*ಬೇಸಿಗೆಗಾಲದಲ್ಲೂ ಜೀವಧಾರೆ ಹರಿಸಲಿದ್ದಾಳೆ ಕಾವೇರಿ ತಾಯಿ.
*KRS ಜಲಾಶಯದ 90 ವರ್ಷದ ಅಪರೂಪದ ದಾಖಲೆ.
*ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ KRS
ಮಂಡ್ಯ(ಡಿ. 25): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ (Srirangapatna) ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದ (KRS Dam) 90 ವರ್ಷದ ಇತಿಹಾಸದಲ್ಲೊಂದು ಅಪರೂಪದ ದಾಖಲೆ ಬರೆದಿದೆ. ಅಕ್ಟೋಬರ್ 29 ರಿಂದ ಡಿಸೆಂಬರ್ 23 ರ ತನಕ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಕೆಆರ್‌ಎಸ್‌ನಲ್ಲಿ ಹೆಚ್ಚು ದಿನ ಗರಿಷ್ಠ ನೀರು ಭರ್ತಿಯಾಗಿದ್ದು 53 ದಿನ 124.80 ಗರಿಷ್ಠ ಮಟ್ಟ ತಲುಪಿತ್ತು. ಇದೇ ಮೊದಲ ಬಾರಿಗೆ ಇಷ್ಟು ದಿನ ನೀರು ಭರ್ತಿಯಾಗಿದ್ದು ಈ ಹಿಂದೆ ಇಷ್ಟು ದಿನ ತುಂಬಿರುವ ದಾಖಲೆ ಇಲ್ಲ.
ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಕಾವೇರಿ (Kaveri River) ದಾಖಲೆ ಬರೆದಿದ್ದಾಳೆ. ಈ ಬೆನ್ನಲ್ಲೇ ಹಳೇ ಮೈಸೂರು ಭಾಗದ ರೈತರಲ್ಲಿ ಹಾಗೂ ಜನರಲ್ಲಿ ಸಂತಸ ಮನೆ ಮಾಡಿದೆ. ಈ ದಾಖಲೆಯಿಂದ ಬೇಸಿಗೆಯಲ್ಲಿ ನೀರಿನ ಅಭಾವದ ಚಿಂತೆ ಇಲ್ಲದಂತಾಗಿದೆ.
ಕೆಆರ್‌ಎಸ್‌ನ ಇಂದಿನ ನೀರಿನ ಮಟ್ಟ
ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು.
ಜಲಾಶಯದ ಇಂದಿನ ನೀರಿನ ಮಟ್ಟ 124.28 ಅಡಿಗಳು.
ಇಂದಿನ ಒಳಹರಿವಿನ ಪ್ರಮಾಣ 2,299 ಕ್ಯೂಸೆಕ್.
ಇಂದಿನ ಹೊರ ಹರಿವಿನ ಪ್ರಮಾಣ 4,467 ಕ್ಯೂಸೆಕ್.
ಜಲಾಶದ ಗರಿಷ್ಠ ನೀರಿನ ಸಂಗ್ರಹ - 49.452 ಟಿಎಂಸಿ.
ಇಂದಿನ ಸಂಗ್ರಹ 48.726 ಟಿಎಂಸಿ.
ಕೆಆರ್‌ಎಸ್‌ನ 25 ಕಿ.ಮೀ. ವ್ಯಾಪ್ತೀಲಿ ಗಣಿಗಾರಿಕೆ ನಿಷೇಧ?
ವಿಶ್ವವಿಖ್ಯಾತ ಕೃಷ್ಣರಾಜ ಸಾಗರ(KRS) ಅಣೆಕಟ್ಟೆಯ 25 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಗಣಿ ಚಟುವಟಿಕೆಗಳನ್ನು(Mining Activity) ನಿಷೇಧಿಸುವಂತೆ ಅಣೆಕಟ್ಟು ಸುರಕ್ಷತಾ ಪುನರ್‌ಪರಿಶೀಲನಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿರುವುದು ಬೆಳಕಿಗೆ ಬಂದಿದೆ. ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್(NIRM), ಪುಣೆಯ ಸೆಂಟ್ರಲ್ ವಾಟರ್ ಮತ್ತು ಪವರ್ ರೀಸರ್ಚ್ ಸ್ಟೇಷನ್ (CWRPS) ನವರು ನಿಯಮಾನುಸಾರ ಪರಿಶೀಲನೆ ನಡೆಸಿ ವರದಿ(Report) ನೀಡುವವರೆಗೆ ಎಲ್ಲ ಗಣಿ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
ಗಣಿ ಸ್ಫೋಟದ ಬಗ್ಗೆ ಎನ್‌ಐಆರ್‌ಎಂ ತಜ್ಞರು ತಾಂತ್ರಿಕ ಪರಿಣಿತಿ ಸಾಧಿಸಿದ್ದು, ಇವರು ನೀಡುವ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಇವರ ವರದಿ ಅತಿ ಮುಖ್ಯವಾಗಿದೆ. ಸಿಡಬ್ಲ್ಯುಪಿಆರ್‌ಎಸ್ ಮತ್ತು ಎನ್‌ಐಆರ್‌ಎಂ ನೀಡುವ ವರದಿ ಆಧಾರದ ಮೇಲೆ ಅಣೆಕಟ್ಟೆ(Dam) ಸುತ್ತ ನಡೆಯುವ ಗಣಿಗಾರಿಕೆಯಲ್ಲಿ(Mining) ಸ್ಫೋಟಕಗಳನ್ನು(Explosive) ಯಾವ ರೀತಿ ಬಳಸಬೇಕು, ಸ್ಫೋಟದ ತೀವ್ರತೆ ಎಷ್ಟಿರಬೇಕು ಎಂಬ ಬಗ್ಗೆ ನಿಯಮಗಳನ್ನು ರೂಪಿಸಲಾಗುವುದು ಎಂದು ಅಣೆಕಟ್ಟು ಪುನರ್ ಪರಿಶೀಲನಾ ಸಮಿತಿ ವರದಿಯಲ್ಲಿ ತಿಳಿಸಿದೆ. ಸಂಪೂರ್ಣ ಸ್ಟೋರಿ.
ಕಾವೇರಿ ನೀರಾವರಿ ನಿಗಮದ ತಾಂತ್ರಿಕ ಉಪ ಸಮಿತಿಯ 111ನೇ ಸಭೆಯಲ್ಲಿ ಸಿಎಸ್‌ಐಆರ್-ಸಿಐಎಫ್‌ಆರ್‌ರವರಿಂದ ಪ್ರಾಯೋಗಿಕ ಬ್ಲಾಸ್ಟ್ ಅಧ್ಯಯನ ಕೈಗೊಳ್ಳಲು ಸೂಚಿಸಲಾಗಿದ್ದು, 22 ಜುಲೈ 2021ರಂದು ನಡೆದ ನಿಗಮದ ಮಂಡಳಿಯ 73ನೇ ಸಭೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆ(KRS Dam) ವ್ಯಾಪ್ತಿಯಲ್ಲಿ ಪ್ರಾಯೋಗಿಕ ಬ್ಲಾಸ್ಟಿಂಗ್ ಪ್ರಸ್ತಾವನೆಯನ್ನು ಮುಂದೂಡಿಸಿದ್ದು, ಅಣೆಕಟ್ಟೆಯ ವಿನ್ಯಾಸ ರಚನೆಯ ಗುಣಮಟ್ಟಮತ್ತು ಭೌಗೋಳಿಕ ಅಧ್ಯಯನವನ್ನು ಮಾತ್ರ ಕೈಗೊಳ್ಳುವಂತೆ ಅನುಮೋದನೆ ನೀಡಿದೆ. ಈ ಅಧ್ಯಯನವನ್ನು ತುರ್ತು ಕಾಮಗಾರಿ ಎಂದು ಘೋಷಿಸಿದ್ದು, ಮೆ.ಪಾರ್ಸನ್ ಓವರ್‌ಸೀಸ್ ಪ್ರೈವೇಟ್ ಲಿಮಿಟೆಡ್ ಅವರಿಗೆ ವಹಿಸಲಾಗಿದ್ದು, 30 ಅಕ್ಟೋಬರ್ 2021 ರಂದು ಅಧ್ಯಯನವು ಪೂರ್ಣಗೊಂಡಿದೆ.
ಇದನ್ನೂ ಓದಿ:
1) Crop Loss Compensation: 2.6 ಲಕ್ಷ ಬೆಳೆ ಹಾನಿ ಪರಿಹಾರ ಅರ್ಜಿ ತಿರಸ್ಕೃತ: ರೈತರ ಪರದಾಟ
2) Belagavi Session: ಬೆಳಗಾವಿ ಅಧಿವೇಶನ ಅಂತ್ಯ, ತಮ್ಮದೇ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಯತ್ನಾಳ್
3) Teachers Jobs:ಶಿಕ್ಷಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ, ನೇಮಕಾತಿಯಲ್ಲಿ ಬದಲಾವಣೆ