ಅಂದು ರಾತ್ರಿ ತನ್ನ ಚಿಕನ್ ಸೆಂಟರ್ ಮುಚ್ಚಿ ಮನೆಯತ್ತ ಹೆಜ್ಜೆ ಹಾಕಲು ಸಿದ್ದವಾಗುತ್ತಿದ್ದಂತೆ ತಂಡವೊಂದು ಬಂದು ಅವರನ್ನು ತಲವಾರುಗಳಿಂದ ಕೊಚ್ಚಿ ಹಾಕಿತ್ತು. ಗಂಭೀರ ಗಾಯಗೊಂಡ ಪ್ರವೀಣ್ ಪುತ್ತೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದಿದ್ದರು.
ದುರ್ಗಾಕುಮಾರ್ ನಾಯರ್‌ಕೆರೆ
ಸುಳ್ಯ(ಜು.26): ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮತ್ತು ಸಂಚಲನಕ್ಕೆ ಕಾರಣವಾದ ಆ ಘಟನೆ ನಡೆದು ಇಂದಿಗೆ ಒಂದು ವರ್ಷ. 2022 ಜು.26ರಂದು ರಾತ್ರಿ 8 ಗಂಟೆ ವೇಳೆಗೆ ಆ ದುರ್ಘಟನೆ ನಡೆದು ಪ್ರವೀಣ್ ನೆಟ್ಟಾರ್ ಎಂಬ ಯುವಕ ಬಲಿಯಾದರು. ಆ ಹತ್ಯೆ ಪ್ರತಿಫಲಿಸಿದ ವಿದ್ಯಮಾನಗಳು ನೂರಾರು. ರಾಜಕೀಯವಾಗಿಯೂ ಸೃಷ್ಟಿಸಿದ ತಲ್ಲಣಗಳು ಹಲವಾರು.
ನೆಟ್ಟಾರಿನ ಶೇಖರ ಪೂಜಾರಿ-ರತ್ನಾವತಿ ದಂಪತಿಯ ಏಕ ಮಾತ್ರ ಪುತ್ರನಾಗಿದ್ದ ಪ್ರವೀಣ್ ಕಾಲೇಜು ಜೀವನದ ನಂತರ ಅಲ್ಲಿ ಇಲ್ಲಿ ಕೆಲವು ವೃತ್ತಿ ಮಾಡಿ ಕೊನೆಗೆ ಮಾಸ್ತಿಕಟ್ಟೆಯಲ್ಲಿ ಅಕ್ಷಯ ಚಿಕನ್ ಸೆಂಟರ್‌ನ ಔಟ್ಲೆಟ್ ಹೊಂದಿದ್ದರು. ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದ ಪ್ರವೀಣ್ ಪರೋಪಕಾರಿ ವ್ಯಕ್ತಿ. ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತ. ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ.
ಶರಣಾಗದಿದ್ದರೆ ನೆಟ್ಟಾರು ಹತ್ಯೆ ಆರೋಪಿಗಳ ಮನೆ, ಆಸ್ತಿ ಜಪ್ತಿ: ಎನ್‌ಐಎ ಎಚ್ಚರಿಕೆ
ಅಂದು ರಾತ್ರಿ ತನ್ನ ಚಿಕನ್ ಸೆಂಟರ್ ಮುಚ್ಚಿ ಮನೆಯತ್ತ ಹೆಜ್ಜೆ ಹಾಕಲು ಸಿದ್ದವಾಗುತ್ತಿದ್ದಂತೆ ತಂಡವೊಂದು ಬಂದು ಅವರನ್ನು ತಲವಾರುಗಳಿಂದ ಕೊಚ್ಚಿ ಹಾಕಿತ್ತು. ಗಂಭೀರ ಗಾಯಗೊಂಡ ಪ್ರವೀಣ್ ಪುತ್ತೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆಯೇ ಕೊನೆಯುಸಿರೆಳೆದಿದ್ದರು.
ಆಕ್ರೋಶ ಸ್ಫೋಟ:
ಪ್ರವೀಣ್ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಕಾರ್ಯಕರ್ತರ ರಕ್ತ ಕುದಿಯತೊಡಗಿತು. ರಾತ್ರೋ ರಾತ್ರಿ ಪ್ರವೀಣ್ ಮೃತದೇಹವಿದ್ದ ಪುತ್ತೂರಿನ ಆಸ್ಪತ್ರೆಗೆ ಧಾವಿಸಿದರು. ಜಿಲ್ಲಾಧಿಕಾರಿ ಬಾರದ ಹೊರತು, ಪರಿಹಾರ ಘೋಷಿಸಿದ ಹೊರತು ಪೋಸ್ಟ್ ಮಾರ್ಟಂ ಸಾಧ್ಯವಿಲ್ಲ ಎಂದು ಪಟ್ಟು ಹಿಡಿದು ಕೂತರು.
ಕಾರ್ಯಕರ್ತರ ಆಕ್ರೋಶದ ಎದುರು ಯಾವ ನಾಯಕರ ಸಮಾಧಾನದ ಮಾತುಗಳಿಗೂ ಜಾಗವಿರಲಿಲ್ಲ. ಕೊನೆಗೆ ಮಧ್ಯರಾತ್ರಿಯ ವೇಳೆ ಅಂದಿನ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಆಸ್ಪತ್ರೆಗೆ ಧಾವಿಸಿ ಬಂದು ಕಾರ್ಯಕರ್ತರನ್ನು ಸಮಾಧಾನಪಡಿಸಿದರು.
ಅಂತಿಮ ಯಾತ್ರೆ ವೇಳೆ ಬಂದ್: ಮರುದಿನ ಬೆಳಗ್ಗೆ ನಡೆದದ್ದು ಕಂಡು ಕೇಳರಿಯದ ಅಂತಿಮ ಯಾತ್ರೆ. ಆಸ್ಪತ್ರೆಯಿಂದ ಆವರಣದಿಂದ ಮೊದಲ್ಗೊಂಡ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರದ ಅಂತಿಮ ಯಾತ್ರೆ ಪುತ್ತೂರು ಬಾಳಿಲ ಮಾರ್ಗವಾಗಿ ಬೆಳ್ಳಾರೆಗೆ ಬಂದು ಸೇರಿದಾಗ ಮಧ್ಯಾಹ್ನ. ದಾರಿಯುದ್ದಕ್ಕೂ ಸೇರಿದ ಸಹಸ್ರ ಸಹಸ್ರ ಹಿತೈಷಿಗಳು ಮತ್ತು ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು. ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಈ ಭಾಗದಲ್ಲಿ ಬಂದ್ ಗೆ ಕರೆ ನೀಡಲಾಗಿತ್ತು. ಅಂಗಡಿ, ವ್ಯವಹಾರಗಳು ಸಂಪೂರ್ಣ ಸ್ತಬ್ಧವಾಗಿತ್ತು.
ಬೆಳ್ಳಾರೆಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರವೀಣ್ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಅನೇಕ ನಾಯಕರು, ಜನಪ್ರತಿನಿಧಿಗಳು ಧಾವಿಸಿ ಬಂದರು. ಆದರೆ ಕಾರ್ಯಕರ್ತರ ಬೇಸರ ಬೇಗುದಿಗಳ ಎದುರು ಅವರೆಲ್ಲಾ ಅಸಹಾಯಕರಾಗಿ ನಿಲ್ಲಬೇಕಾಯಿತು. ಒಂದು ಹಂತದಲ್ಲಿ ಸ್ಪೋಟಗೊಂಡ ಕಾರ್ಯಕರ್ತರ ಆಕ್ರೋಶಕ್ಕೆ ಜನಪ್ರತಿನಿಧಿಗಳು ಗುಂಪಿನೊಳಗೆ ಸೇರಿ ಹೋದರು. ಸಂಸದರ ಕಾರನ್ನು ಹಿಡಿದು ಅಲ್ಲಾಡಿಸತೊಡಗಿದರು. ಬಳಿಕ ನಡೆದ ಘಟನೆಯೊಂದರ ಪರಿಣಾಮ ಪೊಲೀಸರು ಲಾಠಿ ಚಾಜ್‌ರ್ ಮಾಡಬೇಕಾಯಿತು. ಮತ್ತೆ ಹಿಂದೂ ಕಾರ್ಯಕರ್ತರು ಸ್ಫೋಟಗೊಂಡರು. ಸಂಜೆಯ ವೇಳೆಗೆ ಎಲ್ಲವೂ ಸಮಾಧಾನಗೊಂಡಿತು. ಅತ್ತ ಪ್ರವೀಣ್ ದೇಹ ನೆಟ್ಟಾರಿನ ಮಣ್ಣಿನಲ್ಲಿ ಮಣ್ಣಾಯಿತು.
ವ್ಯವಸ್ಥೆ ವಿರುದ್ಧ ಆಕ್ರೋಶ:
ಸ್ವತಃ ಬಿಜೆಪಿ ಸರಕಾರವಿದ್ದರೂ ಹಿಂದೂ ಕಾರ್ಯಕರ್ತನೊಬ್ಬನ ಹತ್ಯೆ ಮತ್ತು ಅದಕ್ಕೆ ನಾಯಕರು ಸ್ಪಂದಿಸಿದ ರೀತಿ ಇಡೀ ವ್ಯವಸ್ಥೆಯ ವಿರುದ್ಧ ರೋಶಾವೇಶಕ್ಕೆ ಕಾರಣವಾಗಿತ್ತು. ಸಹಜವಾಗಿಯೇ ಪ್ರಕರಣದ ಗಂಭೀರತೆ ಅರಿತ ರಾಜ್ಯ ಸರ್ಕಾರ ಪೊಲೀಸ್ ತನಿಖೆಯನ್ನು ಚುರುಕುಗೊಳಿಸಿತು. ಸ್ವತಃ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಬೆಳ್ಳಾರೆಗೆ ಧಾವಿಸಿ ಬಂದರು. ಹಲವು ಪೊಲೀಸ್ ಅಧಿಕಾರಿಗಳ ತಲೆ ದಂಡವಾಯಿತು.
ಪ್ರವೀಣ್ ಮೃತದೇಹ ಮಣ್ಣಾದ ನೆಟ್ಟಾರಿನ ಮನೆಗೆ ಜನಪ್ರತಿನಿಧಿಗಳ, ನಾಯಕರುಗಳ, ಗಣ್ಯರ, ಸ್ವಾಮೀಜಿಗಳ ಗಢಣವೇ ಹರಿದು ಬಂತು. ಹಲವು ಮಂದಿ ಮನೆಯವರ , ಸ್ಥಳೀಯರ ಆಕ್ರೋಶವನ್ನೂ ಎದುರಿಸಬೇಕಾಯಿತು.
ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಎಚ್.ಡಿ.ಕುಮಾರಸ್ವಾಮಿ ಸಹಿತ ನಾಯಕರೆಲ್ಲರೂ ಧಾವಿಸಿ ಬಂದು ಮನೆಯವರಿಗೆ ಸಾಂತ್ವನ ಹೇಳಿದರು. ಸರ್ಕಾರ, ಪಕ್ಷಗಳ, ಸಂಘಟನೆಗಳ ವತಿಯಿಂದ ಲಕ್ಷ ಲಕ್ಷಗಳ ಧನಸಹಾಯ ಹರಿದು ಬಂತು. ಪೊಲೀಸ್ ತನಿಖೆ ಆರಂಭಿಸಿದ ಅಧಿಕಾರಿಗಳು ಆರೋಪಿಗಳ ಹೆಡೆಮುರಿ ಕಟ್ಟಲು ಆರಂಭಿಸಿದರು. ಈ ನಡುವೆ ಜನಾಗ್ರಹಕ್ಕೆ ಮಣಿದು ಸರ್ಕಾರ ಈ ಪ್ರಕರಣವನ್ನು ಎನ್‌ಐಎಗೆ ವಹಿಸಿತು. ಬಂಧಿತರಾಗಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದರು. ಮತ್ತಷ್ಟು ಆರೋಪಿಗಳನ್ನು ಬಂಧಿಸಲಾಯಿತು.
ಹೀಗೆ ಕಾನೂನಿನ ಕುಣಿಕೆ ಒಂದು ಕಡೆಯಾದರೆ ಮತ್ತೊಂದು ಕಡೆ ಪ್ರವೀಣ್ ಕುಟುಂಬದ ಸಹಾಯಕ್ಕೆ ಸರ್ಕಾರ, ಬಿಜೆಪಿ, ಸಂಸದರು ಮುಂದಾದರು. ಪ್ರವೀಣ್ ಪತ್ನಿ ನೂತನಾ ಅವರಿಗೆ ತಾತ್ಕಾಲಿಕ ನೆಲೆಯಲ್ಲಿ ಸರ್ಕಾರಿ ನೇಮಕಾತಿ ನಡೆಯಿತು. ಪ್ರವೀಣ್ ಕನಸಾಗಿದ್ದ ಸುಂದರ ಮನೆ ಕೆಲವೇ ತಿಂಗಳಲ್ಲಿ ನಿರ್ಮಾಣವಾಗಿ ಗೃಹ ಪ್ರವೇಶವೂ ಸಾಂಗವಾಗಿ ನೆರವೇರಿತು. ಪ್ರವೀಣ ಮಣ್ಣಾದ ಸ್ಥಳದಲ್ಲಿ ಪುತ್ಥಳಿಯನ್ನೂ ನಿರ್ಮಿಸಲಾಯಿತು.
ಇತ್ತ ಹಲವು ಸಮಯದಿಂದ ನಿಷೇಧದ ತೂಗುಗತ್ತಿ ಎದುರಿಸುತ್ತಿದ್ದ ಪಿ.ಎಫ್.ಐ. ಸಹಿತ ಕೆಲವು ಸಂಘಟನೆಗಳ ನಿಷೇಧಕ್ಕೆ ಪ್ರವೀಣ್ ಹತ್ಯೆ ಪ್ರಕರಣ ನಿರ್ಣಾಯಕ ಕಾರಣವಾಯಿತು. ಅಂತಿಮವಾಗಿ ಪಿ.ಎಫ್.ಐ. ಸಹಿತ ಕೆಲವು ಸಂಘಟನೆಗಳನ್ನು ಕೇಂದ್ರ ಗೃಹ ಇಲಾಖೆ ನಿಷೇಧಿಸಿ ಆದೇಶ ಹೊರಡಿಸಿತು.
Praveen nettaru murder case: ಐವರು ಆರೋಪಿಗಳ ಮನೆಗೆ ಎನ್‌ಐಎ ನೋಟಿಸ್!
ಅದರ ಪ್ರಮುಖ ನಾಯಕರು ಬಂಧನಕ್ಕೊಳಗಾದರು. ಅವರ ಕಾರ್ಯಚಟುವಟಿಕೆಗಳ ಹಲವು ಕೇಂದ್ರಗಳನ್ನು ಜಫ್ತಿ ಮಾಡಲಾಯಿತು. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ತಾತ್ಕಾಲಿಕ ನೇಮಕಾತಿ ಪಡೆದಿದ್ದ ಪ್ರವೀಣ್ ಪತ್ನಿ ನೂತನ ಸರಕಾರ ಬದಲಾವಣೆ ಸಂದರ್ಭ ಸಹಜವಾಗಿ ಹುದ್ದೆ ಕಳೆದುಕೊಳ್ಳಬೇಕಾಯಿತು. ಆದರೆ ಸಿದ್ದರಾಮಯ್ಯ ಸರಕಾರ ನೂತನ ಅವರನ್ನು ಅದೇ ಹುದ್ದೆಯಲ್ಲಿ ಮರು ನೇಮಕಾತಿ ಮಾಡಿತು.
ಪೊಲೀಸ್ ಮತ್ತು ಎನ್‌ಐಎ ತನಿಖೆ ವೇಳೆ ಆರೋಪಿಗಳೆಂದು ಗುರುತಿಸಲ್ಪಟ್ಟಐವರು ಇನ್ನೂ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಈಗಾಗಲೇ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿದೆ. ಸುಳಿವು ನೀಡಿದರೆ ಬಹುಮಾನ ನೀಡುವುದಾಗಿಯೂ ಘೋಷಿಸಲಾಗಿದೆ. ಶರಣಾಗದಿದ್ದರೆ ಮನೆ ಹಾಗೂ ಆಸ್ತಿಯನ್ನು ಜಫ್ತಿ ಮಾಡಲಾಗುವುದು ಎಂಬ ಘೋಷಣೆಯೂ ಹೊರಬಿದ್ದಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪ್ರವೀಣ್ ಹತ್ಯೆಗೆ ಒಂದು ವರ್ಷ ತುಂಬುತ್ತಿದೆ. ಈ ನೆನಪಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ರಕ್ತದಾನ ಶಿಬಿರವನ್ನು ಏರ್ಪಡಿಸಿದೆ. ಪ್ರವೀಣ್ ಪುತ್ಥಳಿಗೆ ಪುಷ್ಪಾರ್ಚನೆ ಕಾರ್ಯಕ್ರಮವೂ ಇದೆ.