ಶಿವಮೊಗ್ಗದ ರವೀಂದ್ರ ನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇದ ಬ್ರಹ್ಮ ಶ್ರೀ ಅ.ಪ.ರಾಮ ಭಟ್ಟರು ಬುಧವಾರ ರಾತ್ರಿ 11:30ಕ್ಕೆ ನಮ್ಮನ್ನು ಬಿಟ್ಟು ಅಗಲಿದ್ದಾರೆ.
ಶಿವಮೊಗ್ಗ (ಫೆ.23): ಇಲ್ಲಿನ ರವೀಂದ್ರ ನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇದ ಬ್ರಹ್ಮ ಶ್ರೀ ಅ.ಪ.ರಾಮ ಭಟ್ಟರು ಬುಧವಾರ ರಾತ್ರಿ 11:30ಕ್ಕೆ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಬಸವನಗುಡಿಯ ಐದನೇ ಕ್ರಾಸ್‌ನಲ್ಲಿರುವ ಅವರ ಮಗನ ಮನೆಯಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ
ಧಾರ್ಮಿಕ ಶಕ್ತಿಯಾಗಿದ್ದ ಭಟ್ಟರು
'ನಾನು ನನ್ನ ಸಾವಿಗಾಗಿ ಕಾಯುತ್ತಿರುವೆ... ನಾನು ಹುಟ್ಟಿದ ದಿನದಿಂದ ನನ್ನ ಸಾವು ನನಗಾಗಿ ಕಾಯುತ್ತಿದೆ ಎಂದು ನನಗೆ ಗೊತ್ತು'. ಜೀವನ ಪೂರ್ತಿ ಸಾತ್ವಿಕತೆಯ ಪರಿಧಿ ಮೀರದೇ ನಡೆದವರು. ಸನಾತನ ಸಾರವನ್ನು ಮುತುವರ್ಜಿಯಿಂದ ಅಭ್ಯಸಿಸಿದವರು. ದೇವಸ್ಥಾನದ ಅರ್ಚಕನೆಂದರೆ ಘಂಟಾಮಣಿಯ ಸದ್ದು ಮಾಡಿ ದೇವರ ಮೂರ್ತಿಗೆ ಕರ್ಪೂರದ ಹಲಗಾರತಿ ಹಿಡಿದು , ಕೈ ಮುಗಿದು ನಿಂತ ಭಕ್ತರಿಗೆ ಆರತಿ-ತೀರ್ಥ ನೀಡುವ ಕೆಲಸದಲ್ಲಿ ನಿರತನಾದವ ಮಾತ್ರವೇ? ಅರ್ಚಕನೆಂದರೆ ಪರೋಹಿತ, ಪುರದ ಹಿತ ಬಯಸುವವ ! ಇದೇನು ಕಡಿಮೆ ವ್ಯಾಪ್ತಿಯ ವಿಷಯವೇ? ಸಮಾಜವೆಂದರೆ ನೂರಾರು ಬಗೆಯ ಜನರ ಭಾವಗಳು ಬೆರೆತ ಒಂದು ಬದುಕಿನ ವ್ಯವಸ್ಥೆ.
ಆರತಿ ತಟ್ಟೆಗೆ ಹಣ ಹಾಕುವುದು ಏಕಾಗಿ?
