ಆದಿವಾಸಿ ರೈತ ಮಹಿಳೆಯ ರೋಚಕ ಕತೆ :ಈಗಿವರು ಲಕ್ಷಾಧೀಶ್ವರಿ

By Suvarna News  |  First Published Feb 12, 2021, 12:36 PM IST

ಆದಿವಾಸಿಗಳು ಸಾಮಾನ್ಯವಾಗಿ ಕಾಡನ್ನು ಬಿಟ್ಟು ನಾಡಿಗೆ ಬರಲು ಇಚ್ಛಿಸುವುದಿಲ್ಲ. ಒಂದೊಮ್ಮೆ ಪುನರ್ವಸತಿಗೊಂಡರೂ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ದೂರದ ಮಾತು. ಆದರೆ ಈಕೆ ಕೃಷಿಯಲ್ಲಿಂದು ಅದ್ಬುತ ಸಾಧಕಿ


ರೈತ ರತ್ನ ದಾಸಿ
ವಿಭಾಗ: ರೈತ ಮಹಿಳೆ
ಊರು: ಸೊಳ್ಳೇಪುರ ಪುನರ್ವಸತಿ ಕೇಂದ್ರ, ಎಚ್.ಡಿ.ಕೋಟೆ ತಾಲೂಕು, ಮೈಸೂರು ಜಿಲ್ಲೆ 

ಮೈಸೂರು (ಫೆ.12):  ಕೃಷಿ ಬಗ್ಗೆ ಅ ಆ ಇ ಈ ಗೊತ್ತಿರದ ಆದಿವಾಸಿಯೊಬ್ಬರು ಪ್ರಗತಿ ಪರ ರೈತ ಮಹಿಳೆಯಾದ ರೋಚಕ ಕತೆಯಿದು. ಆದಿವಾಸಿಗಳು ಸಾಮಾನ್ಯವಾಗಿ ಕಾಡನ್ನು ಬಿಟ್ಟು ನಾಡಿಗೆ ಬರಲು ಇಚ್ಛಿಸುವುದಿಲ್ಲ. ಒಂದೊಮ್ಮೆ ಪುನರ್ವಸತಿಗೊಂಡರೂ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ದೂರದ ಮಾತು. ನಾಡಿಗೆ ಬಂದರೂ ಸರ್ಕಾರ ನೀಡಿರುವ ಜಮೀನನ್ನು ಬೇರೆಯವರಿಗೆ ಗುತ್ತಿಗೆಗೆ ನೀಡುವುದೋ ಅಥವಾ ತಾವು ಬೇರೆ ಕಡೆ ಕೂಲಿಗೆ ಹೋಗುವುದೋ ಅಥವಾ ಮತ್ತೆ ಕಾಡಿಗೆ ಹೋಗಿ ಜೇನು ಕೀಳುವುದೋ, ಅರಣ್ಯ ಉತ್ಪನ್ನಗಳ ಸಂಗ್ರಹಿಸಿ ಮಾರಾಟ ಮಾಡುವುದರಲ್ಲಿ ತೊಡಗಿಸಿಕೊಳ್ಳುತ್ತಾರೆ. 

Tap to resize

Latest Videos

ಆದರೆ, ದಾಸಿ ಎಂಬ ಈ ಆದಿವಾಸಿ ಮಹಿಳೆ ಇದಕ್ಕೆ ತದ್ವಿರುದ್ಧವಾಗಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸರ್ಕಾರ ನೀಡಿದ 3 ಎಕರೆ ಜೊತೆ ಇನ್ನೂ 2 ಎಕರೆ ಜಮೀನನ್ನು ಗುತ್ತಿಗೆಗೆ ಪಡೆದು ಸಮಗ್ರ ಹಾಗೂ ಸುಸ್ಥಿರ ಬೇಸಾಯ ಮಾಡುತ್ತಿದ್ದಾರೆ. ಬಾಳೆ, ಹಸಿ ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ ಜತೆಗೆ ವಿವಿಧ ತರಕಾರಿಗಳು, ಅಣಬೆ, ಸೊಪ್ಪು, ತೆಂಗು, ಅಡಿಕೆ, ಸಪೋಟ, ಏಲಕ್ಕಿ ಇತ್ಯಾದಿ ಬೆಳೆಗಳ ಜತೆಗೆ ತೋಟಗಾರಿಕಾ ಬೆಳೆಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡಿ ಅದರಲ್ಲೂ ಲಾಭ ಕಾಣುತ್ತಿದ್ದಾರೆ.  

ಪಿಯುಸಿ ಫೇಲ್ ಆದ ಹುಡುಗ : ಕೃಷಿಯಲ್ಲಿ ಪ್ರಯೋಗಗಳ ಮೂಲಕಲೇ ಯಶಸ್ಸು ಕಂಡ ..

ಸಾಧನೆಯ ವಿವರ:  2007 ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿಗೊಂಡ ದಾಸಿ, ಗಂಡ ಹಾಗೂ 10 ಮಕ್ಕಳೊಂದಿಗೆ ನಾಡಿಗೆ ಕಾಲಿಟ್ಟರು. ಅದೇ ವರ್ಷ ಗಂಡನನ್ನು ಕಳೆದುಕೊಂಡ ಅವರ ಹೆಗಲ ಮೇಲೆ ಇಡೀ ಸಂಸಾರದ ಭಾರ ಬಿತ್ತು. 

