ಕನ್ನಡ ಭಾಷೆಗೆ ಶೀಘ್ರ ಕಾನೂನು ಬಲ: ಸಿಎಂ ಬೊಮ್ಮಾಯಿ

Published : Jan 07, 2023, 12:00 AM IST
ಕನ್ನಡ ಭಾಷೆಗೆ ಶೀಘ್ರ ಕಾನೂನು ಬಲ: ಸಿಎಂ ಬೊಮ್ಮಾಯಿ

ಸಾರಾಂಶ

ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ 3 ದಿನಗಳ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ

ಶಿವಾನಂದ ಗೊಂಬಿ
ಕನಕ, ಶರೀಫ, ಸರ್ವಜ್ಞ ವೇದಿಕೆ

ಹಾವೇರಿ(ಜ.07): ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯನ್ನು ಉಳಿಸಬೇಕು, ಬೆಳೆಸಬೇಕು. ಇದಕ್ಕಾಗಿ ಸಮಗ್ರ ಭಾಷಾ ಅಭಿವೃದ್ಧಿಗೆ ಕಾನೂನಿನ ಸ್ವರೂಪವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತಮ್ಮ ತವರು ಜಿಲ್ಲೆ ಹಾವೇರಿಯಲ್ಲಿ ಶುಕ್ರವಾರ ಅದ್ಧೂರಿಯಾಗಿ ಆರಂಭವಾದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.80ರಷ್ಟುಉದ್ಯೋಗ ಮೀಸಲಿಡುವ ಕುರಿತು ಕೈಗಾರಿಕಾ ನೀತಿ ಜಾರಿಗೊಳಿಸಲಾಗಿದೆ. ಗಡಿ ಹಾಗೂ ಗಡಿಯಾಚೆಗೆ ಭಾಷೆ ಅಭಿವೃದ್ಧಿಗೆ ಬೇಕಾದ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ತಾವೊಬ್ಬ ನಿಯತ್ತಿನ ಸೇವಕ ಎಂದರು.

ಕನ್ನಡ ಭಾಷೆ ಹತ್ತಾರು ಸವಾಲುಗಳನ್ನು ಎದುರಿಸುತ್ತಿದೆ. ಎಲ್ಲ ಸವಾಲುಗಳನ್ನು ಮೆಟ್ಟಿಕನ್ನಡ ಭಾಷೆಯನ್ನು ಬೆಳೆಸಲು, ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಎಲ್ಲ ಆಯಾಮಗಳಲ್ಲಿ, ಎಲ್ಲ ಕ್ಷೇತ್ರಗಳಲ್ಲಿ ಕನ್ನಡ ಭಾಷೆಯನ್ನು ಬೆಳೆಸಬೇಕಿದೆ. ಇದಕ್ಕಾಗಿ ಸಮಗ್ರ ಭಾಷಾ ಅಭಿವೃದ್ಧಿಗೆ ಶಾಶ್ವತ ಕಾನೂನು ಸ್ವರೂಪ ನೀಡಲಾಗುತ್ತಿದೆ. ಈ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯಬೇಕಿದೆ. ಸದ್ಯಕ್ಕೆ ಈ ವಿಷಯವನ್ನು ಚರ್ಚೆಗೆ ಬಿಟ್ಟಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರೂ ಕೆಲವೊಂದಿಷ್ಟುಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ. ಜತೆಗೆ ಸಾಹಿತ್ಯ ಪರಿಷತ್‌ನ ನಿರ್ಣಯಗಳನ್ನು ಪರಿಗಣನೆಗೆ ತೆಗೆದುಕೊಂಡು ಸಮಗ್ರ ಭಾಷಾಭಿವೃದ್ಧಿಗೆ ಮಸೂದೆಯನ್ನು ರೂಪಿಸಿ ಮಂಡಿಸಿ ಅಂಗೀಕರಿಸಲಾಗುವುದು. ಆದಷ್ಟುಬೇಗನೆ ಈ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ತಿಳಿಸಿದರು.

ಇಂಗ್ಲಿಷ್ ಅನಿವಾರ್ಯವಾದರೂ ಕನ್ನಡತನವನ್ನು ಎಂದಿಗೂ ಬಿಟ್ಟು ಕೊಡಬಾರದು: ಬಿಎಸ್‌ವೈ

ಕೈಗಾರಿಕೆಗಳಲ್ಲಿ ಶೇ.80ರಷ್ಟುಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡಬೇಕು. ಎ, ಬಿ, ಸಿ, ಡಿ ಎಲ್ಲ ವರ್ಗಗಳಲ್ಲೂ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿದ್ದೇವೆ ಎಂದ ಅವರು, ಕನ್ನಡಿಗರ ಕೈಗಳಿಗೆ ಕೆಲಸ ಕೊಡಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ಉದ್ಯೋಗ ನೀತಿ ರೂಪಿಸಿ ಸಚಿವ ಸಂಪುಟದಲ್ಲೂ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದರು.

ಗಡಿ ಈಚೆ, ಗಡಿಯಾಚೆ:

ಗಡಿ ಭಾಗದಲ್ಲಿ ಭಾಷೆ, ಸಾಹಿತ್ಯ, ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದ ಅವರು, ಇನ್ನು ಗಡಿಯಾಚೆ ಇರುವ ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಅಲ್ಲಿ ಕನ್ನಡ ಭಾಷೆ, ಸಾಹಿತ್ಯ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಕನ್ನಡ ಭಾಷೆ ಬಡವಾಗಲ್ಲ:

ಕನ್ನಡ ಭಾಷೆ ಎಂದಿಗೂ ಬಡವಾಗುವುದಿಲ್ಲ. ಶತಶತಮಾನಗಳವರೆಗೆ ಕನ್ನಡ ಸಿರಿವಂತ ಭಾಷೆಯಾಗಿಯೇ ಬೆಳೆಯುತ್ತಲೇ ಸಾಗುತ್ತದೆ. ಕನ್ನಡಕ್ಕೆ ಆಪತ್ತು ಬರುತ್ತದೆ ಎಂಬ ಆತಂಕ ಬೇಡ. ಕನ್ನಡಕ್ಕೆ ಆಪತ್ತು ತರುವ ಯಾವುದೇ ಶಕ್ತಿಗಳು ಹುಟ್ಟಿಲ್ಲ, ಹುಟ್ಟುವುದೂ ಇಲ್ಲ ಎಂದು ನುಡಿದರು.

ನವಕರ್ನಾಟಕಕ್ಕೆ ನಾಂದಿಯಾಗಲಿ:

ಕನ್ನಡವು ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದು. ಕನ್ನಡಿಗರ ಬದುಕು ಬಹಳ ಪುರಾತನವಾದುದು. ಸಂಸ್ಕೃತಿ ಶ್ರೇಷ್ಠವಾದುದು. ಕನ್ನಡವು ಹೆಮ್ಮರವಾಗಿ ಬೆಳೆಯಲು, ಕನ್ನಡದ ಕಂಪನ್ನು ಬಿತ್ತಿ, ಬೆಳೆಯಲು ಇಂತಹ ಸಮ್ಮೇಳನಗಳು ಬೇಕು. ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿದೆ. ಗೋಷ್ಠಿಗಳು ಕನ್ನಡಾಭಿವೃದ್ಧಿಗೆ ನಾಂದಿಯಾಗಲಿ ಎಂದ ಅವರು, ನವಕರ್ನಾಟಕ ನಿರ್ಮಾಣಕ್ಕೆ ಈ ಸಮ್ಮೇಳನ ನಾಂದಿಯಾಗಲಿ. ನವಕರ್ನಾಟಕ ನಿರ್ಮಾಣದ ಮೂಲಕ ನವ ಭಾರತ ನಿರ್ಮಾಣಕ್ಕೂ ಈ ಸಮ್ಮೇಳನ ಮಾರ್ಗದರ್ಶಿಯಾಗಲಿ ಎಂದು ಆಶಿಸಿದರು.

ವಿಭಿನ್ನ ಸೊಗಡು ಕನ್ನಡದ ಅಸ್ಮಿತೆ:

ವಚನ ಮತ್ತು ದಾಸ ಸಾಹಿತ್ಯ ಪ್ರಕಾರಗಳು ಕನ್ನಡದ ಅಂತಃಸತ್ವ ಗಟ್ಟಿಗೊಳಿಸಿವೆ. ಕನ್ನಡಿಗರ ವಿಭಿನ್ನ ಸೊಗಡಿನ ಭಾಷಾ ಶೈಲಿಯು ಒಟ್ಟು ಕನ್ನಡದ ಅಸ್ಮಿತೆಯೂ ಆಗಿದೆ. ಉತ್ತರ ಕರ್ನಾಟಕ ಭಾಗದಿಂದ ಆರಂಭವಾದ ಕರ್ನಾಟಕ ಏಕೀಕರಣ ಚಳವಳಿಗೆ ಹಳೆಯ ಮೈಸೂರು ಭಾಗದ ಜನರೂ ಕೈಜೋಡಿಸಿದ ಪರಿಣಾಮವಾಗಿ ಕನ್ನಡ ಭಾಷಿಕರೆಲ್ಲ ಒಂದು ಆಡಳಿತದ ತೆಕ್ಕೆಗೆ ಒಳಪಡಲು ಸಾಧ್ಯವಾಯಿತು ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.

Kannada Sahitya Sammelana: ಪರ್ಯಾಯ ಸಮ್ಮೇಳನ ನಡೆಸೋರು ಹಾವೇರಿ ವಿರೋಧಿಗಳು: ಮಹೇಶ್ ಜೋಷಿ

ಒಂದು ದಶಕ ನೀರಾವರಿ ದಶಕ

ಕಳೆದ ಐದು ವರ್ಷಗಳಲ್ಲಿ 1.5 ಲಕ್ಷ ಎಕರೆ ಭೂಮಿಯನ್ನು ನೀರಾವರಿಗೊಳಪಡಿಸಲಾಗಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದಿನ ಒಂದು ದಶಕವನ್ನು ನೀರಾವರಿ ದಶಕವನ್ನಾಗಿ ಘೋಷಿಸಲಾಗುವುದು. ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಈ ದಶಕದಲ್ಲಿ ಪೂರ್ಣಗೊಳಿಸಲಾಗುವುದು. ಇದು ನಮ್ಮ ಬದ್ಧತೆ ಎಂದು ಘೋಷಿಸಿದರು.

ಬೊಮ್ಮಾಯಿ ನಲ್ನುಡಿ

- ಕನ್ನಡ ಪ್ರಾಚೀನ ಭಾಷೆ. ಎಂದಿಗೂ ಬಡವಾಗುವುದಿಲ್ಲ
- ಶತಮಾನಗಳವರೆಗೆ ಸಿರಿವಂತವಾಗಿಯೇ ಇರುತ್ತದೆ
- ಕನ್ನಡಕ್ಕೆ ಆಪತ್ತು ಬರುತ್ತದೆ ಎಂಬ ಆತಂಕ ಬೇಡ
- ಆಪತ್ತು ತರುವ ಶಕ್ತಿಗಳು ಹುಟ್ಟಿಲ್ಲ, ಹುಟ್ಟೋದೂ ಇಲ್ಲ
- ಕನ್ನಡಿಗರ ಬದುಕು ಪುರಾತನ, ಸಂಸ್ಕೃತಿ ಶ್ರೇಷ್ಠ
- ಕನ್ನಡ ಹೆಮ್ಮರವಾಗಿ ಬೆಳೆಯಲು ಸಮ್ಮೇಳನ ಬೇಕು
- ನವಕರ್ನಾಟಕ ನಿರ್ಮಾಣಕ್ಕೆ ಸಮ್ಮೇಳನ ನಾಂದಿ ಆಗಲಿ
- ನಾನು ಕನ್ನಡ ಭಾಷೆಯ ನಿಯತ್ತಿನ ಸೇವಕ: ಸಿಎಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Karnataka News Live: BBK 12 - ಕಿಚ್ಚ ಸುದೀಪ್‌ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