ಲಿಂಗರಾಜು ಕೋರಾ
ಬೆಂಗಳೂರು (ಡಿ.5) : ಸರ್ಕಾರಿ ಪ್ರಾಥಮಿಕ ಶಾಲೆಗಳ ಸುಮಾರು 60 ಸಾವಿರಕ್ಕೂ ಹೆಚ್ಚು ಶಿಕ್ಷಕರನ್ನು ಮತದಾರ ಪಟ್ಟಿಪರಿಷ್ಕರಣಾ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗುವ ಆತಂಕ ಕಾಡುತ್ತಿದೆ.
ರಾಜ್ಯದಲ್ಲಿರುವ 45 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಇರುವ ಮಕ್ಕಳಿಗೆ ಪಾಠ ಮಾಡಲು 1.56 ಲಕ್ಷ ಶಿಕ್ಷಕರಿದ್ದು, ಈ ಪೈಕಿ ಸುಮಾರು 60 ಸಾವಿರ ಶಿಕ್ಷಕರನ್ನು ಚುನಾವಣಾ ಮತದಾರ ಪಟ್ಟಿಪರಿಷ್ಕರಣೆಗೆ ಬ್ಲಾಕ್ ಹಂತದ ಅಧಿಕಾರಿಗಳಾಗಿ (ಬಿಎಲ್‌ಒ) ನಿಯೋಜಿಸಲಾಗಿದೆ. ರಾಜ್ಯ ಚುನಾವಣಾ ಆಯೋಗ ಶಿಕ್ಷಕರ ಜತೆಗೆ ವಿವಿಧ ಇಲಾಖೆಗಳ ನೌಕರರನ್ನು ಮತದಾರ ಪಟ್ಟಿಪರಿಷ್ಕರಣೆಗೆ ನೇಮಿಸಿಕೊಳ್ಳಲು ಸೂಚಿಸಿದ್ದರೂ ಶಿಕ್ಷಕರನ್ನೇ ಹೆಚ್ಚಾಗಿ ನಿಯೋಜಿಸಿಕೊಂಡಿರುವುದಕ್ಕೆ ಶಿಕ್ಷಕರು, ಪೋಷಕರು ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಗಳ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಕೊಪ್ಪಳದ ಸಚಿವರ ಹುಟ್ಟುಹಬ್ಬದ ಕ್ರೀಡಾಕೂಟಕ್ಕೆ ಸರ್ಕಾರಿ ಶಿಕ್ಷಕರ ನಿಯೋಜನೆ?
ಪ್ರತಿ ಶಾಲೆಯಲ್ಲಿ ಒಬ್ಬ ಶಿಕ್ಷಕರನ್ನು ಬಿಎಲ್‌ಒಗಳಾಗಿ ನಿಯೋಜಿಸಿದರೆ ಉಳಿದ ಶಿಕ್ಷಕರು ಹೇಗೋ ಅವರ ಬೋಧನಾ ಕಾರ್ಯವನ್ನು ಸರಿದೂಗಿಸಿಕೊಳ್ಳಬಹುದು. ಆದರೆ, ಹಲವು ಶಾಲೆಗಳಲ್ಲಿ ಇಬ್ಬರು, ಮೂವರು ಶಿಕ್ಷಕರನ್ನು ನಿಯೋಜಿಸಲಾಗಿದೆ. ಶಿಕ್ಷಕರ ಕೊರತೆ ಎದುರಿಸುತ್ತಿರುವ ಶಾಲೆಗಳಲ್ಲಿ ಈಗ ಶೈಕ್ಷಣಿಕ ಚಟುವಟಿಕೆಗಳಿಗೆ ಇನ್ನಷ್ಟುಸಮಸ್ಯೆಯಾಗಲಿದೆ ಎನ್ನುತ್ತಾರೆ ವಿವಿಧ ಶಾಲಾ ಎಸ್‌ಡಿಎಂಸಿಗಳ ಅಧ್ಯಕ್ಷರು ಹಾಗೂ ಸದಸ್ಯರು.
