ರಕ್ತಸಿಕ್ತ ಇತಿಹಾಸದ ಬಾಂಗ್ಲಾದೇಶದ ವ್ಯಥೆಯಿದು; ಬಾಂಗ್ಲಾದಲ್ಲಿ ಬರುತ್ತಾ ಭಾರತ ವಿರೋಧಿ ಸರ್ಕಾರ?

By Shashishekar P  |  First Published Aug 9, 2024, 9:58 AM IST

ಆವತ್ತು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಶೇಖ್ ಹಸೀನಾಗೆ ರಾಜಕೀಯ ಆಶ್ರಯ ನೀಡಿದ್ದರು. 1975ರಿಂದ 1981ರವರೆಗೆ ಶೇಖ್ ಹಸೀನಾ ದೆಹಲಿಯಲ್ಲಿ ರಹಸ್ಯವಾಗಿ ಬೇರೆ ಹೆಸರಿನಲ್ಲಿ ಜೀವನ ಸಾಗಿಸಿದ್ದರು.


- - ಶಶಿಶೇಖರ ಪಿ, ಸುವರ್ಣ ನ್ಯೂಸ್
ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಮುಜಿಬುರ್‌ ರೆಹಮಾನ್‌ ಆ ದೇಶಕ್ಕೆ ಪ್ರಧಾನಿಯಾಗಿ, ಹತ್ಯೆಯೂ ಆಗಿದ್ದರು. ಆಗ ಅವರ ಪುತ್ರಿ ಶೇಖ್‌ ಹಸೀನಾ ಭಾರತಕ್ಕೆ ಬಂದು ಹಲವು ವರ್ಷ ತಲೆಮರೆಸಿಕೊಂಡಿದ್ದರು. ನಂತರ ಬಾಂಗ್ಲಾದಲ್ಲಿ ಮಿಲಿಟರಿ ಜನರಲ್‌ಗಳ ಸರ್ವಾಧಿಕಾರವಿತ್ತು. ಸ್ವದೇಶಕ್ಕೆ ಮರಳಿದ ಹಸೀನಾ ಅದರ ವಿರುದ್ಧ ಹೋರಾಡಿದರು. ಬಳಿಕ ಪ್ರಧಾನಿಯಾಗಿ, ಮತ್ತೆ ಅಮೆರಿಕಕ್ಕೆ ಓಡಿ ಜೀವ ಉಳಿಸಿಕೊಂಡಿದ್ದರು. ನಂತರ ಮತ್ತೆ ಬಾಂಗ್ಲಾಕ್ಕೆ ಮರಳಿ ದೇಶ ಕಟ್ಟಿದರು. ಈಗ ಮತ್ತೆ ದೇಶ ಬಿಟ್ಟು ಓಡಿಹೋಗುವಂತಾಗಿದೆ.

ಅದು 1975ರ ಆಗಸ್ಟ್‌15. ಬೆಳಗಿನ ಜಾವದಲ್ಲಿ ಢಾಕಾ ನಗರದಾದ್ಯಂತ ಮಿಲಿಟರಿ ಬಂದೂಕಿನ ಸದ್ದು ಕೇಳಿಸಲು ಆರಂಭವಾಯಿತು. ಕೆಲವೇ ನಿಮಿಷಗಳಲ್ಲಿ ಶೇಖ್‌ ಮುಜಿಬುರ್‌ ರೆಹಮಾನ್‌ ದೇಹಕ್ಕೆ 18 ಬುಲೆಟ್‌ಗಳು ನುಗ್ಗಿದ್ದವು. ಬಾಂಗ್ಲಾದೇಶದ ಉಗಮಕ್ಕೆ ಕಾರಣರಾನಾಗಿದ್ದ ವ್ಯಕ್ತಿಯ ಹೆಣ ನಾಲ್ಕೇ ವರ್ಷಗಳಲ್ಲಿ ಉರುಳಿಬಿದ್ದಿತ್ತು. ಅದು ಬಾಂಗ್ಲಾದೇಶದಲ್ಲಿ ನಡೆದ ಮೊದಲ ಮಿಲಿಟರಿ ದಂಗೆ. ಅಂದು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಇಡೀ ಕುಟುಂಬವನ್ನ ನಾಮಾವಶೇಷ ಮಾಡಲಾಯಿತು. ಅದರಲ್ಲಿ ಉಳಿದಿದ್ದು ಇಬ್ಬರೇ ಹೆಣ್ಣುಮಕ್ಕಳು. ಶೇಖ್‌ ಹಸೀನಾ, ಶೇಕ್‌ ರಿಹಾನಾ. ಅವರು ಅಂದು ಬಾಂಗ್ಲಾದಲ್ಲೇ ಇದ್ದಿದ್ದರೆ ಆವತ್ತೇ ಹೆಣವಾಗಿಬಿಡುತ್ತಿದ್ದರು.

