದ, ಗೇಮಿಂಗ್ ಉದ್ದೇಶಗಳಿಗಾಗಿ ನಿಮ್ಮ ಮಕ್ಕಳು ಮೊಬೈಲ್ ಸಾಧನಗಳ ಮೂಲಕ ಮಾಡಿದ ಆನ್‌ಲೈನ್ ಪಾವತಿ ವರ್ಗಾವಣೆಗಳ ಬಗ್ಗೆ ಗಮನಿಸುತ್ತಿರಬೇಕು.