ಖಾಸಗಿ ಆಸ್ಪತ್ರೆಗಳಿಗೆ ತಲೆನೋವಾದ ವ್ಯಾಕ್ಸಿನ್‌..!

By Kannadaprabha News  |  First Published Sep 27, 2021, 7:46 AM IST

* ಸರ್ಕಾರದಿಂದಲೇ ಭಾರೀ ಪ್ರಮಾಣದಲ್ಲಿ ಎಲ್ಲೆಡೆ ಲಸಿಕೆ ವಿತರಣೆ ಹಿನ್ನೆಲೆ
* ಖರೀದಿಸಿರುವ 2 ಲಕ್ಷ ಡೋಸ್‌ ಲಸಿಕೆ 6 ತಿಂಗಳಲ್ಲಿ ವಿಲೇವಾರಿ ಅನಿವಾರ್ಯ
* ದರ ಇಳಿಕೆ ಮಾಡಿ ಲಸಿಕೆ ವಿತರಣೆಗೆ ಖಾಸಗಿ ಆಸ್ಪತ್ರೆಗಳ ಯೋಜನೆ
 


ಬೆಂಗಳೂರು(ಸೆ.27):  ಕೋವಿಡ್‌ ಲಸಿಕೆ(Vaccine) ಅಭಿಯಾನದ ಆರಂಭದ ದಿನಗಳಲ್ಲಿ ತಮಗೂ ಲಸಿಕೆ ನೀಡಲು ಅವಕಾಶ ನೀಡಿ ಎಂದು ಸರ್ಕಾರಕ್ಕೆ ದುಂಬಾಲು ಬಿದ್ದಿದ್ದ ಖಾಸಗಿ ಆಸ್ಪತ್ರೆಗಳಿಗೆ ಈಗ ತಮ್ಮಲ್ಲಿ ದಾಸ್ತಾನಿರುವ ಲಸಿಕೆಯನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ದರ ಕಡಿತ ಮಾಡಿ ಲಸಿಕೆ ನೀಡುವ ಮೂಲಕ ದಾಸ್ತಾನು ಖಾಲಿ ಮಾಡಲು ಕೆಲವು ಆಸ್ಪತ್ರೆಗಳು ಮುಂದಾಗಿವೆ.

ರಾಜ್ಯದ ಖಾಸಗಿ ಆಸ್ಪತ್ರೆಗಳ(Private Hospitals) ಬಳಿ ಸದ್ಯ ಎರಡು ಲಕ್ಷ ಡೋಸ್‌ ಕೋವಿಡ್‌-19(Covid19)  ಲಸಿಕೆ ಇದೆ. ಇದರಲ್ಲಿ ಬಹುತೇಕ ಲಸಿಕೆ ಜೂನ್‌, ಜುಲೈಯಲ್ಲಿ ಖರೀದಿ ಮಾಡಲಾಗಿದೆ. ಲಸಿಕೆಯನ್ನು ಆರು ತಿಂಗಳೊಳಗೆ ಬಳಸಬೇಕಿದೆ. ನವೆಂಬರ್‌, ಡಿಸೆಂಬರ್‌ ಬಳಿಕ ಈ ಲಸಿಕೆ ಬಳಸಲು ಸಾಧ್ಯವಿಲ್ಲ. ಆದರೆ ಕಳೆದ ಒಂದೆರಡು ತಿಂಗಳಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಲಸಿಕೆಯನ್ನು ಪಡೆದುಕೊಳ್ಳಲು ಜನರು ಮುಂದಾಗುತ್ತಿಲ್ಲ.
ಸರ್ಕಾರ ವ್ಯಾಪಕ ಪ್ರಚಾರದೊಂದಿಗೆ ತನ್ನ ಲಸಿಕೆ ಕೇಂದ್ರದಲ್ಲಿ ಉಚಿತವಾಗಿ ಲಸಿಕೆ ನೀಡುತ್ತಿದೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ದುಬಾರಿ ದರ ತೆತ್ತು ಲಸಿಕೆ ಪಡೆದುಕೊಳ್ಳಲು ಫಲಾನುಭವಿಗಳು ಬರುತ್ತಿಲ್ಲ. ಹಣ ಕೊಟ್ಟು ಲಸಿಕೆ ಪಡೆದುಕೊಳ್ಳುವ ಸಾಮರ್ಥ್ಯ ಇದ್ದವರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಮೊದಲ ಡೋಸ್‌ ಅನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪಡೆದಿದ್ದ ಅನೇಕರು ಎರಡನೇ ಡೋಸ್‌ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದಾರೆ.