Tap to resize

Latest Videos

undefined

ದೇಶ ತೊರೆಯುವ ಕೆಲ ಗಂಟೆಗೂ ಮೊದಲು ಶೇಕ್ ಹಸೀನಾ ನಿವಾಸದಲ್ಲಿ ಏನೆಲ್ಲಾ ನಡಿತು?

ಬಾಂಗ್ಲಾ ಅನ್ನುವ ದೇಶ ಹುಟ್ಟಿದ್ದೇ ಒಂದು ರೋಚಕ ಇತಿಹಾಸ. 1971ರಲ್ಲಿ ಪಾಕಿಸ್ತಾನ ಭಾರತದ ಎಡ ಮತ್ತು ಬಲಭಾಗದ 2 ತುಂಡು ಭೂಮಿಗಳಾಗಿತ್ತು. ಇವತ್ತಿನ ಪಾಕಿಸ್ತಾನ ಆವತ್ತಿಗೆ ಪಶ್ಚಿಮ ಪಾಕಿಸ್ತಾನ, ಇವತ್ತಿನ ಬಾಂಗ್ಲಾದೇಶ ಆವತ್ತಿಗೆ ಪೂರ್ವ ಪಾಕಿಸ್ತಾನ. 2,500 ಕಿ.ಮೀ ದೂರವಿದ್ದ ಪೂರ್ವ ಬಂಗಾಳವನ್ನು ಪಾಕಿಸ್ತಾನೀ ಜನರಲ್‌ಗಳು ಇಸ್ಲಾಮಾಬಾದ್‌ನಿಂದ ಆಳುತ್ತಿದ್ದರು. ಪೂರ್ವ ಬಂಗಾಳದಲ್ಲಿ ಬಂಗಾಳಿ ರಾಷ್ಟ್ರೀಯವಾದದ ಅಸ್ಮಿತೆಯಿದ್ದರೆ, ಪಶ್ಚಿಮದಲ್ಲಿ ಇಸ್ಲಾಮಿಕ್‌ ರಾಷ್ಟ್ರೀಯವಾದವಿತ್ತು. ಬಂಗಾಳಿಗಳ ಅಸ್ಮಿತೆಯಾಗಿದ್ದ ಬೆಂಗಾಲಿಯ ಬದಲಾಗಿ ಅವರ ಮೇಲೆ ಬಲವಂತವಾಗಿ ಉರ್ದು ಭಾಷೆಯನ್ನು ಹೇರಲಾಗಿತ್ತು. ಬೆಂಗಾಲಿ ಭಾಷಿಕರ ಮೇಲೆ, ಪೂರ್ವ ಬಾಂಗ್ಲಾದಲ್ಲಿದ್ದ ಹಿಂದೂಗಳ ಮೇಲೆ ಇಸ್ಲಾಮಾಬಾದ್‌ ನಲ್ಲಿದ್ದ ಆಡಳಿತಗಾರರ ದೌರ್ಜನ್ಯ ಹೆಚ್ಚಾಯಿತು.

ಗಾಂಧಿ-ನೆಹರು ಓಕೆ! ಸಾವರ್ಕರ್ ಯಾಕೆ? ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರನಾ? ಹೇಡಿನಾ?

