ಆರ್.ತಾರಾನಾಥ್
ಚಿಕ್ಕಮಗಳೂರು (ಡಿ.6) : 1956 ರಿಂದ 1989ರವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ದರ್ಬಾರ್‌ವಿತ್ತು. ಅದು ಕೊನೆಯಾಗಿದ್ದು 1999ರ ವಿಧಾನಸಭಾ ಚುನಾವಣೆಯಲ್ಲಿ. 2004ರಲ್ಲಿ ಕಾಫಿ ನಾಡಲ್ಲಿ ಅರಳಿದ ಕಮಲ, ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಸತತ ನಾಲ್ಕು ಬಾರಿ ಶಾಸಕರಾಗಿರುವ ಸಿ.ಟಿ.ರವಿಯವರು ಜಿಲ್ಲೆಯ ಕಮಲ ಪಾಳಯದಲ್ಲಿ ಹಿರಿಯ ಶಾಸಕರು. ಇನ್ನು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿನ ಮುನ್ನೆಲೆಯ ನಾಯಕರು ಈಗ ಹಿಂದಕ್ಕೆ ಸರಿದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂಡಿಗೆರೆ ಪರಿಶಿಷ್ಟಜಾತಿಗೆ ಮೀಸಲಾದ ಕ್ಷೇತ್ರ. ಇನ್ನುಳಿದ ನಾಲ್ಕು ಕ್ಷೇತ್ರಗಳು ಸಾಮಾನ್ಯ. ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯಿತ ಹಾಗೂ ಕುರುಬ ಸಮಾಜದವರು ಪ್ರಮುಖ ಪಾತ್ರ ವಹಿಸುತ್ತಾರೆ. ಶೃಂಗೇರಿ ಹಾಗೂ ಮೂಡಿಗೆರೆಯಲ್ಲಿ ಒಕ್ಕಲಿಗರು ನಿರ್ಣಯಕ ಪಾತ್ರ ವಹಿಸುತ್ತಾರೆ. ಈ ಐದೂ ಕ್ಷೇತ್ರಗಳಲ್ಲಿ ಜಾತಿಯ ಜತೆಗೆ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು ಕೂಡಾ ಕೌಂಟ್ ಆಗಲಿದೆ.
Ticket Fight: ಖರ್ಗೆ ತವರು ಕಲಬುರಗಿಯಲ್ಲಿ ಈ ಬಾರಿ ಕೈ- ಕಮಲ ಜಂಗಿ ಕುಸ್ತಿ
ಜಿಲ್ಲೆ: ಚಿಕ್ಕಮಗಳೂರು
ಕ್ಷೇತ್ರ ಬಲಾಬಲ:
1. ಚಿಕ್ಕಮಗಳೂರು: ಕುತೂಹಲ ಮೂಡಿಸಿದ ‘ಕೈ’ ಟಿಕೆಟ್
ನಾಲ್ಕು ಬಾರಿ ಗೆದ್ದಿರುವ ಸಿ.ಟಿ.ರವಿ, ಈ ಬಾರಿಯೂ ಬಿಜೆಪಿಯಿಂದ ಕಣಕ್ಕಿಳಿಯಲು ಉತ್ಸುಕರಾಗಿದ್ದಾರೆ. ಇನ್ನು, ಕಾಂಗ್ರೆಸ್ ಟಿಕೆಟ್‌ಗೆ ರೇಖಾ ಹುಲಿಯಪ್ಪಗೌಡ, ಡಾ.ಡಿ.ಎಲ್.ವಿಜಯಕುಮಾರ್, ಬಿ.ಎಚ್. ಹರೀಶ್, ಮಹಡಿಮನೆ ಸತೀಶ್, ಎ.ಎನ್.ಮಹೇಶ್ ಅರ್ಜಿ ಹಾಕಿದ್ದಾರೆ. ಆದರೆ, ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಕೈ ಟಿಕೆಟ್‌ಗೆ ಅರ್ಜಿ ಹಾಕಿಲ್ಲ. ಹೀಗಾಗಿ, ಕೈ ಟಿಕೆಟ್ ಕುತೂಹಲ ಮೂಡಿಸಿದೆ. ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಗಾಯತ್ರಿ ಶಾಂತೇಗೌಡರಿಗೆ ಆಸಕ್ತಿ ಇರಲಿಲ್ಲ. ಪಕ್ಷದ ವರಿಷ್ಟರು ಹೇಳಿದ್ದರಿಂದ ಸ್ಪರ್ಧೆ ಮಾಡಿದ್ದರು. ಇನ್ನು, ಜೆಡಿಎಸ್‌ನಿಂದ ಸದ್ಯಕ್ಕೆ ತಿಮ್ಮಶೆಟ್ಟಿಅವರ ಹೆಸರು ಮಾತ್ರ ಕೇಳಿ ಬರುತ್ತಿದೆ. ಈಗಾಗಲೇ ಅವರು ಪ್ರಚಾರವನ್ನೂ ಆರಂಭಿಸಿದ್ದಾರೆ. ಲಿಂಗಾಯಿತ, ಕುರುಬ ಸಮಾಜದ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಒಕ್ಕಲಿಗರು, ಪರಿಶಿಷ್ಟಜಾತಿ, ಪರಿಶಿಷ್ಟವರ್ಗ ಹಾಗೂ ಮುಸ್ಲಿಂ ಮತದಾರರೂ ಕೂಡ ನಿರ್ಣಾಯಕರಾಗಲಿದ್ದಾರೆ.
