ಲಾರಿ ನಿಲ್ಲಿಸಿ ಮಲಗಿದ್ದ ಚಾಲಕ ಹೃದಯಾಘಾತದಿಂದ ಮೃತಪಟ್ಟ ಪ್ರಕರಣ: ಪರಿಹಾರ ನೀಡಲು ವಿಮಾ ಕಂಪನಿಗೆ ಹೈಕೋರ್ಟ್ ಆದೇಶ
ವೆಂಕಟೇಶ್ ಕಲಿಪಿ
ಬೆಂಗಳೂರು(ಸೆ.25): ಕರ್ತವ್ಯದಲ್ಲಿರುವಾಗ ವಾಹನ ನಿಲುಗಡೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದರೆ, ಅದನ್ನು ಉದ್ಯೋಗ ನಿರ್ವಹಣೆ ವೇಳೆ ಸಂಭವಿಸಿದ ಸಾವು ಎಂಬುದಾಗಿ ಪರಿಗಣಿಸಿ, ಮೃತ ಚಾಲಕನ ಕುಟುಂಬಕ್ಕೆ ವಿಮಾ ಪರಿಹಾರ ನೀಡಬೇಕೆಂದು ಹೈಕೋರ್ಟ್ ಆದೇಶಿಸಿದೆ. ಲಾರಿಯನ್ನು ನಿಲುಗಡೆ ಮಾಡಿ ನಿದ್ರಿಸುವಾಗ ಹೃದಯಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದ ಪ್ರಕರಣದಲ್ಲಿ ಪರಿಹಾರ ನೀಡುವಂತೆ ಕಾರ್ಮಿಕ ಆಯುಕ್ತರ ಆದೇಶ ರದ್ದು ಕೋರಿ ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ನ್ಯಾಯಪೀಠ ಆದೇಶ ಮಾಡಿದೆ.
ವಾಹನ ನಿಲುಗಡೆ ಮಾಡಿ ನಿದ್ದೆ ಮಾಡುತ್ತಿದ್ದ ವೇಳೆ ಚಾಲಕನ ಸಾವು ಸಂಭವಿಸಿದೆ. ಆದರೆ, ವಾಹನ ಬಳಕೆ ಅಂದರೆ ಲಾರಿ ಓಡಿಸುವಾಗ ಅಪಘಾತ ಉಂಟಾಗಿ ಚಾಲಕ ಮೃತಪಟ್ಟಿಲ್ಲ. ಹಾಗಾಗಿ, ಪರಿಹಾರ ನೀಡುವಂತೆ ಕಾರ್ಮಿಕ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದೆ ಎಂಬ ವಿಮಾ ಕಂಪನಿಯ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ವಾಹನ ಬಳಕೆ ಎಂದರೆ ವಾಹನ ಚಾಲನೆ ಮಾಡುವಾಗಲೇ ಚಾಲಕ ಸಾವು ಸಂಭವಿಸಬೇಕು ಎಂದರ್ಥವಲ್ಲ ಎಂದು ಹೇಳಿದೆ.
ಸಿಇಟಿ ರ‍್ಯಾಂಕ್ ಸೂತ್ರ: ರಿಪೀಟರ್ಸ್‌ಗೆ 6% ಕಡಿತ, ರ‍್ಯಾಂಕಿಂಗ್ ಪಟ್ಟಿ ಪ್ರಕಟಕ್ಕೆ ಹೈಕೋರ್ಟ್ ಆದೇಶ
ಕರ್ತವ್ಯದ ಸಮಯದಲ್ಲಿ ಚಾಲಕ ಸಾವನ್ನಪ್ಪಿದ್ದಾನೆ ಎಂದು ಲಾರಿ ಮಾಲಿಕ ಹೇಳಿರುವುದನ್ನು ವಿಮಾ ಕಂಪನಿಯೂ ಒಪ್ಪುತ್ತದೆ. ವಾಹನ ಚಾಲನೆ ಒತ್ತಡದ ಕೆಲಸ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ದರಿಂದ ವಿಮಾ ಕಂಪನಿಯ ವಾದ ಪುರಸ್ಕರಿಸಲಾಗದು. ವಾಹನ ನಿಲುಗಡೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಘಾತ ಸಂಭವಿಸಿ ಚಾಲಕ ಸಾವನ್ನಪ್ಪಿದರೆ, ಅದನ್ನು ಉದ್ಯೋಗ ಮಾಡುವ ವೇಳೆ ಸಂಭವಿಸಿದ ಸಾವು ಎಂದೇ ಪರಿಗಣಿಸಿ ಮೃತ ಚಾಲಕನ ಕುಟುಂಬಕ್ಕೆ ವಿಮಾ ಕಂಪನಿ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ನಿವಾಸಿ ಈರಣ್ಣ, ಮಂಗಳೂರಿನ ಸುರೇಶ್ ಎಂಬುವರ ಲಾರಿಯ ಚಾಲಕರಾಗಿದ್ದರು. 2008ರಲ್ಲಿ ಸುರತ್ಕಲ್‌ನ ಇಡ್ಯಾ ಗ್ರಾಮದ ಪೆಟ್ರೋಲ್ ಬಂಕ್ ಸಮೀಪ ಲಾರಿ ನಿಲುಗಡೆ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಘಾತವಾಗಿ ಈರಣ್ಣ ಮೃತಪಟ್ಟಿದ್ದರು. ಕಾರ್ಮಿಕರ ಆಯುಕ್ತರು, ಮೃತ ಈರಣ್ಣನ ಕುಟುಂಬಕ್ಕೆ ವಾರ್ಷಿಕ ಶೇ.12ರಷ್ಟು ಬಡ್ಡಿ ದರಲ್ಲಿ ಒಟ್ಟು 3,03,620 ರು. ಪರಿಹಾರ ಪಾವತಿಸಬೇಕು ಎಂದು 2009ರ ಆ.20ರಂದು ಆದೇಶಿಸಿದ್ದರು. ಆದೇಶ ರದ್ದುಪಡಿಸುವಂತೆ ಕೋರಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
Bengaluru: ಬಿಬಿಎಂಪಿ ವಾರ್ಡ್ ಮೀಸಲಾತಿಗೆ ಹೈಕೋರ್ಟ್ ಆಕ್ಷೇಪ
ವಿಮಾ ಕಂಪನಿ ಆಕ್ಷೇಪ:
ವಿಚಾರಣೆ ವೇಳೆ ವಿಮಾ ಕಂಪನಿ ಪರ ವಕೀಲರು, ಲಾರಿ ಚಲಾಯಿಸುವಾಗ ಅಪಘಾತ ಉಂಟಾಗಿ ಮೃತಪಟ್ಟಿಲ್ಲ. ಹಾಗಾಗಿ, ಪರಿಹಾರ ನೀಡಬೇಕೆಂಬ ಕಾರ್ಮಿಕ ಆಯುಕ್ತರ ಆದೇಶ ಸರಿಯಲ್ಲ. ಚಾಲಕ ನಿತ್ಯ ಮದ್ಯಪಾನ ಮಾಡುತ್ತಾನೆಂದು ಲಾರಿ ಮಾಲಿಕರೇ ತಮ್ಮ ದೂರಿನಲ್ಲಿ ಹೇಳಿದ್ದಾರೆ. ಇನ್ನು ವಾಹನ ಬಳಕೆ ಮತ್ತು ಸಾವಿನ ನಡುವೆ ಅನಿರೀಕ್ಷಿತ ಸಂಬಂಧ ಇರಬೇಕಾಗುತ್ತದೆ. ಹಾಗಾಗಿ ಈರಣ್ಣನ ಸಾವನ್ನು ಲಾರಿ ಚಾಲನೆಯಿಂದ ಅಥವಾ ಉದ್ಯೋಗ ಮಾಡುವ ಸಮಯದಲ್ಲಿ ಉಂಟಾದ ಸಾವು ಎಂದು ಪರಿಗಣಿಸಲಾಗದು ಎಂದು ಹೇಳಿದ್ದರು.
ಮೃತನ ಪತ್ನಿ ಪರ ವಕೀಲರು, ಈರಣ್ಣ ಮೃತಪಟ್ಟ ವೇಳೆ ಮದ್ಯಪಾನ ಮಾಡಿದ್ದರು ಎಂಬುದನ್ನು ಸಾಬೀತುಪಡಿಸುವ ಯಾವೊಂದು ದಾಖಲೆಯನ್ನು ಕೋರ್ಟ್‌ಗೆ ಸಲ್ಲಿಸಿಲ್ಲ. ಈರಣ್ಣ ಅವರು ಭಾರೀ ವಾಹನವಾಗಿರುವ ಟಿಪ್ಪರ್ ಲಾರಿ ಚಾಲನೆ ಮಾಡುತ್ತಿದ್ದರು. ಅದರ ಚಾಲನೆಯಿಂದ ಒತ್ತಡ ಏರ್ಪಡುತ್ತದೆ. ಆ ಒತ್ತಡದಿಂದಲೇ ಹೃದಯಾಘಾತ ಉಂಟಾಗಿ ಈರಣ್ಣ ಸಾವನ್ನಪ್ಪಿದ್ದಾನೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ವಾದ ಪುರಸ್ಕರಿಸಿದ ನ್ಯಾಯಪೀಠ ಕಾರ್ಮಿಕ ಆಯುಕ್ತರ ಆದೇಶವನ್ನು ಎತ್ತಿಹಿಡಿದಿದೆ.