ಈ ದೌರ್ಜನ್ಯದ ವಿರುದ್ಧ ಹೋರಾಡಿದ್ದು ಶೇಖ್‌ ಮುಜಿಬುರ್‌ ರೆಹಮಾನ್. 1971ರ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್‌ ಮುಜಿಬುರ್‌ ನೇತೃತ್ವದ ಅವಾಮಿ ಲೀಗ್‌ ಒಟ್ಟು 300 ಸ್ಥಾನಗಳಲ್ಲಿ 167 ಸ್ಥಾನ ಗೆಲ್ಲುತ್ತದೆ. ಆದರೆ, ಇಸ್ಲಾಮಾಬಾದ್‌ನಲ್ಲಿದ್ದ ರಾಜಕಾರಣಿ, ಜನರಲ್‌ಗಳಿಗೆ ಪಾಕಿಸ್ತಾನದ ಅಧಿಕಾರ ಢಾಕಾದಿಂದ ಚಲಾವಣೆಯಾಗುವುದು ಇಷ್ಟವಿರಲಿಲ್ಲ. ಚುನಾವಣೆಯಲ್ಲಿ ಗೆದ್ದರೂ ಶೇಖ್‌ ಮುಜಿಬುರ್‌ ರೆಹಮಾನ್‌ಗೆ ಅಧಿಕಾರ ಸಿಗಲಿಲ್ಲ.

ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿಯಾಗಿದ್ದ ಮುಹಮದ್‌ ಯಾಹ್ಯಾ ಖಾನ್‌ ಪೂರ್ವ ಬಂಗಾಳದಲ್ಲಿ ಬೆಂಗಾಲಿ ರಾಷ್ಟ್ರೀಯವಾದ ಮಟ್ಟಹಾಕಲು ಆಪರೇಷನ್‌ ಸರ್ಚ್‌ಲೈಟ್‌ ಆರಂಭಿಸಿದ್ದರು. 1971ರ ಮಾರ್ಚ್‌ನಿಂದ ಡಿಸೆಂಬರ್‌ವರೆಗೆ 40 ಲಕ್ಷಕ್ಕೂ ಹೆಚ್ಚು ಹಿಂದೂಗಳ ಮಾರಣ ಹೋಮವಾಯಿತು. 4 ಲಕ್ಷಕ್ಕೂ ಹೆಚ್ಚು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಬೆಂಗಾಲಿ ಅಸ್ಮಿತೆಯ ಪರ ಇದ್ದವರು ಮತ್ತು ಹಿಂದೂಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ಹತ್ಯೆ ಮಾಡಲಾಯಿತು. ಪೂರ್ವ ಬಂಗಾಳದಲ್ಲಿನ ಜನರ ಮೇಲೆ ಪಶ್ಚಿಮ ಪಾಕಿಸ್ತಾನಿ ಮಿಲಿಟರಿ ಜನರಲ್​ಗಳ ದೌರ್ಜನ್ಯದ ವಿರುದ್ಧ ತಿರುಗಿಬಿದ್ದ ಬೆಂಗಾಲಿಗಳು ಮುಕ್ತಿವಾಹಿನಿ ಹೆಸರಲ್ಲಿ ಸಂಘಟಿತರಾಗಿ ಶಸ್ತ್ರಸಜ್ಜಿತ ಪ್ರತಿರೋಧ ತೋರಲು ಆರಂಭಿಸಿದರು.

