ಮಳೆಗಾಲ ಮುಗಿಯುವ ಮುನ್ನವೇ ಜಲಾಶಯ ಖಾಲಿಯಾಗುತ್ತಿದ್ದು ಹಲವು ನದಿಗಳು ಹುಟ್ಟಿ ಹರಿಯುವ ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರು, ರೈತರ ಬೆಳೆಗೆ ನೀರಿನ ಕೊರತೆ ಎದುರಾಗುವ ಆತಂಕ ಕಾಡುತ್ತಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.30) : ಮಳೆಗಾಲ ಮುಗಿಯುವ ಮುನ್ನವೇ ಜಲಾಶಯ ಖಾಲಿಯಾಗುತ್ತಿದ್ದು ಹಲವು ನದಿಗಳು ಹುಟ್ಟಿ ಹರಿಯುವ ಕೊಡಗು ಜಿಲ್ಲೆಯಲ್ಲಿ ಕುಡಿಯುವ ನೀರು, ರೈತರ ಬೆಳೆಗೆ ನೀರಿನ ಕೊರತೆ ಎದುರಾಗುವ ಆತಂಕ ಕಾಡುತ್ತಿದೆ.
undefined
ಹಾಗಾದರೆ ಜಲಾಶಯದಲ್ಲಿ ಈಗ ಎಷ್ಟು ನೀರಿದೆ, ಎಷ್ಟು ತಿಂಗಳು ನೀರು ಸಿಗಲಿದೆ ಎನ್ನುವುದು ತೋರಿಸ್ತೀವಿ ನೋಡಿ. ಕೊಡಗು ಜಿಲ್ಲೆಯಲ್ಲಿ ಆರು ತಿಂಗಳಕಾಲ ಸುರಿಯುತ್ತಿದ್ದ ಮಳೆ ಈ ಬಾರಿ ಕೇವಲ 20 ದಿನಗಳು ಮಾತ್ರ ಸುರಿಯಿತು ಎನ್ನುವುದು ಅಚ್ಚರಿಯ ಸಂಗತಿ. ಅಂದರೆ ಮಳೆಯ ತೀವ್ರ ಕೊರತೆ ಎದುರಾಯಿತು. ಇದರ ಪರಿಣಾಮ ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ(Harangi Reservoir) ಮಳೆಗಾಲ(monsoon) ಮುಗಿಯುವ ಮೊದಲೇ ಖಾಲಿಯಾಗುವ ಸ್ಥಿತಿ ತಲುಪುತ್ತಿದೆ.
ಹಾರಂಗಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ: ಕೆಳಭಾಗದ ಗ್ರಾಮಗಳಿಗೆ ಪ್ರವಾಹದ ಭೀತಿ
ಇದರಿಂದ ಒಂದುವರೆ ಅಥವಾ ಎರಡು ತಿಂಗಳಲ್ಲಿ ಕೊಡಗು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ.ಲಕ್ಷಾಂತರ ರೈತರ ಕೃಷಿಗೂ ನೀರಿನ ಅಭಾವ ಎದುರಾಗಲಿದೆ. ಜುಲೈ ತಿಂಗಳ ಕೊನೆಯಲ್ಲಿ ಹದಿನೈದು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದ್ದರಿಂದ ಅದನ್ನು ನಂಬಿ ಜಿಲ್ಲೆಯಲ್ಲಿ ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಆಗಸ್ಟ್ ತಿಂಗಳಲ್ಲಿ ಬಹುತೇಕ ಮಳೆ ಸ್ಥಗಿತವಾಗಿದ್ದರಿಂದ ಇದೀಗ ಬಿತ್ತಿರುವ ಬೆಳೆಯೂ ಬತ್ತಿ ಹೋಗುವ ಪರಿಸ್ಥಿತಿ ಎದುರಾಗಿದೆ.
ಹಾರಂಗಿ ಜಲಾಶಯದಲ್ಲಿರುವ ನೀರನ್ನು ನಂಬಿ ರೈತರು ಕಾಲುವೆಯಲ್ಲಿ ನೀರು ಬರುತ್ತದೆ. ಇದರಿಂದ ತೀರ ಹೆದರಬೇಕಾದ ಅವಶ್ಯಕತೆ ಏನು ಇಲ್ಲ ಎಂಬ ನಂಬಿಕೆಯಲ್ಲಿ ಇದ್ದರು. ಆದರೀಗ ಜಲಾಶಯದಿಂದ ನಿತ್ಯ 1100 ಕ್ಯೂ ನೀರನ್ನು ನದಿ ಹರಿಸಲಾಗುತ್ತಿದ್ದು ನಿತ್ಯವೂ ಹೀಗೆ ನೀರು ಹರಿಸಿದಲ್ಲಿ ಜಲಾಶಯ ಆದಷ್ಟು ಬೇಗ ಖಾಲಿಯಾಗುವುದರಲ್ಲಿ ಎರಡು ಮಾತಿಲ್ಲ. ನದಿಗೆ ನೀರು ಹರಿಸುತ್ತಿರುವುದಕ್ಕೆ ಜಿಲ್ಲೆಯ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಜಲಾಶಯದ ನೀರನ್ನೇ ನಂಬಿ ಪ್ರತೀ ವರ್ಷ ವಿವಿಧ ಬೆಳೆಗಳ ಬಿತ್ತನೆ ಮಾಡುತ್ತೇವೆ. ಈಗ ಮಳೆಯಿಲ್ಲದೆ ಸಮಸ್ಯೆಯಲ್ಲಿ ಇರುವಾಗ ಜಲಾಶಯದ ನೀರನ್ನು ಹೊರ ರಾಜ್ಯಕ್ಕೆ ಹರಿಸುವುದು ಎಷ್ಟು ಸರಿ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಗಸ್ಟ್ ತಿಂಗಳ ಆರಂಭದಲ್ಲಿಯೇ ಮಳೆ ಸ್ಥಗಿತವಾಗಿದ್ದರಿಂದ 8.5 ಟಿಎಂಸಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಸದ್ಯ 6.91 ಟಿಎಂಸಿ ನೀರು ಮಾತ್ರವೇ ಇದೆ. ಇಷ್ಟು ನೀರು ಕೂಡ ಸಂಪೂರ್ಣ ಬಳಕೆಗೆ ಸಿಗುವುದಿಲ್ಲ ಎನ್ನುವುದು ಮತ್ತೊಂದು ಆತಂಕದ ವಿಷಯ.
ಕಳೆದ ನಾಲ್ಕು ವರ್ಷಗಳ ಕಾಲ ಕೊಡಗಿನಲ್ಲಿ ಭೂಕುಸಿತವಾಗಿದ್ದರಿಂದ ಭೂಕುಸಿತವಾದ ಬಹುತೇಕ ಮಣ್ಣು ಜಲಾಶಯಕ್ಕೆ ಬಂದು ತುಂಬಿದೆ. ಅದು ಬರೋಬ್ಬರಿ 1.23 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದೆ. ಜೊತೆಗೆ 0.427 ಅಡಿಯಷ್ಟು ನೀರು ಡೆಡ್ ಸ್ಟೋರೇಜ್. ಹೀಗಾಗಿ ಸದ್ಯ ಜಲಾಶಯದಲ್ಲಿ ಇರುವ 6.91 ಟಿಎಂಸಿ ನೀರಿನಲ್ಲಿ ನೈಜವಾಗಿ ಬಳಕೆಗೆ ಸಿಗುವುದೇ ಕೇವಲ 4.5 ಟಿಎಂಸಿ ನೀರು ಮಾತ್ರ. ಈಗ ಮಳೆಯೂ ಸ್ಥಗಿತವಾಗಿದ್ದು, ಜಲಾಶಯಕ್ಕೆ ಕೇವಲ 208 ಕ್ಯುಸೆಕ್ ಮಾತ್ರವೇ ನೀರಿನ ಒಳಹರಿವಿದೆ. ಆದರೆ ಜಲಾಶಯದಿಂದ 1100 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದೇ ರೀತಿ ನೀರು ಹರಿಸಿದಲ್ಲಿ ಜಲಾಶಯ ಆದಷ್ಟು ಬೇಗ ಖಾಲಿಯಾಗುವುದಂತು ಸತ್ಯ.
Kodagu: ಸೆಲ್ಫಿ ತೆಗೆದುಕೊಳ್ಳುವಾಗ ಹಾರಂಗಿ ನದಿಗೆ ಬಿದ್ದು ಬೆಂಗಳೂರಿನ ಟ್ಯಾಟೂ ಕಲಾವಿದ ಸಾವು
ಕಳೆದ ವರ್ಷ ಇದೇ ಸಮಯಕ್ಕೆ 7.93 ಟಿಎಂಸಿ ನೀರು ಜಲಾಶಯದಲ್ಲಿ ಇತ್ತು. ಜೊತೆಗೆ 3236 ಕ್ಯುಸೆಕ್ ನೀರು ಜಲಾಶಯಕ್ಕೆ ಒಳಹರಿವಿತ್ತು. ಈ ಎಲ್ಲಾ ಕಾರಣಗಳಿಂದ ಕೊಡಗು ಜಿಲ್ಲೆಗೆ ಇನ್ನೊಂದುವರೆಯಿಂದ ಎರಡು ತಿಂಗಳಲ್ಲೇ ನೀರಿನ ಅಭಾವ ಕಾಡಲಿದೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆಯಿಂದ ಬರಗಾಲದ ಪರಿಸ್ಥಿತಿ ಎದುರಾಗಿದ್ದರೆ, ಜಲಾಶಯವೂ ಖಾಲಿಯಾಗುವ ಆತಂಕ ಎದುರಾಗಿದೆ.