ಕೌಟುಂಬಿಕ ವ್ಯಾಜ್ಯಗಳ ಹಿನ್ನೆಲೆಯಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯಗಳು ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಬೆಂಗಳೂರು (ಮೇ.29): ಕೌಟುಂಬಿಕ ವ್ಯಾಜ್ಯಗಳ ಹಿನ್ನೆಲೆಯಲ್ಲಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯಗಳು ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠ ಈ ಆದೇಶ ಮಾಡಿದೆ.
ವರದಕ್ಷಿಣೆ ಕಿರುಕುಳ: ವಿಜಯಪುರದ ರವಿ ಮತ್ತು ಸೌಮ್ಯಾ (ಹೆಸರು ಬದಲಿಸಲಾಗಿದೆ) 15 ವರ್ಷಗಳ ಹಿಂದೆ ಮದುವೆಯಾಗಿದ್ದರು. 2013ರಲ್ಲಿ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಸೌಮ್ಯಾ, ‘ಮದುವೆ ವೇಳೆ ಪತಿಗೆ ತಮ್ಮ ಪೋಷಕರು ವರದಕ್ಷಿಣೆಯಾಗಿ ಹಣ ಮತ್ತು ಚಿನ್ನಾಭರಣ ನೀಡಿದ್ದರೂ ಪುನಃ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ತಾಯಿ ಮತ್ತು ಸಹೋದರಿಯ ಪ್ರಚೋದನೆಯಿಂದ ಪತಿ ನನ್ನನ್ನು ಮನೆಯಿಂದ ಹೊರ ಹಾಕಿದ್ದರು. ಇದರಿಂದ ನನಗೆ ಜೀವನಾಂಶ ಪಾವತಿಸಲು ಪತಿಗೆ ನಿರ್ದೇಶಿಸಬೇಕು’ ಎಂದು ಕೋರಿ ಕೌಟುಂಬಿಕ ದೌರ್ಜನ್ಯಗಳಿಂದ ಮಹಿಳೆಯರ ರಕ್ಷಣೆ ಕಾಯ್ದೆಯ ಸೆಕ್ಷನ್ 12ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಪಟ್ಟದಕಲ್ಲಿನ ಶಿವನ ಮೂರ್ತಿ ಕೈಯಲ್ಲೂ ‘ಸೆಂಗೋಲ್’!
ಅರ್ಜಿ ವಿಚಾರಣೆ ನಡೆಸಿದ್ದ ವಿಜಯಪುರ ಜೆಎಂಎಫ್‌ಸಿ ನ್ಯಾಯಾಲಯ, ಪತ್ನಿಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ಪಾವತಿಸುವಂತೆ ರವಿಗೆ 2016ರ ಅ.26ರಂದು ನಿರ್ದೇಶಿಸಿತ್ತು. ಈ ಆದೇಶ ರದ್ದು ಕೋರಿ ರವಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ್ದ ವಿಜಯಪುರ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ರವಿಯೊಂದಿಗೆ ಕಾನೂನಾತ್ಮಕವಾಗಿ ವಿವಾಹವಾಗಿರುವುದನ್ನು ಸಾಬೀತುಪಡಿಸುವಲ್ಲಿ ಸೌಮ್ಯಾ ವಿಫಲವಾಗಿದ್ದಾರೆ ಎಂದು 2018ರ ಮೇ 29ರಂದು ತೀರ್ಮಾನಿಸಿ ಜೆಎಂಎಫ್‌ಸಿ ಕೋರ್ಟ್‌ನ ಆದೇಶವನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಸೌಮ್ಯಾ ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಸಾಕ್ಷಿಗಳ ಹೇಳಿಕೆ ಮತ್ತು ಇತರೆ ಸಾಕ್ಷ್ಯ ಪರಿಗಣಿಸಿದರೆ ಸೌಮ್ಯ ಅವರನ್ನು ರವಿ ಮದುವೆಯಾಗಿರುವುದು ಸ್ಪಷ್ಟವಾಗುತ್ತದೆ. ಮದುವೆ ಸಿಂಧುತ್ವದ ಬಗ್ಗೆ ಅರ್ಜಿ ಸಲ್ಲಿಸಿದ್ದರೆ ಮಾತ್ರ ಆ ಕುರಿತು ಸೆಷನ್ಸ್ ನ್ಯಾಯಾಲಯ ಪರಿಶೀಲನೆ ನಡೆಸಿ, ಆದೇಶ ಹೊರಡಿಸಬೇಕಾಗುತ್ತದೆ. ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯಗಳು ಮದುವೆ ಸಿಂಧುತ್ವದ ಬಗ್ಗೆ ಪರಿಶೀಲನೆ ನಡೆಸುವಂತಿಲ್ಲ ಎಂದು ಆದೇಶಿಸಿದೆ.
