ರಾಜ್ಯದಲ್ಲಿ ಶೀಘ್ರ ನಿತ್ಯ 75 ಸಾವಿರ ಕೋವಿಡ್‌ ಟೆಸ್ಟ್‌: ಸಚಿವ ಸುಧಾಕರ್‌

By Kannadaprabha NewsFirst Published Aug 12, 2020, 10:24 AM IST
Highlights

ಆಕ್ಸಿಜನ್‌ ಸಹಿತ ಹಾಸಿಗೆ ಸೌಲಭ್ಯವನ್ನು 20 ಸಾವಿರಕ್ಕೆ ಹೆಚ್ಚಳ ಉದ್ದೇಶ| ರಾಜ್ಯ ಸರ್ಕಾರದಿಂದ ಪ್ರಧಾನಿ ಮೋದಿಗೆ ಮಾಹಿತಿ| ಕೊರೋನಾ ನಿಯಂತ್ರಣಕ್ಕೆ ರಾಜ್ಯದ ಸರ್ಕಾರದಿಂದ ಸಕಲ ಕ್ರಮ| ಪ್ರಧಾನಿಗೆ ಡಾ. ಅಶ್ವತ್ಥನಾರಾಯಣ, ಸುಧಾಕರ್‌ ವಿವರಣೆ|

ಬೆಂಗಳೂರು(ಆ.12):  ರಾಜ್ಯದಲ್ಲಿ ಪ್ರಸ್ತುತ ಕೊರೋನಾ ಸೋಂಕು ಪರೀಕ್ಷೆಯನ್ನು ನಿತ್ಯ 20 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ 75 ಸಾವಿರಕ್ಕೆ ಹೆಚ್ಚಿಸಲು ಹಾಗೂ ಸೆಪ್ಟೆಂಬರ್‌ ಅಂತ್ಯಕ್ಕೆ ಆಕ್ಸಿಜನ್‌ ಸಹಿತ ಹಾಸಿಗೆ ಸೌಲಭ್ಯವನ್ನು 20 ಸಾವಿರಕ್ಕೆ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದೆ.

ಕೊರೋನಾ ಸೋಂಕು ನಿಯಂತ್ರಣ ಸಂಬಂಧ ರಾಜ್ಯ ಕೈಗೊಂಡ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವಿಡಿಯೋ ಸಂವಾದದಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ವೈದ್ಯಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ವಿವರ ನೀಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಸುಧಾಕರ್‌, ಕಳೆದ ಮಾಚ್‌ರ್‍ನಲ್ಲಿ ಕೇವಲ ಎರಡು ಪ್ರಯೋಗಾಲಯ ಇದ್ದವು. ಈಗ ರಾಜ್ಯಾದ್ಯಂತ 100 ಪ್ರಯೋಗಾಲಯ ಸ್ಥಾಪಿಸಲಾಗಿದೆ. ರಾಜ್ಯಾದ್ಯಂತ ಬೂತ್‌ ಮಟ್ಟದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಈ ತಂಡಗಳಿಗೆ ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ನಿಗಾ, ಸೋಂಕಿನ ಬಗ್ಗೆ ಅರಿವು ಮೂಡಿಸುವ, ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ, ವಿವಿಧ ರೋಗ ಲಕ್ಷಣ ಇರುವವರ ಮನೆ ಮನೆ ಸಮೀಕ್ಷೆ ಮಾಡುವ ಜವಾಬ್ದಾರಿಯನ್ನು ಈ ತಂಡಗಳಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ 8150 ತಂಡ ರಚನೆ ಮಾಡಲಾಗಿದ್ದು, ಎಂಟು ವಲಯವಾರು ರಚಿಸಿ ಮಂತ್ರಿಗಳು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಈ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ಪ್ರಧಾನಿಗೆ ವಿವರಿಸಲಾಯಿತು ಎಂದು ಹೇಳಿದರು.

ಕೊರೋನಾ ಕರ್ತವ್ಯಕ್ಕೆ ಗೈರು, ಸಿಬ್ಬಂದಿಗೆ ನೋಟಿಸ್‌ ಜಾರಿ: ಡಿಸಿಎಂ ಅಶ್ವತ್ಥನಾರಾಯಣ

ಲಕ್ಷಣ ರಹಿತ ಮತ್ತು ಕಡಿಮೆ ಲಕ್ಷಣ ಹೊಂದಿರುವವರಿಗೆ ಸೌಲಭ್ಯವಿದ್ದರೆ ಮನೆಗಳಲ್ಲಿ ಆರೈಕೆ ಮಾಡಲಾಗುವುದು. ಮನೆಗೆ ಭೇಟಿ ಹಾಗೂ ಟೆಲಿ ಮಾನಿಟರಿಂಗ್‌ ಮೂಲಕ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. 43 ಖಾಸಗಿ ವೈದ್ಯಕೀಯ ಕಾಲೇಜು, 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೇವೆ ಕಲ್ಪಿಸಲಾಗಿದೆ. ಈ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ರಷ್ಟು ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸಲಾಗಿದೆ ಎಂದರು.

ಸರ್ಕಾರದ ಶಿಫಾರಸಿನ ಮೇರೆಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಆಯುಷ್ಮಾನ ಭಾರತ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗಳ ಮೂಲಕ ಭರಿಸಲಾಗುವುದು. ಅಷ್ಟೇ ಅಲ್ಲ ಚಿಕಿತ್ಸಾ ವೆಚ್ಚವನ್ನು ಸರ್ಕಾರ ನಿಗದಿಪಡಿಸಲಾಗಿದೆ. ಕೇಂದ್ರೀಕೃತ ಹಾಸಿಗೆ ನಿರ್ವಹಣೆ ವ್ಯವಸ್ಥೆ ಸ್ಥಾಪಿಸುವ ಮೂಲಕ ಯಾವ ಆಸ್ಪತ್ರೆಯಲ್ಲಿ ಎಷ್ಟುಹಾಸಿಗೆ ಖಾಲಿ ಇದೆ ಎಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಕಂಟೈನ್ಮೆಂಟ್‌ ಹಾಗೂ ಬಫರ್‌ ವಲಯಗಳಲ್ಲಿ ಪರೀಕ್ಷೆಗೆ 1300 ಸಂಚಾರಿ ಪ್ರಯೋಗಾಲಯ ನಿಯೋಜಿಸಲಾಗಿದೆ. ಬೇರೆ ಕೇಂದ್ರಗಳಲ್ಲಿ ಒಟ್ಟು 1,04,000 ಹಾಸಿಗೆಗಳಿವೆ ಇದರ ಜೊತೆಗೆ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ 10,100 ಸಾಮರ್ಥ್ಯ ಕೋವಿಡ್‌ ಆರೈಕೆ ಕೇಂದ್ರ ಆರಂಭಿಸಲಾಗಿದೆ. ಆಂಬುಲೆನ್ಸ್‌ಗಳ ಸಂಖ್ಯೆಯನ್ನು 800 ರಿಂದ ಎರಡು ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವರು ವಿವರಿಸಿದರು.

6.65 ಕೋಟಿ ರು. ದಂಡ:

ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಮಾಸ್ಕ್‌ ಧರಿಸದ, ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗಿದೆ. ಈವರೆಗೆ ಎರಡು ಲಕ್ಷಕ್ಕಿಂತ ಹೆಚ್ಚು ಪ್ರಕರಣ ದಾಖಲಿಸಿ 6.65 ಕೋಟಿ ರು. ದಂಡ ವಸೂಲಿ ಮಾಡಲಾಗಿದೆ.ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದವರ ವಿರುದ್ಧ 5831 ಎಫ್‌ಐಆರ್‌ ಪ್ರಕರಣ ದಾಖಲಾಗಿದೆ. 5.7 ಲಕ್ಷ ಜನರಿಗೆ ಎಚ್ಚರಿಕೆ ನೀಡಲಾಗಿದೆ. 3246 ಮಂದಿಯನ್ನು ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಕೋವಿಡ್‌ ಆರೈಕೆ ಕೇಂದ್ರದಲ್ಲಿ 1.14 ಲಕ್ಷ ಹಾಸಿಗೆ. 20 ಸಾವಿರ ಸಾಮಾನ್ಯ ಹಾಸಿಗೆ, ಎಂಟು ಸಾವಿರ ಆಕ್ಸಿಜನ್‌ ಹಾಸಿಗೆ, ಮೂರು ಸಾವಿರ ಐಸಿಯು ಹಾಸಿಗೆ, ಒಂದೂವರೆ ಸಾವಿರ ವೆಂಟಿಲೇಟರ್‌ ಹಾಸಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಮರಣ ಪ್ರಮಾಣ ಕಡಿಮೆ ಉದ್ದೇಶ:

ಇಡೀ ಜಗತ್ತಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿತರ ಮರಣ ಪ್ರಮಾಣ ಶೇ. 1.99 ರಷ್ಟುಇದ್ದು, ಕರ್ನಾಟಕದಲ್ಲಿ ಶೇ. 1.8 ರಷ್ಟುಇದೆ. ಬೆಂಗಳೂರಿನಲ್ಲಿ ಶೇ. 1.7 ರಷ್ಟುಇದೆ. ಈ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಪ್ರಧಾನಿಗಳಿಗೆ ವಿವರಿಸಲಾಯಿತು ಎಂದು ಸಚಿವರು ತಿಳಿಸಿದರು.

ಸೋಂಕಿತರನ್ನು ಕಳಂಕಿತರಂತೆ ನೋಡಬೇಡಿ: ಸುಧಾಕರ್‌

ಕೊರೋನಾ ನಿಯಂತ್ರಣಕ್ಕೆ ವೈದ್ಯ ವಿದ್ಯಾರ್ಥಿಗಳ ನೀಡಿ

ರಾಜ್ಯದಲ್ಲಿ ವೈದ್ಯ ಪದವಿ ಕೋರ್ಸ್‌ಗಳು ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಹಾಗೂ ಅಂತಿಮ ವರ್ಷದ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ಕೋವಿಡ್‌ ನಿಯಂತ್ರಣ ಚಟುವಟಿಕೆಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದೆ.

ಕೋವಿಡ್‌ನಿಂದಾಗಿ ಸದ್ಯ ಅಂತಿಮ ವರ್ಷದ ವೈದ್ಯಕೀಯ ಹಾಗೂ ಅರೇ ವೈದ್ಯಕೀಯ ಕೋರ್ಸ್‌ಗಳು ಆರಂಭವಾಗಿಲ್ಲ. ಈ ಕೋರ್ಸ್‌ಗೆ ಅನುಮತಿ ನೀಡಿದರೆ ಈ ವಿದ್ಯಾರ್ಥಿಗಳನ್ನು ಕೋವಿಡ್‌ ನಿಯಂತ್ರಣ ಸಂಬಂಧ ಬೇರೆ ರೀತಿಯ ಚಟುವಟಿಕೆಗಳನ್ನು ಬಳಸಲು ಅವಕಾಶ ಆಗುತ್ತದೆ. ಆದ್ದರಿಂದ ಕೋರ್ಸ್‌ ಆರಂಭಕ್ಕೆ ಅನುಮತಿ ನೀಡಬೇಕು ಎಂದು ಕೋರಲಾಯಿತು.

ಸದ್ಯ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ವರ್ಷ 10 ಸಾವಿರ ಪದವಿ ಹಾಗೂ ಎರಡು ಸಾವಿರ ಸ್ನಾತಕೋತ್ತರ ಸೀಟುಗಳಿಗೆ ಪ್ರವೇಶಾತಿ ನೀಡಲಾಗುತ್ತಿದ್ದು, ಈ ಸಂಖ್ಯೆಯನ್ನು ದುಪ್ಟಟ್ಟು ಮಾಡಬೇಕು.ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದ ನಂತರ ಎಲ್ಲ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಸಂಬಂಧ ಮಾರ್ಗಸೂಚಿ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.

ರೋಗಿಗಳಿಗೆ ಚಿಕಿತ್ಸೆ ನೀಡಲು ಲಿಕ್ವಿಡ್‌ ಆಕ್ಸಿಜನ್‌ ಅಗತ್ಯವಾಗಿರುತ್ತದೆ. ಸದ್ಯ ಗುಜರಾತ್‌ದಲ್ಲಿ ಲಿಕ್ವಿಡ್‌ ಆಕ್ಸಿಜನ್‌ ತಯಾರಿಸುವ ಘಟಕವಿದೆ. ಈ ಕಂಪನಿಗೆ ರಾಜ್ಯದಲ್ಲಿ ಇಂತಹ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಮನವಿ ಮಾಡಿಕೊಳ್ಳಲಾಗಿದೆ.

ಸಭೆಯಲ್ಲಿ ಭಾಗಿಯಾಗಿದ್ದ ತೆಲಂಗಾಣ ಮುಖ್ಯಮಂತ್ರಿಗಳು ಸಹ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರನ್ನು ನೀಡಲು ವೈದ್ಯ ಪದವಿ ಹಾಗೂ ಸ್ನಾತಕೋತ್ತರ ಸೀಟುಗಳ ಸಂಖ್ಯೆ ಹೆಚ್ಚಿಸುವಂತೆ ಮನವಿ ಮಾಡಿದರು. ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
 

click me!