ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಳಕೋಡು ಗ್ರಾಮದಲ್ಲಿ ರೋಗಿಗಳನ್ನ ಜೋಳಿಗೆಯಲ್ಲಿ ಹೊತ್ತುಕೊಂಡು ಹೋಗುವಂತಹಾ ಪರಿಸ್ಥಿತಿ ಇಂದಿಗೂ ಜೀವಂತವಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.12): ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಳಕೋಡು ಗ್ರಾಮದಲ್ಲಿ ರೋಗಿಗಳನ್ನ ಜೋಳಿಗೆಯಲ್ಲಿ ಹೊತ್ತುಕೊಂಡು ಹೋಗುವಂತಹಾ ಪರಿಸ್ಥಿತಿ ಇಂದಿಗೂ ಜೀವಂತವಾಗಿದೆ. ಸೂಕ್ತ ರಸ್ತೆಯಿಲ್ಲದೇ ಅನಾರೋಗ್ಯ ಪೀಡಿತ ವೃದ್ಧೆಯನ್ನ ಆಸ್ಪತ್ರೆಗೆ ಸೇರಿಸಲು ಸುಮಾರು ನಾಲ್ಕು ಕಿಲೋ ಮೀಟರ್ ದೂರ ಜೋಳಿಗೆಯಲ್ಲೇ ಹೊತ್ತೊಯ್ದಿದ್ದಾರೆ. ಮಳೆ ಮಧ್ಯೆಯೇ 70 ವರ್ಷದ ಶೇಷಮ್ಮ ಎಂಬ ವೃದ್ಧೆಯನ್ನ ಆಸ್ಪತ್ರೆಗೆ ಸಾಗಿಸಲು ಸಂಬಂಧಿಕರು, ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
undefined
ಕಾಫಿನಾಡಲ್ಲಿ ಜೋಳಿಗೆ ಪಯಣ ಇಂದಿಗೂ ಜೀವಂತ:
ಆರೋಗ್ಯ ಸರಿ ಇಲ್ಲ ಅಂದ್ರೆ ಆಂಬುಲೆನ್ಸ್ ಅಥವ ಇನ್ಯಾವ್ದೋ ವಾಹನ ಮನೆ ಬಾಗಿಲಿಗೆ ಬಂದು ನಿಲ್ಲೋ ಕಾಲವಿದು. ಆದ್ರೆ ಈ ಗ್ರಾಮದಲ್ಲಿ ಮಾತ್ರ ಹುಷಾರಿಲ್ಲ ಅಂತ ಯಾರಾದ್ರು ಮಲ್ಗುದ್ರೆ ನಾಲ್ಕು ಬೆಡ್ಶೀಟ್, ಒಂದು ಮರದ ಪೋಲ್ ಇಟ್ಕೊಂಡು ಇಬ್ರು ಪುರುಷರು ಬಂದು ನಿಲ್ಲುವ ಪರಿಸ್ಥಿತಿ ಇದೆ.ಜೋಳಿಗೆಯಲ್ಲಿ ರೋಗಿಯನ್ನ ಕಟ್ಕೊಂಡು ದಟ್ಟಕಾನನದಲ್ಲಿ ಹೆಜ್ಜೆ ಹಾಕುವ ಪರಿಸ್ಥಿತಿ ಇದೆ.ತೀವ್ರ ಜ್ವರದಿಂದ ಬಳಲುತ್ತಿದ್ದ ಶೇಷಮ್ಮ ಎಂಬ ವೃದ್ಧೆಯನ್ನ ಮರದ ಕಂಬಕ್ಕೆ ಬೆಡ್ಶೀಟ್ಗಳನ್ನ ಕಟ್ಟಿಕೊಂಡು ಸುಮಾರು 4 ಕಿಲೋ ಮೀಟರ್ ದೂರ ಹೊತ್ತೊಯ್ದು ಆಟೋ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸ್ಥಳೀಯರು ಅನಾರೋಗ್ಯ ಪೀಡಿತ ವೃದ್ಧೆಯನ್ನ ಕಂಬದಲ್ಲಿ ಕಟ್ಟಿಕೊಂಡು ಕಾಡು-ಮೇಡಿನ ನಡುವೆ ಸಾಗಿಸೋ ಪರಿಸ್ಥಿತಿ ಇಂದಿಗೂ ಜೀವಂತವಾಗಿದ್ದು ಜನಸಾಮಾನ್ಯರು ಜನಪ್ರತಿನಿಧಿಗಳು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಸ್ಪರ್ಧಿಸ್ತಾರಾ?
ಜನಪ್ರತಿನಿಧಿಗಳು ವಿರುದ್ದ ಆಕ್ರೋಶ :
ಕಳಕೋಡು ಗ್ರಾಮಸ್ಥರ ಈ ಕಣ್ಣೀರಿನ ಕಥೆ ಇಂದು ನಿನ್ನೆಯದಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಈ ಭಾಗದ ಜನ ಇದೇ ರೀತಿ ಬದುಕುತ್ತಿದ್ದಾರೆ. ಈ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನಮಗೊಂದು ಸುಸಜ್ಜಿತ ರಸ್ತೆ ನಿರ್ಮಿಸಿಕೊಡಿ ಅಂತ ಪರಿಪರಿಯಾಗಿ ಮನವಿ ಮಾಡುತ್ತಲೇ ಬರುತ್ತಿದ್ದಾರೆ.
ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದಾರೆ. ಎಲ್ಲರಿಗೂ ಪತ್ರ ಬರೆದು ಸುಸ್ತಾಗಿದ್ದಾರೆ. ಆದರೆ, ಎಷ್ಟೆ ಮನವಿ ಮಾಡಿದರೂ ಪತ್ರ ಬರೆದರೂ ಜನರ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕಳಕೋಡು ಗ್ರಾಮದಿಂದ ಈಚಲುಹೊಳೆ ಗ್ರಾಮದ ಮಧ್ಯೆ 900 ಮೀಟರ್ ದೂರ ಅರಣ್ಯ ಪ್ರದೇಶವಿದ್ದು ರಸ್ತೆ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಮಕ್ಕೆ ಸುಮಾರು 4 ಕಿಲೋ ಮೀಟರ್ ದೂರ ರಸ್ತೆಯಿಲ್ಲದೇ ಇಂದಿಗೂ ಕಾಡು-ಮೇಡು ದಾಟಿ ಸ್ಥಳೀಯರು ಸಂಚಾರ ನಡೆಸುವ ದುಸ್ಥಿತಿ ಎದುರಾಗಿದೆ.
ಕೃಷಿ ಕಾಯಕದಲ್ಲಿ ಮಿಂದೆದ್ದ ವಿದ್ಯಾರ್ಥಿ ಸಮುದಾಯ
ಒಟ್ಟಾರೆ, ಕಳಸದಿಂದ 20 ಕಿ.ಮೀ. ದೂರವಿರೋ ಕಳಕೋಡು ಗ್ರಾಮಸ್ಥರ ಬದುಕು ನಿಜಕ್ಕೂ ಶೋಚನಿಯ. ಗ್ರಾಮದ ಮಕ್ಕಳಿಗೆ ವಿದ್ಯಾಭ್ಯಾಸ, ಆನ್ಲೈನ್ ಶಿಕ್ಷಣ ಗಗನಕುಸುಮವಾಗಿದೆ. ಮಳೆಗಾಲದಲ್ಲಿ ದಾಖಲೆ ಮಳೆ ಸುರಿಯೋದ್ರಿಂದ ಜನ ಭಯದಲ್ಲೇ ಬದುಕುವಂತಾಗಿದೆ. ಇಂತಹಾ ಸಂದರ್ಭದಲ್ಲಿ ಮನೆಯಲ್ಲಿ ಯಾರಾದ್ರೂ ಅನಾರೋಗ್ಯಕ್ಕೀಡಾದ್ರೆ ಅವರನ್ನ ಆಸ್ಪತ್ರೆಗೆ ಸಾಗಿಸೋದು ಸವಾಲೇ ಸರಿ. ಸದ್ಯ ವೃದ್ಧೆಯನ್ನ ಜೋಳಿಗೆಯಲ್ಲಿ ಕಟ್ಕೊಂಡು ಆಸ್ಪತ್ರೆಗೆ ದಾಖಲಿಸಿದ್ದು ಜನ ಸರ್ಕಾರದ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ. ಇನ್ನಾದ್ರು ಸಂಬಂಧಪಟ್ಟವರು ಇವ್ರಿಗೊಂದು ರಸ್ತೆ ನಿರ್ಮಿಸಿಕೊಡ್ತಾರಾ ಕಾದುನೋಡ್ಬೇಕು.