ಶೀಘ್ರ ಪಹಣಿ ಪತ್ರದಲ್ಲೇ ಸಿಗಲಿದೆ ಜಮೀನಿನ ನಕ್ಷೆ!

By Kannadaprabha News  |  First Published Mar 7, 2022, 5:08 AM IST

ಜಮೀನಿನ ನಕ್ಷೆಯನ್ನು ನೋಡಲು ಇನ್ಮುಂದೆ ಭೂದಾಖಲೆಗಳ ಇಲಾಖೆಗೆ ಅಲೆದಾಡಬೇಕಿಲ್ಲ. ಜಮೀನಿನ ಪಹಣಿ (ಆರ್‌ಟಿಸಿ) ಪತ್ರದಲ್ಲೇ ಆಯಾ ಜಮೀನಿನ ನಕ್ಷೆಯೂ ಜಮೀನಿನ ಮಾಲಿಕರ ಕೈ ಸೇರಲಿದೆ.


ಜಗದೀಶ ವಿರಕ್ತಮಠ

ಬೆಳಗಾವಿ (ಮಾ.7): ಜಮೀನಿನ ನಕ್ಷೆಯನ್ನು ನೋಡಲು ಇನ್ಮುಂದೆ ಭೂದಾಖಲೆಗಳ ಇಲಾಖೆಗೆ ಅಲೆದಾಡಬೇಕಿಲ್ಲ. ಜಮೀನಿನ ಪಹಣಿ (ಆರ್‌ಟಿಸಿ) ಪತ್ರದಲ್ಲೇ ಆಯಾ ಜಮೀನಿನ ನಕ್ಷೆಯೂ ಜಮೀನಿನ ಮಾಲಿಕರ ಕೈ ಸೇರಲಿದೆ. ಕಂದಾಯ ಸಚಿವಾಲಯದ ವ್ಯಾಪ್ತಿಯಲ್ಲಿರುವ ಕಂದಾಯ ಹಾಗೂ ಭೂಮಾಪನ ಇಲಾಖೆಯು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ರೈತರ ಜಮೀನಿನ ನಕ್ಷೆಯನ್ನು ಪಹಣಿ ಪತ್ರದಲ್ಲೇ ಮುದ್ರಿಸಲು ಯೋಜನೆ ರೂಪಿಸಿದೆ. ಈಗಾಗಲೇ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. 

Tap to resize

Latest Videos

ಮುಂಬರುವ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಈ ಯೋಜನೆಯನ್ನು ವಿಸ್ತರಿಸಿ, ಜಮೀನಿನ ಎಲ್ಲ ಮಾಲಿಕರಿಗೆ ಪಹಣಿ ನೀಡುವ ಗುರಿಯನ್ನು ಕಂದಾಯ ಹಾಗೂ ಭೂಮಾಪನ ಇಲಾಖೆಗಳು ಹೊಂದಿವೆ. ಪ್ರಸ್ತುತ ಈ ಮೊದಲಿದ್ದಂತೆ ಜಮೀನಿನ ರೆಕಾರ್ಡ್‌ ಆಫ್‌ ರೈಟ್ಸ್‌, ಗೇಣಿ ಮತ್ತು ಪಹಣಿ ಪತ್ರಿಕೆ (ಉತಾರ) ಫಾರಂ ನಂ.16ರಲ್ಲಿ ಜಮೀನ ವಿಸ್ತೀರ್ಣ, ಕಂದಾಯ, ಕಬ್ಜೆ ಅಥವಾ ಸ್ವಾಧೀನದಾರನ ಹೆಸರು, ತಂದೆಯ ಹೆಸರು ಮತ್ತು ವಿಳಾಸ, ಕಬ್ಜೆ ಸ್ವಾಧೀನತೆಯ ರೀತಿ, ಇತರ ಹಕ್ಕುಗಳು, ಮಣ್ಣಿನ ಸಮೂನೆ, ನೀರಾವರಿ ಮೂಲ ಸೇರಿದಂತೆ ಒಟ್ಟು 13 ಕಾಲಂಗಳಲ್ಲಿ ಜಮೀನಿಗೆ ಹಾಗೂ ಹಕ್ಕಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ನೀಡಲಾಗುತ್ತಿದೆ.

Mangalore ಕಾಸರಗೋಡು ಕನ್ನಡ ಶಾಲೆಗೆ ಮತ್ತೆ ಮಲಯಾಳಂ ಕಂಟಕ!

ಇದೀಗ ರೆಕಾರ್ಡ್‌ ಆಫ್‌ ರೈಟ್ಸ್‌, ಗೇಣಿ ಮತ್ತು ಪಹಣಿ ಪತ್ರಿಕೆ (ಉತಾರ) ಫಾರಂ ನಂ.16ಎ ಎಂದು ಸಿದ್ಧಪಡಿಸಲಾಗುತ್ತಿರುವ ಉತಾರದ ಮೇಲೆ ಎಡಭಾಗದಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಹಾಗೂ ಬಲಭಾಗದಲ್ಲಿ ಜಮೀನಿನ ಸರ್ವೇ ನಂ, ಸಬ್‌ ನಂ, ಹಿಸ್ಸಾ ನಂ ಎಂದು ನಮೂದಿಸಲಾಗುತ್ತದೆ. ಜತೆಗೆ ಈಗಾಗಲೇ ನೀಡುತ್ತಿರುವ ಪಹಣಿ ಪತ್ರದಲ್ಲಿರುವ ಎಲ್ಲ ಮಾಹಿತಿಗಳನ್ನು ನಮೂದಿಸಲಾಗುತ್ತದೆ. ವಿಶೇಷ ಎಂದರೆ ಇನ್ನು ಮುಂದೆ ನೀಡುವ ಪಹಣಿಪತ್ರದ ಕೆಳಕಡೆ ಬಲಭಾಗದಲ್ಲಿ ಜಮೀನಿನ ಸ್ವತ್ತಿನ ಜಿಯೋರೆಫರೆನ್ಸ್‌ ಮಾಡಿದ ನಕ್ಷೆಗಳು (ನೇರನೋಟ) ಮತ್ತು ಎಡಭಾಗದಲ್ಲಿ ಡಿಜಿಟಲ್‌ ಸ್ಕೆಚ್‌ನೊಂದಿಗೆ (ಸ್ವತ್ತಿನ ನಕ್ಷೆ) ನಮೂದಿಸಲಾಗುತ್ತದೆ. 

ನೇರನೋಟದ ನಕ್ಷೆಯ ಮೂಲಕ ತಮ್ಮ ಜಮೀನಿನ ಸರ್ವೇ ನಂಬರ್‌ ಜತೆಗೆ ಜಮೀನಿನ ವಿಸ್ತಿರ್ಣ ಎಷ್ಟಿದೆ ಮತ್ತು ಎಲ್ಲಿದೆ ಎಂಬುದರ ಜೊತೆ ಒತ್ತುವರಿ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಪಹಣಿಪತ್ರ ನಕಲು ಆಗದಂತೆ ಮುಂಜಾಗ್ರತಾ ಕ್ರಮವಹಿಸಿರುವ ಕಂದಾಯ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಕ್ಯೂ ಆರ್‌ ಕೋಡ್‌ ಹಾಗೂ ಬಾರ್‌ ಕೋಡ್‌ ಅನ್ನು ನಮೂದಿಸುವ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಇದರಿಂದಾಗಿ ನಕಲಿ ಪಹಣಿಪತ್ರ ತಯಾರಿಸುವುದಕ್ಕೂ ಕಡಿವಾಣ ಹಾಕಿದಂತಾಗುತ್ತದೆ.

ಮೇಕೆದಾಟು ಯೋಜನೆಗೆ ಕೇಂದ್ರದಿಂದಲೇ 'ವಿವಾದ' ಪದ ಬಳಕೆ, ಕುಮಾರಸ್ವಾಮಿ ಆಕ್ರೋಶ

ಭೂ ವಂಚಕರಿಗೂ ಕಡಿವಾಣ: ಇತ್ತೀಚೆಗೆ ಭೂಮಿ ಮಾರಾಟದಲ್ಲಿ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಅಲ್ಲದೇ, ವಂಚಕರು ಹಾಗೂ ಮಧ್ಯವರ್ತಿಗಳು ಎಲ್ಲಿಯೂ ಕುಳಿತು ಇನ್ನೆಲ್ಲಿದೂ ಜಮೀನು ಮಾರಾಟ ಮಾಡುತ್ತಿರುವುದು ಹಾಗೂ ಖರೀದಿದಾರರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಂದಾಯ ಹಾಗೂ ಭೂಮಾಪನ ಇಲಾಖೆ ಇಲಾಖೆ ರೆಕಾರ್ಡ್‌ ಆಫ್‌ ರೈಟ್ಸ್‌, ಗೇಣಿ ಮತ್ತು ಪಹಣಿಪತ್ರಿಕೆ (ಉತಾರ) ಫಾರಂ ನಂ.16 ಎ ನೀಡಲು ಯೋಜನೆ ರೂಪಿಸಿದ್ದರಿಂದ ವಂಚಕರಿಗೂ ಕಡಿವಾಣ ಬೀಳಲಿದೆ. ಅಲ್ಲದೇ ಖರೀದಿದಾರ ಪಹಣಿ ಪತ್ರದಲ್ಲೇ ಜಮೀನಿನ ಬಗ್ಗೆ ನಕ್ಷೆ ಮತ್ತು ಜಮೀನಿನ ಆಕಾರ ನೋಡಿ ಖಚಿತಪಡಿಸಿಕೊಳ್ಳಬಹುದಾಗಿದೆ.

ಜಮೀನಿನ ಮಾಲಿಕರಿಗೆ ಪಹಣಿ ಪತ್ರದಲ್ಲೇ ತಮ್ಮ ಸ್ವತ್ತಿನ ಜಿಯೋರೆಫರೆನ್ಸ್‌ ಮಾಡಿದ ನಕ್ಷೆಗಳು ಮತ್ತು ಡಿಜಿಟಲ್‌ ಸ್ಕೆಚ್‌ನೊಂದಿಗೆ ಹೊಸ ಪಹಣಿ ಪತ್ರವನ್ನು (ಆರ್‌ಟಿಸಿ) ನೀಡಲಾಗುತ್ತದೆ. ಇದರಿಂದಾಗಿ ರೈತರಿಗೆ ಹಾಗೂ ಜಮೀನಿನ ಮಾಲಿಕರಿಗೆ ಅನುಕೂಲವಾಗಲಿದೆ. ಹೊಸದಾಗಿ ತಯಾರಿಸಲಾಗಿರುವ ಪಹಣಿಪತ್ರವನ್ನು ಈಗಾಗಲೇ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಡ್ರೋಣ್‌ ಹಾರಾಟ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಮುಂಬರುವ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ ಹೊಸ ಪಹಣಿಪತ್ರಗಳನ್ನು ನೀಡಲಾಗುತ್ತದೆ.
-ಮುನೀಶ್‌ ಮೌದ್ಗಿಲ್‌, ಆಯುಕ್ತರು ಭೂಮಾಪನ ಇಲಾಖೆ.

click me!