* 10 ಲಕ್ಷ ರು. ಪರಿಹಾರಕ್ಕೆ ಧಾರವಾಡ ಪೀಠ ಆದೇಶ
* ರಕ್ಷಣೆಯು ಪೌರಾಡಳಿತದ ಹೊಣೆ- ಹೈಕೋರ್ಟ್
* ಬೀದಿ ನಾಯಿಗಳ ಕುರಿತು ನಾಗರಿಕರು ದೂರು ಸಲ್ಲಿಸಲು ದೂರು ಘಟಕ ಸ್ಥಾಪಿಸಬೇಕು
ಬೆಂಗಳೂರು(ಜೂ.30): ಬೀದಿ ನಾಯಿಗಳ ದಾಳಿಯಿಂದ ನಾಗರಿಕರು ಗಾಯಗೊಂಡರೆ ಅಥವಾ ಸಾವಿಗೀಡಾದರೆ ಆಯಾ ಸ್ಥಳೀಯ ಪೌರಾಡಳಿತ ಸಂಸ್ಥೆಗಳೇ ಹೊಣೆಯಾಗುತ್ತವೆ, ಹಾಗಾಗಿ ಪರಿಹಾರ ಸಹ ನೀಡಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಬೀದಿ ನಾಯಿಗಳ ದಾಳಿಯಿಂದ ಬಾಲಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ 10 ಲಕ್ಷ ರು. ಪರಿಹಾರ ಪಾವತಿಸುವಂತೆ ಬೆಳಗಾವಿ ಜಿಲ್ಲಾಡಳಿತಕ್ಕೆ ಆದೇಶಿಸಿದೆ.
ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿದ ಎರಡು ವರ್ಷದ ಮಗನನ್ನು ಕಳೆದುಕೊಂಡಿದ್ದ ಬೆಳಗಾವಿಯ ಬಾಳೆಕುಂದ್ರಿ ನಿವಾಸಿ ಯೂಸಬ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು ಧಾರವಾಡ ಪೀಠದಲ್ಲಿ ಈ ಆದೇಶ ಮಾಡಿದ್ದಾರೆ.
Bengaluru: ರಸ್ತೆ ಗುಂಡಿ ಮುಚ್ಚಲು ಮಿಲಿಟರಿಗೆ ವಹಿಸ್ತೀವಿ: ಹೈಕೋರ್ಟ್ ಸಿಡಿಮಿಡಿ
ಹೈಕೋರ್ಟ್ ನಿರ್ದೇಶನಗಳು:
- ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಲು ಬೀದಿ ನಾಯಿಗಳಿಗೆ ಸಂತಾನ ಹರಣ ಮತ್ತು ವ್ಯಾಕ್ಸಿನೇಷನ್ ಅನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಮೇಲ್ವಿಚಾರಣಾ ಸಮಿತಿಗಳು ಖಾತರಿಪಡಿಸಬೇಕು. ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಕೆಲಸ ಮಾಡಬೇಕು. ಅದಕ್ಕೆ ಎನ್‌ಜಿಒ ಮತ್ತು ಇತರೆ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು.
-ವಾಸಿಯಾಗದ ಕಾಯಿಲೆ/ಮಾರಣಾಂತಿಕ ಗಾಯಗಳಿಂದ ನರಳುತ್ತಿರುವ ಬೀದಿ ನಾಯಿಗಳಿಗೆ ತಜ್ಞ ಪಶುವೈದ್ಯಕೀಯ ವೈದ್ಯರಿಂದ ದಯಾ ಮರಣ ಕಲ್ಪಿಸಬೇಕು.
- ಆಕ್ರಮಣಕಾರಿ ನಾಯಿಗಳ ಮತ್ತು ರೇಬಿಸ್ ರೋಗದಿಂದ ನರಳುತ್ತಿರುವ ನಾಯಿಗಳ ಕುರಿತು ದೂರುಗಳು ಬಂದರೆ ಸ್ಥಳೀಯ ಸಂಸ್ಥೆಗಳ ಶ್ವಾನ ದಳ ಪರಿಶೀಲಿಸಬೇಕು. ನಾಯಿಗೆ ರೇಬಿಸ್ ಇದ್ದರೆ ಸಹಜ ಸಾವು ಬರುವವರೆಗೂ ಅದನ್ನು ಐಸೋಲೇಷನ್‌ನಲ್ಲಿ ಇಡಬೇಕು.
- ಬೀದಿ ನಾಯಿಗಳ ಕುರಿತು ನಾಗರಿಕರು ದೂರು ಸಲ್ಲಿಸಲು ದೂರು ಘಟಕ ಸ್ಥಾಪಿಸಬೇಕು.
- ಜನ ವಸತಿ ಪ್ರದೇಶದಲ್ಲಿ ನಾಯಿಗಳು ಹಾವಳಿ ಹೆಚ್ಚಾಗದಂತೆ ಸಮರ್ಪಕವಾಗಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು
- ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತಿಗಳು ನಾಯಿ ದಾಳಿಗೆ ತುತ್ತಾದವರಿಗೆ ಪರಿಹಾರ ಕಲ್ಪಿಸಲು ಸೂಕ್ತ ಮಾರ್ಗಸೂಚಿ ರಚಿಸಬೇಕು.