ವಿಚಾರಣಾ ನ್ಯಾಯಾಲಯ (ಜೆಎಂಎಫ್‌ಸಿ) ಜೀವನಾಂಶ ನೀಡುವಂತೆ ಆದೇಶ ಪ್ರಕಟಿಸಿದಾಗ, ಪತ್ನಿ ಸ್ವತಃ ಜೀವನ ನಿರ್ವಹಿಸಲು ಸಮರ್ಥ ಇರುವುದು ಸಾಬೀತಾದರೆ ಜೀವನಾಂಶ ನೀಡಲು ಸೂಚಿಸಿದ ಆದೇಶವನ್ನು ಮೇಲ್ಮನವಿ ನ್ಯಾಯಾಲಯ (ಸೆಷನ್ಸ್) ತಿದ್ದುಪಡಿ ಮಾಡಬಹುದು ಇಲ್ಲವೇ ರದ್ದುಪಡಿಸಬಹುದು. ಸದರಿ ಪ್ರಕರಣದಲ್ಲಿ ಸೆಷನ್ಸ್ ಕೋರ್ಟ್ ಅಧಿಕಾರ ವ್ಯಾಪ್ತಿ ಮೀರಿ ಮದುವೆಯ ಸಿಂಧುತ್ವದ ಬಗ್ಗೆ ತೀರ್ಮಾನಿಸಿ, ಜೀವನಾಂಶ ಪಾವತಿಸುವ ಕುರಿತಂತೆ ವಿಚಾರಣಾ ನ್ಯಾಯಾಲಯ (ಜೆಎಂಎಫ್‌ಸಿ) ಹೊರಡಿಸಿದ್ದ ಆದೇಶ ರದ್ದುಪಡಿಸಲು ಅರ್ಹವಾಗಿದೆ ಎಂದು ನಿರ್ಧರಿಸಿತು. ಅಂತಿಮವಾಗಿ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಿದ ಹೈಕೋರ್ಟ್, ಜೆಎಂಎಫ್‌ಸಿ ಆದೇಶವನ್ನು ಕಾಯಂಗೊಳಿಸಿದೆ.
ಬಿಜೆಪಿ ಬ್ಯಾನರ್‌ನಲ್ಲಿ ಸಿಎಂ ಸಿದ್ದು ಪೋಟೋ: ಸಾಮಾಜಿಕ ಜಾಲತಾಣದಲ್ಲಿ ವೈರಲ್
ಪತ್ನಿಯ ವಾದವೇನು?: ವಿಚಾರಣೆ ವೇಳೆ ಸೌಮ್ಯಾ ಪರ ವಕೀಲರು, ಸೌಮ್ಯಾ ಚುನಾವಣಾ ಗುರುತಿನ ಚೀಟಿ ಹೊಂದಿದ್ದು, ಅದರಿಂದ ರವಿಯೇ ಆಕೆಯ ಪತಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಪ್ರಕರಣದಲ್ಲಿ ಸೌಮ್ಯಾ ಸಂಬಂಧಿಕರಾದ ಚಂದಪ್ಪ ಬಿರಾದಾರ್ ಮತ್ತು ವಿವಾಹ ನೆರವೇರಿಸಿಕೊಟ್ಟವ್ಯಕ್ತಿ, ದಂಪತಿಯ (ರವಿ ಮತ್ತು ಸೌಮ್ಯಾ) ಸಂಬಂಧವನ್ನು ದೃಢಪಡಿಸುತ್ತಾರೆ. ಹೀಗಿದ್ದರೂ ಸೆಷನ್ಸ್ ನ್ಯಾಯಾಲಯದ ಆದೇಶ ತನ್ನ ಅಧಿಕಾರ ವ್ಯಾಪ್ತಿ ಮೀರಿ ಮದುವೆ ಸಿಂಧುತ್ವದ ಬಗ್ಗೆ ನಿರ್ಧರಿಸಿದೆ. ಆ ಆದೇಶವು ದೋಷಪೂರಿತವಾಗಿದ್ದು, ರದ್ದುಪಡಿಸಲು ಅರ್ಹವಾಗಿದೆ ಎಂದು ಪ್ರತಿಪಾದಿಸಿದ್ದರು.
ಪತಿ ಪ್ರತಿವಾದವೇನು?: ರವಿ ಪರ ವಕೀಲರು, ಸಾಕ್ಷಿಗಳ ಹೇಳಿಕೆಗಳು ಗೊಂದಲಕಾರಿ ಮತ್ತು ತದ್ವಿರುದ್ಧವಾಗಿವೆ. ರವಿಯನ್ನು ಕಾನೂನಾತ್ಮಕವಾಗಿ ವಿವಾಹವಾಗಿರುವುದನ್ನು ಸಾಬೀತುಪಡಿಸುವಲ್ಲಿ ಸೌಮ್ಯಾ ವಿಫಲವಾಗಿದ್ದಾರೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು