ದೇಶದಲ್ಲಿ ಜಾರಿಯಾಗಲಿರುವ ಮೂರು ಹೊಸ ಕಾನೂನುಗಳು ಡಿಜಿಟಲ್ ದಾಖಲೆಗಳ ಸಂಗ್ರಹ ಮತ್ತು ತ್ವರಿತ ನ್ಯಾಯ ಖಾತ್ರಿಪಡಿಸಲಿವೆ ಎಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಆರ್. ವೆಂಕಟ ಸುದರ್ಶನ್ ಹೇಳಿದರು.
ಬೆಂಗಳೂರು (ಜೂ.25): ಹೊಸ ಕಾನೂನುಗಳಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ-2023, ಭಾರತೀಯ ನ್ಯಾಯ ಸಂಹಿತಾ-2023 ಮತ್ತು ಭಾರತೀಯ ಸಾಕ್ಷಿ ಅಧಿನಿಯಮ-2023 ನಿಜವಾಗಿಯೂ ಉತ್ತಮ ಕಾನೂನುಗಳಾಗಿವೆ. ಡಿಜಿಟಲ್ ದಾಖಲೆಗಳ ಸಂಗ್ರಹ ಮತ್ತು ತ್ವರಿತ ನ್ಯಾಯ ಖಾತ್ರಿಪಡಿಸಲಿವೆ ಎಂದು ನಿವೃತ್ತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಆರ್. ವೆಂಕಟ ಸುದರ್ಶನ್ ಹೇಳಿದರು.
ಬೆಂಗಳೂರಿನ ಕೇಂದ್ರ ವಾರ್ತಾ ಶಾಖೆ (ಪಿ.ಐ.ಬಿ) ವತಿಯಿಂದ ಮಂಗಳವಾರ ಆಯೋಜಿಸಿದ್ದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರ ಅವರು, ಹೊಸ ಕಾನೂನುಗಳು ಉತ್ತಮವಾಗಿದ್ದು, ಅವು ಶ್ರೀಸಾಮಾನ್ಯರ ಜೀವನವನ್ನು ಸುಲಭಗೊಳಿಸಲು ಮತ್ತು ತ್ವರಿತ ನ್ಯಾಯವನ್ನು ಖಾತ್ರಿಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಇನ್ನು ಮೂರು ಹೊಸ ಕ್ರಿಮಿನಲ್ ಕಾನೂನುಗಳು 1 ಜುಲೈ 2024 ರಿಂದ ಜಾರಿಗೆ ಬರಲಿದ್ದು, ಇಲ್ಲಿ ವಸಾಹತುಶಾಹಿ ಕಾಲದ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC), ಇಂಡಿಯನ್ ಪೀನಲ್ ಕೋಡ್ (IPC) ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಅನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ (BSA) ಎಂದು ಕ್ರಮವಾಗಿ ಬದಲಾಯಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್‌ನಲ್ಲಿ ಡಿಸಿಎಂ ದಂಗಲ್ ; ಸಿದ್ದು ಬಣದವರ ಬಡಿದಾಟಕ್ಕೆ ಮೆತ್ತಗಾದ ಡಿಕೆಶಿ.. ಹೆಚ್ಚಾಗುತ್ತಾ ಡಿಸಿಎಂ ಸ್ಥಾನ?
ಕರ್ನಾಟಕ ಸರ್ಕಾರದ ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಅಭಿಯೋಜಕರಾದ ಶೈಲಜಾ ಕೃಷ್ಣ ನಾಯಕ್ ಮಾತನಾಡಿ, 'ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ (BNSS) ಮೂರು ಕಾನೂನುಗಳು ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯನ್ನು ತರುತ್ತವೆ. ನಾಗರಿಕರನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸುತ್ತವೆ. ಅಲ್ಲದೆ, ಇದು ಪೊಲೀಸರ ಕಾರ್ಯನಿರ್ವಹಣೆಗೆ ಕೂಡ ಸಹಾಯ ಮಾಡುತ್ತದೆ. ಇದು ತ್ವರಿತ ನ್ಯಾಯವನ್ನು ಖಚಿತಪಡಿಸುತ್ತದೆ. ಡಿಜಿಟಲ್ ದಾಖಲೆಗಳನ್ನು ಈ ಕಾನೂನುಗಳೊಂದಿಗೆ ಪ್ರಾಥಮಿಕ ಪುರಾವೆಗಳಾಗಿ ಗುರುತಿಸಿರುವುದು ಒಂದು ಪ್ರಮುಖ ಬದಲಾವಣೆಯಾಗಿದೆ' ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ಮಾತನಾಡಿ 'ಇದು ಕ್ರಿಮಿನಲ್ ಕಾನೂನುಗಳಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದೆ. ಸಾರ್ವಜನಿಕರಿಗೆ ಮತ್ತು ಮಾಧ್ಯಮಗಳಿಗೆ ಅರಿವು ಮೂಡಿಸುವಲ್ಲಿ ಕಾನೂನು ತಜ್ಞರ ವರ್ಗವು ಮುಂಚೂಣಿಯಲ್ಲಿರುವುದು ಬಹಳ ಮುಖ್ಯ, ಇದರಿಂದ ಈ ಕಾನೂನುಗಳ ಸರಿಯಾದ ವಿವರಗಳು ಮತ್ತು ಪರಿಣಾಮಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿಯುತ್ತದೆ' ಎಂದು ತಿಳಿಸಿದರು.