ಬೆಂಗಾಲಿ ಅಸ್ಮಿತೆಯ ಪರವಾಗಿದ್ದ ಸೈನಿಕರು, ಹೋರಾಟಗಾರರು, ಸಾರ್ವಜನಿಕರು ಮುಕ್ತಿವಾಹಿನಿ ಹೆಸರಲ್ಲಿ ಒಟ್ಟುಗೂಡಿದರು. ಈ ಅಂತರ್ಯುದ್ಧದಲ್ಲಿ ಭಾರತ ಪರೋಕ್ಷವಾಗಿ ಮುಕ್ತಿವಾಹಿನಿ ಬೆಂಬಲಕ್ಕೆ ನಿಂತಿತ್ತು. ಇದಾದ ಮೇಲೆ ನಡೆದಿದ್ದು 1971ರ ಭಾರತ-ಪಾಕಿಸ್ತಾನದ ಯುದ್ಧ. 12 ದಿನ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನ ಹೀನಾಯವಾಗಿ ಸೋತು ಶರಣಾಯಿತು. 93000 ಪಾಕಿಸ್ತಾನಿ ಸೈನಿಕರು ಶಸ್ತ್ರಾಸ್ತ್ರ ತ್ಯಜಿಸಿ ಭಾರತದ ಮುಂದೆ ಶರಣಾದರು. ಹಾಗೆ ಸೃಷ್ಟಿಯಾಗಿದ್ದು ಇವತ್ತಿನ ಬಾಂಗ್ಲಾದೇಶ.

ಹೋರಾಟದ ನೇತೃತ್ವ ವಹಿಸಿದ್ದ ಶೇಖ್ ಮುಜಿಬುರ್ ರೆಹಮಾನ್ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶದ ಮೊದಲ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಮುಜಿಬುರ್ ರೆಹಮಾನ್ ಬಾಂಗ್ಲಾದೇಶದ ಪಾಲಿಗೆ \Bಬಂಗಬಂಧು (ಬಾಂಗ್ಲಾದ ಸ್ನೇಹಿತ) \Bಆದರು. ಪಾಕಿಸ್ತಾನಿಗಳ ವಿರುದ್ಧ ಬಡಿದಾಡಿ ಸ್ವಂತ ದೇಶ ಕಟ್ಟಿದ ಶೇಖ್ ಮುಜಿಬುರ್ ರೆಹಮಾನ್ ನಾಲ್ಕೇ ವರ್ಷಗಳಲ್ಲಿ ಮಿಲಿಟರಿ ದಂಗೆಗೆ ಬಲಿಯಾಗಿದ್ದರು. ಅಮೆರಿಕ-ರಷ್ಯಾ ಮಧ್ಯದ ಶೀತಲ ಯುದ್ಧಕ್ಕೆ ಮುಜಿಬುರ್ ರೆಹಮಾನ್ ಬಲಿಯಾದರು.

ಭಾರತದಲ್ಲಿ ಆಶ್ರಯ ಪಡೆದಿದ್ದ ಹಸೀನಾ

ಆವತ್ತು ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಶೇಖ್ ಹಸೀನಾಗೆ ರಾಜಕೀಯ ಆಶ್ರಯ ನೀಡಿದ್ದರು. 1975ರಿಂದ 1981ರವರೆಗೆ ಶೇಖ್ ಹಸೀನಾ ದೆಹಲಿಯಲ್ಲಿ ರಹಸ್ಯವಾಗಿ ಬೇರೆ ಹೆಸರಿನಲ್ಲಿ ಜೀವನ ಸಾಗಿಸಿದ್ದರು. 1981ರಲ್ಲಿ ಬಾಂಗ್ಲಾದೇಶಕ್ಕೆ ವಾಪಸ್ಸಾದ ಶೇಖ್ ಹಸೀನಾ ಜೀವನವೇ ಬದಲಾಯಿತು. ಸೇನಾ ನಾಯಕ ಜಿಯಾಉರ್ ರೆಹಮಾನ್ ಬಾಂಗ್ಲಾದೇಶದ ಅಧ್ಯಕ್ಷನಾಗಿದ್ದ. ತಂದೆ ಕಟ್ಟಿದ್ದ ಅವಾಮಿ ಲೀಗ್ ಪಕ್ಷದ ನೇತೃತ್ವ ವಹಿಸಿಕೊಂಡ ಶೇಖ್ ಹಸೀನಾ ಮಿಲಿಟರಿ ಸರ್ವಾಧಿಕಾರದ ವಿರುದ್ಧ ತೀವ್ರ ಹೋರಾಟ ಮಾಡಿದರು.

