ದ.ಕ. ಜಿಲ್ಲೆಯಲ್ಲಿರುವ ಸ್ಲಂ ಪ್ರದೇಶಗಳು ಹಾಗೂ ಈ ಪ್ರದೇಶದಲ್ಲಿ ವಾಸಿಸುವವರಿಗೆ ಕಳೆದ 10 ವರ್ಷಗಳಲ್ಲಿ ಮಂಜೂರಾಗಿರುವ ಮನೆಗಳು ಸೇರಿದಂತೆ ಸಮಗ್ರ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಅಧಿಕಾರಿಗಳು ನೀಡಬೇಕು. ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಸ್ಥಳದಲ್ಲೇ ಸಸ್ಪೆಂಡ್ ಮಾಡುವುದಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು (ಸೆ.7) : ದ.ಕ. ಜಿಲ್ಲೆಯಲ್ಲಿರುವ ಸ್ಲಂ ಪ್ರದೇಶಗಳು ಹಾಗೂ ಈ ಪ್ರದೇಶದಲ್ಲಿ ವಾಸಿಸುವವರಿಗೆ ಕಳೆದ 10 ವರ್ಷಗಳಲ್ಲಿ ಮಂಜೂರಾಗಿರುವ ಮನೆಗಳು ಸೇರಿದಂತೆ ಸಮಗ್ರ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಅಧಿಕಾರಿಗಳು ನೀಡಬೇಕು. ಮಾಹಿತಿಯಲ್ಲಿ ವ್ಯತ್ಯಾಸ ಕಂಡುಬಂದರೆ ಸ್ಥಳದಲ್ಲೇ ಸಸ್ಪೆಂಡ್ ಮಾಡುವುದಾಗಿ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಈ ಎಚ್ಚರಿಕೆ ನೀಡಿದರು.
ದ.ಕ. ಜಿಲ್ಲೆಯ ಸ್ಲಂ ಪ್ರದೇಶಗಳಲ್ಲಿ ಕಳೆದ 10 ವರ್ಷಗಳಲ್ಲಿ ಎಷ್ಟು ಮನೆಗಳು ಮಂಜೂರಾಗಿವೆ, ಅವು ಯಾವ ಹಂತದಲ್ಲಿವೆ ಎಂದು ಸಚಿವರು ಪ್ರಶ್ನಿಸಿದಾಗ, ಸ್ಲಂ ಬೋರ್ಡ್‌ನಡಿ 500 ಮನೆಗಳಷ್ಟೇ ಮಂಜೂರಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ತಾಲೂಕುವಾರು ಮಾಹಿತಿ ನೀಡಲು ತಿಳಿಸಿದ ಸಚಿವರು ಉಳ್ಳಾಲದಲ್ಲಿ ಎಷ್ಟು ಮನೆಗಳು ಮಂಜೂರಾಗಿವೆ ಎಂದಾಗ ಒಂದೂ ಮನೆ ಇಲ್ಲ ಎಂಬ ಉತ್ತರಕ್ಕೆ ನಿಬ್ಬೆರಗಾದರು.
ಇಂಡಿಯಾ ಹೆಸರು ಬದಲಾವಣೆ ಚುನಾವಣಾ ಗಿಮಿಕ್: ಸಚಿವ ಜಮೀರ್ ಅಹ್ಮದ್
ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಗರ ಮತ್ತು ಗ್ರಾಮಾಂತರದಲ್ಲಿ ಎಷ್ಟು ಮನೆಗಳು ಮಂಜೂರಾಗಿವೆ ಎಂದು ಪ್ರಶ್ನಿಸಿದರು. ನಗರ ಪ್ರದೇಶದಲ್ಲಿ ವಾಜಪೇಯಿ ವಸತಿ ಯೋಜನೆಯಡಿ 1,125 ಮನೆಗಳ ಗುರಿ ನೀಡಲಾಗಿದೆ. 635 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಅಂಬೇಡ್ಕರ್ ವಸತಿ ಯೋಜನೆಯಡಿ 270 ಗುರಿಯಡಿ 164 ಆಯ್ಕೆಯಾಗಿದ್ದು, ಮನೆಗಳು ಪ್ರಗತಿ ಹಂತದಲ್ಲಿದೆ ಎಂದು ಅಧಿಕಾರಿಗಳು ಹೇಳಿದಾಗ ಇದು ಇಡೀ ಜಿಲ್ಲೆಯ ಅಂಕಿಅಂಶವೇ ಎಂದು ಸಚಿವರು ಪ್ರಶ್ನಿಸಿದಾಗ ಅಧಿಕಾರಿಗಳು ಹೌದೆಂದರು.
ಅಧಿಕಾರಿಗಳ ಉತ್ತರದಿಂದ ಸಮಾಧಾನಗೊಳ್ಳದ ಸಚಿವ ಜಮೀರ್ ಅಹ್ಮದ್, ಮುಂದಿನ 15 ದಿನಗಳಲ್ಲಿ ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಲಿದ್ದೇನೆ. ನನ್ನ ಮಾಹಿತಿ ಪ್ರಕಾರ ಸ್ಲಂ ಬೋರ್ಡ್‌ನಡಿ 2014ರಿಂದ 2013ರ ವರೆಗೆ 1,67,600 ಮನೆಗಳು ಮಂಜೂರಾಗಿದ್ದರೂ ಒಂದೂ ಮನೆ ನೀಡಲು ಸಾಧ್ಯವಾಗಿಲ್ಲ. ಒಂದು ಮನೆ ನಿರ್ಮಾಣಕ್ಕೆ 7.50 ಲಕ್ಷ ರು. ಖರ್ಚಾಗುತ್ತದೆ. ಕೇಂದ್ರದಿಂದ 1.50 ಲಕ್ಷ ರು. ಹಾಗೂ ರಾಜ್ಯ ಸರ್ಕಾರದ 1.20 ಲಕ್ಷ ರು. ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಉಳಿದ ನಾಲ್ಕೂವರೆ ಲಕ್ಷ ರು. ಮೊತ್ತವನ್ನು ಫಲಾನುಭವಿ ಭರಿಸಬೇಕು ಎಂದರು.
ಗುತ್ತಿಗೆದಾರರು ಕೇಂದ್ರ ಹಾಗೂ ರಾಜ್ಯದ ಸಬ್ಸಿಡಿಯಡಿ ಪಂಚಾಂಗ, ಪಿಲ್ಲರ್ ಹಾಕಿ ಬಿಡುತ್ತಾರೆ. ಕೇಂದ್ರದಿಂದ ಸಬ್ಸಿಡಿ ಸಿಗುತ್ತಿದೆಯಾದರೂ ಆ ಹಣ ಮನೆ ವೆಚ್ಚದ ಮೇಲೆ ಶೇ. 18ರಷ್ಟು ಜಿಎಸ್‌ಟಿ ವೆಚ್ಚ ವಿಧಿಸುವುದರಿಂದ ಅವರು ಕೊಟ್ಟ ಹಣದಲ್ಲಿ ಜಿಎಸ್‌ಟಿ ಪಾಲಾಗುತ್ತದೆ. ಇದರಿಂದ ಸ್ಲಂ ಬೋರ್ಡ್‌ನಿಂದ ಫಲಾನುಭವಿಗಳಿಗೆ ಮನೆ ಕೊಡಿಸಲು ಸಾಧ್ಯವಾಗಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ನನ್ನಲ್ಲೂ ಸಮಗ್ರ ಮಾಹಿತಿ ಇದೆ: ಸಚಿವ ಜಮೀರ್
ಯಾವ ಜಿಲ್ಲೆ, ತಾಲೂಕಿನಲ್ಲಿ ಎಷ್ಟು ಮನೆಗಳು ಮಂಜೂರಾಗಿವೆ, ಯಾವ ಹಂತದಲ್ಲಿವೆ ಎಂಬ ಮಾಹಿತಿ ನನ್ನಲ್ಲಿದೆ. ತರಲು ಮರೆತಿದ್ದೇನೆ. ಇಂದು ತುರ್ತಾಗಿ ನಿರ್ಗಮಿಸಬೇಕಿರುವ ಕಾರಣ ಮುಂದಿನ ಸಭೆಗೆ ಮಾಹಿತಿಯೊಂದಿಗೆ ಬರುತ್ತೇನೆ. 2013ರಿಂದ ಇಲ್ಲಿವರೆಗೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಎಷ್ಟು ಮನೆಗಳು ಪೂರ್ಣಗೊಂಡು ನೀಡಲಾಗಿದೆ? ಅಲ್ಲಿಯವರೆಗಿನ ಸಮಗ್ರ ಮಾಹಿತಿಯನ್ನು ಒದಗಿಸಬೇಕು. ನನ್ನ ಮಾಹಿತಿಗೂ ಅಧಿಕಾರಿಗಳು ನೀಡುವ ಮಾಹಿತಿಗೂ ವ್ಯತ್ಯಾಸ ಕಂಡು ಬಂದರೆ ಸ್ಪಸ್ಪೆಂಡ್ ಮಾಡುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಎಚ್ಚರಿಸಿದರು.
ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಸಚಿವರ ಆಕ್ರೋಶ
ಮಂಗಳವಾರ ರಾತ್ರಿ ಅಲ್ಪಸಂಖ್ಯಾತರ ಇಲಾಖೆಯ ಹಾಸ್ಟೆಲ್‌ಗೆ ದಿಢೀರ್ ಭೇಟಿ ನೀಡಿದಾಗ ಆ ಹಾಸ್ಟೆಲ್‌ಗೆ ರಸ್ತೆಯೇ ಇಲ್ಲ. ಸಂದಿಯಲ್ಲಿ ಸ್ಟೀಲ್ ಮೆಟ್ಟಿಲು ಹತ್ತಿ ಹೋಗಬೇಕು. ಬಾತ್‌ರೂಂ ಕ್ಲೀನ್ ಮಾಡುವವರಿಲ್ಲ. ಐದು ವರ್ಷದಿಂದ ಬೆಡ್ ಕೊಟ್ಟಿಲ್ಲ. ಬೆಡ್‌ಶೀಟ್ ಒಗೆಯುವರಿಲ್ಲ. ಹಾಸ್ಟೆಲ್ ಪರಿಸ್ಥಿತಿ ಅಧ್ವಾನವಾಗಿದೆ. ಮಕ್ಕಳು ನಾನ್‌ವೆಜ್ ಊಟ ಬೇಕು ಎಂದು ಕೇಳಿದ್ದಕ್ಕೆ ಹಿಂದೆ ವಾರಕ್ಕೊಮ್ಮೆ ಕೊಡುತ್ತಿದ್ದನ್ನೂ ಅಧಿಕಾರಿ ಅದನ್ನೂ ನಿಲ್ಲಿಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಬೇಸರ ವ್ಯಕ್ತಪಡಿಸಿದರು.
10 ಹಾಸ್ಟೆಲ್‌ಗೆ ಒಬ್ಬರೇ ವಾರ್ಡನ್ ಇರುವುದರಿಂದ ಕಷ್ಟವಾಗುತ್ತಿದೆ ಎಂದು ಅಧಿಕಾರಿ ಹೇಳಿದಾಗ, ದಿನಕ್ಕೊಂದು ಹಾಸ್ಟೆಲ್‌ನಂತೆ ಭೇಟಿ ನೀಡಿ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿತ್ತಲ್ಲವೇ ಎಂದು ಸಚಿವರು ಪ್ರಶ್ನಿಸಿದರು, ಇದಕ್ಕೆ ಅಧಿಕಾರಿ, ಸರಿಪಡಿಸುವುದಾಗಿ ಪ್ರತಿಕ್ರಿಯಿಸಿದರು.
ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ; ಸಚಿವ ಜಮೀರ್ ಅಹಮದ್ ಖಾನ್ ಸೂಚನೆ
ನಾನು ಬಂದು ನೋಡಿದ ಮೇಲೆ ಸರಿಪಡಿಸುವುದೇ? ನಿಮ್ಮ ಮನೆಯ ಮಕ್ಕಳನ್ನು ಇದೇ ರೀತಿ ನೋಡುತ್ತೀರಾ? ಬಾತ್‌ರೂಂನಲ್ಲಿ ಪೈಪ್ ಕಿತ್ತು ಹೋಗಿದ್ದರೂ ಸರಿಪಡಿಸಿಲ್ಲ. ಆ ಕಟ್ಟಡಕ್ಕೆ 1.50 ಲಕ್ಷ ರು. ಬಾಡಿಗೆ ನೀಡಲಾಗುತ್ತದೆ. ಇದೆಂತಹ ವ್ಯವಸ್ಥೆ ಎಂದು ಸಚಿವರು ಪ್ರಶ್ನಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಹರೀಶ್ ಕುಮಾರ್ ಇದ್ದರು.