ಲಂಚ ಕೇಸ್: ಡೀಸಿ ವಿರುದ್ಧ ತನಿಖೆಗೆ ಇಲ್ಲ ತಡೆ
ಏನಿದು ಪ್ರಕರಣ?:
ಅರ್ಜಿದಾರನ ಎರಡು ವರ್ಷದ ಮಗ ಅಬ್ಬಸಾಲಿ ಯೂಸಬ್ ಸನದಿ, 2018ರ ನ.29ರಂದು ಮನೆ ಹಿಂಭಾಗಕ್ಕೆ ಬಹಿರ್ದೆಸೆಗೆ ಹೋಗಿದ್ದ ವೇಳೆ ನಾಲ್ಕೈದು ನಾಯಿಗಳು ಏಕ ಕಾಲದಲ್ಲಿ ಮಗುವಿನ ಮೇಲೆ ದಾಳಿ ನಡೆಸಿ ಪಕ್ಕದ ಕೃಷಿ ಜಮೀನಿಗೆ ಎಳೆದೊಯ್ದಿದ್ದವು. ಘಟನೆಯಿಂದ ಮಗುವಿನ ಮುಖ, ತಲೆ ಮತ್ತು ತೊಡೆಯ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ಕೂಡಲೇ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕಲ್ಪಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿತ್ತು.
ಘಟನೆ ನಂತರ ಬೆಳಗಾವಿಯ ಜಿಲ್ಲಾಡಳಿತ ಪರಿಹಾರ ಘೋಷಿಸಿದ್ದರೂ ಪರಿಹಾರ ನೀಡಿಲ್ಲವೆಂದು ಮಗುವಿನ ತಂದೆ ಯೂಸಬ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿ, 25 ಲಕ್ಷ ಪರಿಹಾರ ನೀಡಲು ಬೆಳಗಾವಿ ಜಿಲ್ಲಾಡಳಿತಕ್ಕೆ ಆದೇಶಿಸಬೇಕು. ಬೀದಿ ನಾಯಿಗಳ ಹಾವಳಿಯಿಂದ ಇಂತಹ ದುರ್ಘಟನೆ ಮರುಕಳಿಸದಂತೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಾಧಿಕಾರಗಳು ಹೊರಡಿಸಿರುವ ಮಾರ್ಗಸೂಚಿಗಳು ಮತ್ತು ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದ್ದರು.
ಪತಿಯೊಂದಿಗೆ ಅಕ್ರಮ ಸಂಬಂಧ ಆರೋಪ: ಮಹಿಳೆ ವಿರುದ್ಧ ಪತ್ನಿ ದಾಖಲಿಸಿದ್ದ ಪ್ರಕರಣ ರದ್ದು
ರಕ್ಷಣೆಯು ಪೌರಾಡಳಿತದ ಹೊಣೆ- ಹೈಕೋರ್ಟ್:
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸಾರ್ವಜನಿಕರಿಂದ ಬೀದಿ ನಾಯಿಗಳ ದಾಳಿಯಿಂದ ರಕ್ಷಣೆ ಮಾಡುವುದು ಪೌರಾಡಳಿತ ಸಂಸ್ಥೆಗಳ ಆದ್ಯ ಕರ್ತವ್ಯ ಹಾಗೂ ಹೊಣೆಯಾಗಿದೆ. ಹಾಗಾಗಿ ಬೀದಿ ನಾಯಿಗಳ ದಾಳಿಯಿಂದ ನಾಗರಿಕರು ಗಾಯಗೊಂಡರೆ ಅಥವಾ ಜೀವ ಕಳೆದುಕೊಂಡರೆ ಪರಿಹಾರ ಕೊಡಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದಲ್ಲಿ ಮಗುವನ್ನು ಕಳೆದುಕೊಂಡ ಅರ್ಜಿದಾರರಿಗೆ 2018ರ ನ.29ರಿಂದ ವಾರ್ಷಿಕ ಶೇ.6ರಷ್ಟುಬಡ್ಡಿ ದರದಲ್ಲಿ 10 ಲಕ್ಷ ರು. ಪರಿಹಾರ, ವ್ಯಾಜ್ಯದ ವೆಚ್ಚವಾಗಿ 20 ಸಾವಿರ ರು. ನೀಡಬೇಕು. ಪ್ರಕರಣ ಸಂಬಂಧ 2020ರ ನ.11ರಂದು ಮಧ್ಯಂತರ ಪರಿಹಾರವಾಗಿ 1.50 ಲಕ್ಷ ರು. ಪರಿಹಾರ ನೀಡಲು ಕೋರ್ಚ್ ಆದೇಶಿಸಿತ್ತು. ಈ ಹಣವನ್ನು ಕಡಿತಗೊಳಿಸಿ ಉಳಿದ ಪರಿಹಾರ ಮೊತ್ತವನ್ನು ನಾಲ್ಕು ವಾರಗಳಲ್ಲಿ ಅರ್ಜಿದಾರರಿಗೆ ಪಾವತಿಸಬೇಕು ಎಂದು ಎಂದು ಬೆಳಗಾವಿ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಇದೇ ವೇಳೆ ಬೀದಿ ನಾಯಿಗಳ ನಿಯಂತ್ರಣ ಕುರಿತು ಹಲವು ನಿರ್ದೇಶನಗಳನ್ನು ನೀಡಿ ಆದೇಶದ ಅನುಪಾಲನಾ ವರದಿಯನ್ನು ನಾಲ್ಕು ತಿಂಗಳಲ್ಲಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದೆ.