ಹಾರಂಗಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ: ಕೆಳಭಾಗದ ಗ್ರಾಮಗಳಿಗೆ ಪ್ರವಾಹದ ಭೀತಿ
ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕಾವೇರಿ ನದಿ ಉಕ್ಕಿ ಹರಿದಿದೆ. ಹೀಗಾಗಿ ಕಾವೇರಿ ನದಿ ಪಾತ್ರದ ಜನವಸತಿ ಮತ್ತು ಗದ್ದೆ, ತೋಟಗಳೆಲ್ಲವೂ ಪ್ರವಾಹಕ್ಕೆ ತುತ್ತಾಗಿ ಜನಜೀವನ ತತ್ತರಿಸಿ ಹೋಗಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಜು.26): ಕಳೆದ ಒಂದು ವಾರದಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕಾವೇರಿ ನದಿ ಉಕ್ಕಿ ಹರಿದಿದೆ. ಹೀಗಾಗಿ ಕಾವೇರಿ ನದಿ ಪಾತ್ರದ ಜನವಸತಿ ಮತ್ತು ಗದ್ದೆ, ತೋಟಗಳೆಲ್ಲವೂ ಪ್ರವಾಹಕ್ಕೆ ತುತ್ತಾಗಿ ಜನಜೀವನ ತತ್ತರಿಸಿ ಹೋಗಿದೆ. ಇದೀಗ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಆದರೂ ಮಳೆ ನಿಂತರೂ ಮಳೆಯಿಂದಾದ ಹಾನಿ ಮಾತ್ರ ಸರಿ ಹೋಗಿಲ್ಲ. ಎಲ್ಲೆಂದರಲ್ಲಿ ನುಗ್ಗಿದ್ದ ಪ್ರವಾಹದ ನೀರು ಇನ್ನೂ ಕಡಿಮೆಯಾಗಿಲ್ಲ. ಇಂದಿಗೂ ತೋಟ, ಗದ್ದೆಗಳಲ್ಲಿ ನಾಲ್ಕೈದು ಅಡಿ ಎತ್ತರದ ನೀರು ಹಾಗೆಯೇ ನಿಂತಿದೆ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಮತ್ತು ಮೂರ್ನಾಡು ನಡುವೆ ಇರುವ ರಸ್ತೆಯಲ್ಲಿ ಬೊಳಿಬಾಣೆ ಎಂಬಲ್ಲಿ ಇಂದಿಗೂ ಪ್ರವಾಹದ ನೀರು ಒಂದು ಅಡಿಯಷ್ಟು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ನಾಪೋಕ್ಲು ಮತ್ತು ಮೂರ್ನಾಡು ನಡುವೆ ಸಂಪರ್ಕ ದುಸ್ಥರವಾಗಿದೆ. ಜೊತೆಗೆ ರಸ್ತೆ ಎರಡು ಬದಿಗಳಲ್ಲಿ ಇರುವ ಗದ್ದೆ, ತೋಟಗಳು ಜಲಾವೃತವಾಗಿದ್ದು, ರೈತರ ಬೆಳೆಗಳು ಹಾಳಾಗುತ್ತಿವೆ. ನಾಟಿಗೋಸ್ಕರ, ಬಿತ್ತನೆ ಮಾಡಿದ್ದ ಭತ್ತದ ಮಡಿಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಅಲ್ಲದೆ ಕಾಫಿ ತೋಟಗಳಿಗೆ ನುಗ್ಗಿರುವ ಪ್ರವಾಹದ ನೀರು ಹಾಗೆಯೇ ನಿಂತಿದ್ದು, ಹಲವು ವರ್ಷಗಳಿಂದ ಬೆಳೆದಿದ್ದ ಕಾಫಿ ಬೆಳೆ ಹಾಳಾಗುವ ಸ್ಥಿತಿ ತಲುಪಿದೆ.
ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ: ಶಾಸಕ ನಂಜೇಗೌಡ
ಮಳೆ ಸಂಪೂರ್ಣ ನಿಂತು ಹೋದರೂ ಈಗಾಗಲೇ ಗದ್ದೆ, ತೋಟಗಳು ಸೇರಿದಂತೆ ತಗ್ಗು ಪ್ರದೇಶಗಳಿಗೆ ನುಗ್ಗಿರುವ ಪ್ರವಾಹದ ನೀರು ಇನ್ನು ಎರಡು ಮೂರು ದಿನಗಳ ಕಾಲ ಹಾಗೇಯೇ ಇರಲಿದೆ. ಇದರಿಂದ ರೈತರ ಬೆಳೆಗಳು ಮತ್ತಷ್ಟು ಹಾಳಾಗುವ ಆತಂಕವಿದೆ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಜಿಲ್ಲೆಯ ಏಕೈಕ ಜಲಾಶಯ 2859 ಅಡಿ ಸಾಮರ್ಥ್ಯದ ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ.
ಹೀಗಾಗಿ ಜಲಾಶಯದ ಹಿತದೃಷ್ಠಿಯಿಂದ ಭರ್ತಿಯಾಗಿರುವ ಜಲಾಶಯದಿಂದ ನಾಲ್ಕು ಕ್ರೆಸ್ ಗೇಟುಗಳನ್ನು ತೆರೆದು ಕೆಲವು ಬಾರಿ 17 ಸಾವಿರ ಕ್ಯೂಸೆಕ್ ನಿಂದ ಮತ್ತೆ ಕೆಲವು ಬಾರಿ 35000 ಕ್ಯೂಸೆಕ್ ವರೆಗೆ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಇದು ಜಲಾಶಯದ ಕೆಳಭಾಗದ ಗ್ರಾಮಗಳಿಗೆ ಪ್ರವಾಹದ ಭೀತಿಯನ್ನು ತಂದಿರಿಸಿದೆ. ಜಿಲ್ಲೆಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿರುವುದರಿಂದ ಕಾವೇರಿ ನದಿ ಪ್ರವಾಹದ ರೂಪದಲ್ಲಿ ಹರಿಯುತ್ತಿದೆ. ಇದು ಒಂದೆಡೆ ಕುಶಾಲನಗರ, ಕೂಡಿಗೆ, ಕಣಿವೆ ಸೇರಿದಂತೆ ಹಲವು ಗ್ರಾಮಗಳಿಗೆ ಈಗಾಗಲೇ ಪ್ರವಾಹದ ಸ್ಥಿತಿಯನ್ನು ತಂದಿರಿಸಿದೆ.
ವಿಶ್ವಕರ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ: ಕೆ.ಪಿ.ನಂಜುಂಡಿ
ಆದರೆ ಕೂಡಿಗೆ ಭಾಗದಿಂದಲೇ ಹರಿದು ಬರುವ ಹಾರಂಗಿ ಜಲಾಶಯದ ನೀರು ಕಾವೇರಿ ನದಿಗೆ ಬಂದು ಸೇರುವುದರಿಂದ ಎರಡು ನದಿಗಳ ನೀರು ಒಂದೆಡೆ ಬಂದು ಸೇರುವುದರಿಂದ ನೀರಿನ ಪ್ರಮಾಣ ಹೆಚ್ಚಳವಾಗಿ ಒತ್ತಡ ಹೆಚ್ಚಾಗಿ ಈ ಎಲ್ಲಾ ಗ್ರಾಮಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿಯೇ ಇದೆ. ಮತ್ತೊಂದೆಡೆ ಹಾರಂಗಿ ಜಲಾಶಯದಿಂದ ಇಷ್ಟೊಂದು ಪ್ರಮಾಣದ ನೀರನ್ನು ಒಮ್ಮೆಲ್ಲೇ ಹರಿಸುವುದರಿಂದ ಜಲಾಶಯದ ಮುಂಭಾಗದಲ್ಲಿ ಇರುವ ಹಾರಂಗಿ ಹುದುಗೂರುಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಮುಳುಗಡೆಯಾಗಿದೆ. ಇದರಿಂದ ಎರಡು ಗ್ರಾಮಗಳ ನಡುವಿನ ಸಂಪರ್ಕಕ್ಕೆ ಜನರು ಪರದಾಡುವಂತಾಗಿದ್ದು, ಕೂಡಿಗೆ ಕೂಡುಮಂಗಳೂರು ಗ್ರಾಮದಲ್ಲಿ ಜನರು ಓಡಾಡಬೇಕಾದ ಸ್ಥಿತಿ ಇದೆ.