ಮಳೆಗಾಲದಲ್ಲಿ ನಿಮ್ಮ ಗ್ಯಾಜೆಟ್‌ಗಳ ಸುರಕ್ಷತೆಗೆ ಹೀಗ್ ಮಾಡಿ!

By Web DeskFirst Published Jun 13, 2019, 7:41 PM IST
Highlights

ಮಳೆಯಲ್ಲಿ ಗ್ಯಾಜೆಟ್‌ಗಳನ್ನು ಬಳಸುವುದಕ್ಕಿಂತಾ ಸುಲಭವಾಗಿ ಅವುಗಳಿಗೆ ಮುಕ್ತಿ ನೀಡುವ ಮಾರ್ಗ ಇನ್ನೊಂದಿಲ್ಲ. ನಿಮ್ಮ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಮಳೆಗಾಲವೇ ಹೆಚ್ಚಿನ ಕೇಡುಗಾಲ. ಮಳೆಯಲ್ಲಿ ನಿಮ್ಮ ಮೊಬೈಲ್ ಫೋನ್ ಕರಗಿಹೋಗುವ ಮೊದಲು ಸ್ವಲ್ಪ ಎಚ್ಚರಿಕೆ ವಹಿಸಿ.

ಮಳೆಯಿರಲಿ, ಚಳಿಯಿರಲಿ ಮೊಬೈಲ್ ಫೋನ್ ಕೈಲೇ ಇರಬೇಕು ಎನ್ನುವವರು ನೀವಾಗಿದ್ದರೆ ಆ ಫೋನ್‌ಗೆ ಹೆಚ್ಚು ಆಯುಷ್ಯವಿಲ್ಲ, ನೀವೇ ಅದರ ಕೊಲೆ ಮಾಡಲು ಸಂಚು ರೂಪಿಸುತ್ತಿದ್ದೀರಿ ಎಂದಾಯಿತು. ಮಳೆಗಾಲದಲ್ಲಿ ಗ್ಯಾಜೆಟ್‌ಗಳ ವಿಷಯದಲ್ಲಿ ನಾವು ಸಾಮಾನ್ಯವಾಗಿ ಮಾಡುವ ತಪ್ಪುಗಳೇನು, ಅವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಏನು ಮಾಡಬೇಕು ಇಲ್ಲಿದೆ ನೋಡಿ. 

ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

- ನಮ್ಮಲ್ಲಿ ಬಹಳಷ್ಟು ಜನರಿಗೆ ದಾರಿಯಲ್ಲಿ ನಡೆವಾಗ, ಗಾಡಿ ಓಡಿಸುವಾಗ ಫೋನನ್ನು ಪಾಕೆಟ್‌ನಲ್ಲಿಟ್ಟುಕೊಳ್ಳುವ ಅಭ್ಯಾಸ. ಅದರಲ್ಲೂ ಮಳೆ ಹನಿ ಸುರಿಯಲಾರಂಭಿಸಿದಾಗ ತಕ್ಷಣ ಪಾಕೆಟ್‌ಗೆ ಹಾಕಿಕೊಂಡು ಫೋನನ್ನು ಸೇವ್ ಮಾಡಿದ ಸಾಹಸದಲ್ಲಿ ಮನೆಗೆ ಬಂದು ನೋಡಿದರೆ ನಿಧಾನವಾಗಿ ಡಿಸ್ಪ್ಲೇ ಕೈ ಕೊಡಲಾರಂಭಿಸುತ್ತದೆ. ಬ್ಯಾಟರಿ ಚಾರ್ಜ್ ಆಗಲು ರಚ್ಚೆ ಹಿಡಿಯುತ್ತದೆ. ಹೀಗಾಗಿ, ಮಳೆಯಲ್ಲಿ ಫೋನನ್ನು ಯಾವಾಗಲೂ ಬ್ಯಾಗ್‌ನೊಳಗೇ ಹಾಕಬೇಕು. ಮಳೆ ನಿಲ್ಲುವವರೆಗೂ ಅದನ್ನು ತೆಗೆಯಬಾರದು. ಒಂದು ವೇಳೆ ಫೋನ್ ಒದ್ದೆಯಾಗುವುದು ಅನಿವಾರ್ಯವಾದರೆ, ತಕ್ಷಣ ಅದರ ಬ್ಯಾಟರಿ ತೆಗೆದು ಡ್ರೈಯರ್‌ನಿಂದ ಒಣಗಿಸಿ. ಲ್ಯಾಪ್‌ಟಾಪನ್ನು ಕೂಡಾ ಮಳೆಗೆ ಸಿಲುಕುತ್ತದೆ ಎನಿಸಿದರೆ ಬಳಸುವುದು ನಿಲ್ಲಿಸಬೇಕು. ಮಳೆಗಾಲದಲ್ಲಿ ಮಳೆನೀರಿನಿಂದ ದೂರವಿಡಲು, ಉಳಿದಂತೆ ಕಳ್ಳರಿಂದ ದೂರವಿಡಲು ಕಿಟಕಿಯ ಪಕ್ಕದಲ್ಲಿ ಗ್ಯಾಜೆಟ್ಸ್ ಇಡುವ ಹೆಡ್ಡತನ ಮಾಡಬೇಡಿ. 

- ನೀವು ಹಲವಾರು ಬ್ಯುಸಿನೆಸ್ ಕಾಲ್‌ಗಳನ್ನು ನಿರಂತರ ಅಟೆಂಡ್ ಮಾಡುತ್ತಲೇ ಇರಬೇಕು ಅಥವಾ ಕೆಲಸದ ನಿಮಿತ್ತ 24/7 ನಿಮ್ಮ ಫೋನ್‌ಗೆ ಸಿಗಲೇಬೇಕು ಎಂದಾದಲ್ಲಿ ಉತ್ತಮವಾದ ಬ್ಲೂಟೂತ್ ಹೆಡ್‌ಸೆಟ್ ಖರೀದಿಸಿ. ಈ ಹೆಡ್‌ಸೆಟ್‌ಗಳು ವಾಟರ್‌ಪ್ರೂಫ್‌ ಆಗಿದ್ದು ಮಳೆಗೆ ಹೆದರಲಾರವು. ಜೊತೆಗೆ ನಿಮ್ಮ ಫೋನನ್ನೂ ರಕ್ಷಿಸುತ್ತವೆ. ಜೊತೆಗೆ ಹ್ಯಾಂಡ್ಸ್ ಫ್ರೀ ಕಾಲ್‌ಗಳು ನಿಮ್ಮ ಕಿವಿಗೂ, ಕೈಗೂ ಸದಾ ಒಳ್ಳೆಯದೇ. 

ಮರವೇರುವ ಬೈಕ್: ರೈತನ ಆವಿಷ್ಕಾರಕ್ಕೆ ಇಂಟರ್‌ನೆಟ್ ಬ್ರೇಕ್!

- ಒಂದು ವೇಳೆ ನಿಮ್ಮ ಫೋನ್ ಅಥವಾ ಇನ್ನಾವುದೇ ಗ್ಯಾಜೆಟ್ ಮಳೆಗೆ ತೊಯ್ದು ತೊಪ್ಪೆಯಾಗೇ ಬಿಟ್ಟಿತು ಎಂದುಕೊಳ್ಳಿ, ಆಗ ಅಕ್ಕಿಯು ನಿಮ್ಮ ರಕ್ಷಣೆಗೆ ಬರುತ್ತದೆ. ಅಕ್ಕಿಯು ನಿಮ್ಮ ಗ್ಯಾಜೆಟ್‌‌ನಿಂದ ನೀರಿನ ಪಸೆಯನ್ನು ಸಂಪೂರ್ಣ ತೆಗೆಯುತ್ತದೆ. ನೀರಿನಲ್ಲಿ ನೆನೆದ ಗ್ಯಾಜೆಟ್ಟನ್ನು ಅಕ್ಕಿಯ ಮೂಟೆಯ ಮಧ್ಯೆ ಇಡಿ. ಇಲ್ಲವೇ ಒಂದು ಬಟ್ಟಲಲ್ಲಿ ಸ್ವಚ್ಛ ಅಕ್ಕಿ ತೆಗೆದುಕೊಂಡು ಅದರ ಮಧ್ಯೆ ಹುದಿಗಿಸಿ. ಒಂದು ದಿನದ ಬಳಿಕ ತೆಗೆದು ಬಳಸಿ. 

