ಎಲ್ಲಿ ನೋಡಿದರಲ್ಲಿ ಬಿತ್ತನೆಯಾಗದೆ ಖಾಲಿ ಖಾಲಿ ಹೊಲಗಳು ಬರಗಾಲದ ಮುನ್ಸೂಚನೆ?

By Kannadaprabha News  |  First Published Jul 3, 2023, 1:08 PM IST

ಬಂದೀತು, ಆಗ ಬಂದೀತೆಂದು ಇಡೀ ಜೂನ್‌ ತಿಂಗಳಿಂದ ಮಳೆಗಾಗಿ ರೈತರು ಕಾದಿದ್ದೇ ಬಂತು. ನಿತ್ಯ ಮೋಡ ಮುಸುಕಿದ ವಾತಾವರಣ. ಆಗಾಗ ತುಂತುರು ಮಳೆ, ಮತ್ತೆ ಬಿಸಿಲಿನ ತಾಪ. ಬಿತ್ತನೆಗೆ ಸಜ್ಜಾಗಿ ಕುಳಿತಿದ್ದ ರೈತನಿಗೆ ಇದೀಗ ಬರಗಾಲದ ಭಯ ಶುರುವಾಗಿದ್ದು ಬರ ಎದುರಿಸಲು ನಾವೆಲ್ಲರೂ ಸಿದ್ಧರಾಗಬೇಕಿದೆ.


ಬಸವರಾಜ ಹಿರೇಮಠ

ಧಾರವಾಡ (ಜು.3)  ಈಗ ಬಂದೀತು, ಆಗ ಬಂದೀತೆಂದು ಇಡೀ ಜೂನ್‌ ತಿಂಗಳಿಂದ ಮಳೆಗಾಗಿ ರೈತರು ಕಾದಿದ್ದೇ ಬಂತು. ನಿತ್ಯ ಮೋಡ ಮುಸುಕಿದ ವಾತಾವರಣ. ಆಗಾಗ ತುಂತುರು ಮಳೆ, ಮತ್ತೆ ಬಿಸಿಲಿನ ತಾಪ. ಬಿತ್ತನೆಗೆ ಸಜ್ಜಾಗಿ ಕುಳಿತಿದ್ದ ರೈತನಿಗೆ ಇದೀಗ ಬರಗಾಲದ ಭಯ ಶುರುವಾಗಿದ್ದು ಬರ ಎದುರಿಸಲು ನಾವೆಲ್ಲರೂ ಸಿದ್ಧರಾಗಬೇಕಿದೆ.

Tap to resize

Latest Videos

ಜುಲೈ ತಿಂಗಳು ಬಂತು. ಇಷ್ಟೊತ್ತಿಗೆ ಹಸಿರು ಹೊದ್ದು ಸುಂದರವಾಗಿ ಕಾಣುತ್ತಿದ್ದ ಭೂಮಿ ತಾಯಿಯ ಒಡಲು ಬರಿದಾಗಿದ್ದು ಮತ್ತೊಂದು ಬರಗಾಲದ ಛಾಯೆ ಕಾಣುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಬಯಲುಸೀಮೆಯಲ್ಲಿ ಒಂದು ಸುತ್ತು ಹೊಡೆದರೆ ಎಲ್ಲಿ ನೋಡಿದರಲ್ಲಿ ಬಿತ್ತನೆಯಾಗದೇ ಹೊಲಗಳು ಖಾಲಿ ಖಾಲಿ ಕಾಣುತ್ತಿವೆ. ಎತ್ತರದ ಪ್ರದೇಶವೊಂದರಲ್ಲಿ ನಿಂತು ಕಣ್ಣು ಹಾಯಿಸಿದಷ್ಟುದೂರ ಬಿತ್ತನೆಯಾಗದೇ ಕಪ್ಪು-ಕೆಂಪು ಮಣ್ಣಿನ ಹೊಲಗಳೇ ರಾಚುತ್ತವೆ. ಅಲ್ಲಲ್ಲಿ ಚಿಗುರು ಮೀಸೆ ರೀತಿಯ ಬೆಳೆಗಳು ಮಳೆಯ ಬರುವಿಕೆಗಾಗಿ ಜೀವ ಗಟ್ಟಿಯಾಗಿ ಹಿಡಿದು ಕಾಯುತ್ತಿವೆ. ಒಂದು ವೇಳೆ ಜುಲೈ ತಿಂಗಳ ಮೊದಲ ವಾರದಲ್ಲಿ ಉತ್ತಮ ಪ್ರಮಾಣದಲ್ಲಿ ಮಳೆಯಾಗದೇ ಇದ್ದಲ್ಲಿ ಬರ ನಿಶ್ಚಿತ ಎನ್ನುವಷ್ಟುಪರಿಸ್ಥಿತಿ ಇದೆ.