ರೈತ ರತ್ನ ಪ್ರಶಸ್ತಿ ಬಗೆಗಿನ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರ 3 ಎಕರೆ ಜಮೀನನ್ನು ನೀಡಿತ್ತಾದರೂ ನೀರಾವರಿಗೆ ಯಾವುದೇ ಅನುಕೂಲ ಇರಲಿಲ್ಲ. ಕೇವಲ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯಬೇಕಾಗಿತ್ತು. ಅದರಲ್ಲೂ ಕೃಷಿ ಬಗ್ಗೆ ಎಳ್ಳಷ್ಟೂ ಗೊತ್ತಿರದ ದಾಸಿಯವರಿಗೆ ಇದು ಸವಾಲಿನ ಕೆಲಸವಾಗಿತ್ತು. ಮೊದಲ ಐದಾರು ವರ್ಷ ರಾಗಿ, ಜೋಳ, ಹತ್ತಿ ಬೆಳೆದರೂ ಬೆಳೆದ ಬೆಳೆ ಕೈ ಹಿಡಿಯಲಿಲ್ಲ. ಮುಖ್ಯಕಾರಣ ಇವರಿಗೆ ಯಾವಾಗ ಭೂಮಿ ಉಳುಮೆ ಮಾಡಬೇಕು, ಗೊಬ್ಬರ ಹಾಕಬೇಕು, ಬೀಜ ಬಿತ್ತನೆ ಮಾಡಬೇಕು ಎಂಬುದರ ಅರಿವಿರಲಿಲ್ಲ. 

ಮುಂದಿನ ದಿನಗಳಲ್ಲಿ ಎನ್ಜಿಒಗಳು, ಕೃಷಿ ಇಲಾಖೆಗಳ ಸಂಪರ್ಕಕ್ಕೆ ಬಂದ ದಾಸಿ ಅವರಿಗೆ ಸಾಂಪ್ರಾದಾಯಿಕ ಕೃಷಿ ಪದ್ಧತಿ ಪರಿಚಯವಾಗತೊಡಗಿತು. ಸಾವಯವ ಕೃಷಿ, ಸಮಗ್ರ ಹಾಗೂ ಸುಸ್ಥಿರ ಕೃಷಿ ಪದ್ಧತಿಗೆ ಒಗ್ಗಿಸಿಕೊಂಡರು. ಪ್ರಕೃತಿದತ್ತವಾಗಿ ದೊರೆಯುವ ವಸ್ತುಗಳನ್ನೇ ಬಳಸಿಕೊಂಡು ಗೊಬ್ಬರ, ಕೀಟನಾಶಕಗಳ ಸಿದ್ಧಪಡಿಸಿಕೊಂಡರು. ಕೃಷಿ ಮೇಳಗಳು, ಅಕ್ಕಪಕ್ಕದ ಗ್ರಾಮಗಳ ಪ್ರಗತಿಪರ ರೈತರ ಜಮೀನುಗಳಿಗೆ ಭೇಟಿ ನೀಡಿ ಅವರು ಹೇಗೆ ಕೃಷಿ ಮಾಡುತ್ತಿದ್ದಾರೆ ಎಂಬುದನ್ನು ತಪಸ್ಸಿನಂತೆ ನೋಡಿ ಕಲಿತರು. ಇದೆಲ್ಲದರ ಫಲಿತಾಂಶ ಕಳೆದ ಮೂರ್ನಾಲ್ಕು ವರ್ಷಗಳಿಂದ ತರಕಾರಿ, ಹಣ್ಣು, ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಉತ್ತಮ ಲಾಭ ಕಾಣುತ್ತಿದ್ದಾರೆ. 6 ರಿಂದ 10 ಲಕ್ಷ ರು.ನಷ್ಟು ವಾರ್ಷಿಕ ಆದಾಯ ಗಳಿಸುತ್ತಿದ್ದಾರೆ. 

ಗಮನಾರ್ಹ ಅಂಶ:  62 ವರ್ಷದ ದಾಸಿಯವರಿಗೆ ಇಳಿ ವಯಸ್ಸಿನಲ್ಲೂ ಪಾದರಸದಂತಹ ಉತ್ಸಾಹ. ಎಲ್ಲಿ, ಯಾರೇ ಹೊಸತನ್ನು ಹೇಳಿಕೊಡುತ್ತೇವೆ ಎಂದರೂ ಅಲ್ಲಿ ಅವರು ಹಾಜರಿರುತ್ತಾರೆ. ಹೊಸ ಬೆಳೆಯೇ ಇರಲಿ, ಹೈನುಗಾರಿಕೆ ಇರಲಿ, ಯಾವುದರ ಬಗ್ಗೆಯೇ ಆಗಿರಲಿ ಇಂದಿಗೂ ಅದೇ ಹುಮ್ಮಸ್ಸಿನಿಂದ ಕಲಿಯುತ್ತಾರೆ. ಇವರ ಈ ಕಲಿಕಾ ಮನೋಭಾವವೇ ಅವರನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ

click me!