2. ತರೀಕೆರೆ: ಡಜನ್ ದಾಟಿದ ‘ಕೈ’ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ
ಜನಸಂಕಲ್ಪ ಯಾತ್ರೆಯ ಮೂಲಕ ಬಿಜೆಪಿ ಈಗಾಗಲೇ ಹಾಲಿ ಶಾಸಕ ಡಿ.ಎಸ್. ಸುರೇಶ್ ಅವರನ್ನು ಮತ್ತೆ ಕಣಕ್ಕಿಳಿಸುವುದಾಗಿ ಘೋಷಿಸಿದೆ. ಆದರೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಒಂದು ಡಜನ್ ದಾಟಿದೆ. ಮುಖ್ಯವಾಗಿ ಮಾಜಿ ಶಾಸಕರಾದ ಜಿ.ಎಚ್. ಶ್ರೀನಿವಾಸ್, ಟಿ.ಎಚ್.ಶಿವಶಂಕರಪ್ಪ, ದೋರನಾಳು ಪರಮೇಶ್, ಕೆ.ಆರ್. ಧ್ರುವಕುಮಾರ್, ಗೋಪಿಕೃಷ್ಣ ನಡುವೆ ಟಿಕೆಟ್‌ಗಾಗಿ ಫೈಟ್ ನಡೆಯುತ್ತಿದೆ. ಲಿಂಗಾಯಿತ ಹಾಗೂ ಕುರುಬ ಸಮುದಾಯದ ಆಧಾರದ ಮೇಲೆ ಟಿಕೆಟ್ ಹಂಚಿಕೆ ಆಗುವುದು ಇಲ್ಲಿ ಸಾಮಾನ್ಯ.
3. ಕಡೂರು: ವೈಎಸ್‌ವಿ ದತ್ತ ನಡೆ ನಿಗೂಢ
ಲಿಂಗಾಯಿತ ಹಾಗೂ ಕುರುಬ ಸಮಾಜದ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವೈಎಸ್‌ವಿ ದತ್ತ ಅವರು ಜೆಡಿಎಸ್ ಟಿಕೆಟ್‌ನಿಂದ ಗೆಲುವು ಸಾಧಿಸಿದ್ದರು. ಆದರೆ, ಸದ್ಯಕ್ಕೆ ಅವರು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದು, ಮತ್ತೆ ಅದೇ ಪಕ್ಷದಿಂದ ಸ್ಪರ್ಧೆ ಮಾಡುತ್ತಾರ ಎಂಬ ಪ್ರಶ್ನೆ ಜನರ ಮುಂದಿದೆ. ಜೊತೆಗೆ, ಈ ಬಾರಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲಿದ್ದು, ಈ ಸಂಬಂಧ ಸಿದ್ಧರಾಮಯ್ಯ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ, ಈ ಬಗ್ಗೆ ದತ್ತ ಅವರು ಬಾಯಿ ಬಿಡುತ್ತಿಲ್ಲ. ಒಂದು ವೇಳೆ, ದತ್ತ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದರೆ, ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿಯ ಕೊರತೆ ಎದುರಾಗಲಿದೆ. ಆಗ, ಬೆಳ್ಳಿ ಪ್ರಕಾಶ್ ಮತ್ತು ದತ್ತ ನಡುವೆ ನೇರ ಫೈಟ್ ನಡೆಯುವ ಸಾಧ್ಯತೆ ಹೆಚ್ಚು. ಜೊತೆಗೆ, ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಕಡೂರು ಸಿ.ನಂಜಪ್ಪ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಕೆ.ಎಸ್.ಆನಂದ್, ವಿನಾಯಕ, ಶರತ್ ಕೃಷ್ಣಮೂರ್ತಿ, ಕಂಸಾಗರ ಸೋಮಶೇಖರ್ ಕೂಡ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಬಿಜೆಪಿ, ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೇ ಮತ್ತೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ.
Assembly Election: ಕಾಂಗ್ರೆಸ್‌ನಲ್ಲಿ ಬಿರುಕು; ಜೋರಾದ ಟಿಕೆಟ್ ಫೈಟ್!