ಖಲೀದಾ ಜಿಯಾ ವಿರುದ್ಧ ಹೋರಾಟ

1986ರ ಚುನಾವಣೆಯಲ್ಲಿ 100 ಸ್ಥಾನ ಗೆದ್ದ ಶೇಖ್ ಹಸೀನಾ ವಿರೋಧ ಪಕ್ಷದ ನಾಯಕಿಯಾದರು. ಮಿಲಿಟರಿಯ ನೆರಳಿನಲ್ಲೇ ಕೈಗೊಂಬೆ ಸರ್ಕಾರವಿತ್ತು. ದಿನದಿಂದ ದಿನಕ್ಕೆ ಹಸೀನಾ ಜನಪ್ರಿಯತೆ ಏರುತ್ತಿತ್ತು. ಹೇಗಾದರೂ ಮಾಡಿ ಹಸೀನಾರನ್ನ ಮಟ್ಟಹಾಕಬೇಕು ಅಂತ ಅಲ್ಲಿನ ಮಿಲಿಟರಿ ಕಾಯುತ್ತಿತ್ತು. ಮಿಲಿಟರಿಯ ಜತೆಗೆ ಅವಾಮಿ ಲೀಗ್​ ವಿರೋಧಿ ಪಕ್ಷಗಳೂ ಕೈಜೋಡಿಸಿದವು. ಶೇಖ್ ಹಸೀನಾ ಮೇಲೆ 15ಕ್ಕೂ ಹೆಚ್ಚು ಹತ್ಯೆಯ ಪ್ರಯತ್ನಗಳು ನಡೆದವು. 1991ರ ಚುನಾವಣೆಯಲ್ಲಿ ಬಾಂಗ್ಲಾದೇಶ್‌ ನ್ಯಾಷನಲಿಸ್ಟ್ ಪಾರ್ಟಿಯ ಖಲೀದಾ ಜಿಯಾ ಅಧಿಕಾರ ಹಿಡಿದರು. ಈಕೆ ಮಿಲಿಟರಿ ಸರ್ವಾಧಿಕಾರಿಯಾಗಿ ಹತ್ಯೆಯಾಗಿದ್ದ ಜಿಯಾ ಉರ್ ರೆಹಮಾನ್​ನ ಪತ್ನಿ. ಆತನೇ ಸ್ಥಾಪಿಸಿದ್ದ ಪಕ್ಷದ ನೇತೃತ್ವ ವಹಿಸಿ ಅಧಿಕಾರಕ್ಕೆ ಬಂದಿದ್ದರು. ಖಾಲೀದಾ ಜಿಯಾ ಮುಂದಿನ 5 ವರ್ಷ ವಿರೋಧ ಪಕ್ಷವಾಗಿ ಹೋರಾಟ ನಡೆಸಿದ ಫಲವಾಗಿ 1996ರಲ್ಲಿ ಶೇಖ್ ಹಸೀನಾ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಬಾಂಗ್ಲಾದ ಪ್ರಧಾನಿಯಾದರು.

ಅಮೆರಿಕಕ್ಕೆ ಓಡಿದ್ದ ಹಸೀನಾ

ಬಾಂಗ್ಲಾದ ಪ್ರಧಾನಿ ಶೇಖ್ ಹಸೀನಾ ಭಾರತದ ಜತೆ ಹಲವು ಒಪ್ಪಂದಗಳನ್ನ ಮಾಡಿಕೊಂಡರು. ಭಾರತ, ಬಾಂಗ್ಲಾ ಗಡಿ ಭಾಗದ ಬುಡಕಟ್ಟು ಬಂಡುಕೋರರ ಜತೆ ಸಂಧಾನ ಮಾಡಿಕೊಂಡರು. ರೈತರಿಗೆ ಮನೆಗಳನ್ನು ಕಟ್ಟಿಕೊಟ್ಟು, ವಿಧವೆಯರಿಗೆ ಸಹಾಯಧನ ಕೊಡುವ ಕೆಲ ಯೋಜನೆಗಳನ್ನ ಜಾರಿಗೆ ತಂದರು. ಆದರೆ, 2001ರ ಚುನಾವಣೆಯಲ್ಲಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ ಮತ್ತೆ ಅಧಿಕಾರಕ್ಕೇರಿತು. ಖಲಿದಾ ಜಿಯಾ 2ನೇ ಬಾರಿ ಪ್ರಧಾನಿಯಾಗಿದರು. ಖಲಿದಾ ಜಿಯಾ ಸರ್ಕಾರ ಅವಾಮಿ ಲೀಗ್​ನ ನಾಯಕರನ್ನ ಟಾರ್ಗೆಟ್ ಮಾಡಿ ಕೆಲವರನ್ನ ಜೈಲಿಗೆ ಹಾಕಿಸಿತು. ಹಸೀನಾ ಸರ್ಕಾರದಲ್ಲಿ ಮಂತ್ರಿಗಳಾಗಿದ್ದವರ ಕೊಲೆ ನಡೆಯಿತು. 2006ರಲ್ಲಿ ಬಿಎನ್​ಪಿ, ಅವಾಮಿ ಲೀಗ್ ಮಧ್ಯೆ ಸಂಘರ್ಷ ನಡೆದು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. 2007ರಲ್ಲಿ ಹಸೀನಾ ಬಾಂಗ್ಲಾ ಬಿಟ್ಟು ಅಮೆರಿಕಕ್ಕೆ ಹೋಗಬೇಕಾಯಿತು.

ಮೊದಲು ಬಂಧನ, ನಂತರ ವಿಜಯ

50 ದಿನದ ಕಾನೂನು ಹೋರಾಟದಲ್ಲಿ ಹಸೀನಾ ಮೇಲೆ ಹೇರಲಾಗಿದ್ದ ನಿರ್ಬಂಧ ತೆರವು ಮಾಡಲಾಯಿತು. ಶೇಖ್ ಹಸೀನಾ 2ನೇ ಬಾರಿಗೆ ಬಾಂಗ್ಲಾಗೆ ವಾಪಸ್ಸಾದರು. ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನ ಬಂಧಿಸಲಾಯಿತು. 1 ವರ್ಷ ಗೃಹ ಬಂಧನದಲ್ಲಿದ್ದು 2008ರಲ್ಲಿ ಬಿಡುಗಡೆಯಾದರು. ಮರು ವರ್ಷ ನಡೆದ ಚುನಾವಣೆಯಲ್ಲಿ ಗೆದ್ದು 2ನೇ ಬಾರಿಗೆ ಪ್ರಧಾನಿ ಆದರು. ಇದಾದ ಮೇಲೆ ಬಂದ ಎಲ್ಲ ಚುನಾವಣೆಗಳಲ್ಲೂ ಶೇಖ್ ಹಸೀನಾರದ್ದೇ ಗೆಲುವು. 2014, 2019, 2024ರ ಚುನಾವಣೆಗಳಲ್ಲಿ ನಿರಂತರವಾಗಿ ಗೆದ್ದು ಅಧಿಕಾರದಲ್ಲಿ ಮುಂದುವರೆದರೂ, ಚುನಾವಣಾ ಅಕ್ರಮಗಳು ಕಾನೂನು ಬದ್ಧವಾಗಿಯೇ ನಡೆದವು! ಇದೇ ಕಾರಣಕ್ಕೆ 2024ರ ಚುನಾವಣೆಯನ್ನು ಬಾಂಗ್ಲಾದ ರಾಜಕೀಯ ಪಕ್ಷಗಳು ಬಹಿಷ್ಕರಿಸಿದ್ದವು.

2009ರ ನಂತರ ಶೇಖ್ ಹಸೀನಾ ರಾಜಕೀಯ ವೈರಿಗಳನ್ನು ಮಟ್ಟಹಾಕಲು ನಿಂತುಬಿಟ್ಟರು. ನಿರಂತರವಾಗಿ ಅಧಿಕಾರದಲ್ಲಿರಬೇಕು ಎಂದರೆ ರಾಜಕೀಯ ವಿರೋಧಿಗಳನ್ನ ಬಗ್ಗುಬಡಿಯಬೇಕು ಎನ್ನುವ ನಿರ್ಧಾರ ಮಾಡಿ ತಮ್ಮನ್ನ ಟೀಕಿಸಿದವರನ್ನ ಜೈಲಿಗೆ ತಳ್ಳಲಾರಂಭಿಸಿದರು. ತನ್ನ ನಿಷ್ಠ ಸೇನಾ ಬೆಟಾಲಿಯನ್​ಗಳನ್ನು ಬಳಸಿ ರಾಜಕೀಯ ವಿರೋಧಿಗಳನ್ನ ಹತ್ಯೆ ಮಾಡಿಸಿದ ಆರೋಪಗಳು ಕೇಳಿಬಂದವು. 1971ರ ಯುದ್ಧಾಪರಾಧದ ಆರೋಪದ ಮೇಲೆ 10ಕ್ಕೂ ಹೆಚ್ಚು ರಾಜಕೀಯ ನಾಯಕರನ್ನ ಗಲ್ಲಿಗೇರಿಸಲಾಯಿತು. 2018ರಲ್ಲಿ 2 ಬಾರಿ ಬಾಂಗ್ಲಾದ ಪ್ರಧಾನಿಯಾಗಿದ್ದ ಖಲೀದಾ ಜಿಯಾರನ್ನ ಭ್ರಷ್ಟಾಚಾರದ ಆರೋಪದ ಮೇಲೆ 18 ವರ್ಷ ಜೈಲಿಗೆ ಹಾಕಲಾಯಿತು. ಹೀಗೆ ಪ್ರಜಾಪ್ರಭುತ್ವದ ಪರವಾಗಿ ಹೋರಾಟ ಮಾಡಿ ಅಧಿಕಾರ ಹಿಡಿದಿದ್ದ ಶೇಖ್‌ ಹಸೀನಾ ಸರ್ವಾಧಿಕಾರಿಯಾಗಿ ಬದಲಾದರು.

ಇದು ಲಂಕಾ ರೀತಿಯ ದಂಗೆಯಲ್ಲ

ಈಗ ಬಾಂಗ್ಲಾದಲ್ಲಾಗಿರುವ ಮಿಲಿಟರಿ ದಂಗೆಗೆ ಶ್ರೀಲಂಕಾದಲ್ಲಾದಂತೆ ಆರ್ಥಿಕ ದಿವಾಳಿ ಕಾರಣವಲ್ಲ. ಸರ್ವಾಧಿಕಾರಿಯಂತೆ ಆಡಳಿತ ನಡೆಸಿದರೂ ಶೇಖ್ ಹಸೀನಾ ಅವಧಿಯಲ್ಲಿ ಬಾಂಗ್ಲಾದೇಶ ಆರ್ಥಿಕವಾಗಿ ಸಶಕ್ತ ದೇಶವಾಗಿ ಬದಲಾಗಿದ್ದೂ ಸತ್ಯ. 1971ರಲ್ಲಿ ಬಾಂಗ್ಲಾ ಜಗತ್ತಿನ ಬಡದೇಶಗಳಲ್ಲಿ ಒಂದಾಗಿತ್ತು. 2009ರ ಬಳಿಕ ಹಸೀನಾ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಬದಲಾವಣೆಗಳಾಗಿವೆ. 6%ರಷ್ಟು ಜಿಡಿಪಿ ಪ್ರಗತಿಯಾಗಿದೆ. ತಲಾದಾಯದ ಲೆಕ್ಕದಲ್ಲಿ ಭಾರತವನ್ನೂ ಮೀರಿಸುವ ಮಟ್ಟಕ್ಕೆ, ಜಗತ್ತಿನ 35ನೇ ದೊಡ್ಡ ಆರ್ಥಿಕತೆಯಾಗಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದು ಸತ್ಯ.

