ಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಹಾಕಿದ್ದ ಆ್ಯಪ್ ಆಧಾರಿತ ಕಂಪನಿಗಳು, ಕಂಪನಿಗಳೊಂದಿಗೆ ಸಭೆ ನಡೆಸಿ ದರ ನಿರ್ಧಾರಕ್ಕೆ ಬರಲು ಸೂಚನೆ
ಬೆಂಗಳೂರು(ಅ.14): ಓಲಾ ಮತ್ತು ಉಬರ್ ಆ್ಯಪ್ ಕಂಪನಿಗಳೊಂದಿಗೆ ಸಭೆ ನಡೆಸಿ ಆಟೋರಿಕ್ಷಾ ಸೇವೆಗೆ ನ್ಯಾಯಯುತ ದರ ವಿಧಿಸುವ ಕುರಿತು ಒಮ್ಮತಕ್ಕೆ ಬರುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಆ್ಯಪ್ ಆಧಾರಿತ ಒಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ, ಆಟೋರಿಕ್ಷಾಗೆ ಸೇವೆಗೆ ನ್ಯಾಯಯುತ ದರ ವಿಧಿಸುವುದಕ್ಕೆ ಸಂಬಂಧಿಸಿದಂತೆ ಎರಡು ಕಂಪನಿಗಳ ಜೊತೆ ಸಭೆ ನಡೆಸಿ ಒಮ್ಮತಕ್ಕೆ ಬರುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಚ್ ನಿರ್ದೇಶಿಸಿತು.
ಹೈಕೋರ್ಟ್ ಸೂಚನೆ ಬೆನ್ನಲ್ಲೆ ಸಾರಿಗೆ ಇಲಾಖೆಯು ಕಂಪನಿಗಳ ಜತೆಗೆ ಸಭೆ ನಡೆಸಿ, ಆಟೋ ರಿಕ್ಷಾಗಳ ಸಂಖ್ಯೆ ಹಾಗೂ ನಿಗದಿಪಡಿಸಿರುವ ದರ ಕುರಿತು ಮಾಹಿತಿ ಪಡೆದಿದ್ದು, ಶುಕ್ರವಾರ ಹೈಕೋರ್ಟ್‌ಗೆ ವರದಿ ಸಲ್ಲಿಸಲಿದೆ. ಹೈಕೋರ್ಟ್‌ನಲ್ಲಿ ನಡೆಯಲಿರುವ ಪ್ರಕರಣದ ವಿಚಾರಣೆ ನಂತರ ಸಿಗುವ ಸೂಚನೆ ಆಧರಿಸಿ ಮುಂದಿನ ಕ್ರಮ ಅಥವಾ ದರ ನಿಗದಿ ಮಾಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಬೊಮ್ಮಾಯಿ ಸರ್ಕಾರಕ್ಕೆ ಓಲಾ, ಉಬರ್ ಡೋಂಟ್‌ಕೇರ್!
ಇದಕ್ಕೂ ಮುನ್ನ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ಕಂಪನಿಗಳು ಪರವಾನಗಿ ಪಡೆಯದೆ ಆಟೋರಿಕ್ಷಾ ಸೇವೆ ಒದಗಿಸುತ್ತಿವೆ. ಹೆಚ್ಚಿನ ಪ್ರಯಾಣ ದರ ಪಡೆಯುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ಪ್ರತಿಯಾಗಿ ಅರ್ಜಿದಾರ ಕಂಪನಿಗಳು ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವುದಕ್ಕೆ ಸರ್ಕಾರ ಸಕಾರಣ ನೀಡಿಲ್ಲ. ತಮ್ಮ ಮನವಿ ಆಲಿಸದೆ ಸರ್ಕಾರ ಆದೇಶ ಹೊರಡಿಸಿದೆ. ದರ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಯಮ ರೂಪಿಸಿಲ್ಲ ಎಂದು ಹೇಳುತ್ತಿವೆ. ಹೀಗಿರುವಾಗ ಸೇವೆ ಸ್ಥಗಿತ ಮಾಡುವುದರಿಂದ ಅಂತಿಮವಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತದೆ. ಆದ್ದರಿಂದ ಪ್ರಕರಣದಲ್ಲಿ ಅಂತಿಮ ನಿರ್ಧಾರಕ್ಕೆ ಕೈಗೊಳ್ಳುವ ಮುನ್ನ ತಾತ್ಕಾಲಿಕ ಪರಿಹಾರ ಕ್ರಮ ಕಂಡುಕೊಳ್ಳಲು ಸರ್ಕಾರ ಮತ್ತು ಅರ್ಜಿದಾರರು ಸಭೆ ನಡೆಸಿ ಒಮ್ಮತಕ್ಕೆ ಬರಬೇಕು ಎಂದು ಸೂಚಿಸಿತು.
ಏಕಾಏಕಿ ಸೇವೆ ನಿಲ್ಲಿಸಿದರೆ ಜನರಿಗೆ ತೊಂದರೆ: ಪೀಠ
ವಾಸ್ತವವಾಗಿ ಆಟೋರಿಕ್ಷಾ ಸೇವೆ ಬೆರಳು ತುದಿಯಲ್ಲಿ ಲಭ್ಯವಾಗುತ್ತಿದ್ದು, ಗ್ರಾಹಕರಿಗೆ ಇತರೆ ಆಯ್ಕೆಗಳು ಇರುವುದಿಲ್ಲ. ಆದರೆ, ಒಮ್ಮೆ ಬುಕ್ ಮಾಡಿ ನಂತರ ರದ್ದುಪಡಿಸಿದರೆ ಅದಕ್ಕೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ನ್ಯಾಯಾಲಯವು ಸಾರ್ವಜನಿಕರಿಂದ ಹೆಚ್ಚಿನ ದರ ಸಂಗ್ರಹಿಸುತ್ತಿರುವ ಅಂಶವನ್ನು ಪರಿಗಣಿಸಲಿದೆ. ಆದ್ದರಿಂದ ದರ ವಿಧಿಸುವ ವಿಚಾರದಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು ಎಂದು ಮೌಖಿಕವಾಗಿ ಸಲಹೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಬೆಳಗ್ಗೆ 10.30ಕ್ಕೆ ಮುಂದೂಡಿತು.
ಒಮ್ಮತ ಸಾಧಿಸುವರೆಗೂ ಕಂಪನಿಗಳು ಸಹ ಚಾರ್ಜ್ ಮಾಡಬಾರದು. ಅರ್ಜಿದಾರ ಕಂಪನಿಗಳ ವಿರುದ್ಧ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂಬ ಭರವಸೆಯನ್ನು ರಾಜ್ಯ ಅಡ್ವೋಕೇಟ್ ಅವರು ಮೌಖಿಕವಾಗಿ ನೀಡಬೇಕು ಎಂದು ನ್ಯಾಯಪೀಠ ತಿಳಿಸಿತು.
ಕಾಯ್ದೆ ಬಗ್ಗೆ ವಾದ ವಿವಾದ
ಇದಕ್ಕೂ ಮುಂಚೆ ಅರ್ಜಿದಾರರ ಸಂಸ್ಥೆಗಳ ಪರ ವಕೀಲರು, ಆ್ಯಪ್ ಆಧಾರಿತ ಆಟೋರಿಕ್ಷಾ ಸೇವೆ ನೀಡುವುದಕ್ಕೆ ಪರವಾನಗಿ ಅಗತ್ಯವಿಲ್ಲ ಎಂದು ಪ್ರತಿಪಾದಿಸುವ ಪ್ರಕರಣ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ. ‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು-2016’ರ ನಿಯಮ 2(7) ಅಡಿಯಲ್ಲಿ ಮೋಟಾರು ಕ್ಯಾಬ್ (ಟ್ಯಾಕ್ಸಿ) ವ್ಯಾಖ್ಯಾನದಡಿಗೆ ಆಟೋರಿಕ್ಷಾ ಸಹ ಬರುತ್ತದೆ. ಹಾಗಾಗಿ, ಸೇವೆ ಸ್ಥಗಿತಗೊಳಿಸುವ ಬಗ್ಗೆ ವಿವರಣೆ ಕೇಳಿ ಅ.6ರಂದು ನೀಡಿರುವ ನೋಟಿಸ್ ಮತ್ತು ಸೇವೆ ಸ್ಥಗಿತಗೊಳಿಸಲು ಅ.11ರಂದು ಹೊರಡಿಸಿರುವ ಆದೇಶಕ್ಕೆ ಮಾನ್ಯತೆ ಇಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇಂದಿನಿಂದಲೇ ಓಲಾ ಉಬರ್ ಆಟೋಗಳು ಬ್ಯಾನ್, ಸಹಾಯವಾಣಿ ಆರಂಭಿಸಿದ ಸಾರಿಗೆ ಇಲಾಖೆ
ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಆಟೋ ರಿಕ್ಷಾ ಸೇವೆಯು ಟ್ಯಾಕ್ಸಿ ಸೇವೆಯಡಿ ಬರುವುದಿಲ್ಲ. ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು-2016ರ ನಿಯಮ 4ರ ಅಡಿ ಉಬರ್ ಮತ್ತು ಒಲಾ ಪರವಾನಗಿ ಪಡೆದಿಲ್ಲ. ಉಳಿದ ಆಟೋರಿಕ್ಷಾ ಸೇವೆಗೆ ರಾಜ್ಯ ಸರ್ಕಾರವು ನಿರ್ದಿಷ್ಟದರ ನಿಗದಿಪಡಿಸಿದೆ. ಆದರೆ, ಅದನ್ನು ಅರ್ಜಿದಾರ ಕಂಪನಿಗಳು ಪಾಲಿಸುತ್ತಿಲ್ಲ ಎಂದು ವಾದಿಸಿದರು.
ಸಹಾಯವಾಣಿಗೆ 40 ದೂರು
ಒಲಾ, ಉಬರ್ ಆಟೋರಿಕ್ಷಾ ಓಡಾಟ ನಡೆಸಿದರೆ ದೂರು ಸಲ್ಲಿಸಲು ಸಾರಿಗೆ ಇಲಾಖೆಯು ಆರಂಭಿಸಿರುವ ಸಹಾಯವಾಣಿಗೆ ಗುರುವಾರವೂ ಹಲವರು ಕರೆ ಮಾಡಿ ದೂರು ನೀಡಿದ್ದಾರೆ. ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದಾರೆ ಎಂದು ಬಹುತೇಕರು ಸಹಾಯವಾಣಿಗೆ ಸಿಬ್ಬಂದಿಗೆ ತಿಳಿಸಿದ್ದಾರೆ. ಬುಧವಾರ 180ಕ್ಕೂ ಅಧಿಕ ದೂರು ದಾಖಲಾಗಿದ್ದವು.