ಬೇರೆ ಯಾರಿಗೋ ಪರಿಹಾರ ನೀಡಿದ್ದರೂ ನಿಜವಾದ ಮಾಲಿಕರಿಗೆ ಪರಿಹಾರ ನೀಡಬೇಕು: ಹೈಕೋರ್ಟ್
ವೆಂಕಟೇಶ್ ಕಲಿಪಿ
ಬೆಂಗಳೂರು(ಜು.25): ಭೂ ಸ್ವಾಧೀನ ಪ್ರಕರಣಗಳಲ್ಲಿ ಸರ್ಕಾರಿ ಪ್ರಾಧಿಕಾರಗಳು ನಿಜವಾದ ಮಾಲೀಕರಿಗಲ್ಲದೆ ಅನ್ಯರಿಗೆ ಪಾವತಿಸಿದ ಪರಿಹಾರ ಮೊತ್ತವನ್ನು ಆತನಿಂದ ವಸೂಲಿ ಮಾಡುವವರೆಗೆ ಕಾಯದೆ ಕೂಡಲೇ ಭೂ ಮಾಲೀಕರಿಗೆ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಬೆಂಗಳೂರಿನ ರಾಜಾಜಿನಗರದ ಐದನೇ ಬ್ಲಾಕಿನ ನಿವಾಸಿ ಪಿ.ಎಂ. ಮುನಿರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣ ಏನು?:
ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಇಬ್ಬಲೂರು ಗ್ರಾಮದ ಸರ್ವೇ ನಂ.40ರಲ್ಲಿನ ಆಸ್ತಿಯನ್ನು ತಮ್ಮ ತಂದೆ ಲೇಟ್ ಎ.ಮುನಿರೆಡ್ಡಿಗೆ ಮಂಜೂರಾಗಿತ್ತು. ಈ ಜಮೀನನ್ನು ಬೆಂಗಳೂರು ಮೆಟೋ ರೈಲು ಮಾರ್ಗ ನಿರ್ಮಾಣಕ್ಕಾಗಿ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆಗಳ ಇಲಾಖೆ ವಶಪಡಿಸಿಕೊಂಡಿತ್ತು. ಆದರೆ, ಭೂ ಸ್ವಾಧೀನ ನೋಟಿಫಿಕೇಷನ್‌ನಲ್ಲಿ ಜಾಗದ ನಿಜವಾದ ಮಾಲೀಕನಾದ ತನ್ನ ಹೆಸರು ತೋರಿಸಿಲ್ಲ. ತನಗೆ ಪಾವತಿಸಬೇಕಾದ ಎರಡು ಕೋಟಿ ರು. ಪರಿಹಾರವನ್ನು ಜಾಗದ ಮೇಲೆ ಹಕ್ಕು ಇಲ್ಲದ ವರ್ತೂರು ಹೋಬಳಿಯ ಗುಂಜೂರುಪಾಳ್ಯದ ಆರ್.ರಾಮಕೃಷ್ಣಪ್ಪಗೆ ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಪಾವತಿಸಿದೆ ಎಂದು ಆರೋಪಿಸಿ ಪಿ. ಎಂ.ಮುನಿರೆಡ್ಡಿ ಅರ್ಜಿಯಲ್ಲಿ ತಿಳಿಸಿದ್ದರು.
ಪತಿ ತನ್ನ ಹೆಂಡತಿಯನ್ನು ಕೇವಲ 'ಆದಾಯದ ಸಾಧನ'ವಾಗಿ ಪರಿಗಣಿಸುವುದು ಮಾನಸಿಕ ಕ್ರೌರ್ಯ:- ಕರ್ನಾಟಕ ಹೈಕೋರ್ಟ್
ಹೈಕೋರ್ಟ್ ಚಾಟಿ:
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜಾಗದ ಮಾಲೀಕತ್ವ ಮತ್ತು ಹಕ್ಕುಪತ್ರದ ಕುರಿತು ವಿವಾದ ಉದ್ಭವಿಸಿದರೆ ಪ್ರಕರಣವನ್ನು ಭೂ ಸ್ವಾಧೀನ ಕಾಯ್ದೆ-1894ರ ಸೆಕ್ಷನ್ 30 ಮತ್ತು 31ರ ಪ್ರಕಾರ ಸಂಬಂಧಪಟ್ಟಸಿವಿಲ್ ನ್ಯಾಯಾಲಯದ ವಿಚಾರಣೆಗೆ ಶಿಫಾರಸು ಮಾಡಬೇಕು. ಸಿವಿಲ್ ಕೋರ್ಟ್ ಆದೇಶದನ್ವಯ ಸೂಕ್ತ ವ್ಯಕ್ತಿಗೆ ಪರಿಹಾರ ಪಾವತಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಕಂದಾಯ ಇಲಾಖೆ ಅರ್ಜಿದಾರರ ಜಾಗ ವಶಪಡಿಸಿಕೊಂಡಿದೆ. ಈ ವಿಚಾರ ಅರ್ಜಿದಾರರಿಗೇ ತಿಳಿದಿಲ್ಲ. ಅರ್ಜಿದಾರರಿಗೆ ಪಾವತಿಸಬೇಕಾದ ಪರಿಹಾರ ಮೊತ್ತವನ್ನು ಮತ್ತೊಬ್ಬರ ವ್ಯಕ್ತಿ ಪಾವತಿಸಲಾಗಿದೆ. ಅವರು ಪರಿಹಾರ ಸ್ವೀಕರಿಸಲು ಅರ್ಹರಾಗಿಲ್ಲ ಎಂದು ಖಾರವಾಗಿ ನುಡಿದಿದೆ.
ಜಮೀನು ಮಾಲೀಕತ್ವದ ವಿಚಾರವನ್ನು ಇದೀಗ ಸಿವಿಲ್ ನ್ಯಾಯಾಲಯದ ವಿಚಾರಣೆ ಶಿಫಾರಸು ಮಾಡಲಾಗುವುದು. ನ್ಯಾಯಾಲಯದಲ್ಲಿ ಅರ್ಜಿದಾರರು ಯಶಸ್ವಿಯಾದರೆ ಆಗ ಪರಿಹಾರ ಸ್ವೀಕರಿಸಿರುವ ವ್ಯಕ್ತಿಯಿಂದ ಹಣ ವಸೂಲಿ ಮಾಡಿ ಅರ್ಜಿದಾರರಿಗೆ ಮಾಡಲಾಗುವುದು ಎಂಬ ಕೆಐಎಡಿಬಿ ವಾದವನ್ನು ಒಪ್ಪಲಾಗದು ಎಂದು ಹೈಕೋರ್ಟ್ ಕಟುವಾಗಿ ಹೇಳಿದೆ.