2024ರ ಚುನಾವಣೆ ಗೆದ್ದ ಶೇಖ್ ಹಸೀನಾ ಸರ್ಕಾರ ಮಾಡಿದ ಮೀಸಲಾತಿ ನಿರ್ಣಯ ಇವತ್ತು ಅವರ ಪದಚ್ಯುತಿಯವರೆಗೂ ಎಳೆದುಕೊಂಡು ಬಂದಿದೆ. 1971ರ ಬಾಂಗ್ಲಾ ವಿಮೋಚನಾ ಯುದ್ಧದ ಹೋರಾಟಗಾರರ ಮಕ್ಕಳಿಗೆ 30%ರಷ್ಟು ಮೀಸಲಾತಿ ನೀಡುವ ನಿರ್ಧಾರ ಮಾಡಿತ್ತು. ಮೀಸಲಾತಿ ನಿರ್ಧಾರದ ವಿರುದ್ಧ ದೇಶಾದ್ಯಂತ ಶುರುವಾದ ಪ್ರತಿಭಟನೆ ದಂಗೆಯ ಸ್ವರೂಪ ಪಡೆದು 400ಕ್ಕೂ ಹೆಚ್ಚು ಜನರ ಬಲಿ ಪಡೆಯುವ ಮಟ್ಟಕ್ಕೆ ಬೆಳೆಯಿತು. ಕೊನೆಗೆ ಅದು ಶೇಖ್‌ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡುವಲ್ಲಿಗೆ ಬಂದು ನಿಂತಿದೆ.

ಶೇಕ್ ಹಸೀನಾಗೆ ಕುಟುಕಿದ್ದು ಅವರೇ ಸಾಕಿದ ಗಿಣಿನಾ? ಗಡಿಪಾರಾಗಿರುವ ಬಾಂಗ್ಲಾ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದೇನು?

ಬಾಂಗ್ಲಾದ ಕತೆ ಮುಂದೇನು?

ಮೀಸಲಾತಿ ಹೋರಾಟದ ಲಾಭ ಪಡೆದ ಪ್ರತಿಪಕ್ಷಗಳು ಮಿಲಿಟರಿ ಜತೆ ಸೇರಿ ಶೇಖ್‌ ಹಸೀನಾರನ್ನ ಪದಚ್ಯುತಗೊಳಿಸಿ, ದೇಶದಿಂದ ಹೊರದಬ್ಬಿವೆ. ಒಂದು ಮೀಸಲಾತಿ ಹೋರಾಟ ಇಷ್ಟೆಲ್ಲಾ ಮಾಡಿತಾ? ಅಥವಾ ಈ ದಂಗೆಯ ಹಿಂದೆ ವಿದೇಶಿ ಕೈವಾಡ ಇದೆಯಾ? ದಂಗೆಯ ಹಿಂದೆ ಚೀನಾ-ಪಾಕಿಸ್ತಾನದ ಪರೋಕ್ಷ ಕೈವಾಡ ಇದೆ ಅನ್ನೋದು ಒಂದು ವಾದ. ಶೇಖ್‌ ಹಸೀನಾರನ್ನ ವಿರೋಧಿಸುತ್ತಿದ್ದ ಅಮೆರಿಕದ ಕೈವಾಡ ಇದೆ ಅನ್ನೋದು ಇನ್ನೊಂದು ವಾದ.

ಬಾಂಗ್ಲಾದಲ್ಲೀಗ ಮಧ್ಯಂತರ ಸರ್ಕಾರ ರಚನೆಯಾಗಿದೆ. ಮುಂದೆ ಚುನಾವಣೆ ನಡೆದು ಕಾಯಂ ಸರ್ಕಾರ ಬರಬೇಕು. ಅದಕ್ಕೆ ಮಿಲಿಟರಿ ಜನರಲ್‌ಗಳು ಅವಕಾಶ ನೀಡುತ್ತಾರೆಯೇ? ಈಗಿನ ಸರ್ಕಾರ ಅಥವಾ ಹೊಸ ಸರ್ಕಾರ ಭಾರತದೊಂದಿಗೆ ಎಂತಹ ಸಂಬಂಧ ಹೊಂದಿರುತ್ತದೆ? ಸದ್ಯಕ್ಕಿದು ಯಕ್ಷಪ್ರಶ್ನೆ.

click me!