undefined
ಸಮಾಜದ ಗೊಡವೆ ನಮಗೇಕೆ? ಎಂದು ಕ್ಷಣ ಕಾಲ ಅನ್ನಿಸಿದರೂ ನಾವು ಸಮಾಜದ ಅವಿಭಾಜ್ಯ ಭಾಗವೆನ್ನುವುದು ಕೂಡ ವಾಸ್ತವದ ಸತ್ಯ. ಅಂಥಹ ಸಮಾಜಕ್ಕೆ ತನ್ನದೇ ರೀತಿಯಲ್ಲಿ ಸದ್ದಿಲ್ಲದೇ ಸಂಸ್ಕಾರ ಕೊಡುವ, ಅದನ್ನು ಕಟ್ಟುವ ನಿಟ್ಟಿನಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿ ಇಟ್ಟವರು ನಮ್ಮ ರಾಮಭಟ್ಟರು. ಒಂದೆರಡು ದಿನವಲ್ಲ , ಒಂದೆರಡು ವರ್ಷವಲ್ಲ. ಅದು ನಿರಂತರ ತಪಸ್ಸು. ಯಾಗ-ಯಜ್ಞಾದಿಗಳ ಪರ್ವ, ನವರಾತ್ರಿ-ಶಿವರಾತ್ರಿ ಉತ್ಸವಗಳು, ವಾರ-ತಿಥಿಯ ವಿಶೇಷ ದಿನಗಳು, ಧರ್ಮ ಜಾಗೃತಿ, ಸಂಸ್ಕಾರ ಶಿಬಿರಗಳು, ಸಭೆಗಳು ಸಮಾರಂಭಗಳು, ಸಂತರ್ಪಣೆಗಳು. ಅಚ್ಚುಕಟ್ಟಾದ ಆಯೋಜನೆ, ಅನುಷ್ಠಾನ, ಆದರ -ಆತಿಥ್ಯಗಳ ಅವ್ಯಾಹತ ಅನುಚರಣೆ !
ಇದು ಸಾಮಾನ್ಯದ ಸಾಧನೆಯಲ್ಲ ! ಒಂದು ಸಾಮಾನ್ಯ ಗಣಪತಿ ದೇವಸ್ಥಾನ ನಮ್ಮ ಶಿವಮೊಗ್ಗದ ಶಕ್ತಿ ಕೇಂದ್ರವಾಗಿ ಬೆಳೆದ ಯಶೋಗಾಥೆ. ಸಮಾಜದ ಪ್ರತಿಯೊಬ್ಬರ ಆದಿ ದೈವಿಕ, ಆದಿ ಭೌತಿಕ, ಆಧ್ಯಾತ್ಮಿಕ ತಾಪತ್ರಯಗಳ ಸಂತೈಸುವಿಕೆಗೆ ರಾಮಭಟ್ಟರ ಹೆಗಲು ಬೇಕೆನ್ನುವಷ್ಟು ಅನಿವಾರ್ಯತೆ. ಅದು ಪಂಡಿತರಿರಲಿ, ಪಾಮರರಿರಲಿ, ರಾಜಕಾರಣಿ-ಪ್ರಸಿದ್ಧರಿರಲಿ ರಾಮಭಟ್ಟರ ಸಾಮೀಪ್ಯವೇ ಪರಮ ನಿರಾಳವೆನ್ನುವಷ್ಟು ಅಪ್ತತೆ. ಆಶ್ಚರ್ಯವಾದರೂ ಸಮಾಜವನ್ನು ಈ ರೀತಿ ಸೂಜಿಗಲ್ಲಿನಂತೆ ಸೆಳೆದದ್ದು ರಾಮಭಟ್ಟರ ಆ ಸತ್ವಯುತ ತೇಜಸ್ಸು ಮತ್ತು ನುಡಿದಂತೆ ನಡೆಯುವ ತಪಸ್ಸು. ಅವರು ಮೌನದಲ್ಲಿದ್ದು ಸಾಧಿಸಿದ್ದು ಅಗಾಧ.
