ಪೊಲೀಸರ ಖಾಕಿ ಬಣ್ಣ ಮೊದಲು ಆವಿಷ್ಕಾರಗೊಂಡದ್ದು ಕನ್ನಡ ನಾಡಲ್ಲಿ..!

By Kannadaprabha News  |  First Published Nov 5, 2022, 8:30 AM IST

1851ರಲ್ಲಿ ಮಂಗಳೂರಲ್ಲಿ ಖಾಕಿ ಬಣ್ಣದ ಬಟ್ಟೆ ಉತ್ಪಾದನೆ, ಪ್ರಧಾನಿಯ ‘ಒಂದು ದೇಶ-ಒಂದು ಸಮವಸ್ತ್ರ’ ಘೋಷಣೆ ಹಿನ್ನೆಲೆ, ಪೊಲೀಸ್‌ ಇಲಾಖೆಯಲ್ಲಿ ಖಾಕಿ ಬಣ್ಣ ಸಮವಸ್ತ್ರ ಉಳಿವಿಗೆ ಒತ್ತಾಯ


ಆತ್ಮಭೂಷಣ್‌

ಮಂಗಳೂರು(ನ.05):  ವಿಶ್ವದ ನಾನಾ ಕಡೆ ಚಾಲ್ತಿಯಲ್ಲಿರುವ ಪೊಲೀಸರ ಖಾಕಿ ಬಣ್ಣದ ಸಮವಸ್ತ್ರ ಮೊಟ್ಟ ಮೊದಲು ತಯಾರಾಗಿದ್ದು ಕನ್ನಡ ನಾಡಿನಲ್ಲಿ. ಅದು ಕೂಡ ಕರಾವಳಿ ಕರ್ನಾಟಕದ ಮಂಗಳೂರಿನಲ್ಲಿ. ಇದೇ ಖಾಕಿ ಬಣ್ಣದ ಸಮವಸ್ತ್ರ ಈಗ ದಿಢೀರನೆ ಸುದ್ದಿಯ ಮುನ್ನೆಲೆಗೆ ಬಂದಿದೆ. ದೇಶದಲ್ಲಿ ಏಕರೂಪದ ಪೊಲೀಸ್‌ ಸಮವಸ್ತ್ರ ಜಾರಿಗೆ ಪ್ರಧಾನಿ ಮೋದಿ ಒಲವು ವ್ಯಕ್ತಪಡಿಸಿದ್ದು, ಅವರು ಪ್ರಸ್ತಾಪಿಸಿದ ‘ಒಂದು ದೇಶ-ಒಂದು ಸಮವಸ್ತ್ರ’ ನೀತಿ ಜಾರಿ ವೇಳೆ ಮಂಗಳೂರಿನಲ್ಲಿ ಜನ್ಮತಳೆದು ವಿಶ್ವಮಾನ್ಯವಾಗಿರುವ ಖಾಕಿ ಬಣ್ಣದ ಸಮವಸ್ತ್ರವನ್ನೇ ಪರಿಗಣಿಸುವಂತೆ ಒತ್ತಾಯ ಕೇಳಿ ಬರಲಾರಂಭಿಸಿದೆ.

Tap to resize

Latest Videos

ಖಾಕಿ ಬಣ್ಣದ ಮೊದಲ ಆವಿಷ್ಕಾರ ಮಂಗಳೂರಲ್ಲಿ:

ಬಾಸೆಲ್‌ ಮಿಷನ್‌ನ ಮೊದಲ ನೇಯ್ಗೆ ಫ್ಯಾಕ್ಟರಿ 1844ರಲ್ಲಿ ಮಂಗಳೂರಿನಲ್ಲಿ ಆರಂಭಗೊಂಡಿತ್ತು. 1851ರಲ್ಲಿ ಪ್ರಥಮ ಬಾರಿಗೆ ಖಾಕಿ ಬಣ್ಣದ ಬಟ್ಟೆಯನ್ನು ಇದೇ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಯಿತು. ಫ್ಯಾಕ್ಟರಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಜಾನ್‌ ಹಾಲರ್‌ ಎಂಬಾತ ಖಾಕಿ ಬಣ್ಣವನ್ನು ಮೊದಲ ಬಾರಿಗೆ ಆವಿಷ್ಕರಿಸಿದ್ದ. ಸೆಮಿಕಾರ್ಪಸ್‌ ಮರದ ತೊಗಟೆಯಿಂದ ಹೊಸ ಬಣ್ಣ ಖಾಕಿಯನ್ನು ಶೋಧಿಸುವಲ್ಲಿ ಯಶಸ್ವಿಯಾಗಿದ್ದ. ಇದರಿಂದಾಗಿ ಇಲ್ಲಿ ಅನೇಕರಿಗೆ ಉದ್ಯೋಗ ಲಭಿಸಿತು. ಬ್ರಿಟಿಷ್‌ ಇಂಡಿಯನ್‌ ಆರ್ಮಿ ಕಮಾಂಡರ್‌ ಲಾರ್ಡ್‌ ರಾಬರ್ಚ್‌ ಎಂಬಾತ ಈ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿದ್ದು, ಆತ ಖಾಕಿ ಬಣ್ಣಕ್ಕೆ ಮಾರುಹೋಗಿದ್ದ. ಇದೇ ಬಣ್ಣವನ್ನು ಮುಂದೆ ಬ್ರಿಟಿಷ್‌ ಸೇನೆಯ ಸಮವಸ್ತ್ರವನ್ನಾಗಿ ಪ್ರಪಂಚದಾದ್ಯಂತ ಜಾರಿಗೆ ತರಲಾಯಿತು.

ಪೊಲೀಸ್ ಡ್ರೆಸ್ ಧರಿಸಲು ಅನುಮತಿ ಕಡ್ಡಾಯ?

ಖಾಕಿ ಬಣ್ಣ ಕೊಳೆಯಾದರೂ ಸುಲಭದಲ್ಲಿ ಗೊತ್ತಾಗದು. ಇದೇ ಕಾರಣಕ್ಕೆ ಶ್ರಮ ಹಾಗೂ ಕಠಿಣ ಚಟುವಟಿಕೆಗೆ ಖಾಕಿ ಬಣ್ಣವೇ ಸೂಕ್ತ ಎಂಬ ನಿರ್ಧಾರಕ್ಕೆ ಬ್ರಿಟಿಷ್‌ ಅಧಿಕಾರಿಗಳು ಬಂದಿದ್ದರು. ಈ ವಿಚಾರವಾಗಿ ಬ್ರಿಟನ್‌ ರಾಣಿಗೆ ಇಲ್ಲಿನ ಬ್ರಿಟಿಷ್‌ ಅಧಿಕಾರಿಗಳು ಪತ್ರವನ್ನೂ ಬರೆದಿದ್ದರು. ಇದುವೇ ಮುಂದೆ ವಿವಿಧ ರಾಷ್ಟ್ರಗಳ ಸೇನೆಗಳಲ್ಲಿ ಖಾಕಿ ಬಣ್ಣದ ಸಮವಸ್ತ್ರಕ್ಕೆ ಪ್ರಾಶಸ್ತ್ಯ ನೀಡಲು ಕಾರಣವಾಯಿತು ಎನ್ನುತ್ತಾರೆ ಬಾಸೆಲ್‌ ಮಿಷನ್‌ ವಿಷಯದಲ್ಲಿ ಪಿಎಚ್‌ಡಿ ಸಂಶೋಧನೆ ನಡೆಸಿದ ಪುತ್ತೂರಿನ ನಿವೃತ್ತ ಪ್ರಾಂಶುಪಾಲ ಡಾ.ಪೀಟರ್‌ ವಿಲ್ಸನ್‌ ಪ್ರಭಾಕರ್‌.

ಕೇಂದ್ರಾಡಳಿತ ಪ್ರದೇಶ ಹಾಗೂ ಕೆಲವು ರಾಷ್ಟ್ರಗಳನ್ನು ಹೊರತುಪಡಿಸಿದರೆ ಬೇರೆಲ್ಲ ಕಡೆ ಖಾಕಿಯೇ ಪೊಲೀಸ್‌ ಸಮವಸ್ತ್ರವಾಗಿ ಉಳಿದುಕೊಂಡಿದೆ. ಎಲ್ಲ ಕಡೆಗಳಲ್ಲಿ ಶಿಸ್ತು ಕಾಪಾಡುವ ಪ್ರಮುಖ ಅಸ್ತ್ರವಾಗಿ, ಗೌರವದ ಸಂಕೇತವಾಗಿ ಖಾಕಿ ಬಣ್ಣ ಹೆಗ್ಗಳಿಕೆ ಪಡೆದುಕೊಂಡಿದೆ. ಭಾರತೀಯ ಅಂಚೆ ಇಲಾಖೆ ಮಂಗಳೂರಿನಲ್ಲಿ ಖಾಕಿ ಬಣ್ಣದ ಆವಿಷ್ಕಾರ ಬಗ್ಗೆ ವಿಶೇಷ ಅಂಚೆ ಚೀಟಿಯನ್ನು ಕೂಡ ಹೊರತಂದಿದೆ.