4. ಮೂಡಿಗೆರೆ: ಮೋಟಮ್ಮ ಪುತ್ರಿಗೆ ‘ಕೈ’ ಟಿಕೆಟ್‌ಗೆ ವಿರೋಧ
ಮೀಸಲು ಕ್ಷೇತ್ರವಾಗಿರುವ ಮೂಡಿಗೆರೆಯಲ್ಲಿ ಪರಿಶಿಷ್ಟರ ಸಂಖ್ಯೆ ಹೆಚ್ಚಿದ್ದರೂ, ಒಕ್ಕಲಿಗರ ಬೆಂಬಲ ಕೂಡ ನಿರ್ಣಾಯಕ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗಿಂತ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿದೊಡ್ಡದಿದೆ. ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನ ಮೋಟಮ್ಮ, ನಾಗರತ್ನ, ಹೂವಪ್ಪ, ಪ್ರಭಾಕರ್, ಮಾಜಿ ಸಂಸದ ಚಂದ್ರಪ್ಪ ಅವರ ಹೆಸರುಗಳು ಕಾಂಗ್ರೆಸ್‌ನಿಂದ ಕೇಳಿ ಬರುತ್ತಿವೆ. 2018ರ ವಿಧಾನಸಭಾ ಚುನಾವಣೆ ವೇಳೆ ಮೋಟಮ್ಮ ಅವರಿಗೆ ಟಿಕೆಟ್ ನೀಡಬಾರದೆಂದು ಕಾಂಗ್ರೆಸ್‌ನ ಸ್ಥಳೀಯ ಮುಖಂಡರಿಂದ ಒತ್ತಾಯ ಕೇಳಿ ಬಂದಿತ್ತು. ಇದೀಗ ಅವರ ಪುತ್ರಿಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಬಿಜೆಪಿಯಿಂದ ಶಾಸಕ ಎಂ.ಪಿ.ಕುಮಾರಸ್ವಾಮಿಯವರು ಸಹಜವಾಗಿ ಟಿಕೆಟ್ ಆಕಾಂಕ್ಷಿ. ಜೊತೆಗೆ, ವಿಜಯಕುಮಾರ್, ದೀಪಕ್ ದೊಡ್ಡಯ್ಯ, ಡಾ.ಶಿವಪ್ರಸಾದ್ ಕೂಡ ಬಿಜೆಪಿ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಆಸ್ಪ್ರೇಲಿಯನ್ ಫೆಡರಲ್ ಸರ್ಕಾರದ ಹಿರಿಯ ವಿಶ್ಲೇಷಕರಾಗಿ ಕೆಲಸ ಮಾಡಿರುವ ವಿಜಯಕುಮಾರ್‌ಗೆ ಬಿಜೆಪಿಯ ಹಿರಿಯ ನಾಯಕರ ಶ್ರೀ ರಕ್ಷೆ ಇದೆ. ಹೀಗಾಗಿ ಟಿಕೆಟ್ ಹಂಚಿಕೆ ಕುತೂಹಲ ಮೂಡಿಸಿದೆ. ಜೆಡಿಎಸ್‌ನಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಅಶೋಕ್, ರುದ್ರೇಶ್ ಕಾಹಳೆ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಈ ಪೈಕಿ, ನಿಂಗಯ್ಯ ಅವರು ಅನುಭವಿ ರಾಜಕಾರಣಿ ಆಗಿರುವುದರಿಂದ ಪಕ್ಷ ಅವರಿಗೆ ಆದ್ಯತೆ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Ticket Fight: ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಟಿಕೆಟ್‌ಗೆ ಜಿದ್ದಾಜಿದ್ದಿ ಪೈಪೋಟಿ
5. ಶೃಂಗೇರಿ: ಜೀವರಾಜ್, ರಾಜೇಗೌಡ, ಸುಧಾಕರ್ ಶೆಟ್ಟಿಗೆ ಟಿಕೆಟ್
ಜಿಲ್ಲೆಯ ಅತ್ಯಂತ ವಿಸ್ತಾರವಾದ ಕ್ಷೇತ್ರವಿದು. ಜಿಲ್ಲೆಯ ಇತರ ನಾಲ್ಕು ಕ್ಷೇತ್ರಗಳಿಗೆ ಹೋಲಿಸಿದರೆ, ಶೃಂಗೇರಿ ಕ್ಷೇತ್ರದ ಅಖಾಡ ಬಹುತೇಕ ಸಿದ್ಧವಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಜನಸಂಕಲ್ಪ ಯಾತ್ರೆ ನಡೆಸಿದ ಬಿಜೆಪಿಯ ಹಿರಿಯ ನಾಯಕರು, ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರೇ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇನ್ನು, ಹಾಲಿ ಶಾಸಕರಾಗಿರುವ ಟಿ.ಡಿ.ರಾಜೇಗೌಡರು ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧೆ ಮಾಡುವುದು ಬಹುತೇಕ ಖಚಿತ. ಜೆಡಿಎಸ್‌ನಿಂದ ಸುಧಾಕರ್ ಶೆಟ್ಟಿಅವರಿಗೆ ಟಿಕೆಟ್ ಫೈನಲ್ ಆಗಿದೆ. ಹೀಗಾಗಿ, ಇಲ್ಲಿನ ಸ್ಪರ್ಧಿಗಳ ಸ್ಪಷ್ಟಚಿತ್ರಣ ಹೊರ ಬಂದಿದೆ.