- ಯಾವಾಗಲೂ ಗ್ಯಾಜೆಟ್‌ಗಳನ್ನು ಅವುಗಳ ಕವರ್‌ನಲ್ಲಿಯೇ ಇರಿಸಿ. ಲ್ಯಾಪ್‌ಟಾಪ್ ತನ್ನ ಬ್ಯಾಗ್‌ನಲ್ಲಿರಲಿ. ಫೋನ್‌ಗೆ ವಾಟರ್‌ಪ್ರೂಫ್ ಕೇಸ್ ಹಾಕಿಸಿ. ಇದು ನೀರು ಫೋನ್‌ನ ಒಳನುಗ್ಗುವುದನ್ನು ತಡೆಯುತ್ತದೆ. ಇನ್ನು ನಿಮ್ಮ ಬ್ಯಾಗೊಳಗೇ ಸದಾ ಒಂದಿಷ್ಟು ವಾಟರ್‌ಪ್ರೂಫ್ ಕವರ್ಸ್ ಹಾಗೂ ಸಿಲಿಕಾ ಜೆಲ್ ಇಟ್ಟುಕೊಳ್ಳಿ. ಮಳೆ ಬಂದಾಗ ಗ್ಯಾಜೆಟ್‌ಗಳನ್ನು ಪ್ಲ್ಯಾಸ್ಟಿಕ್ ಕವರ್‌ನೊಳಗೆ ಹಾಕಿ. ಸ್ವಲ್ಪ ಒದ್ದೆಯಾಗಿದ್ದರೆ ಸಿಲಿಕಾ ಜೆಲ್ ಇರುವ ಪೌಚ್‌ಗೆ ಹಾಕಿ. 

- ಸಿಡಿಲು, ಗುಡುಗು ಬರುವ ಸೂಚನೆ ಸಿಗುತ್ತಿದ್ದಂತೆ ಟಿವಿ, ಫ್ರಿಡ್ಜ್ ಸೇರಿದಂತೆ ಎಲ್ಲ ಗ್ಯಾಜೆಟ್‌ಗಳನ್ನೂ ಅನ್‌ಪ್ಲಗ್ ಮಾಡಿ. ಮಿಂಚು ಬಂದಾಗ ಹೈ ವೋಲ್ಟೇಜ್ ಪಾಸ್ ಆಗಿ ಗ್ಯಾಜೆಟ್‌ಗಳು ಬರ್ಸ್ಟ್ ಆಗುವ ಇಲ್ಲವೇ ಹಾಳಾಗುವ ಸಾಧ್ಯತೆಗಳಿರುತ್ತವೆ. ಅಲ್ಲದೆ ಮಳೆಗಾಲದಲ್ಲಿ ಪವರ್ ಕಟ್ ಕಾಮನ್ ಆಗಿದ್ದು, ಪವರ್ ಫ್ಲಕ್ಚುಯೇಶನ್ಸ್ ಕೂಡಾ ನಿಮ್ಮ ಗ್ಯಾಜೆಟ್‌ಗಳನ್ನು ನಿಮಿಷದಲ್ಲಿ ಡಮ್ಮಿ ಪೀಸ್ ಮಾಡುತ್ತವೆ. 

ನೀವು ಹೋಗಬೇಕಾದ ಬಸ್‌ ನಂಬರ್‌ ಹೇಳುತ್ತೆ ಗೂಗಲ್‌ ಮ್ಯಾಪ್‌

- ನಿಮ್ಮ ಫೋನ್ ಒದ್ದೆಯಾಗಿದ್ದರೆ, ಮನೆಗೆ ಬರುತ್ತಲೇ ಅದನ್ನು ಚಾರ್ಜ್‌ಗೆ ಹಾಕಬೇಡಿ. ಮಳೆಯಲ್ಲಿ ನೆಂದ ಫೋನನ್ನು ಚಾರ್ಜ್‌ಗೆ ಹಾಕಿದಾಗ ಅದು ಸಿಡಿಯುವ ಅಪಾಯವಿರುತ್ತದೆ. ಪೋರ್ಟ್ಸ್ ಹಾಗೂ ಸಾಕೆಟ್ ಒದ್ದೆಯಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ಲಗ್ ನೀರನ್ನು ಎಳೆದುಕೊಂಡಿದ್ದರೆ ಶಾರ್ಟ್ ಸರ್ಕ್ಯೂಟ್ ಆಗಬಹುದು. ಚಾರ್ಜರ್ ಅಥವಾ ಫೋನ್ ಒದ್ದೆಯಾಗಿದ್ದರೂ ಶಾಕ್ ಹೊಡೆಯಬಹುದು. ಒಂದು ವೇಳೆ ಚಾರ್ಜ್‌ಗೆ ಹಾಕಿದರೂ ಯಾವುದೇ ಫೋನ್ ರಿಸೀವ್ ಮಾಡಬೇಡಿ. 

ಇಂದಿನ ದಿನಗಳಲ್ಲಿ ಗ್ಯಾಜೆಟ್‌ಗಳಿಂದ ದೂರ ಉಳಿಯುವುದು ಅಸಾಧ್ಯವೇ ಆದರೂ ಮಳೆಗಾಲ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳುವಂತೆ ನಿಮ್ಮನ್ನು ಎಚ್ಚರಿಸುತ್ತದೆ. ಸುರಕ್ಷತೆ ಮೊದಲು, ಮಾತುಕತೆ ಆಮೇಲೆ ಅಲ್ಲವೇ?

click me!