Save Soil Movement: ಬೆಂಗಳೂರಿಗೆ ಬಂತು ಸದ್ಗುರು ರ್ಯಾಲಿ: ಇಂದು ಬೃಹತ್ ಸಮಾವೇಶ
ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ ದೇಶ ವಿದೇಶಗಳಲ್ಲಿ ಬೈಕ್‌ಯಾತ್ರೆ ನಡೆಸುತ್ತಿರುವ ಈಶ ಫೌಂಡೇಶನ್‌ನ ಸದ್ಗುರು ಶನಿವಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದರು.
ಬೆಂಗಳೂರು (ಜೂ.19): ಮಣ್ಣು ಉಳಿಸಿ ಅಭಿಯಾನದ ಭಾಗವಾಗಿ ದೇಶ ವಿದೇಶಗಳಲ್ಲಿ ಬೈಕ್‌ಯಾತ್ರೆ ನಡೆಸುತ್ತಿರುವ ಈಶ ಫೌಂಡೇಶನ್‌ನ ಸದ್ಗುರು ಶನಿವಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದರು. ಅಭಿಯಾನದ ಭಾಗವಾಗಿ ಭಾನುವಾರ ಬೆಳಿಗ್ಗೆ 11ಕ್ಕೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಮಣ್ಣು ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಈಶ ಫೌಂಡೇಶನ್ ಜತೆಗೆ ಮಣ್ಣು ಉಳಿಸುವ ನಿಟ್ಟಿನಲ್ಲಿ ಅತ್ಯಗತ್ಯವಾದ ಕಾರ್ಯನೀತಿಗಳನ್ನು ಜಾರಿಗೊಳಿಸುವ ಒಡಂಬಡಿಕೆ ಕೂಡ ಮಾಡಿಕೊಳ್ಳಲಿದೆ. ಬಳಿಕ ಸಂಜೆ ಸದ್ಗುರು ಬೈಕ್ ಯಾತ್ರೆಯು ಮೈಸೂರಿನತ್ತ ಸಾಗಲಿದೆ.
ಬೆಂಗಳೂರಿಗೆ ಆಗಮಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದ್ಗುರು, ‘ಸಾಮಾನ್ಯವಾಗಿ ವ್ಯವಸಾಯ ಮಾಡುವ ಮಣ್ಣಿನಲ್ಲಿ ಶೇ.3ರಷ್ಟುಜೈವಿಕ ಅಂಶಗಳಿರಬೇಕು ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಹೇಳುತ್ತವೆ. ಭಾರತದ ಮಣ್ಣಿನಲ್ಲಿ ಶೇ.0.68ರಷ್ಟುಮಾತ್ರ ಜೈವಿಕ ಅಂಶಗಳಿವೆ. ವಿಶ್ವದ ಎಲ್ಲಾ 192 ದೇಶಗಳ ಮಣ್ಣುಗಳನ್ನು ಅಧ್ಯಯನ ಮಾಡಿದ್ದು, ಬೆರಳಣಿಕೆಯಷ್ಟು ದೇಶಗಳನ್ನು ಹೊರತುಪಡಿಸಿ ಬಹುತೇಕ ದೇಶಗಳಲ್ಲಿ ಶೇ.1ಕ್ಕಿಂತ ಕಡಿಮೆ ಜೈವಿಕಾಂಶವಿದೆ.
Save Soil Movement: ಸದ್ಗುರು ಬೈಕ್ ಯಾತ್ರೆ ಇಂದು ಕರುನಾಡು ಪ್ರವೇಶ
ಇದು ಅಪಾಯಕಾರಿ ಮಟ್ಟವಾಗಿದ್ದು, ಭವಿಷ್ಯದಲ್ಲಿ ಆಹಾರ ಉತ್ಪಾದನೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಬರಗಾಲ ಬರುತ್ತದೆ. ಮಾನವ ಸಂತತಿಯೇ ನಾಶವಾಗುತ್ತದೆ. ಹೀಗಾಗಿಯೇ, ಮಣ್ಣಿನಲ್ಲಿನ ಜೈವಿಕ ಅಂಶವನ್ನು ಶೇ.3ರಿಂದ 6ಕ್ಕೆ ಹೆಚ್ಚಿಸುವ ಅವಶ್ಯಕತೆ ಇದ್ದು, ಇದಕ್ಕೆ ಸರ್ಕಾರದಿಂದ ರೈತರಿಗೆ ಬೆಂಬಲ ನೀಡುವ ಯೋಜನೆಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಲು ಮಣ್ಣು ಅಭಿಯಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಭಿಯಾನದ ಭಾಗವಾಗಿ ಮಾರ್ಚ್ 21ರಂದು ಯೂರೋಪ್‌ನಿಂದ ಬೈಕ್ ಯಾತ್ರೆ ಆರಂಭಿಸಿದ್ದು, ಬೆಂಗಳೂರಿಗೆ ತಲುಪಿ 27298 ಕಿ.ಮೀ ಪೂರ್ಣಗೊಂಡಿದೆ. ಯುರೋಪ್, ಮಧ್ಯಏಷ್ಯಾದ 27 ದೇಶಗಳು, ಭಾರತದ 9 ರಾಜ್ಯಗಳಿಗೆ ತೆರಳಿ ಅಲ್ಲಿನ ಸರ್ಕಾರಗಳಿಗೆ ಮಣ್ಣಿನ ಅಧ್ಯಯನದ ವರದಿ ನೀಡಿ, ಮಣ್ಣನ್ನು ಉಳಿಸಲು ಕೈಗೊಳ್ಳಬೇಕಾದ ಕಾರ್ಯನೀತಿಯನ್ನು ನೀಡಲಾಗಿದೆ. ಹಲವು ದೇಶಗಳಿಗೆ ಕಾರ್ಯನೀತಿಯನ್ನು ಆನ್‌ಲೈನ್ ಮೂಲಕ ತಲುಪಿಸಲಾಗಿದೆ. ಈವರೆಗೂ 74 ದೇಶಗಳು, ಭಾರತದ 9 ರಾಜ್ಯಗಳು ಮಣ್ಣನ್ನು ಉಳಿಸುವ ಕ್ರಮಗಳನ್ನು ಕೈಗೊಳ್ಳಲು ಒಪ್ಪಿವೆ ಎಂದು ಮಾಹಿತಿ ನೀಡಿದರು.
ಮುಂದಿನ ತಲೆಮಾರಿಗೆ ಫಲವತ್ತಾದ ಮಣ್ಣು ನೀಡಬೇಕು: ಮಣ್ಣು ಪದಾರ್ಥವಲ್ಲ. ಅದೊಂದು ಜೀವಂತ ಅಂಶವಾಗಿದೆ. ನಮ್ಮ ದೇಹ ಮತ್ತು ಮಣ್ಣು ಪ್ರತ್ಯೇಕವಲ್ಲ. ಎರಡನ್ನೂ ಜಾಗೃತಿಯಿಂದ ಸಂರಕ್ಷಣೆ ಮಾಡಬೇಕಿದೆ. ಮಣ್ಣು ಕೇವಲ ನಮ್ಮ ಸ್ವತ್ತಲ್ಲ, ನಮಗೆ ಹಿಂದಿನ ತಲೆಮಾರುಗಳಿಂದ ಬಂದಿದ್ದು, ಅದೇ ರೀತಿ ಮುಂದಿನ ತಲೆಮಾರುಗಳಿಗೂ ಫಲವತ್ತಾದ ಮಣ್ಣನ್ನು ನೀಡಬೇಕಾದ ಜವಾಬ್ದಾರಿ ನಮ್ಮ ತಲೆಮಾರಿಗೆ ಇದೆ ಎಂದರು.
Save Soil Movement: ಮಣ್ಣು ಉಳಿಸಿ ಅಭಿಯಾನಕ್ಕೆ ಸದ್ಗುರು ಜತೆ ಮಹಾರಾಷ್ಟ್ರ ಒಪ್ಪಂದ
ಚುನಾವಣಾ ಪ್ರಣಾಳಿಕೆಯಲ್ಲಿ ಮಣ್ಣು ಸೇರಲಿ!: ಸದ್ಯ ದೇಶದ ಶೇ.60ರಷ್ಟುಮಂದಿ ವ್ಯವಸಾಯ ಮಾಡುತ್ತಿದ್ದು, ನೇರವಾಗಿ ಮಣ್ಣನ್ನು ಅವಲಂಬಿಸಿದ್ದಾರೆ. ಮಣ್ಣು ಉಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಜಾರಿಗೆ ತರುತ್ತೇವೆ ಎಂಬ ಭರವಸೆಯನ್ನು ಆಡಳಿತ ನಡೆಸುವವರು ನೀಡಬೇಕು. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಗಳಲ್ಲಿ ವಿವಿಧ ಪಕ್ಷಗಳ ಪ್ರಣಾಲಿಕೆಯಲ್ಲಿ ಮಣ್ಣು ಉಳಿಸುವ ಅಂಶ, ಕಾರ್ಯಕ್ರಮಗಳಿರಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.