ದೇಶಾದ್ಯಂತ ಸುದ್ದಿಯಾಗಿರುವ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಮನೆಯಲ್ಲಿರುವ ಮೂಕವೇದನೆ ಅನುಭವಿಸುತ್ತಿರುವ ಹಸು, ಎಮ್ಮೆ, ಮೇಕೆಗಳಿಗೆ ಭದ್ರತೆ ಒದಗಿಸಿರುವ ಪೊಲೀಸರೇ ಅವುಗಳಿಗೆ ಮೇವು ನೀಡುತ್ತಿದ್ದಾರೆ. ಈ ಮೂಲಕ ಪೊಲೀಸರು ಮೂಕ ಪ್ರಾಣಿಗಳ ವೇದನೆಗೆ ಸ್ಪಂದನೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ (ಜು.13) : ದೇಶಾದ್ಯಂತ ಸುದ್ದಿಯಾಗಿರುವ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಬರ್ಬರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಮನೆಯಲ್ಲಿರುವ ಮೂಕವೇದನೆ ಅನುಭವಿಸುತ್ತಿರುವ ಹಸು, ಎಮ್ಮೆ, ಮೇಕೆಗಳಿಗೆ ಭದ್ರತೆ ಒದಗಿಸಿರುವ ಪೊಲೀಸರೇ ಅವುಗಳಿಗೆ ಮೇವು ನೀಡುತ್ತಿದ್ದಾರೆ. ಈ ಮೂಲಕ ಪೊಲೀಸರು ಮೂಕ ಪ್ರಾಣಿಗಳ ವೇದನೆಗೆ ಸ್ಪಂದನೆ ವ್ಯಕ್ತಪಡಿಸಿದ್ದಾರೆ.
ಜೈನ ಮುನಿ ಹತ್ಯೆ ಪ್ರಕರಣದಲ್ಲಿ ನಾರಾಯಣ ಮಾಳಿ ಹೆಸರು ಕೇಳಿ ಬರುತ್ತಿದ್ದಂತೆ ಆತನ ಕುಟುಂಬಸ್ಥರು ತಮ್ಮ ಮನೆಯನ್ನು ಖಾಲಿ ಮಾಡಿ ತಮ್ಮ ಸಂಬಂಧಿಕರ ಮನೆ ಸೇರಿಕೊಂಡಿದ್ದಾರೆ. ಇತ್ತ ಆರೋಪಿ ನಾರಾಯಣ ಜೈಲು ಪಾಲಾಗಿದ್ದಾನೆ. ಆದರೆ ಆತನ ಕುಟುಂಬಸ್ಥರು ಶೆಡ್‌ನಲ್ಲಿರುವ ಎರಡು ಆಕಳು ಹಾಗೂ ಎರಡು ಎಮ್ಮೆ ಮತ್ತು 40 ಕ್ಕೂ ಹೆಚ್ಚು ಮೇಕೆಗಳನ್ನು ಬಿಟ್ಟು ಮನೆ ತೊರೆದಿದ್ದಾರೆ. ಹೀಗಾಗಿ ಅವುಗಳಿಗೆ ಮೇವು, ನೀರು ಕುಡಿಸಲು ಯಾರೂ ಇಲ್ಲದಂತಾಗಿತ್ತು. ಆದರೆ, ಆರೋಪಿ ನಾರಾಯಣ ಮಾಳಿ ಮನೆಗೆ ಭದ್ರತೆಗೆಂದು ನಿಯೋಜನೆಗೊಂಡ ಕೆಎಸ್‌ಆರ್‌ಪಿ ಹಾಗೂ ಚಿಕ್ಕೋಡಿ ಠಾಣೆಯ ಪೊಲೀಸರು ಮೂಕ ಪ್ರಾಣಿಗಳ ಸಂಕಷ್ಟವನ್ನು ಕಣ್ಣಾರೆ ಕಂಡು ಮಮ್ಮಲ ಮರುಕ ಪಡುವ ಮೂಲಕ ಕೆಲವರು ಭಾವುಕರಾಗಿದ್ದಾರೆ. ಪೊಲೀಸರೇ ಅವುಗಳ ಪೋಷಣೆ ಮಾಡುತ್ತಿದ್ದಾರೆ.
ಜೈನ ಮುನಿ ಹತ್ಯೆ ಪ್ರಕರಣ: ಭದ್ರತೆ ಜೊತೆ ಪೊಲೀಸ್ ಸಿಬ್ಬಂದಿಯ ಮಾನವೀಯ ಕಾರ್ಯ ..!
ಕೆಲವು ಸಿಬ್ಬಂದಿ ಅಲ್ಲೆ ಪಕ್ಕದಲ್ಲಿರುವ ಜಮೀನಿನಲ್ಲಿ ಹಸಿಮೇವು ಕಟಾವು ಮಾಡಿಕೊಂಡು ಬಂದರೆ, ಇನ್ನೂ ಕೆಲವರು ಅದನ್ನು ಮೇವು ಕತ್ತರಿ ಪ್ರಾಣಿಗಳಿಗೆ ಹಾಕಿದ್ದಾರೆ. ಮತ್ತೆ ಕೆಲವರು ನೀರು ಕುಡಿಸುವುದು ಮತ್ತು ಶೆಗಣಿ ಎತ್ತುವ ಕಾರ್ಯವನ್ನು ನಿತ್ಯ ಮಾಡುತ್ತಿದ್ದಾರೆ. ಅಲ್ಲದೇ ಮನೆಯಲ್ಲಿ ಸಾಕಿದ್ದ ನಾಯಿ ಮರಿಯನ್ನು ಕಂಡ ಪೊಲೀಸರು ಅದನ್ನು ಎತ್ತಿಕೊಂಡು ಪ್ರೀತಿ ತೋರಿಸುವುದು ಮತ್ತು ಅದಕ್ಕೆ ಆಹಾರ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ.
ನಾರಾಯಣ ಮಾಳಿ ಆರೋಪಿಯಾದರೂ ಸಹ ಆತ ತನ್ನ ಮನೆಯಲ್ಲಿ ಕಟ್ಟಿದ್ದ ಮೂಕ ಪ್ರಾಣಿಗಳ ರೋಧನೆ ನೋಡಲಾಗದೆ ಪೊಲೀಸರೇ ಅವುಗಳ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಪೊಲೀಸರ ಈ ಮಾನವೀಯ ಕೆಲಸಕ್ಕೆ ಈಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜೈನಮುನಿ ಹತ್ಯೆ ಪ್ರಕರಣ: ಯಾರೇ ಆರೋಪಿಗಳಿದ್ದರೂ ತನಿಖೆಯಿಂದ ಗೊತ್ತಾಗುತ್ತದೆ -ಸಚಿವ ಡಿ.ಸುಧಾಕರ
ನಾವು ಕೂಡ ರೈತ ಕುಟುಂಬದಿಂದ ಬಂದವರು. ನಮ್ಮ ಮನೆಯಲ್ಲಿಯೂ ಪ್ರಾಣಿಗಳನ್ನು ಸಾಕಿದ ಅನುಭವ ಇದೆ. ಮನುಷ್ಯ ಕೆಟ್ಟಸಮಯದಲ್ಲಿ ಅಪರಾಧಿಕ ಕೃತ್ಯ ಎಸಗಬಹುದು ಆದರೆ ಮೂಕ ಪ್ರಾಣಿಗಳು. ಅವು ಬಾಯ್ಬಿಟ್ಟು ಆಹಾರ ಮತ್ತು ನೀರನ್ನು ಕೇಳುವುದಿಲ್ಲ. ಅವುಗಳ ರೋದನೆಯನ್ನು ನಾವು ಅರಿತುಕೊಳ್ಳಬೇಕು.
- ಹೆಸರೇಳಲಿಚ್ಚಿಸದ ಸಿಬ್ಬಂದಿ