ಮಾತು ಬೆಳ್ಳಿ -ಮೌನ ಬಂಗಾರವೆಂದು ನಂಬಿ ಬದುಕಿದವರು. ಸುಂದರ ಬದುಕಿಗೆ ಆಡಂಬರದ ಹಂಗಿಲ್ಲ . ಸರಳತೆಯೇ ದೊಡ್ಡ ಆಸ್ತಿ ಎಂಬ ವಾಕ್ಯಕ್ಕೆ ಜೀವಂತ ನಿದರ್ಶನವಾಗಿ ಬದುಕಿದವರು. ಭಗವಂತನ ಆರಾಧನೆಯಲ್ಲಿ ಜೀವನವನ್ನೇ ತೇಯ್ದ ಮಹಾಪುರುಷನಿಗೆ ಈ ರೀತಿಯ ನೋವು ಉಣ್ಣುವ ನರಕವೇಕೆ? ದೈವದ ಅಸ್ತಿತ್ವವೆಲ್ಲಾ ಸುಳ್ಳೇ? ಪಾಪ-ಪುಣ್ಯದ ಸಿದ್ಧಾಂತಗಳೆಲ್ಲಾ ಭ್ರಮೆಯೇ? ಎನ್ನುವ ಕುತರ್ಕಕ್ಕೆ ಮನಸ್ಸು ವಾಲುವಷ್ಟು ದಟ್ಟವಾದ ವಿಷಮ ಘಳಿಗೆ! ನಾವು ಅರ್ಧಂಬರ್ಧ ಬೆಂದವರು. ಆದರೆ ರಾಮಭಟ್ಟರು ಸ್ಥಿತಪ್ರಜ್ಞರು, ಪರಿಪೂರ್ಣರು ,ಎಲ್ಲಗಿಂತ ಮಿಗಿಲಾಗಿ ವಿರಾಗಿಗಳು. ಅವರಿಗೆ ಈ ರೀತಿಯ ಗೊಂದಲಗಳಿಲ್ಲ , ಆಸ್ಥೆ-ನಂಬಿಕೆಗಳ ಕುರಿತು ಶಂಕೆ, ಸಂಶಯಗಳಿಲ್ಲ. ಜೀವ ಹಿಂಡುವ ನೋವು ತಾಂಡವವಾಡುತ್ತಿದ್ದರೂ ಯಾವುದನ್ನೂ ತೋರ್ಪಡಿಸದೆ ದಿವ್ಯ ಮೌನಕ್ಕೆ ಶರಣಾಗಿದ್ದರು.
ದೇವಸ್ಥಾನಕ್ಕೆ ಹೋದಾಗ ಎಷ್ಟು ಪ್ರದಕ್ಷಿಣೆ ಹಾಕಬೇಕು?
ಬರುವ ಮರಣವ ಸ್ವಾಗತಿಸಲು ಕೈ ಜೋಡಿಸಿ ಕಾಯುತ್ತಿದ್ದರು. ಶರಶಯ್ಯೆಯಲ್ಲಿ ಮಲಗಿ ನರಳುತ್ತಿದ್ದ ಭೀಷ್ಮನಂತಹ ಅವರ ಈ ಪರಿಸ್ಥಿತಿ ನಮಗೆಲ್ಲ ಒಂದು ಪಾಠ. ಅವರು ಇಷ್ಟಲ್ಲಾ ಧಾರ್ಮಿಕರಾಗಿದ್ದರೂ ಈ ರೀತಿಯ ಕಷ್ಟ ಅನುಭವಿಸುವುದು ನ್ಯಾಯವೇ ಎಂಬ ನಮ್ಮ ಬಾಲಿಶ ಪ್ರಶ್ನೆಗೆ ಕರ್ಮ ಸಿದ್ಧಾಂತವನ್ನು ಪ್ರಬಲವಾಗಿ ನಂಬಿದ್ದ ರಾಮಭಟ್ಟರ ದಿವ್ಯ ಮೌನ, ಸಂಯಮ, ಸೈರಣೆ ಮತ್ತು ಬಂದದ್ದೆಲ್ಲಾ ಬರಲಿ ಎಂಬ ನಿರ್ಭೀತಿಯ ನಿಲುವೇ ದೊಡ್ಡ ಉತ್ತರ. ಸಾವು ಎದುರಾದಾಗ ವಿಚಲಿತರಾದದೇ ಬರಮಾಡಿಕೊಳ್ಳುವುದು ಆಧ್ಯಾತ್ಮಿಕ ವ್ಯಕ್ತಿಯ ಪರಮ ಸಾಧನೆ. ಇದು ಅರ್ಥವಾದವರಿಗೆ ಆದೀತು . ಶಿವಮೊಗ್ಗ ನಗರದ ಧಾರ್ಮಿಕ ಶಕ್ತಿ ವೇದ ಬ್ರಹ್ಮಶ್ರೀ ಅ ಪ ರಾಮಭಟ್ಟರು ಇನ್ನು ಇಲ್ಲದ ನಿರ್ವಾತ ಮತ್ತೆ ತುಂಬುವುದು ಕಷ್ಟ ಸಾಧ್ಯ.
- ವಿನಯ್ ಶಿವಮೊಗ್ಗ