ಕಸ್ತೂರಿ ರಂಗನ್‌ ವರದಿ ವಿರುದ್ಧ ಕಾನೂನು ಹೋರಾಟ

By Govindaraj S  |  First Published Jul 19, 2022, 5:00 AM IST

ಕಸ್ತೂರಿ ರಂಗನ್‌ ವರದಿ ಅನ್ವಯ ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ಕಾನೂನು ಹೋರಾಟ ನಡೆಸಲು ಹಾಗೂ ಜು.25, 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೇಂದ್ರ ಪರಿಸರ ಸಚಿವರ ಬಳಿಗೆ ನಿಯೋಗ ಒಯ್ಯಲು ನಿರ್ಧರಿಸಲಾಗಿದೆ. 


ಬೆಂಗಳೂರು (ಜು.19): ಕಸ್ತೂರಿ ರಂಗನ್‌ ವರದಿ ಅನ್ವಯ ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ವಿರುದ್ಧ ಕಾನೂನು ಹೋರಾಟ ನಡೆಸಲು ಹಾಗೂ ಜು.25, 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೇಂದ್ರ ಪರಿಸರ ಸಚಿವರ ಬಳಿಗೆ ನಿಯೋಗ ಒಯ್ಯಲು ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಸಚಿವರು, ಶಾಸಕರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು.

ಕಸ್ತೂರಿ ರಂಗನ್‌ ವರದಿ ಶಿಫಾರಸನ್ನು ಜಾರಿ ಮಾಡಿದರೆ ಆರ್ಥಿಕ ಚಟುವಟಿಕೆಗಳಿಗೂ ಸೇರಿ ಹಲವು ನಿರ್ಬಂಧಗಳು ಜಾರಿ ಆಗಲಿವೆ. ಇದರಿಂದ ಜನರ ಜೀವನೋಪಾಯಕ್ಕೆ ಧಕ್ಕೆಯಾಗುತ್ತದೆ. ಈ ಹಿಂದೆ ಹೊರಡಿಸಿದ್ದ ಕರಡು ಅಧಿಸೂಚನೆಗಳನ್ನು ವಿರೋಧಿಸಿ ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಅಭಿಪ್ರಾಯವನ್ನು ನೀಡಿದೆ. ಹೀಗಾಗಿ ಈ ಅಧಿಸೂಚನೆ (5ನೇ ಕರಡು ಅಧಿಸೂಚನೆ) ವಿರುದ್ಧ ರಾಜ್ಯ ಸರ್ಕಾರದಿಂದ ಕಾನೂನು ಹೋರಾಟ ನಡೆಸಬೇಕು. ಜತೆಗೆ, ಕೇಂದ್ರ ಸರ್ಕಾರಕ್ಕೂ ಜನರಿಗೆ ಆಗುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಅಧಿಸೂಚನೆ ಹಿಂಪಡೆಯುವಂತೆ ಮನವೊಲಿಸಬೇಕು ಎಂದು ನಿರ್ಧರಿಸಲಾಗಿದೆ.

Tap to resize

Latest Videos

Chikkamagaluru: ಕಸ್ತೂರಿ ರಂಗನ್ ವರದಿ ವಿರೋಧಿಸಿ ಬಂದ್ ಮಾಡುವ ನಿರ್ಧಾರ

ವರದಿ ಒಪ್ಪಲ್ಲ: ಈ ಬಗ್ಗೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಕೇಂದ್ರ ಪರಿಸರ ಸಚಿವಾಲಯವು ಅವೈಜ್ಞಾನಿಕವಾಗಿರುವ ಕಸ್ತೂರಿ ರಂಗನ್‌ ವರದಿ ಜಾರಿಗೊಳಿಸಲು ಜು.6 ರಂದು ಐದನೇ ಕರಡು ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಭಾಗದ ಶಾಸಕರು ಸಭೆ ನಡೆಸಿದ್ದೇವೆ. ರಾಜ್ಯ ಸರ್ಕಾರ ಕಸ್ತೂರಿ ರಂಗನ್‌ ವರದಿ ಒಪ್ಪುವುದಿಲ್ಲ. ಜು. 22 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲೂ ಈ ವಿಚಾರವನ್ನು ಚರ್ಚೆ ನಡೆಸುತ್ತೇವೆ. ಜತೆಗೆ ವಕೀಲರನ್ನು ನೇಮಿಸಿ ಕಾನೂನು ಹೋರಾಟ ಮಾಡಲೂ ನಿರ್ಧರಿಸಲಾಗಿದೆ ಎಂದರು.

ಸಭೆಯಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ಆನಂದ್‌ ಸಿಂಗ್‌, ಶಿವರಾಮ ಹೆಬ್ಬಾರ್‌, ಎಸ್‌. ಅಂಗಾರ ಸೇರಿದಂತೆ ಪಶ್ಚಿಮ ಘಟ್ಟಪ್ರದೇಶದ ಶಾಸಕರು ಹಾಜರಿದ್ದರು.

ವರದಿ ಜಾರಿಗೆ ವಿರೋಧ ಏಕೆ?: ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆ ಸಂಬಂಧ ವರದಿ ನೀಡಲು ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 2013ರಲ್ಲಿ ವರದಿ ನೀಡಿದ್ದ ಸಮಿತಿಯು ರಾಜ್ಯದ 1,553ಕ್ಕೂ ಹೆಚ್ಚು ಹಳ್ಳಿಗಳನ್ನು ಒಳಗೊಂಡಂತೆ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಹಾಗೂ ಈ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲು ಶಿಫಾರಸು ಮಾಡಿತ್ತು.

ಇದರ ಅನ್ವಯ ಕಸ್ತೂರಿ ರಂಗನ್‌ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟಹಾಗೂ ಮಲೆನಾಡಿನ ಬಹುತೇಕ ಭಾಗ ಅತಿ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಯಾಗುತ್ತದೆ. ಈ ಪ್ರದೇಶದಲ್ಲಿ ಮಾನವ ಚಟುವಟಿಕೆಗಳಿಗೆ ಬಹುತೇಕ ನಿರ್ಬಂಧ ಹೇರಲಾಗುತ್ತದೆ. ಈ ಭೂ ಭಾಗ ರಾಜ್ಯದ ನಿಯಂತ್ರಣ ಕಳೆದುಕೊಂಡು ಕೇಂದ್ರದ ಸುಪರ್ದಿಗೆ ಬರುತ್ತದೆ. ಸೂಕ್ಷ್ಮ ವಲಯದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ನಿರ್ಬಂದ ವಿಧಿಸಲಾಗುತ್ತದೆ. ಕ್ರಮೇಣ ಗಣಿಗಾರಿಕೆ ಸೇರಿದಂತೆ ಎಲ್ಲಾ ಚಟುವಟಿಕೆಯನ್ನೂ ಸ್ಥಗಿತಗೊಳಿಸಬೇಕಾಗುತ್ತದೆ. ಹೀಗಾಗಿ ಈ ಭಾಗದ ಜನರ ಜೀವನ ಅಸ್ತವ್ಯಸ್ತಗೊಳ್ಳುವ ಆತಂಕದಿಂದ ವರದಿ ಜಾರಿಗೆ ವಿರೋಧ ವ್ಯಕ್ತವಾಗುತ್ತಿದೆ.

ಕಸ್ತೂರಿರಂಗನ್‌ ವರದಿ ಅವೈಜ್ಞಾನಿಕ: ರವೀಂದ್ರ ನಾಯ್ಕ

ಮೊದಲು ಗಾಡ್ಗೀಳ್‌ ವರದಿ ಬಂತು. ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಕಸ್ತೂರಿ ರಂಗನ್‌ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಪಡೆದಿದ್ದರು. ಅದನ್ನೂ ರಾಜ್ಯ ಸರ್ಕಾರ ವಿರೋಧಿಸಿತ್ತು. 2019, 2020 ಎರಡು ಬಾರಿ ಕಸ್ತೂರಿ ರಂಗನ್‌ ವರದಿ ಶಿಫಾರಸು ವಿರೋಧಿಸಿ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದಿತ್ತು. ಹೀಗಿದ್ದರೂ ಇದೀಗ ಕೇಂದ್ರ ಪರಿಸರ ಸಚಿವಾಲಯವು 5ನೇ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ರಾಜ್ಯದಿಂದ ದೆಹಲಿಗೆ ನಿಯೋಗ ಹೋಗಿ ಕೇಂದ್ರ ಪರಿಸರ ಸಚಿವರನ್ನು ಭೇಟಿ ಮಾಡಿ ಅಧಿಸೂಚನೆ ಹಿಂಪಡೆಯುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

click me!