ಟಿಸಿಎಚ್ನಲ್ಲಿ ಶೇಕಡ 86 ಅಂಕದೊಂದಿಗೆ ತೇರ್ಗಡೆ ಆಗಿ, ಸರ್ಕಾರಿ ನೌಕರಿ ಪಡೆಯುವ ಅವಕಾಶವಿದ್ದರೂ ಆಯ್ಕೆ ಮಾಡಿಕೊಂಡಿದ್ದು ಕೃಷಿ. ಈಗ ಲಕ್ಷಾಧೀಶ್ವರನಾದ ವಿಚಾರ..
ರೈತ ರತ್ನ ಲೋಕೇಶ ನಾಯ್ಕ ಎಸ್.ಎನ್.
ವಿಭಾಗ: ಯುವ ರೈತ
ಊರು, ಜಿಲ್ಲೆ: ಸಾಸಲು (ಪಿ), ಶೆಟ್ಟಿಕೆರೆ(ಹೊ.) ಚಿಕ್ಕನಾಯಕನಹಳ್ಳಿ ತಾಲೂಕು, ತುಮಕೂರು ಜಿಲ್ಲೆ.
ತುಮಕೂರು (ಫೆ.12): ಓದಿದ್ದು ಟಿಸಿಎಚ್ (ಡಿ.ಎಡ್) ಆದರೂ ಕೃಷಿಯನ್ನು ಕುಸಬಾಗಿ ತೆಗೆದುಕೊಂಡ ಯುವ ರೈತ ಲೋಕೇಶ ನಾಯ್ಕ. ಟಿಸಿಎಚ್ನಲ್ಲಿ ಶೇಕಡ 86 ಅಂಕದೊಂದಿಗೆ ತೇರ್ಗಡೆ ಆಗಿ, ಸರ್ಕಾರಿ ನೌಕರಿ ಪಡೆಯುವ ಅವಕಾಶವಿದ್ದರೂ ಆಯ್ಕೆ ಮಾಡಿಕೊಂಡಿದ್ದು ಕೃಷಿ. ಸ್ವಂತ 5 ಎಕರೆ ಜಮೀನಿನಲ್ಲಿ 1 ಸಾವಿರ ಅಡಿಕೆ, 300 ತೆಂಗು, 600 ಹೆಬ್ಬೇವು, 150 ಮಹಾಗನಿ, 150 ಗೋಡಂಬಿ, 50 ಶ್ರೀಗಂಧ, 20 ರಕ್ತ ಚಂದನ, 10 ಮಾವು, 10 ಹುಣಸೆ, q0 ನಿಂಬೆ, 100 ಪಪ್ಪಾಯ, 400 ಗುಲಾಬಿ, 800 ಬಾಳೆ ಬೆಳೆಯದಿದ್ದಾರೆ. ಇದರೊಂದಿಗೆ ಕಿತ್ತಳೆ, ಚಕ್ಕೋತ, ಮಾವು, ಬೆಟ್ಟದ ನೆಲ್ಲಿ, ನೇರಳೆ, ಸೀಬೆ, ಬೆಣ್ಣೆ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ ರಾಗಿ, ಹುರಳಿ, ಅಲಸಂದೆ, ಹೆಸರು, ಉದ್ದಿನ ಕಾಳು, ಧನಿಯಾ, ಕಡಲೆಕಾಳು, ಕಡ್ಲೆಬೀಜ, ಆರ್ಕಾ ಬೆಳೆಯುತ್ತಾರೆ. ಅದರೊಂದಿಗೆ ಟೊಮೆಟೋ, ಬದನೆ, ಹುರುಳಿಕಾಯಿ, ಬೆಂಡೆಕಾಯಿ, ಮೆಣಸಿನ ಕಾಯಿಯನ್ನೂ ನಾಟಿ ಮಾಡುತ್ತಾರೆ. 4 ಹಸುಗಳು ಮತ್ತು ಕುರಿ ಸಾಕಾಣಿಕೆ ಮತ್ತು ಅಡಕೆ ತಟ್ಟೆ ತಯಾರಿಕೆ ಘಟಕಗಳಿವೆ. ಸ್ವಂತ 2 ಬೋರ್ಗಳನ್ನು ಅಳವಡಿಸಿದ್ದಾರೆ. ಹೇಮಾವತಿಯ ನಾಲೆ ನೀರನ್ನು ಊರಿನ ಕೆರೆಗೆ ಹಾಯಿಸಲಾಗಿದೆ. ಇದರಿಂದ ಅಂತರ್ಜಲದ ಕೊರತೆ ಇಲ್ಲ. ಇಡೀ ಜಮೀನಿಗೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಿದ್ದಾರೆ.
ಪಿಯುಸಿ ಫೇಲ್ ಆದ ಹುಡುಗ : ಕೃಷಿಯಲ್ಲಿ ಪ್ರಯೋಗಗಳ ಮೂಲಕಲೇ ಯಶಸ್ಸು ಕಂಡ ...
ಸಾಧನೆಯ ವಿವರ:
ಕೃಷಿಯಲ್ಲಿ ಆದಾಯ ಗಳಿಸಿ ಬದುಕನ್ನು ಸುಂದರಗೊಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಕೇವಲ ಒಂದಕ್ಕೆ ಸೀಮಿತವಾಗದೆ ಸಮಗ್ರ ಕೃಷಿ, ಅರಣ್ಯ ಕೃಷಿ, ಹೈನುಗಾರಿಕೆ, ಅಡಕೆ ತಟ್ಟೆ ತಯಾರಿಕೆ ಘಟಕವನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಆದಾಯ ಒಂದರ ಹಿಂದೆ ಒಂದು ಬೆಳೆಯಲ್ಲಿ ಪಡೆಯುತ್ತಾರೆ. ತಮಗಿಂತಲೂ ಉತ್ತಮ ರೀತಿಯಲ್ಲಿ ಸಾಧನೆ ಮಾಡಿದ ರೈತರ ತೋಟ, ಜಮೀನಿಗೆ ಬೇಟಿ ನೀಡಿ ಅವರಿಂದಲೂ ಮಾಹಿತಿ ಪಡೆಯುತ್ತಾರೆ. ಕಳೆದ ಸಾಲಿನಲ್ಲಿ 10 ಕ್ವಿಂಟಾಲ್ ಆರ್ಕಾ, 3 ಕ್ವಿಂಟಾಲ್ ರಾಗಿ, 2 ಕ್ವಿಂಟಾಲ್ ಹುರಳಿ ಬೆಳೆದಿದ್ದಾರೆ. ಅಲ್ಲದೆ ತಮ್ಮ ತೋಟಕ್ಕೆ ಬರುವ ಕೃಷಿಕರಿಗೂ ತಾವು ಬೆಳೆದ ಬೆಳೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಬಿ.ಎ. ಪದವೀಧರ ಸಹೋದರ, ತಂದೆ- ತಾಯಿ ಅವರೊಂದಿಗೆ ಕೂಡು ಕುಟುಂಬದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ರೈತ ರತ್ನ ಪ್ರಶಸ್ತಿ ಬಗೆಗಿನ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗಮನಾರ್ಹ ಅಂಶ
1.ಕೃಷಿಯು ಅನುಭವದಿಂದ ಬರುತ್ತದೆ ಎನ್ನುವುದು ಲೋಕೇಶ್ ಅವರ ಮನದಾಳದ ಮಾತು. ವಿದ್ಯಾವಂತನಾದರೂ ಕೃಷಿಯನ್ನು ಆಯ್ದುಕೊಂಡಿದ್ದಕ್ಕೆ ಆರಂಭದಲ್ಲಿ ಗ್ರಾಮಸ್ಥರಿಂದಲೇ ವಿರೋಧ ವ್ಯಕ್ತವಾಗಿತ್ತು. ಆದರೂ ಹಠಕ್ಕೆ ಬಿದ್ದು, ಕೃಷಿಯಲ್ಲೇ ಜೀವನ ರೂಪಿಸಿಕೊಳ್ಳಲು ಹೊರಟ ಅವರಿಗೆ ಕೃಷಿ ಕೈಹಿಡಿದಿದೆ.
2. ಆರಂಭದಲ್ಲಿ ಕೃಷಿ ಮಾಡುವುದಕ್ಕೆ ಮೂಗು ಮುರಿದ ವ್ಯಕ್ತಿಗಳೇ ಇಂದು ಅವರ ತೋಟಕ್ಕೆ ಆಗಮಿಸಿ ಅವರು ಬೆಳೆದಿರುವ ಬೆಳೆ, ಅವುಗಳ ಕೃಷಿ ವಿಧಾನಗಳನ್ನು ನೋಡಿ ತಾವೂ ಅಳವಡಿಸಿಕೊಳ್ಳುತ್ತಿದ್ದಾರೆ.
3.ಡ್ರ್ಯಾಗನ್ ಫ್ರೂಟ್ (ಕಮಲ ಹಣ್ಣು) ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೂನ್ನಲ್ಲಿ ಸಸಿ ನೆಡುವ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ.
4.ಒಮ್ಮೆಲೇ ಬಂಡವಾಳ ಹೂಡುವ ಬದಲು ಹಂತ ಹಂತವಾಗಿ ಬಂಡವಾಳ ತೊಡಗಿಸುವುದರಿಂದ ಕೃಷಿಯಲ್ಲಿ ಸಾಧನೆ ಮಾಡಬಹುದು ಎನ್ನುವುದು ಅವರ ಮಾತು.
5.ಕೇವಲ 5 ವರ್ಷದಲ್ಲೇ ತಮ್ಮ ಜಮೀನನ್ನು ಅರಣ್ಯ ಕೃಷಿ ಮತ್ತು ಸಮಗ್ರ ಕೃಷಿಯೊಂದಿಗೆ ನಳನಳಿಸುವಂತೆ ಮಾಡಿದ್ದಾರೆ. ಇವರು ಬೆಳೆದ ಹೆಬ್ಬೇವು ಮರಗಳನ್ನು 25 ಲಕ್ಷ ರು.ಗಳಿಗೆ ತಮಗೇ ನೀಡುವಂತೆ ಹುಣಸೂರು ಸಾಮಿಲ್ಲಿನ ಮಾಲಿಕರು ಬೇಡಿಕೆ ಇಟ್ಟಿದ್ದರು.