ಮದ್ಯವ್ಯಸನಿ ಗಂಡನಿಂದ ಮುಕ್ತಿ ಕೊಡಿಸಿದ ಹೈಕೋರ್ಟ್‌: ಯಾಕೆ ಗೊತ್ತಾ?

Published : Jul 31, 2023, 03:40 AM IST
ಮದ್ಯವ್ಯಸನಿ ಗಂಡನಿಂದ ಮುಕ್ತಿ ಕೊಡಿಸಿದ ಹೈಕೋರ್ಟ್‌: ಯಾಕೆ ಗೊತ್ತಾ?

ಸಾರಾಂಶ

ವಿವಾಹ ವಿಚ್ಛೇದನ ಮಂಜೂರಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಕ್ರಮ ಆಕ್ಷೇಪಿಸಿ ಧಾರವಾಡದ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎಸ್‌.ಜಿ.ಪಂಡಿತ್‌ ಮತ್ತು ವಿಜಯ್‌ಕುಮಾರ್‌ ಎ. ಪಾಟೀಲ್‌ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಜು.31): ಮದ್ಯ ಸೇವನೆಗೆ ನೆರೆ ಮನೆಯಿಂದ ಐಸ್‌ ಕ್ಯೂಬ್‌ ತರುವಂತೆ ನಿತ್ಯ ಒತ್ತಾಯ, ಮದ್ಯಸೇವನೆ ಬಳಿಕ ಬಲವಂತವಾಗಿ ಲೈಂಗಿಕ ಕ್ರಿಯೆ, ಪತ್ನಿ ಇರುತ್ತಿದ್ದ ಕೋಣೆಯಲ್ಲಿಯೇ ತನ್ನ ಸಹೋದರನಿಗೆ ಮಲಗಲು ಅನುಮತಿಸುತ್ತಾ ಪತ್ನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ ಪತಿಯ ಕ್ರೌರ್ಯ ತಾಳದೆ ಆತನೊಂದಿಗೆ ವಿಚ್ಛೇದನ ಕೋರಿದ ಮನವಿಯನ್ನು ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಪಡಿಸಿರುವ ಹೈಕೋರ್ಟ್‌, ದಂಪತಿಯ ವಿವಾಹ ಅನೂರ್ಜಿತಗೊಳಿಸಿ ನೊಂದ ಮಹಿಳೆಗೆ ನೆಮ್ಮದಿ ಕರುಣಿಸಿದೆ. ವಿವಾಹ ವಿಚ್ಛೇದನ ಮಂಜೂರಿಗೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಕ್ರಮ ಆಕ್ಷೇಪಿಸಿ ಧಾರವಾಡದ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎಸ್‌.ಜಿ.ಪಂಡಿತ್‌ ಮತ್ತು ವಿಜಯ್‌ಕುಮಾರ್‌ ಎ. ಪಾಟೀಲ್‌ ಅವರ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಪತಿಯ ಕ್ರೌರ್ಯಕ್ಕೆ ಸಂಬಂಧಿಸಿದಂತೆ ಮೇಲ್ಮನವಿದಾರೆ ನಿರ್ದಿಷ್ಟಆರೋಪ ಮಾಡಿ, ಹಲವು ಸಾಕ್ಷ್ಯಾಧಾರ ಒದಗಿಸಿದ್ದರು. ಆದರೆ ಪತ್ನಿಯ ಆರೋಪಗಳಿಗೆ ವಿರುದ್ಧವಾದ ಯಾವುದೇ ಸಾಕ್ಷ್ಯಧಾರಗಳನ್ನೂ ಪತಿ ಒದಗಿಸಿಲ್ಲ. ಇದರಿಂದ ಪತ್ನಿಯ ಆರೋಪಗಳು ನಿಜವೆಂದು ತೋರುತ್ತದೆ. ಹೀಗಿದ್ದರೂ ಪತ್ನಿಯ ಮನವಿ ಹಾಗೂ ಸಾಕ್ಷ್ಯಗಳನ್ನು ತಿರಸ್ಕರಿಸಿ ವಿಚ್ಛೇದನ ಕೋರಿದ ಅರ್ಜಿ ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಕ್ರಮ ದೋಷಪೂರಿತವಾಗಿದೆ. ಪ್ರಕರಣದಲ್ಲಿ ಕ್ರೌರ್ಯದ ಆಧಾರದ ಮೇಲೆ ಮೇಲ್ಮನವಿದಾರೆಗೆ ವಿಚ್ಛೇದನ ಮಂಜೂರು ಮಾಡಬಹುದಾಗಿದೆ ಎಂದ ಹೈಕೋರ್ಟ್‌, ಮೇಲ್ಮನವಿದಾರೆಯ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಕಲ್ಪಿಸಿದೆ.

ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್‌ ಆದ್ಯತೆ: ಸಚಿವ ಶಿವಾನಂದ ಪಾಟೀಲ

ಐಸ್‌ ಕ್ಯೂಬ್‌ ತರಲು ಒತ್ತಡ: ಲಕ್ಷ್ಮೇ ಮತ್ತು ಸೂರ್ಯ (ಇಬ್ಬರ ಹೆಸರು ಬದಲಿಸಲಾಗಿದೆ) 2005ರ ಮೇ 19ರಂದು ಧಾರವಾಡದಲ್ಲಿ ವಿವಾಹವಾಗಿದ್ದರು. 14 ವರ್ಷಗಳ ದಾಂಪತ್ಯ ಜೀವನ ನಡೆಸಿದ ನಂತರ 2019ರಲ್ಲಿ ಧಾರವಾಡ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಲಕ್ಷ್ಮೇ, ‘ಮದುವೆ ಬಳಿಕ ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದೆ. ಪತಿ ಮನೆಯಲ್ಲೇ ಮದ್ಯ ಸೇವಿಸುತ್ತಿದ್ದರು. ಮದ್ಯಕ್ಕೆ ಮಿಶ್ರಣ ಮಾಡಲು ಮಾಲೀಕರ ಮನೆಯಿಂದ ಐಸ್‌ ಕ್ಯೂಬ್‌ ತರಲು ಒತ್ತಾಯಿಸಿದ್ದರು. ಮದ್ಯ ಸೇವನೆ ಬಳಿಕ ಇಷ್ಟವಿಲ್ಲದಿದ್ದರೂ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದರು ಎಂದು ಆರೋಪಿಸಿದ್ದರು.

ಒಂದೇ ಕೋಣೆಯಲ್ಲಿ ಸಹೋದರ: ‘ಮಾನಸಿಕ ಒತ್ತಡದಿಂದ ಹೊರಬರಲು ಉದ್ಯೊಗಕ್ಕೆ ಸೇರಿದೆ. ಆದರೆ ಸಂಪೂರ್ಣ ವೇತನವನ್ನು ಪತಿ ಕಿತ್ತುಕೊಳ್ಳುತಿದ್ದರು. 2005ರ ಜುಲೈ ತಿಂಗಳಲ್ಲಿ ಪತಿಯ ಸಹೋದರ ನಮ್ಮ ಮನೆ ಸೇರಿದರು. ಇಬ್ಬರೂ ಮನೆಯಲ್ಲಿಯೇ ಕುಡಿಯುತ್ತಿದ್ದರು. ಸಹೋದರ ಸಹ ನಾನು ಮತ್ತು ಪತಿ ಇರುತ್ತಿದ್ದ ಕೋಣೆಯಲ್ಲಿಯೇ ಮಲಗುತ್ತಿದ್ದರು. ಆಗಸ್ಟ್‌ ತಿಂಗಳಲ್ಲಿ ಗರ್ಭಿಣಿಯಾದಾಗಲೂ ಪತಿ ಉತ್ತಮ ಆಹಾರ ಕೊಡುತ್ತಿರಲಿಲ್ಲ. ಗರ್ಭಿಣಿಯಾದರೂ ಉದ್ಯೋಗಕ್ಕೆ ತೆರಳಲು, ಮನೆ ಕೆಲಸ ಮಾಡಲು ಒತ್ತಾಯಿಸುತ್ತಿದ್ದರು. ಇದರಿಂದ ಗಂಭೀರ ಆರೋಗ್ಯ ಸಮಸ್ಯೆ ಉಂಟಾದರೂ ವೈದ್ಯರ ಬಳಿಗೆ ಕರೆದೊಯ್ಯಲಿಲ್ಲ. ಎರಡನೇ ಬಾರಿಗೆ ಗರ್ಭಿಣಿಯಾದರೂ ಸೂಕ್ತ ಆರೈಕೆ ಮಾಡಲಿಲ್ಲ. ಮಗು ಜನಿಸಿದ ನಂತರ ಬಲವಂತವಾಗಿ ಹುಬ್ಬಳ್ಳಿಯ ಮಾವನ ಮನೆಯಲ್ಲಿ ನೆಲೆಸುವಂತೆ ಮಾಡಿದರು ಎಂದು ಲಕ್ಷ್ಮೇ ಅರ್ಜಿಯಲ್ಲಿ ದೂರಿದ್ದರು.

‘ಅತ್ತೆ ಮಾವನ ಮನೆಯಲ್ಲಿ ಸೂಕ್ತ ಆರೈಕೆ ಸಿಗಲಿಲ್ಲ, ಬದಲಾಗಿ ಹಿಂಸೆ ನೀಡಲಾಗುತ್ತಿತ್ತು. ಅದನ್ನು ಪ್ರಶ್ನಿಸಿದ್ದಕ್ಕೆ ಕೋಣೆಯಲ್ಲಿ ಕೂಡಿ ಹಾಕಿ ಊಟ, ನೀರು ಕೊಡದೆ ಕಿರುಕುಳ ನೀಡಿದ್ದರು. ಬಾಯಾರಿಕೆ ತಾಳಲಾರದೆ ಬಾತ್‌ರೂಂ ನಲ್ಲಿ ನೀರನ್ನೇ ಕುಡಿದಿದ್ದೇನೆ. ಪತಿ ಸಮಪರ್ಕಕವಾಗಿ ಮನೆ ನಿರ್ವಹಣೆ ಮಾಡದ್ದಕ್ಕೆ 2016ರಲ್ಲಿ ಕಾರವಾರದಲ್ಲಿ ಮನೆ ಮಾಡಿದೆ. ಅಲ್ಲಿಯೂ ಪತಿ ಮದ್ಯದ ಚಟ ಮುಂದುವರಿಸಿ, ಗಲಾಟೆ ಮಾಡುತ್ತಾ ಮಕ್ಕಳು-ನೆರೆಹೊರೆಯ ಮುಂದೆಯೇ ನನ್ನ ಥಳಿಸುತ್ತಿದ್ದರು. ಈ ಎಲ್ಲ ಕ್ರೌರ್ಯ ತಾಳಲಾರದೆ ಪೋಷಕರ ಮನೆ ಸೇರಿದೆ. ಆಗಲೂ ನಾನಾ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದರು. ಮಕ್ಕಳನ್ನು ನೋಡಲು ಬಿಡುತ್ತಿರಲಿಲ್ಲ’ ಎಂದು ಲಕ್ಷ್ಮೇ ಅರ್ಜಿಯಲ್ಲಿ ದೂರಿದ್ದರು.

ವ್ಯಸನಮುಕ್ತರು ಸತ್ಪ್ರಜೆಗಳಾಗಿ ಬದುಕಬೇಕು: ಯು.ಟಿ.ಖಾದರ್‌

ವಿಚ್ಛೇದನ ನಿರಾಕರಿಸಿದ್ದ ಕೋರ್ಟ್‌: ಪತ್ನಿಯ ಈ ಎಲ್ಲ ಆರೋಪ ನಿರಾಕರಿಸಿದ್ದ ಪತಿ, ಮನೆಯಲ್ಲಿ ಆಕೆ ಹೊಂದಾಣಿಕೆಯಿಂದ ಇರುತ್ತಿರಲಿಲ್ಲ. ಸಣ್ಣ-ಪುಟ್ಟವಿಷಯಗಳಿಗೂ ಗಲಾಟೆ ಮಾಡುತ್ತಿದ್ದಳು. ಆದ್ದರಿಂದ ವಿಚ್ಛೇದನ ನೀಡದೆ, ವೈವಾಹಿಕ ಹಕ್ಕುಗಳನ್ನು ಪುನರ್‌ ಸ್ಥಾಪಿಸುವಂತೆ ಕೋರಿದ್ದರು. ಪತಿಯ ಮನವಿ ಪುರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ, ವಿಚ್ಛೇದನ ಕೋರಿದ್ದ ಪತ್ನಿಯ ಅರ್ಜಿ ವಜಾಗೊಳಿಸಿ 2022ರ ಏ.1ರಂದು ಆದೇಶಿಸಿತ್ತು. ಈ ಆದೇಶದ ವಿರುದ್ಧ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!