ಪ್ರಕೃತಿ ಜತೆಗಿನ ಸಂಘರ್ಷದಲ್ಲಿ ಮಾನವ ಸೋಲಬೇಕು: ರಿಷಬ್‌ ಶೆಟ್ಟಿ

By Kannadaprabha News  |  First Published Mar 31, 2023, 3:40 AM IST

ಸ್ವಾತಂತ್ರ್ಯ ಬಂದ ಬಳಿಕ ಮಾನವ ಮತ್ತು ಪ್ರಕೃತಿ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಸಂಘರ್ಷದಲ್ಲಿ ಮಾನವ ಸೋಲಬೇಕು. ಆಗ ನಾವು ಉಳಿಯುತ್ತೇವೆ, ಭವಿಷ್ಯ ಗೆಲ್ಲುತ್ತದೆ ಎಂದು ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ ರಿಷಬ್‌ ಶೆಟ್ಟಿ ಅಭಿಪ್ರಾಯಪಟ್ಟರು. 


ಶಿವಮೊಗ್ಗ (ಮಾ.31): ಸ್ವಾತಂತ್ರ್ಯ ಬಂದ ಬಳಿಕ ಮಾನವ ಮತ್ತು ಪ್ರಕೃತಿ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಸಂಘರ್ಷದಲ್ಲಿ ಮಾನವ ಸೋಲಬೇಕು. ಆಗ ನಾವು ಉಳಿಯುತ್ತೇವೆ, ಭವಿಷ್ಯ ಗೆಲ್ಲುತ್ತದೆ ಎಂದು ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ, ಚಿತ್ರನಟ, ನಿರ್ದೇಶಕ, ‘ಕಾಂತಾರ’ ಚಲನಚಿತ್ರ ಖ್ಯಾತಿಯ ರಿಷಬ್‌ ಶೆಟ್ಟಿ ಅಭಿಪ್ರಾಯಪಟ್ಟರು. ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರು​ವಾರ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಹಾಗೂ ‘ಕನ್ನಡಪ್ರಭ’ ಸಂಸ್ಥೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಿರುವ ವನ್ಯಜೀವಿ ಸಂರಕ್ಷಣಾ ಅಭಿಯಾನ ಸೀಸನ್‌-4 ರ ಭಾಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವ​ರು ಮಾತನಾಡಿದ​ರು.

ಲಾಗಾಯ್ತಿನಿಂದಲೇ ಅರಣ್ಯಗಳನ್ನು ಸಂರಕ್ಷಿಸಿರುವುದು ಕಾಡಂಚಿನ ಜನರೇ. ಆದರೆ, ಬ್ರಿಟಿಷರು ಇಲ್ಲಿನ ಅರಣ್ಯ ಸಂಪತ್ತನ್ನು ತಮ್ಮ ದೇಶಕ್ಕೆ ಕೊಂಡೊಯ್ಯಲು ಅರಣ್ಯ ಸಂರಕ್ಷಣೆಗೆ ಕಾನೂನು ತಂದರು. ಸ್ವಾತಂತ್ರ್ಯಾ ನಂತರವೂ ಇದೇ ರೀತಿಯ ಕಾನೂನುಗಳು ಮುಂದುವರಿದವು. ಆದರೆ, ಅರಣ್ಯ ಇಲಾಖೆಯಿಂದಾಗಲಿ, ಕಾನೂನು ಮಾತ್ರದಿಂದಾಗಲಿ ಈ ಅರಣ್ಯವನ್ನು ಸಂರಕ್ಷಿಸಲು ಸಾಧ್ಯವಿಲ್ಲ. ಬದಲಾಗಿ ಇಲಾಖೆಯ ಜೊತೆಗೆ ಜನರೂ ತಮ್ಮ ಸಹಭಾಗಿತ್ವ ತೋರಿದಲ್ಲಿ ಮಾತ್ರ ಅರಣ್ಯ ಉಳಿಸಬಹುದು ಎಂದರು.

Tap to resize

Latest Videos

ಅರಣ್ಯಾಧಿಕಾರಿಗಳ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ: ರಿಷಬ್‌ ಶೆಟ್ಟಿ

ಶೇ.33ರಷ್ಟು ಇರಬೇಕಾದ ಅರಣ್ಯ ಶೇ.24ಕ್ಕೆ ಇಳಿದಿದೆ: ಉಂಬ್ಳೆಬೈಲು ಗ್ರಾಪಂ ಅಧ್ಯಕ್ಷೆ ಗೌರಮ್ಮ ಅವರು ಸಂವಾದದ ವೇಳೆ, ‘ಆನೆ ಹಾವಳಿಗೆ, ನೀರಿಲ್ಲದೆ ಬೆಳೆ ಸುಟ್ಟು ಹೋಗುವ ಸಮಸ್ಯೆಗೆ ಮೊದಲು ಪರಿಹಾರ ಹೇಳಿ’ ಎಂದಿದ್ದನ್ನು ಪ್ರಸ್ತಾಪಿಸಿದ ರಿಷಬ್‌ ಶೆಟ್ಟಿ, ಅವರ ಮಾತು ನಿಜ. ಆದರೆ ಶೇ.33ರಷ್ಟುಇರಬೇಕಾದ ಅರಣ್ಯವನ್ನು ಶೇ.24ಕ್ಕೆ ಇಳಿಸಿದ್ದೇವೆ. ಹೀಗಾಗಿ ಕಾಡಿನ ಪ್ರಾಣಿಗಳು ನಾಡಿಗೆ ಬರುತ್ತವೆ. ಈ ಸಂಘರ್ಷ ನಿರಂತವಾಗಿ ಇದ್ದೇ ಇರುತ್ತದೆ. ಕಾಡಂಚಿನ ಗ್ರಾಮಗಳಲ್ಲಿನ ಜನರ ಬದುಕು ಸ್ವರ್ಗ ಎಂದು ಪೇಟೆಯಲ್ಲಿ ಕುಳಿತ ಕೆಲವರು ಹೇಳುತ್ತಾರೆ. 

ಅವರು ಇಲ್ಲಿ ಬಂದು ಕೆಲಕಾಲ ಇದ್ದರೆ ಇಲ್ಲಿನ ವಾಸ್ತವ ಸಮಸ್ಯೆ ಅರ್ಥವಾಗುತ್ತದೆ. ಈ ಸಮಸ್ಯೆಗಳಿಗೆಲ್ಲಾ ಪರಿಹಾರ ಹುಡುಕಬೇಕು. ಹೀಗಾಗಿ, ನಾವು ಅಭಿಯಾನ ಪೂರ್ಣಗೊಳ್ಳುವ ಮೊದಲೇ ಮಧ್ಯಂತರ ವರದಿಯೊಂದನ್ನು ಸರ್ಕಾರಕ್ಕೆ ನೀಡಿದ್ದು, ಇದರಲ್ಲಿ 20 ಅಂಶಗಳನ್ನು ಪ್ರಸ್ತಾಪಿಸಿದ್ದೇವೆ. ರಾತ್ರಿ ವೇಳೆ ರೈತರ ಸಂಚಾರ ಕಡಿಮೆ ಮಾಡಲು ಹಗಲೇ ತ್ರಿಫೇಸ್‌ ವಿದ್ಯುತ್‌ ನೀಡುವುದು, ಎಲ್ಲರಿಗೂ ಶೌಚಾಲಯ ಕಡ್ಡಾಯಗೊಳಿಸುವುದು, ಬೆಳೆ ನಾಶಕ್ಕೆ ವೈಜ್ಞಾನಿಕ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದರೆ ಸಂಘರ್ಷಕ್ಕೊಂದು ಫುಲ್‌ಸ್ಟಾಪ್‌ ಹಾಕಲು ಸಾಧ್ಯ ಎಂದು ವಿವರಿಸಿದರು.

