ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಬೆಳೆಗಳಿಗೆ ನೇರ ಮಾರುಕಟ್ಟೆ ಸೃಷ್ಟಿಸಿಕೊಂಡಿರುವುದು ರೈತ ಶಿವಕುಮಾರ್ ಅವರ ಹೆಗ್ಗಳಿಕೆ
ರೈತರತ್ನ ಶಿವಕುಮಾರ್
ವಿಭಾಗ: ಸಾವಯವ
ಊರು, ಜಿಲ್ಲೆ: ಹೆಗ್ಗವಾಡಿಪುರ, ಸಂತೇಮರಹಳ್ಳಿ ಹೋಬಳಿ, ಚಾಮರಾಜನಗರ ತಾಲೂಕು ಮತ್ತು ಜಿಲ್ಲೆ
ಚಾಮರಾಜನಗರ(ಫೆ.12): ಓದಿದ್ದು ಟಿ.ಸಿ.ಎಚ್. ಬಿಳಿಗಿರಿರಂಗನ ಬೆಟ್ಟದ ಖಾಸಗಿ ಶಾಲೆಯೊಂದರಲ್ಲಿ 2 ವರ್ಷ ಅಧ್ಯಾಪಕರಾಗಿದ್ದವರು ತನಗೆ ತಾನೇ ಬಾಸ್ ಆಗಬೇಕೆಂಬ ಪರಿಕಲ್ಪನೆಯೊಂದಿಗೆ 2004ರಲ್ಲಿ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು. ಇಂದು ತಮ್ಮ ಒಟ್ಟು 5 ಎಕರೆ ಜಮೀನಿನಲ್ಲಿ ವರ್ಷಕ್ಕೆ ಸುಮಾರು 5 ರಿಂದ 6 ಲಕ್ಷ ರು.ದಷ್ಟು ಆದಾಯ ಗಳಿಸುತ್ತಿದ್ದು, ಮುಂದೆ 15 ರಿಂದ 20 ಲಕ್ಷ ರು. ಗಳಿಸುವ ಆತ್ಮವಿಶ್ವಾಸವಿದೆ ಎಂದು ಹೇಳುತ್ತಾರೆ.
ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಬೆಳೆಗಳಿಗೆ ನೇರ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರುವುದು ಇವರ ಹೆಗ್ಗಳಿಕೆ. ಇವಿಷ್ಟೇ ಅಲ್ಲದೆ ನರ್ಸರಿಯನ್ನೂ ನಡೆಸುತ್ತಿರುವ ಅವರು ಪಾಲುದಾರಿಕೆಯಲ್ಲಿ ಇತ್ತೀಚೆಗೆ ಉದಯ ರವಿ ಪ್ರೊಡಕ್ಷನ್ಸ್ ಹೆಸರಿನಲ್ಲಿ ಸಣ್ಣ ಕೈಗಾರಿಕೆಗೂ ಕೈ ಹಾಕಿದ್ದಾರೆ. ರೈತರಿಗೆ ಅತೀ ಅಗತ್ಯವಾಗಿರುವ ಬೇಲಿಗೆ ಬಳಸುವ ಮುಳ್ಳುತಂತಿಯನ್ನು ಅತಿ ಕಡಿಮೆ ವೆಚ್ಚದಲ್ಲಿ ತಯಾರಿಸಿ ಒದಗಿಸಬೇಕೆಂಬ ಉದ್ದೇಶದಿಂದ ಈ ಉದ್ಯಮಕ್ಕೆ ಕೈ ಹಾಕಿದ್ದಾರೆ.
ಸಾಧನೆಯ ವಿವರ:
ನೀರಿಲ್ಲದ ಒಣಭೂಮಿಯಲ್ಲಿ ಫುಡ್ ವುಡ್ ಫಾರೆಸ್ಟ್(ಆಹಾರ, ಅರಣ್ಯ, ಹಸಿರೀಕರಣ) ಎಂಬ ಪರಿಕಲ್ಪನೆಯೊಂದಿಗೆ ಕೃಷಿ ಮಾಡುತ್ತಿದ್ದಾರೆ. ಮಳೆಯಾಶ್ರಿತ ನೈಸರ್ಗಿಕ ಕೃಷಿಯಿಂದಲೂ ಲಾಭ ಕಂಡುಕೊಳ್ಳಬಹುದು ಎಂಬುದರ ಮಾದರಿ ಮಾಡಿ ತೋರಿಸಿಕೊಟ್ಟಿದ್ದಾರೆ ಶಿವಕುಮಾರ್. ಮಳೆ ಬಿಟ್ಟರೆ ಇವರ ಕೃಷಿಗೆ ಸಾಥ್ ನೀಡಿರುವುದು ಅವರ ಜಮೀನಿನಲ್ಲಿರುವ ಬೋರ್‌ವೆಲ್‌ನಲ್ಲಿ ಬರುವ ಕೇವಲ ಅರ್ಧ ಇಂಚು ನೀರಷ್ಟೇ. ಆದರೆ ಅಷ್ಟನ್ನೇ ಬಳಸಿಕೊಂಡು ಸಾವಯವ ಕೃಷಿಯ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಇವರ ತೋಟದಲ್ಲಿ 130 ಸಪೋಟ, 90 ಮಾವು, 40 ಬೆಣ್ಣೆ ಹಣ್ಣು, 10 ಗಜನಿಂಬೆ, ಸೀತಾಫಲ 30, ಮೂಸಂಬಿ 10, ನೇರಳೆ 4, ಅಂಜೂರ 1, ಹಲಸು 2 ಹಾಗು 25 ತೆಂಗಿನ ಮರಗಳಿವೆ. ಇವುಗಳ ಜೊತೆಗೆ ಜೇನುಕೃಷಿಯನ್ನೂ ಮಾಡುತ್ತಾರೆ. ಮಿಶ್ರ ಬೆಳೆಯಾಗಿ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ.
ಲ್ಯಾಬ್ ಇಲ್ಲ, ಪ್ರಯೋಗವಿಲ್ಲ: ಕೋಳಿಯ ಹೊಸ ತಳಿ ಕಂಡುಹಿಡಿದ ಹಳ್ಳಿ ಹೈದ
ಯಾವುದೇ ಬೆಳೆ ಬೆಳೆದರೂ ಅದರ ಕಾಳುಗಳನ್ನಷ್ಟೇ ಪಡೆದುಕೊಂಡು ಉಳಿದ ಭಾಗಗಳನ್ನು ಭೂಮಿಗೆ ಹೊದಿಕೆಯಾಗಿ(ಮಲ್ಚಿಂಗ್) ಮರಳಿ ಮಣ್ಣಿಗೆ ಸೇರಿಸುತ್ತಾರೆ. ಕೊಟ್ಟಿಗೆ ಗೊಬ್ಬರ, ಗೋ ಮೂತ್ರ ಬಳಸಿಕೊಂಡು ಭೂಮಿಯ ತೇವಾಂಶವನ್ನು ಕಾಪಾಡಿಕೊಂಡಿದ್ದಾರೆ. ಏಕದಳ, ದ್ವಿದಳ ಬೆಳೆಗಳ ನಾಟಿ ಬೀಜವನ್ನು ಇವರೇ ಸಂರಕ್ಷಣೆ ಮಾಡಿ ಬಳಸುತ್ತಾರೆ.
ಗಮನಾರ್ಹ ಅಂಶ:
-ಕೃಷಿಯೊಂದಿಗೆ ನರ್ಸರಿ ನಡೆಸುತ್ತಾರೆ. ನುಗ್ಗೆ ಬೇಸಾಯದಲ್ಲೂ ಹೆಸರು ಮಾಡಿರುವ ಶಿವಕುಮಾರ್ ನಾಟಿ ಬೀಜ ತಯಾರು ಮಾಡಿಕೊಳ್ಳಲು ಮಾತ್ರ ನುಗ್ಗೆ ಕೃಷಿ ಮಾಡುತ್ತಾರೆ. ಇವರು ಉತ್ಪಾದಿಸುವ ನುಗ್ಗೆ ಬೀಜಗಳು ಈ ಭಾಗದಲ್ಲಿ ಜನಪ್ರಿಯವಾಗಿವೆ.
ವ್ಯಾಟ್ಸಾಪ್ ಮತ್ತು ಫೇಸ್‌ಬುಕ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್‌ಗಳನ್ನು ಮಾಡುವ ನೇರ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರಿಗೆ ಸುಮಾರು 5000ದಿಂದ 6000ದಷ್ಟು ಫಾಲೋವರ್ಸ್ ಇದ್ದಾರೆ. ಉಗಮ ಫಾರಂ ಹೆಸರಲ್ಲಿ ಆರೋಗ್ಯಕ್ಕಾಗಿ ವಿಷಮುಕ್ತ ಆಹಾರ ಎಂಬ ಧ್ಯೇಯವಾಕ್ಯದೊಂದಿಗೆ ಸಾವಯವ ಬೆಳೆಯ ಬಗ್ಗೆ ಇವರು ನಡೆಸುತ್ತಿರುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಜನ ತಮಗೆ ಅಗತ್ಯವಿರುವ ಮಾವು, ಸೀತಾಫಲ ಇತ್ಯಾದಿ ಹಣ್ಣುಗಳನ್ನು ನೇರವಾಗಿ ಇವರಿಂದಲೇ ಖರೀದಿಸುತ್ತಾರೆ. ಮಾತ್ರವಲ್ಲದೆ ಕೃಷಿ ಮೇಳ, ರೈತ ಸಂತೆ, ದೊಡ್ಡ ಅಪಾರ್ಟುಮೆಂಟ್‌ಗಳಲ್ಲಿ ಸ್ಟಾಲ್‌ಗಳನ್ನು ಇಡುವ ಮೂಲಕ ಗ್ರಾಹಕರನ್ನು ನೇರವಾಗಿ ತಲುಪುತ್ತಿದ್ದಾರೆ. ಇದರಿಂದ ಬಹಳಷ್ಟು ಲಾಭವಾಗುತ್ತಿದೆ.
ನರ್ಸರಿಯಲ್ಲಿ ಕೆಲಸ ಮಾಡುವವರನ್ನೇ ಉಳಿದ ಕೃಷಿಕಾರ್ಯಕ್ಕೂ ಬಳಸುತ್ತಾರೆ. ಹೀಗಾಗಿ ಪ್ರತ್ಯೇಕ ಕೃಷಿ ಕಾರ್ಮಿಕರ ಅಗತ್ಯ ಬೀಳುವುದಿಲ್ಲ.
ಅನೇಕ ಸಂಘಸಂಸ್ಥೆಗಳು ನಡೆಸಿಕೊಡುವ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಟ್ಟಿದ್ದಾರೆ.