ಕೋವಿಡ್‌ನಿಂದಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ತರಬೇತಿಗೆ ವರ್ಷವಿಡೀ ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ರೂಪಿಸಲಾಗಿದೆ. ಪಠ್ಯ ಪರಿಷ್ಕರಣೆ ಹಿನ್ನೆಲೆಯಲ್ಲಿ ಶಾಲೆಗಳಿಗೆಪಠ್ಯಪುಸ್ತಕಗಳು ಶಾಲೆಗಳಿಗೆ ತಡವಾಗಿ ತಲುಪಿದ ಕಾರಣ ಶೇ.40ರಷ್ಟುಪಠ್ಯ ಬೋಧನೆ ಬಾಕಿ ಇದೆ. ಈ ಬಾರಿ 5 ಮತ್ತು 8ನೇ ತರಗತಿಗೆ ಸರ್ಕಾರ ಪರೀಕ್ಷೆ ನಡೆಸುವುದಾಗಿ ಹೇಳಿದೆ. 15 ಸಾವಿರ ಹೊಸ ಶಿಕ್ಷಕರ ನೇಮಕಾತಿ ಇನ್ನೂ ಪೂರ್ಣಗೊಂಡಿಲ್ಲ. ಈ ಬಗ್ಗೆ ಪ್ರಾಂಶುಪಾಲರು, ಬಿಇಒ, ಡಿಡಿಪಿಐಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ಸರ್ಕಾರ ಹೇಳಿದಂತೆ ನಾವು ಕೇಳಬೇಕಾಗುತ್ತದೆ ಎನ್ನುತ್ತಾರೆ.
ಹುಬ್ಬಳ್ಳಿ: ತಗಡಿನ ಶೆಡ್‌ನಲ್ಲಿಯೇ ಶತಮಾನದ ಶಾಲೆ..!
ಬಿಇಒಗಳಿಗೆ ಎಸ್‌ಡಿಎಂಸಿ ಸದಸ್ಯರ ತರಾಟೆ:
ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುವ ರೀತಿಯಲ್ಲಿ ಶಿಕ್ಷಕರನ್ನು ಬಿಎಲ್‌ಒಗಳಾಗಿ ನಿಯೋಜಿಸಿರುವುದಕ್ಕೆ ತುಮಕೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಶಾಲೆಯಲ್ಲಿ 260ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಆರು ಶಿಕ್ಷಕರ ಪೈಕಿ ಈಗ ಇಬ್ಬರನ್ನು ಬಿಎಲ್‌ಒಗಳಾಗಿ ನಿಯೋಜಿಸಲು ಅನುಮತಿ ನೀಡಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ ಎಚ್ಚೆತ್ತ ಅಧಿಕಾರಿಗಳು ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ನಿಯೋಜಿಸಲು ಒಪ್ಪಿಗೆ ನೀಡಿದ್ದಾರೆ.
ಶಿಕ್ಷಕರನ್ನು ಮತದಾರ ಪಟ್ಟಿಪರಿಷ್ಕರಣೆಗೆ ನಿಯೋಜಿಸಿರುವುದರಿಂದ ಶೈಕ್ಷಣಿಕ ಚಟುವಟಿಕೆಗೆ ಸಮಸ್ಯೆಯಾಗುತ್ತಿದೆ. ಚುನಾವಣಾ ಕಾರ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಲು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ, ಸರ್ಕಾರ, ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳಾದ ಡಿಸಿಗಳು ಶಿಕ್ಷಕರನ್ನು ಚುನಾವಣಾ ಕಾರ್ಯದಿಂದ ಹೊರಗಿಡಲು ಕ್ರಮ ವಹಿಸಬೇಕು.
- ಚಂದ್ರಶೇಖರ ನುಗ್ಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ
ಶೈಕ್ಷಣಿಕ ವರ್ಷಾಂತ್ಯ, ಪರೀಕ್ಷೆ ಹತ್ತಿರವಾಗುತ್ತಿರುವ ಸಮಯದಲ್ಲಿ ಶಿಕ್ಷಕರನ್ನು ಬೇರೆ ಕಾರ್ಯಗಳಿಗೆ ತೊಡಗಿಸಿದರೆ ಪೋಷಕರಿಗೆ ಸರ್ಕಾರಿ ಶಾಲೆಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಉಳಿಯುವುದಿಲ್ಲ. ಬೇರೆ ಬೇರೆ ಇಲಾಖೆಗಳಲ್ಲಿ ಲಕ್ಷಾಂತರ ನೌಕರರಿದ್ದಾರೆ, ಅವರು ಬೇಡವೆಂದಾದರೆ ಲಕ್ಷಾಂತರ ನಿರುದ್ಯೋಗಿಗಳನ್ನು ಇಂತಹ ಕೆಲಸಗಳಿಗೆ ಬಳಸಿಕೊಳ್ಳಬಹುದು. ಆದರೆ, ಸರ್ಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಇಚ್ಛಾಶಕ್ತಿ ಇಲ್ಲ.
- ಡಾ.ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