ವರ್ಷಾಂತ್ಯಕ್ಕೆ ಹಳದಿ ಮೆಟ್ರೋ ಓಪನ್, ಇನ್ಫೋಸಿಸ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಹೈಟೆಕ್ ಸೌಲಭ್ಯ!

By Gowthami K  |  First Published Jul 24, 2024, 6:49 PM IST

ಹಳದಿ ಮಾರ್ಗ ಮೆಟ್ರೋ ಈ ವರ್ಷದ ಅಂತ್ಯಕ್ಕೆ ಓಪನ್ ಆಗಲಿದ್ದು, ಕೋನಪ್ಪನ ಅಗ್ರಹಾರ ಇನ್ಫೋಸಿಸ್ ನಿಲ್ದಾಣಕ್ಕೆ ಹೈಟೆಕ್‌ ಟಚ್‌ ನೀಡಲಾಗಿದೆ. ಏನೆಲ್ಲಾ ಸೌಲಭ್ಯವಿದೆ ಎಂಬ ಮಾಹಿತಿ ಇಲ್ಲಿದೆ.


ಈ ವರ್ಷಾಂತ್ಯದ ವೇಳೆಗೆ ಅಂದರೆ ಡಿಸೆಂಬರ್ ನಲ್ಲಿ ಹಳದಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಲೆಕ್ಟ್ರಾನಿಕ್ಸ್ ಸಿಟಿಯ ಟೆಕ್ ಹಬ್‌ನಲ್ಲಿರುವ ಇನ್ಫೋಸಿಸ್ ಫೌಂಡೇಶನ್ ಅನುದಾನಿತ ಕೋನಪ್ಪನ ಅಗ್ರಹಾರ ನಿಲ್ದಾಣವು ಕೂಡ ಇದೇ ಮಾರ್ಗದಲ್ಲಿ ಇರುವುದರಿಂದ ಟೆಕ್ಕಿಗಳಿಗೆ ಒಂದು ಸುಂದರ ಅನುಭವ ಆಗಲಿದೆ. 

ಇನ್ಫೋಸಿಸ್ ಕ್ಯಾಂಪಸ್‌ಗೆ ನೇರ ಪ್ರವೇಶ ಪಡೆಯುವ ನಿಲ್ದಾಣ ಇದಾಗಿದ್ದು, ಪ್ಲಾಟ್‌ಫಾರ್ಮ್ ಪರದೆಯ ಗೇಟ್‌ಗಳು, ಕಲಾತ್ಮಕವಾಗಿ ಇದನ್ನು ಮಾಡಲಾಗಿದೆ. ವಸ್ತುಪ್ರದರ್ಶನಗಳಿಗೆ ಸ್ಥಳಾವಕಾಶದಂತಹ ಸೌಲಭ್ಯಗಳನ್ನು ಇಲ್ಲಿ ನೀಡಲಾಗಿದೆ. ಈ ನಿಲ್ದಾಣವು ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನಿಂದ ಹಸಿರು ನಿಲ್ದಾಣ ಎಂಬ ಮನ್ನಣೆ ಪಡೆಯುವ ಸಾಧ್ಯತೆ ಇದೆ.

Tap to resize

Latest Videos

undefined

ಬೆಂಗಳೂರಿಗರಿಗೆ ಸಂತಸದ ಸುದ್ದಿ, ಡಿಸೆಂಬರ್‌ಗೆ ಹಳದಿ ಮೆಟ್ರೋ ಸೇವೆ ಬಹುತೇಕ ನಿಶ್ಚಿತ

ಇಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ (ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕಿಸುವ ಹಳದಿ ಮಾರ್ಗ) ಡಿಸೆಂಬರ್ 2024 ರ ವೇಳೆಗೆ ಬಹುತೇಕ ಓಪನ್ ಆಗಲಿದೆ. ಇನ್ಫೋಸಿಸ್ ಫೌಂಡೇಶನ್ ನಿಲ್ದಾಣಕ್ಕೆ 115 ಕೋಟಿ ರೂಪಾಯಿಗಳನ್ನು ನೀಡಿದೆ. ಇದರಲ್ಲಿ ನಿಲ್ದಾಣ ನಿರ್ಮಾಣಕ್ಕೆ 100 ಕೋಟಿ ರೂ ಮತ್ತು ಪ್ಲಾಟ್‌ಫಾರ್ಮ್ ಸ್ಕ್ರೀನ್ ಗೇಟ್‌ಗಳ ಸ್ಥಾಪನೆಗೆ  15 ಕೋಟಿ ರೂ. ಆಗಿದೆ. ಈ  ನಿಲ್ದಾಣದಲ್ಲಿ ಅಂದಾಜು ಪ್ರತಿದಿನ 18,000-20,000 ಜನರು ಬರುವ ನಿರೀಕ್ಷೆ ಇದೆ. ಮಾತ್ರವಲ್ಲ ಹಳದಿ ಮಾರ್ಗದಲ್ಲಿ ಪ್ರತೀ ದಿನ ಓಡಾಡುವ ಸವಾರರು 1.75 ರಿಂದ 2 ಲಕ್ಷ ಆಗುವ ಸಾಧ್ಯತೆಯಿದೆ ಎಂದು BMRCL ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ಹೇಳಿದ್ದಾರೆ.