ಯಾವುದೋ ಕ್ಷಣ ಸಿಟ್ಟಿಗೆ ಬುದ್ಧಿ ನೀಡಿ, ಕಾಡಿನ ಬೆಂಕಿಗೆ ಯಾರೂ ಕಾರಣರಾಗಬಾರದು. ಒಂದು ಕ್ಷಣ ಬೂದಿಯಾದ ಕಾಡನ್ನು ಮತ್ತೆ ಸೃಷ್ಟಿಸಲು ಹಲವು ದಶಕಗಳೇ ಬೇಕಾಗುತ್ತದೆ. ಕೆಲವು ಬಾರಿ ಅರಣ್ಯ ಸಿಬ್ಬಂದಿ ಈ ಬೆಂಕಿಗೆ ಬಲಿಯಾದ ಉದಾಹರಣೆಗಳಿವೆ. ಕನಿಷ್ಠ ಕೂಲಿಗೆ ದುಡಿಯುವ ಅರಣ್ಯದ ವಾಚರ್‌ಗಳ ಕಷ್ಟವನ್ನು ನಾವು ನೆನೆಯಬೇಕು. ಅರಣ್ಯ ಉಳಿಸಲು ನಮ್ಮೆಲ್ಲ ಶಕ್ತಿಯನ್ನು ಧಾರೆ ಎರೆಯಬೇಕು ಎಂದು ಮನವಿ ಮಾಡಿದರು. ಹುಲಿ ಸಂರಕ್ಷಣೆ ಯೋಜನೆ ನಿರ್ದೇಶಕ ಪ್ರಭಾಕರನ್‌ ಮಾತನಾಡಿ, ಅರಣ್ಯ ಸಂರಕ್ಷಣೆಗೆ ಇಲಾಖೆ ಎಲ್ಲ ರೀತಿಯ ಕಾರ್ಯಕ್ರಮ ರೂಪಿಸುತ್ತಲೇ ಇರುತ್ತದೆ. ಆದರೆ, ಮಾಧ್ಯಮಗಳು ಮತ್ತು ಚಿತ್ರನಟರು ಈ ವಿಷಯ ಹೇಳಿದರೆ ಹೆಚ್ಚು ಜನರಿಗೆ ತಲುಪುತ್ತದೆ. ರಿಷಬ್‌ ಶೆಟ್ಟಿಅವರ ವರ್ಚಸ್ಸನ್ನು ಬಳಸಿಕೊಂಡು ‘ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ಈ ನಿಟ್ಟಿನಲ್ಲಿ ಮುನ್ನಡಿ ಇಟ್ಟಿರುವುದು ಶ್ಲಾಘನೀಯ ಎಂದರು.

ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌, ಶಿವಮೊಗ್ಗ ವಿಭಾಗದ ಡಿಎಫ್‌ಒ ಶಿವಶರಣಯ್ಯ, ಬಾಯರ್‌ ಕಾಫಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್‌ ರಾವ್‌, ಗ್ರಾ.ಪಂ.ಅಧ್ಯಕ್ಷೆ ಗೌರಮ್ಮ ಮಾತನಾಡಿದರು. ಉಂಬ್ಳೇಬೈಲು ಗ್ರಾಪಂಗೆ ‘ಅತ್ಯುತ್ತಮ ಅರಣ್ಯ ಸ್ನೇಹಿ ಪ್ರಶಸ್ತಿ’ಯನ್ನು ರಿಷಬ್‌ ಶೆಟ್ಟಿವಿತರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದ ಗ್ರಾಪಂನ ವಿವಿಧ ಶಾಲೆಗಳ ಮುಖ್ಯಸ್ಥರಿಗೆ ಪ್ರಶಂಸಾ ಪತ್ರ ನೀಡಲಾಯಿತು. ಗ್ರಾಪಂ ವತಿಯಿಂದ ರಿಷಬ್‌ ಶೆಟ್ಟಿಗೆ ಪೌರ ಸನ್ಮಾನ ಆಯೋಜಿಸಲಾಗಿತ್ತು.

