ದಕ್ಷಿಣ ಪೆನ್ನಾರ್‌ ಜಲ ವಿವಾದ ಇತ್ಯರ್ಥಕ್ಕೆ ನ್ಯಾಯಾಧಿಕರಣ ಬೇಡ: ಸಚಿವ ಡಿ.ಕೆ.ಶಿವಕುಮಾರ್‌

Published : Jul 01, 2023, 11:16 AM IST
ದಕ್ಷಿಣ ಪೆನ್ನಾರ್‌ ಜಲ ವಿವಾದ ಇತ್ಯರ್ಥಕ್ಕೆ ನ್ಯಾಯಾಧಿಕರಣ ಬೇಡ: ಸಚಿವ ಡಿ.ಕೆ.ಶಿವಕುಮಾರ್‌

ಸಾರಾಂಶ

ದಕ್ಷಿಣ ಪೆನ್ನಾರ್‌ ಜಲಾನಯನ ನೀರು ಶುದ್ಧೀಕರಣ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿರುವ ದೂರಿನಲ್ಲಿ ಸ್ಪಷ್ಟತೆ ಇಲ್ಲ. ಅಲ್ಲದೆ, ತೀರ್ಪಿಗೆ ಅಗತ್ಯವಿರುವ ಯಾವುದೇ ನಿರ್ದಿಷ್ಟ ಜಲವಿವಾದಗಳನ್ನು ಬಹಿರಂಗಪಡಿಸಲು ಅದು ವಿಫಲವಾಗಿದೆ ಎಂದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌

ನವದೆಹಲಿ(ಜು.01):  ದಕ್ಷಿಣ ಪೆನ್ನಾರ್‌ (ದಕ್ಷಿಣ ಪಿನಾಕಿನಿ) ಜಲಾನಯನ ನೀರು ಶುದ್ಧೀಕರಣ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕೆ ನ್ಯಾಯಾಧೀಕರಣ ರಚಿಸಬೇಕು ಎಂಬ ತಮಿಳುನಾಡು ವಾದಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿದೆ. ಯೋಜನೆ ಸಂಬಂಧ ತಮಿಳುನಾಡು ಎತ್ತಿರುವ ಆಕ್ಷೇಪಗಳ ಕುರಿತು ಚರ್ಚಿಸಿ, ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದೆ.

ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯಲ್ಲಿ ಶುಕ್ರವಾರ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ದಕ್ಷಿಣ ಪೆನ್ನಾರ್‌ ಜಲಾನಯನ ನೀರು ಶುದ್ಧೀಕರಣ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿರುವ ದೂರಿನಲ್ಲಿ ಸ್ಪಷ್ಟತೆ ಇಲ್ಲ. ಅಲ್ಲದೆ, ತೀರ್ಪಿಗೆ ಅಗತ್ಯವಿರುವ ಯಾವುದೇ ನಿರ್ದಿಷ್ಟ ಜಲವಿವಾದಗಳನ್ನು ಬಹಿರಂಗಪಡಿಸಲು ಅದು ವಿಫಲವಾಗಿದೆ ಎಂದರು.

ಮಹದಾಯಿ ವಿಚಾರವಾಗಿ ಕರ್ನಾಟಕದ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಂತ ಗೋವಾ-ಮಹಾರಾಷ್ಟ್ರ

ಕರ್ನಾಟಕದ ಕುಡಿಯುವ ನೀರಿನ ಯೋಜನೆಗಳು ಕಾನೂನಿನ ಪ್ರಕಾರ ಹೆಚ್ಚಿನ ಆದ್ಯತೆಯನ್ನು ಹೊಂದಿವೆ ಮತ್ತು ಯಾವುದೇ ಒಪ್ಪಂದಗಳಿಗೆ ಒಳಪಡುವುದಿಲ್ಲ ಎಂದರು. ಈ ವೇಳೆ, ಸುಪ್ರೀಂಕೋರ್ಚ್‌ನ ಹಿಂದಿನ ತೀರ್ಪನ್ನು ಉಲ್ಲೇಖಿಸಿದ ಡಿಸಿಎಂ, ನದಿ ತೀರದ ರಾಜ್ಯಗಳ ಮೂಲಕ ಹಾದು ಹೋಗುವ ಅಂತಾರಾಜ್ಯ ನದಿಯ ನೀರು ರಾಷ್ಟ್ರೀಯ ಆಸ್ತಿಯಾಗಿದೆ. ಯಾವುದೇ ರಾಜ್ಯ ಇವುಗಳ ಮೇಲೆ ವಿಶೇಷ ಮಾಲೀಕತ್ವವನ್ನು ಪಡೆಯಲು ಅಥವಾ ಇತರ ರಾಜ್ಯಗಳ ಸಮಾನ ಪಾಲನ್ನು ಕಸಿದುಕೊಳ್ಳುವ ವಿಧಿಬದ್ಧ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಿಲ್ಲ. ತಮಿಳುನಾಡಿನ ಜಲವಿವಾದದ ಹಕ್ಕುಗಳಿಗೆ ಕರ್ನಾಟಕ ಸರ್ಕಾರ ಸ್ಪಂದಿಸುತ್ತದೆ. ಹೀಗಾಗಿ, ತರಾತುರಿಯಲ್ಲಿ ನ್ಯಾಯಾಧೀಕರಣವನ್ನು ರಚಿಸಬೇಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.

ಈ ಸಂಬಂಧ ಹೊಸ ಮಾತುಕತೆಗಳನ್ನು ಪ್ರಾರಂಭಿಸಲು ಮತ್ತು ತಮಿಳುನಾಡು ಎತ್ತಿರುವ ಜಲ ವಿವಾದಗಳನ್ನು ಇತ್ಯರ್ಥಗೊಳಿಸಲು 12 ವಾರಗಳ ಕಾಲಾವಕಾಶವನ್ನು ಕೋರಿ ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಗಡಿ ವಿವಾದ ಬಳಿಕ, ಮಹದಾಯಿ ವಿಚಾರದಲ್ಲೂ 'ಮಹಾ'ಪುಂಡಾಟ: ಗೋವಾಗೆ ಸಿಎಂ ಶಿಂದೆ ಸಾಥ್‌

ಮಾತುಕತೆ ವೇಳೆ, ಮೇಕೆದಾಟು ಸೇರಿದಂತೆ ರಾಜ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಬೆಂಬಲದ ಅಗತ್ಯವಿರುವ ಹಲವಾರು ಯೋಜನೆಗಳ ಕುರಿತು ಪ್ರಸ್ತಾಪಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರು.ಘೋಷಿಸಿದ್ದಕ್ಕಾಗಿ ಕೇಂದ್ರಕ್ಕೆ ಕೃತಜ್ಞತೆ ಸಲ್ಲಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ಕೃಷ್ಣಾ ಜಲವಿವಾದ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಪ್ರಕಟಿಸಬೇಕು. ಕಳಸಾ ಮತ್ತು ಬಂಡೂರ ನಾಲಾ ತಿರುವು ಯೋಜನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾಗಿ ಅವರು ತಿಳಿಸಿದರು.

ವಿವಾದವೇನು?

ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲಿ ಉಗಮಿಸುವ ದಕ್ಷಿಣ ಪೆನ್ನಾರ್‌ (ದಕ್ಷಿಣ ಪಿನಾಕಿನಿ) ನದಿ ಕಣಿವೆ ಭಾಗದಲ್ಲಿ ಕರ್ನಾಟಕ ಕೆಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗಳಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣ ತಗ್ಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಯೋಜನೆಗಳ ಜಾರಿಗೆ ತಡೆ ನೀಡುವಂತೆ ಕೋರಿ ತಮಿಳುನಾಡು ಸುಪ್ರೀಂಕೋರ್ಚ್‌ ಮೊರೆ ಹೋಗಿದೆ. ವ್ಯಾಜ್ಯ ಇತ್ಯರ್ಥಕ್ಕೆ ನ್ಯಾಯಾಧೀಕರಣ ರಚಿಸಬೇಕು ಎಂಬುದು ತಮಿಳುನಾಡಿನ ವಾದ. ಕೇಂದ್ರ ಕೂಡ ನ್ಯಾಯಾಧೀಕರಣ ರಚನೆಗೆ ಒಲವು ತೋರಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