ಸರ್ಕಾರದಿಂದಲೇ ಬರಗಾಲ ಘೋಷಣೆಗೆ ಸಿದ್ಧತೆ, ಸಚಿವ ಸಂತೋಷ್‌ ಲಾಡ್‌

ರೈತರಿಗೆ ಮಳೆಯೇ ಆಧಾರ. ಸರಿಯಾದ ಸಮಯಕ್ಕೆ ಮಳೆಯಾದರೆ ಸಾಕು ಅವರ ಜೀವನ ಸುಗಮವಾಗಿ ನಡೆಯುತ್ತದೆ. ಇಲ್ಲದೇ ಹೋದಲ್ಲಿ ರೈತರ ಜೀವನ ಅಯೋಮಯ. ಈ ವರ್ಷ ಬಿತ್ತನೆ ಸಮಯದಲ್ಲಿ ಮಳೆಯೇ ಆಗದೇ ಬರದ ಛಾಯೆ ಎದ್ದು ಕಾಣುತ್ತಿದೆ. ಜುಲೈ ತಿಂಗಳಲ್ಲಿ ಮಳೆಯಾದರೂ ಪ್ರಯೋಜನವಿಲ್ಲ. ಹವಾಮಾನ ಬದಲಾವಣೆಯಿಂದ ಬಿತ್ತನೆ ಮಾಡಿದರೂ ಬೆಳೆ ಬರುವ ನಿರೀಕ್ಷೆ ತೀರಾ ಕಡಿಮೆ. ಹೀಗಾಗಿ ರೈತರು ಚಿಂತಾಕ್ರಾಂತರಾಗಿದ್ದಾರೆ.

ಬಿತ್ತಿದ್ದು ಏನಾಯ್ತು?:

ಮೇ ತಿಂಗಳ ಅಂತ್ಯದಲ್ಲಿ ಬಿತ್ತನೆಯಾದ ಹೆಸರು, ಸೋಯಾ, ಉದ್ದು ಹಾಗೂ ಇತರೆ ಮುಂಗಾರು ಬೆಳೆಗಳು ಆರೋಗ್ಯಕರವಾಗಿಲ್ಲ. ಕೊಳವೆ ಬಾವಿ, ಹಳ್ಳ-ಕೊಳ್ಳಗಳಿಂದ ಕೆಲವು ರೈತರು ನೀರು ಹಾಯಿಸಿದರೂ ನೀರಿನ ಸಂಪನ್ಮೂಲ ಸಹ ಖಾಲಿಯಾಗಿದೆ. ಸಮರ್ಪಕವಾಗಿ ಮಳೆಯಾದಂತೆ ಕೃತಕವಾಗಿ ನೀರು ನೀಡುವುದು ಸಾಧ್ಯವಿಲ್ಲ. ಹೀಗಾಗಿ ಬಿತ್ತನೆಯಾಗಿರುವ ಶೇ. 16ರಷ್ಟುಬೆಳೆಗಳು ರೋಗ ಹಾಗೂ ನೀರಿನ ಕೊರತೆಯಿಂದ ಹಾಳಾಗುವ ಭಯ ಬಿತ್ತನೆ ಮಾಡಿದ ರೈತರಲ್ಲಿದೆ. ಬಿತ್ತನೆ ಮಾಡದ ರೈತರು ಸಾವಿರಾರು ರುಪಾಯಿ ಕೊಟ್ಟು ಬಿತ್ತನೆ ಬೀಜ ಹಾಗೂ ರಸಗೊಬ್ಬರ ತಂದಿಟ್ಟುಕೊಂಡಿದ್ದು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಸಮಾಜಕ್ಕೂ ದುಷ್ಪರಿಣಾಮ:

ನಿಧಾನವಾಗಿ ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತಿದೆ. ಈಗಾಗಲೇ ಜಿಲ್ಲೆಯ 99 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ದನಕರುಗಳಿಗೆ ನೀರು ಮತ್ತು ಮೇವಿನ ಕೊರತೆಯೂ ಉಂಟಾಗಿದೆ. ಇದ್ದು ಜಲ ಸಂಪನ್ಮೂಲ ಖಾಲಿಯಾಗಿದ್ದು ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿದೆ. ಮಳೆಯಿಂದ ಬರೀ ರೈತರಿಗೆ ಮಾತ್ರವಲ್ಲದೇ ಇಡೀ ಸಮಾಜ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಬಿತ್ತನೆಯಾಗದೇ ಬೆಳೆ ಬರುವುದಿಲ್ಲ. ಕುಡಿಯುವ ನೀರಿನ ತೊಂದರೆ, ನಾಡು-ಕಾಡು ಪ್ರಾಣಿ-ಪಕ್ಷಿಗಳಿಗೆ ಆಹಾರ, ನೀರಿನ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಬೇಸರದ ಸಂಗತಿ.

ಈ ನಿಟ್ಟಿನಲ್ಲಿ ಜುಲೈ 3ರಿಂದ ಅಧಿವೇಶನ ನಡೆಯಲಿದ್ದು ರಾಜ್ಯ ಸರ್ಕಾರ ಬರವನ್ನು ನೀಗಿಸಲು ಹಾಗೂ ನಿಯಂತ್ರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕೈ ಕೊಟ್ಟಮುಂಗಾರು ಪೂರ್ವ ಮಳೆ:

ಮುಂಗಾರು ಹಂಗಾಮಿನ ಬಿತ್ತನೆಗೆ ಪೂರ್ವ ಮುಂಗಾರು ಮಳೆ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಬಿತ್ತನೆಯ ಪ್ರಮುಖ ಸಮಯ ಜೂನ್‌ ತಿಂಗಳು. ಈ ತಿಂಗಳಲ್ಲಿ ವಾಡಿಕೆಯಂತೆ 113.1ರಷ್ಟುಮಳೆಯಾಗಬೇಕು. 2021-22ರಲ್ಲಿ 162.1 ಮಿ.ಮೀ., 2022-23ರಲ್ಲಿ 93.9 ಮಿ.ಮೀ. ಹಾಗೂ 2023-34 ಪ್ರಸ್ತುತ ಜೂನ್‌ ತಿಂಗಳಲ್ಲಿ ಬರೀ 41 ಮಿ.ಮೀ. ಮಾತ್ರ ಮಳೆಯಾಗಿದೆ. ಹೀಗಾಗಿ 2.56 ಲಕ್ಷ ಹೆಕ್ಟೇರ್‌ ಬಿತ್ತನೆ ಭೂಮಿ ಪೈಕಿ ಬರೀ 42003 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ.

ಮಳೆ ಕೊರತೆ 50 ವರ್ಷದಲ್ಲೇ ಅಧಿಕ: ಅರ್ಧ ರಾಜ್ಯಕ್ಕೆ ಕುಡಿವ ನೀರಿನ ಬರ!

ಎರಡ್ಮೂರು ವರ್ಷಗಳ ಅತೀ ಹೆಚ್ಚು ಮಳೆಯಾಗಿ ಬೆಳೆ ಕಳಕೊಂಡ್ವಿ. ಆದರೂ ಅಷ್ಟೋ-ಇಷ್ಟೋ ಬೆಳೆ ಬಂದಿತ್ತು. ಈಗ ಬಿತ್ತನೆಯೇ ಮಾಡಿಲ್ಲ, ಬೆಲೆ ಏರಿಕೆಯ ತುಟ್ಟಿಕಾಲದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ಜತೆಗೆ ದನಕರುಗಳಿಗೆ ಮೇವಿನ ಸಮಸ್ಯೆಯಾಗುತ್ತಿದೆ. ಆಕಳು-ಎಮ್ಮೆಗಳು ಮೇವಿಲ್ಲದೇ ಸರಿಯಾಗಿ ಹಾಲು ನೀಡುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡಬೇಕು.

ಮಲ್ಲಿಕಾರ್ಜುನ ಬಾಳನಗೌಡರ, ಶಿರೂರ ರೈತರು

click me!