ಪೊಲೀಸ್‌ ಇಲಾಖೆಯಲ್ಲಿ ಮಾತ್ರವಲ್ಲ ಖಾಕಿ ಜಮಾನ...

ಖಾಕಿ ಬಣ್ಣ ಕೇವಲ ಪೊಲೀಸ್‌ ಇಲಾಖೆಯನ್ನು ಸೆಳೆದದ್ದು ಮಾತ್ರವಲ್ಲ, ಅದರಾಚೆಗೂ ವಿಸ್ತರಿಸಿದೆ. ಅರಣ್ಯ ಇಲಾಖೆಯ ಗಾರ್ಡ್‌ಗಳು, ರೈಲ್ವೆ ಗ್ಯಾಂಗ್‌ಮೆನ್‌ಗಳು, ಗೃಹರಕ್ಷಕದಳದ ಸಿಬ್ಬಂದಿ, ಪೌರಕಾರ್ಮಿಕರು, ಅಗ್ನಿಶಾಮಕದಳ, ಅಂಚೆ ಇಲಾಖೆಯ ಪೋಸ್ಟ್‌ಮೆನ್‌, ಕೆಎಸ್‌ಆರ್‌ಟಿಸಿ ಚಾಲಕ-ನಿರ್ವಾಹಕರು ಕೂಡ ಖಾಕಿ ಸಮವಸ್ತ್ರ ಧರಿಸುತ್ತಾರೆ. ಆರ್‌ಎಸ್‌ಎಸ್‌ ಸಂಘಟನೆಯಲ್ಲೂ ಶಿಸ್ತಿಗೆ ದ್ಯೋತಕವಾಗಿ ಖಾಕಿ ಬಣ್ಣದ ಚಡ್ಡಿ ಬಳಕೆಗೆ ಬಂದಿತ್ತು. ಈಗ ಗಾಢ ಕಂದು ಬಣ್ಣದ ಖಾಕಿ ಪ್ಯಾಂಟ್‌ ಚಾಲ್ತಿಗೆ ಬಂದಿದೆ.

ಪ್ರಸಕ್ತ ಪೊಲೀಸ್‌ ಇಲಾಖೆಯಲ್ಲಿರುವ ಖಾಕಿ ಸಮವಸ್ತ್ರ ಮಂಗಳೂರಿನ ಕೊಡುಗೆಯಾಗಿದೆ. ಏಕ ಸಮವಸ್ತ್ರ ನೀತಿ ಜಾರಿ ವೇಳೆ ಇದೇ ಸಮವಸ್ತ್ರವನ್ನು ಉಳಿಸಿಕೊಳ್ಳಬೇಕು. ಇದು ಕರಾವಳಿಯ ಅಸ್ಮಿತೆಯಾಗಿದ್ದು, ಇಡೀ ಪ್ರಪಂಚಕ್ಕೆ ಖಾಕಿ ಬಣ್ಣದ ಸಮವಸ್ತ್ರ ನೀಡಿದ ಕೊಡುಗೆಯಾಗಿ ಉಳಿದುಕೊಳ್ಳಲು ಸಾಧ್ಯ ಅಂತ ಬಾಸೆಲ್‌ ಮಿಷನ್‌ ವಿಷಯದಲ್ಲಿ ಪಿಎಚ್‌ಡಿ ಸಂಶೋಧಕ, ನಿವೃತ್ತ ಪ್ರಾಂಶುಪಾಲ ಡಾ.ಪೀಟರ್‌ ವಿಲ್ಸನ್‌ ಪ್ರಭಾಕರ್‌ ತಿಳಿಸಿದ್ದಾರೆ. 
 

click me!