ಬೆಂಗಳೂರಿನಲ್ಲಿ ಡೆಂಘೀ ಜ್ವರಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಅನುಕೂಲ ಆಗುವಂತೆ ಆರೋಗ್ಯ ಇಲಾಖೆಯಿಂದ ಉಚಿತ ಸಹಾಯವಾಣಿ 1800 425 8330 ಸಂಖ್ಯೆಯನ್ನು ಆರಂಭಿಸಲಾಗಿದೆ.
ಬೆಂಗಳೂರು (ಜು.19): ರಾಜ್ಯದಲ್ಲಿ ಡೆಂಘೀ ಆರ್ಭಟ ಮಾತ್ರ ತಗ್ಗುತ್ತಿಲ್ಲ. ಕಳೆದ ವರ್ಷ ಮಳೆಯಿಲ್ಲದ ಹಿನ್ನೆಲೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಕಡಿಮೆಯಿತ್ತು. ಆದರೆ, ಈ ವರ್ಷ ಉತ್ತಮವಾಗಿ ಮಳೆ ಆಗುತ್ತಿದ್ದು, ಎಲ್ಲೆಡೆ ನೀರು ನಿಂತುಕೊಂಡು ಅಪಾಯಕಾರಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಡೆಂಘೀ ಜ್ವರದ ಪ್ರಕರಣಗಳು 11 ಸಾವಿರಕ್ಕಿಂತ ಹೆಚ್ಚಾಗಿದ್ದು, 8 ಜನರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಡೆಂಘಿ ಜ್ವರಕ್ಕೆ ಚಿಕಿತ್ಸೆ ಲಭ್ಯವಾಗುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಟೋಲ್ ಫ್ರೀ ಸಂಖ್ಯೆಯನ್ನು ಆರಂಭಿಸಲಾಗಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಏರಿಕೆಯಾಗುತ್ತಿವೆ. ಈಗಾಗಲೇ 11 ಸಾವಿರ ಗಡಿ ದಾಟಿರುವ ಡೆಂಘೀ ಪ್ರಕರಣಗಳಿಂದ ಸರ್ಕಾರಕ್ಕೆ ಮುಖಭಂಗವೂ ಉಂಟಾಗಿದೆ. ವಿಧಾನ ಮಂಡಲ ಅಧಿವೇಶನದಲ್ಲಿ ವಿಪಕ್ಷಗಳಿಂದ ತೀವ್ರ ಟೀಕೆಯನ್ನು ಎದುರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೊಳೆಗೇರಿ ಪ್ರದೇಶಗಳು ಸೇರಿದಂತೆ ಕೆಲವೆಡೆ ನಮ್ಮ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ. ಆದರೆ, ಇನ್ನೂ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕೆಸಿ ಜನರಲ್ ಆಸ್ಪತ್ರೆ, ಸಿವಿ ರಾಮನ್ ಆಸ್ಪತ್ರೆ, ಜಯನಗರ ಆಸ್ಪತ್ರೆ,ಕೆಆರ್ ಪುರಂ ಜನರಲ್ ಆಸ್ಪತ್ರೆ ಹಾಗೂ ವಾಣಿವಿಲಾಸ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಜೊತೆಗೆ, ಡೆಂಘೀ ಜ್ವರಕ್ಕೆ ಚಿಕಿತ್ಸೆ ಪಡೆಯಲು ಅನುಕೂಲ ಆಗುವಂತೆ ಉಚಿತ ಸಹಾಯವಾಣಿ 1800 425 8330 ಸಂಖ್ಯೆಯನ್ನು ಆರಂಭಿಸಲಾಗಿದೆ.
ರಾಮನಗರದಲ್ಲಿ ಡೆಂಘೀ ಜ್ವರಕ್ಕೆ 19 ವರ್ಷದ ಕಾಲೇಜು ಯುವತಿ ಬಲಿ
ಬೆಂಗಳೂರಿನಲ್ಲಿ ಈವರೆಗೆ ಬರೋಬ್ಬರಿ 4,300ಕ್ಕೂ ಅಧಿಕ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಇನ್ನೂ 165ಕ್ಕೂ ಹೆಚ್ಚಿನ ಜನರು ಡೆಂಘೀ ಜ್ವರದಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಬೆಂಗಳೂರಿನಲ್ಲಿ ಡೆಂಘೀ ಜ್ವರಕ್ಕೆ ಒಬ್ಬರು ಬಲಿಯಾಗಿದ್ದಾರೆ. ಇನ್ನು ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಸೊಳ್ಳೆಗಳ ಉತ್ಪತ್ತಿಗೂ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಡೆಂಘೀ ಜ್ವರದ ನಿಯಂತ್ರಣ, ಡೆಂಘೀ ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಹಾಗೂ ಸಾವಿನ ಪ್ರಮಾಣ ತಗ್ಗಿಸುವುದಕ್ಕೆ ಕ್ರಮ ಕೈಗೊಳ್ಳು ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.
ಬೆಂಗಳೂರು: 9 ದಿನದಲ್ಲೇ 1500 ಡೆಂಘೀ ಕೇಸ್, ಹೆಚ್ಚಿದ ಆತಂಕ..!
ಇನ್ನು ಬೆಂಗಳೂರಿನಲ್ಲಿ ಡೆಂಘೀ ಜ್ವರದ ಲಕ್ಷ ಗಳು ಕಂಡುಬಂದಲ್ಲಿ ಹಾಗೂ ಡೆಂಘೀ ಜ್ವರಕ್ಕೆ ಸೂಕ್ತ ಚಿಕಿತ್ಸೆ ಸಿಗದೇ ಹೋದಲ್ಲಿ ಜನರು ಅಥವಾ ರೋಗಿಗಳು ಆರೋಗ್ಯ ಇಲಾಖೆ ನೀಡಿರುವ ಉಚಿತ ಸಹಾಯವಾಣಿ ಸಂಖ್ಯೆ 1800 425 8330 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಜೊತೆಗೆ, ಸಹಾಯವಾಣಿ ಸಂಖ್ಯೆಯಲ್ಲಿ ತಿಳಿಸಲಾಗುವ ಮಾರ್ಗಸೂಚಿಗಳನ್ನು ಅನುಸರಿಸಿ ಸಂಬಂಧಪಟ್ಟ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಡೆಂಘೀ ಜ್ವರಿದಂದ ಜೀವಹಾನಿ ಆಗುವುದನ್ನು ತಪ್ಪಿಸಿಕೊಳ್ಳಬಹುದು.