Tap to resize

Latest Videos

ಇದೇ ವೇಳೆ ತಮ್ಮ ಕೋಟಾದ ಲಸಿಕೆಗಳನ್ನು ಸರ್ಕಾರ ಖರೀದಿಸಬೇಕು. ಸರ್ಕಾರ ಖರೀದಿಸಿದ ಲಸಿಕೆಯನ್ನು ಅಸಂಘಟಿತ ವಲಯದ ಕಾರ್ಮಿಕರಿಗೆ ನೀಡುತ್ತೇವೆ ಎಂಬ ಪ್ರಸ್ತಾವನೆಯನ್ನು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಮ್ಸ್‌ ಒಕ್ಕೂಟ (ಫನಾ) ರಾಜ್ಯ ಸರ್ಕಾರದ ಮುಂದಿಟ್ಟಿತ್ತು. ಸರ್ಕಾರ ಆರಂಭದಲ್ಲಿ ಈ ಪ್ರಸ್ತಾವನೆಗೆ ಒಲವು ತೋರಿದರೂ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದೆ ಸರಿಯಿತು. ಇದು ಖಾಸಗಿ ಆಸ್ಪತ್ರೆಗಳ ಹೊರೆಯನ್ನು ಮತ್ತಷ್ಟು ಹೆಚ್ಚಿಸಿತು.

ಬಿಎಸ್‌ಎಫ್‌ ಶಿಬಿರದಲ್ಲಿ ಕೊರೋನಾ ಸ್ಫೋಟ: ಮತ್ತೆ 14 ಯೋಧರಿಗೆ ಸೋಂಕು

ದಾಸ್ತಾನಿರುವ ಎರಡು ಲಕ್ಷ ಡೋಸ್‌ನಲ್ಲಿ 1.50 ಲಕ್ಷ ಕೋವ್ಯಾಕ್ಸಿನ್‌(Covaxin) ಲಸಿಕೆ ಇದೆ. ಕೋವ್ಯಾಕ್ಸಿನ್‌ ನ ಒಂದು ಡೋಸ್‌ಗೆ ಖಾಸಗಿ ಆಸ್ಪತ್ರೆಗಳಲ್ಲಿ 1,400 ರು.ಗಿಂತ ಹೆಚ್ಚು ದರ ನಿಗದಿಯಾಗಿದೆ. ಕೋವಿಶೀಲ್ಡ್‌ನ(Covishield) ಒಂದು ಡೋಸ್‌ಗೆ 780 ರು. ಇದೆ. ಕೋವಿಶೀಲ್ಡ್‌ ಮಂದಿನ ದಿನಗಳಲ್ಲಿ ಖರ್ಚಾದರೂ ದುಬಾರಿಯಾಗಿರುವ ಕೋವ್ಯಾಕ್ಸಿನ್‌ ಪಡೆಯಲು ಫಲಾನುಭವಿಗಳು ಬರುವುದು ಕಷ್ಟಎಂಬುದು ಖಾಸಗಿ ಆಸ್ಪತ್ರೆಗಳ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ಆಸ್ಪತ್ರೆಗಳು ಕೋವ್ಯಾಕ್ಸಿನ್‌ನ ದರ ಕಡಿತ ಮಾಡಿ ಲಸಿಕೆ ನೀಡಲು ಯೋಚಿಸುತ್ತಿವೆ ಎಂದು ತಿಳಿದು ಬಂದಿದೆ.

