ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಬಿಬಿಎಂಪಿ ಮಾಜಿ ಸದಸ್ಯೆ ಸಿ.ಜಿ.ಗೌರಮ್ಮ, ಮತ್ತವರ ಪತಿ ಸಿ.ಗೋವಿಂದರಾಜು ಸೇರಿದಂತೆ ಒಟ್ಟು 10 ಮಂದಿಯನ್ನು ಖುಲಾಸೆಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು (ನ.12): ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಬಿಬಿಎಂಪಿ ಮಾಜಿ ಸದಸ್ಯೆ ಸಿ.ಜಿ.ಗೌರಮ್ಮ, ಮತ್ತವರ ಪತಿ ಸಿ.ಗೋವಿಂದರಾಜು ಸೇರಿದಂತೆ ಒಟ್ಟು 10 ಮಂದಿಯನ್ನು ಖುಲಾಸೆಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಪ್ರಕರಣದಲ್ಲಿ ತಮ್ಮನ್ನು ದೋಷಿಯಾಗಿ ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶ ರದ್ದುಕೋರಿ ಆಜಾದ್ ನಗರದ ಮಾಜಿ ಪಾಲಿಕೆ ಸದಸ್ಯೆ ಗೌರಮ್ಮ, ಅವರ ಪತಿ ಸಿ.ಗೋವಿಂದರಾಜು ಮತ್ತಿತರೆ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರ ನೇತೃತ್ವದ ವಿಭಾಗೀಯಪೀಠ ಈ ಆದೇಶ ಮಾಡಿದೆ.
ಆರೋಪಿಗಳ ವಿರುದ್ಧದ ಅಪರಾಧವನ್ನು ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ (ತನಿಖಾಧಿಕಾರಿಗಳು) ಸಂಪೂರ್ಣ ವಿಫಲವಾಗಿದೆ. ಘಟನೆಯ ಪ್ರತ್ಯಕ್ಷದರ್ಶಿಗಳಾಗಿದ್ದ ಮೃತರ ಪತ್ನಿ ಉಮಾದೇವಿ ಹಾಗೂ ಪುತ್ರ ಕಾರ್ತಿಕ್ ಪ್ರತಿಕೂಲ ಸಾಕ್ಷ್ಯ ನೀಡುವ ಮೂಲಕ ಪ್ರಾಸಿಕ್ಯೂಷನ್‌ಗೆ ಬೆಂಬಲ ನೀಡಿಲ್ಲ. ತನಿಖಾಧಿಕಾರಿಗಳ ಮುಂದೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿಲ್ಲ. ಆರೋಪಿಗಳ ಗುರುತು ಹಚ್ಚಲು ನಡೆಸಲಾಗಿದ್ದ ಪರೇಡ್‌ನಲ್ಲಿ ಕೊಲೆಯಲ್ಲಿ ಭಾಗಿಯಾದ ಆರೋಪಿಗಳನ್ನು ಗುರುತಿಸಿಲ್ಲ ಎಂದು ತೀರ್ಮಾನಿಸಿದ ಹೈಕೋರ್ಟ್, ಆರೋಪಿಗಳನ್ನು ದೋಷಮುಕ್ತ ಗೊಳಿಸಿದೆ.
Bengaluru: ವಸತಿ ಜಾಗದಲ್ಲಿ ಅನಧಿಕೃತ ಅಂಗಡಿಗಳಿದ್ದರೆ ಬಂದ್: ಬಿಬಿಎಂಪಿ
ದಶಕದ ಹಿಂದೆ ನಡೆದಿದ್ದ ಕೊಲೆ: ಆಜಾದ್ ನಗರದ ಪಾಲಿಕೆ ಸದಸ್ಯೆ ಗೌರಮ್ಮ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತರೂ ಆಗಿದ್ದ ‘ಮಹಾ ಪ್ರಚಂಡ’ ಪತ್ರಿಕೆ ಸಂಪಾದಕ ಲಿಂಗರಾಜು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರಿಂದ ಲೋಕಾಯುಕ್ತ ಪೊಲೀಸರು ಗೌರಮ್ಮ ಮನೆ ಮೇಲೆ ದಾಳಿ ನಡೆಸಿದ್ದರು. ಆ ನಂತರ 2012ರ ನ.20ರಂದು ಲಿಂಗರಾಜು ಅವರನ್ನು ಮೈಸೂರು ರಸ್ತೆಯ ಬಿಎಂಕೆ ಬಡಾವಣೆಯ ಅವರ ನಿವಾಸದ ಎದುರೇ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು. ಹೈಕೋರ್ಟ್ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಿತ್ತು.
ಕಾಂಗ್ರೆಸ್ ಟ್ವೀಟರ್ ಖಾತೆ ನಿಷೇಧ ರದ್ದು: ಕೆಜಿಎಫ್ ಹಾಡು ತೆಗೆಯಲು ಕಾಂಗ್ರೆಸ್‌ಗೆ ಹೈಕೋರ್ಟ್ ಸೂಚನೆ
ಪಾಲಿಕೆ ಸದಸ್ಯೆ ಗೌರಮ್ಮ, ಪತಿ ಗೋವಿಂದರಾಜು, ರಂಗಸ್ವಾಮಿ, ಆರ್.ಶಂಕರ್, ರಾಘವೇಂದ್ರ ಚಂದ್ರ, ಶಂಕರ್ ಅಲಿಯಾಸ್ ಗುಂಡ, ಉಮಾಶಂಕರ್, ಸಿ.ವೇಲು, ಜಹೀರ್, ಸುರೇಶ್ ಮತ್ತು ಲೋಕನಾಥ್ ಸೇರಿ 10 ಮಂದಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿದ್ದರು. ಎಲ್ಲಾ 10 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಸಿಟಿ ಮತ್ತು ಸಿವಿಲ್ ನ್ಯಾಯಾಲಯವು 2020ರ ಅ.28ರಂದು ಆದೇಶಿಸಿತ್ತು. ಅದನ್ನು ಆರೋಪಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.