‘ಬುಲ್ಲಿ ಬಾಯಿ’ (Bully Bai) ಎಂಬ ಆ್ಯಪ್ ಬಹಳ ಸುದ್ದಿ ಮಾಡುತ್ತಿದೆ. ಈಗಾಗಲೇ ಈ ಆ್ಯಪ್ ವಿರುದ್ಧ ದೂರು ದಾಖಲಾಗಿ, ಆ್ಯಪ್ ಬಳಕೆಗೆ ಸಿಗದಂತೆ ಮಾಡಿ, ಆ್ಯಪ್ ಸೃಷ್ಟಿಕರ್ತ ಹಾಗೂ ನಿರ್ವಾಹಕರಾದ ಇಬ್ಬರು 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಒಬ್ಬಳು 19 ವರ್ಷದ ಯುವತಿಯನ್ನು ಬಂಧಿಸಲಾಗಿದೆ
‘ಬುಲ್ಲಿ ಬಾಯಿ’ (Bully Bai) ಎಂಬ ಆ್ಯಪ್ ಬಹಳ ಸುದ್ದಿ ಮಾಡುತ್ತಿದೆ. ಈಗಾಗಲೇ ಈ ಆ್ಯಪ್ ವಿರುದ್ಧ ದೂರು ದಾಖಲಾಗಿ, ಆ್ಯಪ್ ಬಳಕೆಗೆ ಸಿಗದಂತೆ ಮಾಡಿ, ಆ್ಯಪ್ ಸೃಷ್ಟಿಕರ್ತ ಹಾಗೂ ನಿರ್ವಾಹಕರಾದ ಇಬ್ಬರು 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಒಬ್ಬಳು 19 ವರ್ಷದ ಯುವತಿಯನ್ನು ಬಂಧಿಸಲಾಗಿದೆ
ಆದರೂ ಈ ಆ್ಯಪ್ ಸುತ್ತಲಿನ ವಿವಾದ ನಿಂತಿಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಸಿಗುವ ಮಹಿಳೆಯರ ಫೋಟೋಗಳನ್ನು ಅವರಿಗೆ ಗೊತ್ತಿಲ್ಲದೆಯೇ ಯಾರಾರಯರೋ ಎಲ್ಲೆಲ್ಲೋ ದುರ್ಬಳಕೆ ಮಾಡಿಕೊಳ್ಳುವ ಅಸಂಖ್ಯ ಉದಾಹರಣೆಗಳಲ್ಲಿ ಇದೂ ಒಂದು. ಹಾಗಿದ್ದರೆ ಬುಲ್ಲಿ ಬಾಯಿ ವಿವಾದ ನಿಜಕ್ಕೂ ಏನು? ಮಹಿಳೆಯರ ಫೋಟೋಗಳನ್ನು ಆನ್‌ಲೈನ್ ಸಮುದ್ರದಲ್ಲಿ ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ? ಅದರ ಬಗ್ಗೆ ಮಹಿಳೆಯರು ಹೇಗೆ ಎಚ್ಚರ ವಹಿಸಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.
undefined
ಏನಿದು ಬುಲ್ಲಿ ಬಾಯಿ ವಿವಾದ?
ಆರು ತಿಂಗಳ ಹಿಂದೆ ‘ಸುಲ್ಲಿ ಡೀಲ್ಸ್’ ಎಂಬ ಆ್ಯಪ್ ಬಂದಿತ್ತು. ಕೆಲವರು ಮೋಜಿಗಾಗಿ ಆ ಆ್ಯಪ್ ಸೃಷ್ಟಿಮಾಡಿ, ತಮ್ಮ ಸ್ನೇಹಿತ ವಲಯದಲ್ಲಿ ಬಳಸುತ್ತಿದ್ದರು. ಸುಲ್ಲಿ ಅಂದರೆ ಮುಸ್ಲಿಂ ಮಹಿಳೆಯನ್ನು ಕೀಳಾಗಿ ಬಳಸುವ ಪದ. ಆ ಆ್ಯಪ್‌ನಲ್ಲಿ ಸೋಷಿಯಲ್ ಮೀಡಿಯಾಗಳಿಂದ ಡೌನ್‌ಲೋಡ್ ಮಾಡಿದ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅಪ್‌ಲೋಡ್ ಮಾಡಿ, ಅದಕ್ಕೆ ಕೆಟ್ಟಕೆಟ್ಟಕಮೆಂಟ್‌ಗಳನ್ನು ಹಾಕುವುದು, ತಮಾಷೆಗೆ ಹರಾಜು ಹಾಕಿ ವಿಕೃತ ಆನಂದ ಪಡೆಯುವುದು ಮಾಡುತ್ತಿದ್ದರು. ಆ ಆ್ಯಪ್ ನಿಷೇಧವಾದ ನಂತರ ಹುಟ್ಟಿಕೊಂಡಿದ್ದೇ ಬುಲ್ಲಿ ಬಾಯಿ ಆ್ಯಪ್. ಇದೂ ಸುಲ್ಲಿ ಡೀಲ್ಸ್‌ನಂತೆಯೇ ಕೆಲಸ ಮಾಡುತ್ತಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿರುವ, ಸ್ವಲ್ಪ ಪ್ರಸಿದ್ಧರೂ ಆಗಿರುವ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಅವರಿಗೆ ಗೊತ್ತಿಲ್ಲದಂತೆ ಇಲ್ಲಿ ಅಪ್‌ಲೋಡ್ ಮಾಡಿ ಮೋಜಿಗಾಗಿ ಹರಾಜು ಹಾಕಲಾಗುತ್ತಿತ್ತು.
Search Engine ವ್ಯವಹಾರದಿಂದ Apple ದೂರವಿಡಲು Google ನಿಂದ ಬಿಲಿಯನ್‌ಗಟ್ಟಲೇ ಹಣ ಸಂದಾಯ!
ಸೀಮಿತ ಸಂಖ್ಯೆಯ ಬಳಕೆದಾರರು ಈ ಆ್ಯಪ್‌ಗಿದ್ದರು. ಕೆಲವರು ಅದರಲ್ಲಿ ಫೋಟೋ ಜೊತೆ ಮಹಿಳೆಯರ ನಿಜವಾದ ಫೇಸ್‌ಬುಕ್, ಟ್ವೀಟರ್, ಇನ್‌ಸ್ಟಾಇತ್ಯಾದಿ ಐಡಿಗಳನ್ನೂ ಟ್ಯಾಗ್ ಮಾಡಲು ಆರಂಭಿಸಿದರು. ಅದರಿಂದಾಗಿ ಡಿಸೆಂಬರ್ ಕೊನೆಯ ವಾರ ಹಾಗೂ ಜನವರಿ ಮೊದಲ ವಾರದಲ್ಲಿ ಬುಲ್ಲಿ ಬಾಯಿ ಆ್ಯಪ್‌ನಲ್ಲಿ ಹರಾಜಿಗಿಟ್ಟಿರುವ ಮಹಿಳೆಯರ ಫೋಟೋದ ಲಿಂಕ್‌ಗಳು ಮುಖ್ಯವಾಹಿನಿಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿದವು. ಆಗ ಆ ಮಹಿಳೆಯರು ಸಾಮಾಜಿಕವಾಗಿ ತೀವ್ರ ಮುಜುಗರ ಅನುಭವಿಸುವಂತಾಯಿತು. ನಂತರ ದೂರು ದಾಖಲಾಗಿ, ಆ್ಯಪ್ ಅಮಾನತುಪಡಿಸಿ, ಅದರ ನಿರ್ವಾಹಕರನ್ನು ಬಂಧಿಸಲಾಯಿತು.
ಬುಲ್ಲಿ ಬಾಯಿ ಅಂದರೇನು?
ಬುಲ್ಲಿ ಎಂಬುದು ಕನ್ನಡ, ಮರಾಠಿ, ಹಿಂದಿ ಮುಂತಾದ ಭಾಷೆಗಳಲ್ಲಿ ಕೆಲ ಪ್ರದೇಶಗಳಲ್ಲಿ ಮಹಿಳೆಯರ ಜನನಾಂಗಕ್ಕೆ ಅಶ್ಲೀಲವಾಗಿ ಬಳಸುವ ಪದ. ಬಾಯಿ ಎಂಬುದು ಮಹಿಳೆಯರನ್ನು ಸಂಬೋಧಿಸುವ ಪದ. ಮನೆಗೆಲಸದವಳು ಎಂಬರ್ಥವೂ ಇದೆ. ಈ ಆ್ಯಪ್‌ನ ಹೆಸರು ಕೇಳಿದೊಡನೆಯೇ ಇದರ ಹಿಂದಿರುವ ಅಶ್ಲೀಲ ಆಶಯವೂ ಬಹುತೇಕರಿಗೆ ಅರ್ಥವಾಗುತ್ತದೆ.