ಸುಮಾರು 15,000-20,000 ಟೆಕ್ಕಿಗಳು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಇನ್ಫೋಸಿಸ್‌ನ 81-ಎಕರೆ ಹಸಿರು ಕ್ಯಾಂಪಸ್‌ನಲ್ಲಿ ಕೆಲಸ ಮಾಡುತ್ತಾರೆ.ಇನ್ಫೋಸಿಸ್ ಫೌಂಡೇಶನ್ 30 ವರ್ಷಗಳ ಅವಧಿಗೆ ನಿಲ್ದಾಣದ ನಿರ್ವಹಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು  ವಹಿಸಿಕೊಂಡಿದೆ.

ನೀಟ್‌ ರದ್ದು ಮಾಡಿ ತನ್ನದೇ ಪರೀಕ್ಷೆಗೆ ಮುಂದಾದ ಕರ್ನಾಟಕ, ಮರು ಪರೀಕ್ಷೆಗೆ ಸುಪ್ರೀಂ ನಿರಾಕರಣೆ

ಅರ್ಧ ಎತ್ತರದ ಪ್ಲಾಟ್‌ಫಾರ್ಮ್ ಸ್ಕ್ರೀನ್ ಗೇಟ್‌ಗಳನ್ನು ಹೊಂದಿರುವ ಬೆಂಗಳೂರಿನ ಮೊದಲ ಮೆಟ್ರೋ ನಿಲ್ದಾಣ ಇದಾಗಿದೆ. ಕೋನಪ್ಪನ ಅಗ್ರಹಾರ ನಿಲ್ದಾಣದಲ್ಲಿ ಎರಡು ಅಡಿ ಮೇಲ್ಸೇತುವೆಗಳಿರುತ್ತವೆ. ಒಂದು ಪ್ರಯಾಣಿಕರಿಗೆ ಅದು ಇರುವ ಹೊಸೂರು ರಸ್ತೆಯನ್ನು ದಾಟಲು ಅನುವು ಮಾಡಿಕೊಡುತ್ತದೆ, ಮತ್ತು ಇನ್ನೊಂದು ಇನ್ಫೋಸಿಸ್ ಕ್ಯಾಂಪಸ್‌ಗೆ ತೆರಳಲು 372 ಮೀಟರ್ ದೂರದ ಲಿಂಕ್ ಆಗಿರುತ್ತದೆ.

ಈ ನಿಲ್ದಾಣವನ್ನು ನವದೆಹಲಿ ಮೂಲದ SYSTRA ವಿನ್ಯಾಸಗೊಳಿಸಿದೆ ಮತ್ತು ಶೋಭಾ ಡೆವಲಪರ್‌ಗಳು ವಾಸ್ತುಶಿಲ್ಪವನ್ನು ಪೂರ್ಣಗೊಳಿಸುವ ಕೆಲಸವನ್ನು ನಿರ್ವಹಿಸಿದ್ದಾರೆ. ನಿಲ್ದಾಣವು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ವಾಕ್‌ವೇಗಳು, ಬಸ್ ಶೆಲ್ಟರ್‌ಗಳು, ಸಾರ್ವಜನಿಕ ಮಾಹಿತಿ ವ್ಯವಸ್ಥೆಗಳು, ವಾಶ್‌ರೂಮ್‌ಗಳು, ಕುಡಿಯುವ ನೀರು ಇತ್ಯಾದಿ ಅತ್ಯುತ್ತಮ ಸೌಲಭ್ಯಗಳನ್ನು ಇದು ಹೊಂದಿದೆ. ಕೋನಪ್ಪನ ಅಗ್ರಹಾರ ನಿಲ್ದಾಣವು ಪಾರ್ಕಿಂಗ್ ಸೌಲಭ್ಯ ಹೊಂದಿಲ್ಲ. ಆದರೆ ಫೀಡರ್ ಬಸ್‌ ಸೇವೆ ಲಭ್ಯವಿದೆ. ಬಸ್ ಬೇಗಳು ಮತ್ತು ಆಟೋ ರಿಕ್ಷಾಗಳು ಮತ್ತು ಕ್ಯಾಬ್‌ಗಳಿಗೆ ಪಿಕ್-ಅಪ್ ಪಾಯಿಂಟ್‌ ಗಳು ಕೂಡ ಇಲ್ಲಿದೆ.

ಈ ನಿಲ್ದಾಣವನ್ನು  ಒಟ್ಟು 10,185 ಚದರ ಮೀಟರ್‌ ನಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಇನ್ಫೋಸಿಸ್ ಫೌಂಡೇಶನ್‌ಗೆ 3,000 ಚದರ ಅಡಿಗಳನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿಲ್ದಾಣದಲ್ಲಿ ಸೌರಶಕ್ತಿಯಿಂದ ದೀಪಾಲಂಕಾರ ಇರಲಿದೆ. ನಿಲ್ದಾಣದ ಮೇಲ್ಛಾವಣಿಯಲ್ಲಿ ಸೌರಫಲಕ ನಿರ್ಮಾಣ ಮಾಡಲಾಗಿದೆ.

ರೈಲು ಕಾರ್ಯಾಚರಣೆ ಹೊರತುಪಡಿಸಿ ಇನ್ನಿತರ ಮೂಲಗಳಿಂದ ಆದಾಯ ಗಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ, ಮೆಟ್ರೋ ನಿಲ್ದಾಣಗಳಿಗೆ ಕಡಿಮೆ ಅವಧಿಗೆ ಕಾರ್ಪೋರೆಟ್ ಕಂಪನಿಗಳ ನಾಮಕರಣ ಮಾಡುವ ಸಂಬಂಧ ಒಪ್ಪಂದ ಮಾಡಿಕೊಳ್ಳಲು ಚಿಂತನೆ ನಡೆಸಿತ್ತು. ಸದ್ಯ ಬಿಎಂಆರ್‌ಸಿಎಲ್‌ ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಣ ಹಳದಿ ಮಾರ್ಗದ ಮೂರು ಮೆಟ್ರೋ ನಿಲ್ದಾಣಗಳಿಗೆ ಮೂರು ಕಂಪನಿಗಳ ಜೊತೆ 30 ವರ್ಷಗಳ ಕಾಲ ನಾಮಕರಣ ಸಂಬಂಧ 75 ರಿಂದ 115 ಕೋಟಿ ರುಪಾಯಿವರೆಗೆ ಒಪ್ಪಂದ ಮಾಡಿಕೊಂಡಿದೆ.

ಅದರಲ್ಲಿ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣವನ್ನು ಇನ್ಫೋಸಿಸ್‌ ಫೌಂಡೇಶನ್‌ ನಾಮಕರಣಕ್ಕೆ , ಹೆಬ್ಬಗೋಡಿ ಮೆಟ್ರೋ ಸ್ಟೇಷನ್‌ಗೆ ಬಯೋಕಾನ್‌ ಫೌಂಡೇಶನ್‌ ₹65 ಕೋಟಿ, ಬೊಮ್ಮಸಂದ್ರ ಮೆಟ್ರೋ ಸ್ಟೇಷನ್‌ಗೆ ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಫೌಂಡೇಶನ್‌ ₹75 ಕೋಟಿ ಮೊತ್ತದ ನಾಮಕರಣ ಒಪ್ಪಂದ ಮಾಡಿಕೊಂಡಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಅವಧಿಯಲ್ಲಿ 2019ರಲ್ಲಿ  ಎಲೆಕ್ಟ್ರಾನಿಕ್‌ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ಕಾಮಗಾರಿ ಕೈಗೊಳ್ಳಲು ಇಸ್ಫೋಸಿಸ್‌ ಪ್ರತಿಷ್ಠಾನ  200 ಕೋಟಿ ದೇಣಿಗೆ ನೀಡಿತ್ತು. ಕೋನಪ್ಪನ ಅಗ್ರಹಾರದ ಮೆಟ್ರೋ ನಿಲ್ದಾಣವನ್ನು ಅತ್ಯಾಧುನಿಕವಾಗಿ ನಿರ್ಮಿಸಿ, ಮುಂದಿನ 30 ವರ್ಷಗಳ ಕಾಲ ಅದರ ನಿರ್ವಹಣೆಯನ್ನು ಇಸ್ಫೋಸಿಸ್‌ ಸಂಸ್ಥೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು.

click me!