ಈ ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಫನಾದ ಅಧ್ಯಕ್ಷ ಡಾ.ಎಚ್‌.ಎಂ. ಪ್ರಸನ್ನ ಮುಂದಿನ ದಿನಗಳಲ್ಲಿ ಲಸಿಕೆ ವಿತರಣೆಗೆ ಕೈ ಹಾಕಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುವ ಪರಿಸ್ಥಿತಿ ಸೃಷ್ಟಿಯಾಗಿದೆ ಎನ್ನುತ್ತಾರೆ. ಈಗ ಆಸ್ಪತ್ರೆಗಳಲ್ಲಿ ಬೆರಳೆಣಿಕೆಯ ಡೋಸ್‌ಗಳು ಹೋಗುತ್ತಿವೆ. ಬೇಡಿಕೆ ಇದ್ದರೆ 100-200 ಡೋಸ್‌ಗೆ ಮನವಿ ಸಲ್ಲಿಸುತ್ತಿವೆ. ಮುಂದಿನ ದಿನಗಳಲ್ಲಿ ಲಸಿಕೆ ಕೊಳ್ಳಲು ಖಾಸಗಿ ಆಸ್ಪತ್ರೆಗಳು ಸಾಕಷ್ಟುಯೋಚಿಸಬೇಕಾದ ಸ್ಥಿತಿಯಿದೆ. ಮಕ್ಕಳ ಲಸಿಕೆ ಅಭಿಯಾನ ಪ್ರಾರಂಭಗೊಂಡರೂ ಖಾಸಗಿ ಆಸ್ಪತ್ರೆಗಳಿಗೆ ಅನುಕೂಲವಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಬೂಸ್ಟರ್‌ ಡೋಸ್‌ ನೀಡುವ ತೀರ್ಮಾನ ಕೈಗೊಂಡರೆ ಮಾತ್ರ ನಮ್ಮಲ್ಲಿನ ಲಸಿಕೆ ಖರ್ಚಾಗಬಹುದು ಎಂದು ಅವರು ಹೇಳುತ್ತಾರೆ.
ನಮ್ಮಲ್ಲಿನ ಲಸಿಕೆಯ ವಿಲೇವಾರಿಯ ಬಗ್ಗೆ ರಾಷ್ಟ್ರೀಯ ಆರೋಗ್ಯದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಅವರ ಜೊತೆ ಮಾತುಕತೆ ನಡೆಸಿದ್ದೇವೆ, ಆದರೆ ಕೇಂದ್ರ ಸರ್ಕಾರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆಂದು ಡಾ. ಪ್ರಸನ್ನ ಹೇಳುತ್ತಾರೆ.

ಮುಂದಿನ ದಿನಗಳಲ್ಲಿ ಲಸಿಕೆ ವಿತರಣೆಗೆ ಕೈಹಾಕಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುವ ಪರಿಸ್ಥಿತಿ ಸೃಷ್ಟಿಯಾಗಿದೆ. ಈಗ ಖಾಸಗಿ ಆಸ್ಪತ್ರೆಗಳಲ್ಲಿ ಬೆರಳೆಣಿಕೆಯ ಡೋಸ್‌ಗಳು ಖರ್ಚಾಗುತ್ತಿವೆ. ಬೂಸ್ಟರ್‌ ಡೋಸ್‌ ನೀಡುವ ತೀರ್ಮಾನ ಕೈಗೊಂಡರೆ ಮಾತ್ರ ನಮ್ಮಲ್ಲಿನ ಲಸಿಕೆ ಖರ್ಚಾಗಬಹುದು. ಮಕ್ಕಳಿಗೆ ಲಸಿಕೆ ಅಭಿಯಾನ ಆರಂಭವಾದರೂ ನಮಗೆ ಅನುಕೂಲವಾಗುವುದಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ. ಎಚ್‌.ಎಂ. ಪ್ರಸನ್ನ ತಿಳಿಸಿದ್ದಾರೆ.  
 

click me!