ಸುಮ್ನೆ ತಮಾಷೆಗಾಗಿ ಕಣ್ರೀ!
ಈ ಆ್ಯಪ್‌ನಲ್ಲಿ ಮುಸ್ಲಿಂ ಮಹಿಳೆಯರ ಫೋಟೋಗಳನ್ನು ಹರಾಜಿಗಿಟ್ಟು, ಅದಕ್ಕೆ ಜಸ್ಟ್ ಫಾರ್ ಫನ್ ಎಂದು ಕ್ಯಾಪ್ಷನ್ ಹಾಕಲಾಗುತ್ತಿತ್ತು. ಆ್ಯಪ್ ವೈರಲ್ ಆದ ನಂತರವೂ ಕೆಲವರು ‘ಯಾರೋ ಒಂದಷ್ಟುಹುಡುಗರು ತಮಾಷೆಗಾಗಿ ಮಾಡಿದ ಕೆಲಸ ಇದು. ಅಷ್ಟೊಂದು ದೊಡ್ಡದು ಮಾಡುವುದೇಕೆ’ ಎಂದು ವಾದಿಸಿದ್ದರು. ಮಾಧ್ಯಮಗಳು ಬೇಕಂತಲೇ ಅತಿರಂಜಕವಾಗಿ ಸುದ್ದಿ ಮಾಡುತ್ತಿವೆ ಎಂಬ ಟೀಕೆಗಳೂ ಬಂದಿದ್ದವು. ಇಷ್ಟಕ್ಕೂ ಇಲ್ಲಿ ಹರಾಜು ಹಾಕಿಸಿಕೊಂಡ ಮಹಿಳೆಯರು ನಿಜವಾಗಿಯೂ ಹರಾಜಾಗುತ್ತಿರಲಿಲ್ಲ ಮತ್ತು ತಮ್ಮ ಫೋಟೋ ಯಾವುದೋ ಆ್ಯಪ್‌ನಲ್ಲಿ ಹೀಗೆ ಹರಿದಾಡುತ್ತಿದೆ ಎಂಬುದು ಅವರಿಗೆ ಗೊತ್ತೇ ಆಗುತ್ತಿರಲಿಲ್ಲ.
ಆದರೆ, ಸಭ್ಯ ಹೆಣ್ಣುಮಕ್ಕಳ ಫೋಟೋವನ್ನು ಹೀಗೆ ಅವರಿಗೆ ಗೊತ್ತಿಲ್ಲದಂತೆ ಬಳಸಿಕೊಂಡು, ಅದಕ್ಕೆ ಅಶ್ಲೀಲ ಕಮೆಂಟ್‌ಗಳನ್ನು ಮಾಡುವುದು, ಅದರಿಂದ ವಿಕೃತ ಆನಂದ ಪಡೆಯುವುದನ್ನು ನಾಗರಿಕ ಸಮಾಜ ಒಪ್ಪುವುದೇ? ಆ ಮಹಿಳೆಗೆ ಅಥವಾ ಆಕೆಯ ಪತಿ, ಅಣ್ಣ ತಮ್ಮಂದಿರು, ಅಪ್ಪ ಅಮ್ಮ, ಸಂಬಂಧಿಕರು ಮುಂತಾದವರಿಗೆ ಆಕೆಯ ಫೋಟೋ ‘ಹಾಟ್ ಆಂಟಿ ಅವೈಲೇಬಲ್’, ‘ಚಾಟ್ ವಿತ್ ಹರ್’ ಇತ್ಯಾದಿ ಕ್ಯಾಪ್ಷನ್‌ಗಳೊಂದಿಗೆ ಡೇಟಿಂಗ್ ಆ್ಯಪ್ ಅಥವಾ ಕೀಳು ಅಭಿರುಚಿಯ ಆ್ಯಪ್‌ಗಳಲ್ಲಿ ಕಾಣಿಸಿದರೆ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಎಷ್ಟುಮುಜುಗರ ಉಂಟಾಗಬಹುದು?
ಪೋರ್ನ್ ಆ್ಯಪ್‌ಗಳಿಗಿಂತ ಭಿನ್ನ
ಪೋರ್ನ್ ಆ್ಯಪ್ ಅಥವಾ ವೆಬ್‌ಸೈಟುಗಳಲ್ಲಿ ಪೋರ್ನ್ ಸ್ಟಾರ್‌ಗಳನ್ನೇ ಬಳಸಿ ಚಿತ್ರೀಕರಿಸಿದ ಅಥವಾ ಕೆಲವರು ತಾವೇ ಹಣಕ್ಕಾಗಿ ಅಪ್‌ಲೋಡ್ ಮಾಡುವ ವಿಡಿಯೋಗಳಿರುತ್ತವೆ. ಆದರೆ, ಬುಲ್ಲಿ ಬಾಯಿ ರೀತಿಯ ಆ್ಯಪ್‌ಗಳಲ್ಲಿ ಮಹಿಳೆಯರ ಫೋಟೋಗಳನ್ನು ಕದ್ದು, ತಿರುಚಿ, ಯಾರದ್ದೋ ದೇಹಕ್ಕೆ ಯಾರದ್ದೋ ಮುಖ ಜೋಡಿಸಿ, ಅಶ್ಲೀಲವಾಗಿ ಬಳಸಲಾಗುತ್ತದೆ.
WhatsApp Features: ಮೆಸೇಜ್ ನೋಟಿಫಿಕೇಶನ್ ಜತೆ ಪ್ರೊಫೈಲ್ ಫೋಟೋ ತೋರಿಸಲಿರುವ ವಾಟ್ಸಾಪ್!
ಸ್ತ್ರೀಯರ ಫೋಟೋ, ವಿಡಿಯೋ ಎಲ್ಲೆಲ್ಲಿ ದುರ್ಬಳಕೆಯಾಗುತ್ತವೆ?
ಫೇಸ್‌ಬುಕ್, ಟ್ವೀಟರ್, ಇನ್‌ಸ್ಟಾ, ಲಿಂಕ್ಡಿನ್ ಇತ್ಯಾದಿ ಮುಖ್ಯವಾಹಿನಿಯ ಸೋಷಿಯಲ್ ಮೀಡಿಯಾಗಳಿಂದ ಮಹಿಳೆಯರ ಫೋಟೋ ಹಾಗೂ ವಿಡಿಯೋಗಳನ್ನು ಡೌನ್‌ಲೋಡ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಂಡು ಅನೇಕ ಡೇಟಿಂಗ್ ಆ್ಯಪ್‌ಗಳು ಗ್ರಾಹಕರನ್ನು ಸೆಳೆಯಲು ಬಳಸಿಕೊಳ್ಳುತ್ತವೆ. ಸಭ್ಯ ಮಹಿಳೆಯರ ಫೋಟೋಗೆ ‘ನಿಮಗಾಗಿ ಕಾಯುತ್ತಿದ್ದಾಳೆ’ ‘ನಿಮ್ಮ ಮನೆಯಿಂದ ಕೇವಲ 3 ಕಿ.ಮೀ. ದೂರ’ ‘ಖುಷಿ ಬೇಕು ಅಂದರೆ ಮೆಸೇಜ್ ಮಾಡಿ’ ‘ಓನ್ಲಿ ಆಂಟೀಸ್ ಹಿಯರ್’ ‘ನೋ ಒನ್ ಹೋಮ್’ ಇತ್ಯಾದಿ ಕ್ಯಾಪ್ಷನ್ ಹಾಕಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ಅದನ್ನು ಕ್ಲಿಕ್ ಮಾಡಿದರೆ ಲಿಂಕ್ ಆ ಆ್ಯಪ್‌ಗೆ ಹೋಗುತ್ತದೆ. ಮೂರನೇ ದರ್ಜೆಯ ಉತ್ಪನ್ನಗಳನ್ನು ಮಾರುವ ಅಥವಾ ವೇಶ್ಯಾವಾಟಿಕೆ ನಡೆಸುವ ಆನ್‌ಲೈನ್ ತಾಣಗಳು ಜಾಹೀರಾತಿಗೂ ಸಭ್ಯ ಮಹಿಳೆಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ.
ಇದು ಅಪರಾಧವಲ್ಲವೇ? ಶಿಕ್ಷೆ ಏನು?
ಯಾರದೇ ಫೋಟೋವನ್ನು ಅವರಿಗೆ ಗೊತ್ತಿಲ್ಲದೆ ಬಳಸಿಕೊಳ್ಳುವುದು ಕಾನೂನಿನ ಪ್ರಕಾರ ನಿಷಿದ್ಧ. ಅದರ ವಿರುದ್ಧ ಐಪಿಸಿ 354ಸಿ ಅಡಿ ಕೇಸ್ ದಾಖಲಿಸಬಹುದು. ಜೊತೆಗೆ ಮಾನಹಾನಿ ಕೇಸ್ ಕೂಡ ದಾಖಲಿಸಬಹುದು. ಬುಲ್ಲಿ ಬಾಯಿಯಂತಹ ಆ್ಯಪ್‌ಗಳಲ್ಲಿ ಬರುವ ಅಶ್ಲೀಲ ಕಮೆಂಟ್‌ಗಳ ವಿರುದ್ಧ ‘ಮಹಿಳೆಯ ಗೌರವಕ್ಕೆ ಧಕ್ಕೆ’ ತಂದ ಆರೋಪದಡಿ ಐಪಿಸಿ ಸೆಕ್ಷನ್ 499, 503, 506, 507, 509 ಅಡಿ ಪ್ರಕರಣ ದಾಖಲಿಸಬಹುದು. ಐಟಿ ಕಾಯ್ದೆಯ ಸೆಕ್ಷನ್ 66ಸಿ, 66ಇ, 67, 67ಎ ಮುಂತಾದವುಗಳಡಿ ಇಂತಹ ಆ್ಯಪ್ ಅಥವಾ ವೆಬ್‌ಸೈಟ್ ಸೃಷ್ಟಿಸುವವರನ್ನು ಜೈಲಿಗೆ ಹಾಕಬಹುದು.
ಆನ್‌ಲೈನಲ್ಲಿ ಸುರಕ್ಷಿತವಾಗಿರಲು ಮಹಿಳೆಯರು ಏನು ಮಾಡಬಹುದು?
- ಫೇಸ್‌ಬುಕ್‌ನಲ್ಲಿ ಪ್ರೊಫೈಲ್ ಲಾಕ್ ಮಾಡಿಕೊಂಡು, ಸ್ನೇಹಿತರಿಗೆ ಮಾತ್ರ ತಮ್ಮ ಫೋಟೋ, ವಿಡಿಯೋ ಕಾಣಿಸುವಂತೆ ನೋಡಿಕೊಳ್ಳುವುದು.
- ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋ ಅಪ್‌ಲೋಡ್ ಮಾಡುವಾಗ ಡೌನ್‌ಲೋಡ್ ಹಾಗೂ ಸ್ಕ್ರೀನ್‌ಶಾಟ್ ಡಿಸೇಬಲ್ ಮಾಡುವುದು.
- ಖಾಸಗಿ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅನಗತ್ಯವಾಗಿ ಹಂಚಿಕೊಳ್ಳದೆ ಇರುವುದು.
- ಆಗಾಗ ಗೂಗಲ್‌ನಲ್ಲಿ ತಮ್ಮ ಫೋಟೋವನ್ನೇ ‘ಇಮೇಜ್ ಸಚ್‌ರ್’ ಮಾಡಿ ಬೇರೆಲ್ಲಾದರೂ ಬಳಕೆಯಾಗಿದೆಯೇ ಎಂದು ಪರೀಕ್ಷಿಸುವುದು.
- ಫೋಟೋ ದುರ್ಬಳಕೆ ಗಮನಕ್ಕೆ ಬಂದರೆ ನಿರ್ಲಕ್ಷಿಸದೆ ತಕ್ಷಣ ಸೈಬರ್ ಪೊಲೀಸರಿಗೆ ದೂರು ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು.
- ಅಪ್ಪಿತಪ್ಪಿಯೂ ಫೋನ್ ನಂಬರ್‌ಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡದಿರುವುದು.