ಖನಿಜಗಳನ್ನು ಹೊಂದಿರುವ ಭೂಮಿಗಳ ಮೇಲೆ ತೆರಿಗೆ ವಿಧಿಸಲು ರಾಜ್ಯ ಸಂಪುಟ ನಿರ್ಧರಿಸಿದೆ. ಒಂದು ಟನ್‌ಗೆ 100 ರೂಪಾಯಿಯಂತೆ ತೆರಿಗೆ ಹಾಕುವ ಪ್ರಸ್ತಾಪವಿದ್ದು, ಭೂಮಾಲೀಕರು ತೆರಿಗೆ ಪಾವತಿಸಬೇಕಾಗುತ್ತದೆ. ಉಪ ಖನಿಜ ರಿಯಾಯಿತಿ ತಿದ್ದುಪಡಿ ವಿಧೇಯಕಕ್ಕೂ ಅನುಮೋದನೆ ದೊರೆತಿದೆ.
ಬೆಂಗಳೂರು (ಡಿ.6): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲಿಯೇ ಹಾಲು, ಪೆಟ್ರೋಲ್, ವಿದ್ಯುತ್, ನೋಂದಣಿ ಸೇರಿದಂತೆ ಎಲ್ಲದರ ದರವನ್ನು ಏರಿಕೆ ಮಾಡಿದೆ. ಇತ್ತೀಚೆಗೆ ಪಶ್ಚಿಮಘಟ್ಟದಲ್ಲಿ ಹರಿಯುವ ನದಿಗಳ ನೀರನ್ನು ಬಳಸುವ ಜನರ ಮೇಲೆ ಗ್ರೀನ್ ಸೆಸ್ ವಿಧಿಸಲು ಮುಂದಾಗಿತ್ತು. ಆಕ್ರೋಶದ ಬಳಿಕ ಇದನ್ನು ಹಿಂತೆಗೆದುಕೊಂಡಿತ್ತು. ಇದರ ನಡುವೆ ರಾಜ್ಯದಲ್ಲಿ ಹೊಸ ತೆರಿಗೆಯನ್ನು ಜಾರಿ ಮಾಡಲು ಸರ್ಕಾರ ಸಿದ್ದತೆ ನಡೆಸಿದೆ. ಇದು ರಾಜ್ಯದಲ್ಲಿರುವ ರೈತರು ಹಾಗೂ ಭೂಮಾಲೀಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದಲ್ಲಿ ಖನಿಜಗಳನ್ನು ಹೊಂದಿರುವ ಭೂಮಿಗಳ ಮೇಲೆ ತೆರಿಗೆಯನ್ನು ವಿಧಿಸಲು ರಾಜ್ಯ ಸಂಪುಟ ನಿರ್ಧಾರ ಮಾಡಿದೆ. ಈ ಕುರಿತು ವಿಧೇಯಕ ಮಂಡಿಸಲು ಸಂಪುಟ ಸಭೆ ತೀರ್ಮಾನ ಮಾಡಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ವಿಧಾನಸೌಧದಲ್ಲಿ ಹೇಳಿದ್ದಾರೆ.
ಇದರರ್ಥ ಖನಿಜಗಳನ್ನು ಹೊಂದಿರುವ ಭೂಮಿಗೆ ರಾಜ್ಯ ಸರ್ಕಾರ ತನ್ನ ತೆರಿಗೆಯನ್ನು ವಿಧಿಸಲಿದೆ. ರಾಜ್ಯದ ಭೂಮಿಗಳಲ್ಲಿ ಸಾಮಾನ್ಯವಾಗಿ ಬಾಕ್ಸೈಟ್, ಕ್ರೋಮೈಟ್ ಹಾಗೂ ಕಬ್ಬಿಣದ ಅದಿರು ಹೇರಳವಾಗಿರುತ್ತದೆ. ಅಂತಹ ಭೂಮಾಲಿಕರು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಬಾಕ್ಸೈಟ್,ಕ್ರೋಮೈಟ್, ಕಬ್ಬಿಣ ಮಾತ್ರವಲ್ಲದೆ ಇನ್ನಿತರ ಖನಿಜ ಇರುವ ಭೂಮಿಗಳೂ ಕೂಡ ತೆರಿಗೆಯ ಬಾಧ್ಯತೆಯನ್ನು ಹೊಂದಿರಲಿದೆ. ಒಂದು ಟನ್ ಗೆ 100 ರೂಪಾಯಿಯಂತೆ ತೆರಿಗೆ ಹಾಕುವ ಪ್ರಸ್ತಾಪ ಮಾಡಲಾಗಿದೆ. ಈ ಟ್ಯಾಕ್ಸ್‌ಅನ್ನು ಜಮೀನಿನ ಮಾಲೀಕರು ಸರ್ಕಾರಕ್ಕೆ ಕಟ್ಟಬೇಕಿರುತ್ತದೆ. ಇನ್ನು ಆತನ ಜಮೀನನ ಖನಿಜದ ಹಕ್ಕುಗಳು ಭೂಮಾಲೀಕನಿಗೆ ಸೇರಿರಲಿದೆ ಎಂದು ತಿಳಿಸಿದೆ.
ಅದರೊಂದಿಗೆ ಉಪ ಖನಿಜ ರಿಯಾಯಿತಿ ತಿದ್ದುಪಡಿ ವಿಧೇಯಕ ಬಗ್ಗೆ ಸಂಪುಟ ಅನುಮೋದನೆ ನೀಡಿದೆ. ರಾಜಧನವನ್ನು ಟನ್‌ಗೆ 80 ರೂಪಾಯಿಯಂತೆ ನಿಗದಿ ಮಾಡುವ ವಿಧೇಯಕ ಇದಾಗಿದೆ. ಈ ಮೊದಲು 70 ರೂಪಾಯಿಗಳಿತ್ತು. ಇನ್ನು ಕಲ್ಲುಗಣಿ ಗುತ್ತಿಗೆ ಪಡೆದು ರಾಜಧನ ನೀಡದೇ ಸಾಗಾಣಿಕೆ ಮಾಡಿದ ಪ್ರಕರಣಗಳ ಮೇಲೆ ಸರ್ಕಾರ ನಿಗಾ ವಹಿಸಿದೆ. 6105 ಕೋಟಿ ರೂ ದಂಡ ಪಾವತಿಸಲು ಬಾಕಿ ಇದ್ದು, ಈ ಬಾಕಿ ವಸೂಲಿ ಮಾಡಲು ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. ಇದು ಸರ್ಕಾರದ ಬರಬೇಕಾದ ಆದಾಯ. ಇದನ್ನು ವಸೂಲಿ ಮಾಡಲು ಸಂಪುಟ ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ ಎಂದು ಎಚ್‌ಕೆ ಪಾಟೀಲ್ ತಿಳಿಸಿದ್ದಾರೆ.
ವಿವಿಧ ಸಾರ್ವಜನಿಕ ನಿಗಮಗಳ ಹಣವನ್ನು ಪರಸ್ಪರ ವಿವಿಧ ನಿಗಮಗಳಿಗೆ ಸಾಲ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಲಾಭದಾಯಕ ನಿಗಮದಿಂದ ಬೇಡಿಕೆ ಇರುವ ನಿಗಮಕ್ಕೆ ಠೇವಣಿ ಇಡಲು, ಇಲ್ಲವೇ ಸಾಲ ಕೊಡಲು ಸಂಪುಟ ಸಭೆ ತಿರ್ಮಾನ ಮಾಡಿದೆ. ಸಾಲ ಪಡೆದ ನಿಗಮಗಳು ನಿಗದಿತ ಬಡ್ಡಿಯನ್ನು ಪಾವತಿ ಮಾಡಬೇಕಿರುತ್ತದೆ. ಕರ್ನಾಟಕ ಠೇವಣಿದಾರರ ಹಿತಾಸಕ್ತಿ ತಿದ್ದುಪಡಿ ವಿಧೇಯಕಕ್ಕೆ ಕೂಡ ಸಂಪುಟ ಅನುಮೋದನೆ ನೀಡಿದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ವಿಧೇಯಕ ಮಾಡಲಾಗಿದೆ.
ನಿಷ್ಕ್ರಿಯ ಅಕೌಂಟ್‌ಗಳನ್ನು ಸಕ್ರಿಯಗೊಳಿಸಲು ಎಸ್‌ಬಿಐನಿಂದ ರಾಷ್ಟ್ರವ್ಯಾಪಿ ಅಭಿಯಾನ
ಆರೋಗ್ಯ ಇಲಾಖೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು, ತಾಯಿ ಮಕ್ಕಳ ಆಸ್ಪತ್ರೆಗೆ ಪ್ರಯೋಗಾಲಯದಲ್ಲಿ ಉಪಕರಣ ಖರೀದಿಗೆ ಸಂಪುಟ ಅನುಮತಿ ನೀಡಿದೆ. ಪರಿಶಿಷ್ಟ ಜಾತಿ ಮತ್ತು ವರ್ಗದವರ ದುಬಾರಿ ಆಪರೇಷನ್ ಗಾಗಿ ಹಣ ಹೊಂದಿಸಲು ಆವರ್ತ ನಿಧಿ ಸ್ಥಾಪಿಸಲು ಸಂಪುಟ ಸಭೆ ನಿರ್ಧಾರ ಮಾಡಿದೆ. ಬೆಂಗಳೂರು ನಗರದ ರಸ್ತೆಗಳ ದುರಸ್ತಿಗೆ ನೀಡಲಾದ 694 ಕೋಟಿ ರೂಪಾಯಿ ಅನುದಾನಕ್ಕೆ ಸಂಪುಟ ಘಟನೋತ್ತರ ಅನುಮತಿ ನೀಡಿದೆ.ಹಾಗೆಯೇ, ಔಷಧ ನಿಯಂತ್ರಣ ಇಲಾಖೆ ಮತ್ತು ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ ವಿಲೀನ ಮಾಡಲು ಸಂಪುಟ ಸಭೆ ನಿರ್ಣಯ ಮಾಡಿದೆ.
3 ಕೋಟಿ ಎಫ್‌ಡಿ ಹಣ ಕದ್ದ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ, ಆರ್‌ಬಿಐಗೆ ನೋಟಿಸ್ ಕಳಿಸಿದ ಕೋರ್ಟ್!