ರಿಷಬ್‌ ಶೆಟ್ಟಿ ಸಿನಿ​ಮಾ​ಗ​ಳಲ್ಲಿ ಪರಿ​ಸರ ಕಾಳ​ಜಿ: ಪ್ರಾಸ್ತಾವಿಕ ಭಾಷಣ ಮಾಡಿದ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ಪತ್ರಿಕೆಯ ಸಮೂಹ ಸಂಪಾದಕ ರವಿ ಹೆಗಡೆ, ರಿಷಬ್‌ ಶೆಟ್ಟಿಯವರು ವಿಶಿಷ್ಟವ್ಯಕ್ತಿತ್ವದವರು. ಅವರು ಕೇವಲ ಅಲ್ಲಿ, ಇಲ್ಲಿ ಬಂದು ಅರಣ್ಯದ ಬಗ್ಗೆ ಭಾಷಣ ಮಾಡಿ ಹೋಗುವುದಿಲ್ಲ. ಬದಲಾಗಿ ತಮ್ಮ ವ್ಯಕ್ತಿತ್ವದಲ್ಲೇ ಇದನ್ನು ರೂಪಿಸಿಕೊಂಡಿದ್ದಾರೆ. ಸಿನಿಮಾ ಮಾಧ್ಯಮದ ಮೂಲಕ ಅರಣ್ಯ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಯತ್ನ ನಡೆಸಿದ್ದಾರೆ ಎಂದರು. ಪ್ರಕೃತಿ, ಮಾನವ ನಡುವಿನ ಸಂಘರ್ಷಕ್ಕೊಂದು ಪರಿಹಾರ ರೂಪಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. 

ಸಿನಿಮಾ ಮೂಲಕ ಪರಿಸರ ರಕ್ಷಣೆ ಜಾಗೃತಿ: ವಿಶ್ವಸಂಸ್ಥೆಯಲ್ಲಿ ರಿಷಬ್‌ ಶೆಟ್ಟಿ ಕರೆ

ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡಿದ ಹೆಗ್ಗಳಿಕೆ ಇವರದು. ಅಲ್ಲಿಯೂ ಪರಿಸರ ಸಂರಕ್ಷಣೆಯ ಕುರಿತೇ ಮಾತನಾಡಿದ್ದು ವಿಶೇಷ. ಇಂತಹ ಶ್ರೇಷ್ಠ ಕಲಾವಿದ ತಮ್ಮ ಸಿನಿಮಾವನ್ನು ದೇಶದ ಗಡಿ ದಾಟಿಸಿದ್ದಾರೆ. ‘ಕಾಂತಾರ’ ಮಾತ್ರವಲ್ಲ, ತಮ್ಮ ಹಿಂದಿನ ಸಿನಿಮಾಗಳಲ್ಲಿಯೂ ಪರಿಸರದ ಸಂಕಷ್ಟವನ್ನು ಎತ್ತಿ ಹಿಡಿದಿದ್ದಾರೆ ಎಂದರು. ‘ಸೂಪರ್‌ ಸ್ಟಾರ್‌’ಆದ ಬಳಿಕ ದಿನಕ್ಕೆ ಸುಮಾರು 200-300 ಕರೆಗಳು ಅವರಿಗೆ ಬರುತ್ತವೆ. ಕಾರ್ಯಕ್ರಮದಲ್ಲಿ ಭಾಗಿ ಆಗುವಂತೆ ವಿನಂತಿಸುತ್ತಾರೆ. ಆದರೆ ಇದನ್ನು ನಯವಾಗಿಯೇ ತಿರಸ್ಕರಿಸುವ ಇವರು ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಬಿಟ್ಟುಬಿಡಿ ಎಂದು ಕೇಳಿಕೊಳ್ಳುತ್ತಾರೆ. ಆದರೆ, ಪರಿಸರ ಸಂರಕ್ಷಣೆಯಂತಹ ಮಹತ್ವದ ಕಾರ್ಯಕ್ಕೆ ದೂರದ ಊರಿನಿಂದ ಬಿಡುವು ಮಾಡಿಕೊಂಡು ಇಲ್ಲಿಗೆ ಬಂದಿದ್ದಾರೆ. ಇದು ಅವರ ಬದ್ಧತೆ ಎಂದರು.

click me!