ಹವ್ಯಕರು ಸೌಹಾರ್ದತೆಯ ಸಂಕೇತ: ಗಿರಿಧರ ಕಜೆ

By Kannadaprabha News  |  First Published Dec 27, 2024, 3:16 PM IST

ರಾಜ್ಯದ ಯಾವುದೇ ಭಾಷೆಯನ್ನಾದರೂ, ಕನಿಷ್ಠ ಮೂರ್ನಾಲ್ಕು ಸಮುದಾಯದವರು ಮಾತನಾಡುತ್ತಾರೆ. ಆದರೆ ಹವ್ಯಕರಿಗೆ ತಮ್ಮದೇ ಆದ ಭಾಷೆ ಇದೆ. ಅದನ್ನು ಆ ಸಮುದಾಯ ಮಾತ್ರ ಆಡುತ್ತದೆ. ಈ ಭಾಷೆಯಲ್ಲೇ ಏಳೆಂಟು ವೈವಿಧ್ಯಗಳಿವೆ: ಹವ್ಯಕ ಮಹಾಸಭಾದ ಅಧ್ಯಕ್ಷ ಗಿರಿಧರ ಕಜೆ 


ಪ್ರಿಯಾ ಕೆರ್ವಾಶೆ

ಬೆಂಗಳೂರು(ಡಿ.27):  ಸರಿ ಸುಮಾರು ಒಂದೂವರೆ ಸಾವಿರ ವರ್ಷಗಳ ಪರಂಪರೆ ಇರುವ ಪ್ರಾಚೀನ ಸಮುದಾಯ ಹವ್ಯಕ. ರಾಜ್ಯದ ಜನಸಂಖ್ಯೆಯ ಶೇ.0.5 ರಷ್ಟಿರುವ ಈ ಸಮುದಾಯದ ಮಂದಿ ಶಿಕ್ಷಣ, ಐಟಿ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೀಗ ಹವ್ಯಕರ ಸಾಧನೆಯನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಮೂರನೇ ವಿಶ್ವ ಹವ್ಯಕ ಸಮ್ಮೇಳನ ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳಿಂದ ಅಖಿಲ ಭಾರತ ಹವ್ಯಕ ಮಹಾಸಭಾದ ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ, ಖ್ಯಾತ ಆಯುರ್ವೇದ ವೈದ್ಯರೂ ಆಗಿರುವ ಡಾ. ಗಿರಿಧರ ಕಜೆ ಹವ್ಯಕರ ವಿಶಿಷ್ಟತೆ ಬಗ್ಗೆ ವಿವರಿಸಿದ್ದಾರೆ.

Tap to resize

Latest Videos

undefined

- ಹವ್ಯಕರು ಯಾರು? ಈ ಸಮುದಾಯದ ಹಿನ್ನೆಲೆ ಏನು?

ಮೂಲತಃ ಕರ್ನಾಟಕ ಭಾಗದಲ್ಲಿದ್ದ ಒಂದಿಷ್ಟು ಮಂದಿ ಬ್ರಾಹ್ಮಣರು ರಾಜರಿಂದ ಏನೋ ಸಮಸ್ಯೆ ಉಂಟಾದಾಗ ಉತ್ತರ ಭಾರತದ ಅಹಿಚ್ಛತ್ರಕ್ಕೆ ವಲಸೆ ಹೋಗುತ್ತಾರೆ. ಕದಂಬ ವಂಶದ ಚರಿತ್ರೆಯಲ್ಲೂ ಇದರ ಉಲ್ಲೇಖವಿದೆ. ಮುಂದೆ ಅತ್ಯುತ್ತಮ ಆಡಳಿತಕ್ಕೆ ಹೆಸರಾಗಿದ್ದ ಕದಂಬ ರಾಜ ಮಯೂರ ವರ್ಮ ಅಹಿಚ್ಛತ್ರಕ್ಕೆ ಹೋಗಿ ಸುಮಾರು 32 ಸ್ಮಾರ್ತ ಬ್ರಾಹ್ಮಣ ಕುಟುಂಬಗಳನ್ನು ಪುನಃ ಇಲ್ಲಿಗೆ ಕರೆತರುತ್ತಾನೆ. ಉದ್ದೇಶ ಲೋಕಕಲ್ಯಾಣ. ರಾಜನ ಆದೇಶದಂತೆ ಈಗಿನ ಹೊನ್ನಾವರ ವ್ಯಾಪ್ತಿಯಲ್ಲಿ ಬರುವ ಹೈಗುಂದದಲ್ಲಿ ಆ ಬ್ರಾಹ್ಮಣರು ಲೋಕ ಕಲ್ಯಾಣಕ್ಕೆ ಯಜ್ಞಗಳನ್ನು ಮಾಡುತ್ತಾರೆ. ಬಳಿಕ ಅವರೆಲ್ಲ ದಕ್ಷಿಣ ಕನ್ನಡ, ಉತ್ತರ ಕನ್ನಡ, ಕಾಸರಗೋಡು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ನೆಲೆ ಕಂಡುಕೊಳ್ಳುತ್ತಾರೆ. ಹವ್ಯ ಅಂದರೆ ಯಜ್ಞ ಎಂದರ್ಥ. ಕವ್ಯ ಎಂದರೆ ಅಪರ ಕರ್ಮಗಳು. ಹೀಗೆ ಹವ್ಯ ಮತ್ತು ಕವ್ಯಗಳನ್ನು ಮಾಡುತ್ತಿದ್ದ ಸ್ಮಾರ್ತ ಬ್ರಾಹ್ಮಣರಿಗೆ ರಾಜ ಜಾಗ ಕೊಟ್ಟು ಇಲ್ಲೇ ನೆಲೆಯೂರುವಂತೆ ಮಾಡುತ್ತಾನೆ. ಅವರೇ ‘ಹವ್ಯಕರು’ ಎಂಬ ಉಲ್ಲೇಖ ಶಿಲಾಶಾಸನಗಳಲ್ಲಿದೆ.

ಹವ್ಯಕ ಮಹಾಸಭೆ ಅಧ್ಯಕ್ಷರಾಗಿ ಡಾ.ಗಿರಿಧರ್‌ ಕಜೆ ಆಯ್ಕೆ

- ಲೋಕಕಲ್ಯಾಣಕ್ಕೆ ಯಜ್ಞಯಾಗ ಮಾಡಿದರೆ ಹೊಟ್ಟೆಪಾಡಿಗೆ?

ಅದಕ್ಕಾಗಿಯೇ ಕೃಷಿ ಮಾಡಲು ಆರಂಭಿಸಿದರು. ಇವರು ಫಲಾಪೇಕ್ಷೆ ಇಲ್ಲದೇ ಯಜ್ಞಯಾಗ ಮಾಡುತ್ತಿದ್ದದ್ದರಿಂದ ಆರ್ಥಿಕ ಲಾಭದ ನಿರೀಕ್ಷೆ ಮಾಡಲಿಲ್ಲ. ಜೀವನ ನಿರ್ವಹಣೆಗೆ ಕೃಷಿ ಮಾಡತೊಡಗಿದರು. ಅಡಿಕೆ ಕೃಷಿ ಇವರಿಂದಲೇ ಜನಪ್ರಿಯವಾಯಿತು. ಎಲ್ಲೆಲ್ಲ ಹವ್ಯಕರಿದ್ದಾರೋ ಅಲ್ಲೆಲ್ಲ ಅಡಕೆ ಕೃಷಿ ಇದೆ. ಅಡಕೆ ಕೃಷಿ ಇರುವಲ್ಲೆಲ್ಲ ಹವ್ಯಕರಿದ್ದಾರೆ. ದಟ್ಟ ಅಡಕೆ ಕೃಷಿ ಇರುವಲ್ಲಿ ದಟ್ಟ ಸಂಖ್ಯೆಯಲ್ಲಿ ಹವ್ಯಕರಿರುತ್ತಾರೆ. ಅವತ್ತಿಂದ ಇವತ್ತಿನತನಕ ಇದು ಮುಂದುವರಿದಿದೆ. ಜೊತೆಗೆ ಅತ್ಯಂತ ಹೆಚ್ಚು ಪುರೋಹಿತರಿರುವ ಸಮುದಾಯ ಹವ್ಯಕರದು. 15,000ಕ್ಕೂ ಅಧಿಕ ಪುರೋಹಿತರು ಇಲ್ಲಿದ್ದಾರೆ. ಮೂಲ ವೃತ್ತಿಯನ್ನೂ ಬಿಡಲಿಲ್ಲ. ಅತೀ ಹೆಚ್ಚು ಶಿಕ್ಷಕರಿರುವುದೂ ಈ ಸಮುದಾಯದಲ್ಲೇ. ಒಟ್ಟಿನಲ್ಲಿ ಮಿದುಳು ಶಕ್ತಿಯ ಅವಶ್ಯಕತೆ ಇರುವಲ್ಲೆಲ್ಲ ಹವ್ಯಕರಿದ್ದಾರೆ.

- ಹವ್ಯಕ ಮಹಾಸಭಾ ಈಗ 82ರ ವಸಂತಕ್ಕೆ ಕಾಲಿಟ್ಟಿದೆ. ಅಂದರೆ ಇದು ಸ್ವಾತಂತ್ರ್ಯಪೂರ್ವದಲ್ಲೇ ಅಸ್ತಿತ್ವಕ್ಕೆ ಬಂತಾ?

ಹೌದು. ಇದು ಬ್ರಾಹ್ಮಣ ಸಭಾಕ್ಕಿಂತಲೂ ಹಿರಿಯ ಸಂಸ್ಥೆ. 1942 ರ ಮಾರ್ಚ್‌ 29ಕ್ಕೆ ಅಖಿಲ ಭಾರತ ಹವ್ಯಕ ಮಹಾಸಭಾ ಅಸ್ತಿತ್ವಕ್ಕೆ ಬಂತು. ಇಂದಿನ ಸೋಷಲ್‌ ಮೀಡಿಯಾ, ಕ್ಷಿಪ್ರ ಸಂವಹನ ಮಾಧ್ಯಮಗಳನ್ನೆಲ್ಲ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ, ವಾಹನ ವ್ಯವಸ್ಥೆಯೇ ಇಲ್ಲದ ಕಾಲಘಟ್ಟವದು. ಅಂಥಾ ಸಮಯದಲ್ಲಿ ಬೇರೆ ಬೇರೆ ಪ್ರದೇಶದ ಹವ್ಯಕರೆಲ್ಲ ಬೆಂಗಳೂರಿಗೆ ಬಂದು ಸಭೆ ಸೇರಿದರು. ಬ್ರಿಟೀಷರ ಆಳ್ವಿಕೆಯು ಜಾರಿಯಲ್ಲಿದ್ದ ವೇಳೆಯಲ್ಲೇ ಹವ್ಯಕ ಮಹಾಸಭಾ ರಿಜಿಸ್ಟರ್‌ ಆಯ್ತು. 82 ವರ್ಷ ಹಿಂದೆಯೇ ಒಂದು ಸಮುದಾಯದ ಪ್ರಾತಿನಿಧಿಕ ಸಂಸ್ಥೆಯೊಂದು ನೋಂದಣಿ ಮಾಡಿಕೊಂಡದ್ದು ಸಣ್ಣ ಮಾತೇನಲ್ಲ. ಹವ್ಯಕ ಮಹಾಸಭಾದ ಬೈಲಾ ಬಹಳ ಚೆನ್ನಾಗಿದೆ. ಆ ಕಾಲದಲ್ಲೇ ಇದರಲ್ಲಿ 5 ಜನ ದಕ್ಷಿಣ ಕನ್ನಡ, 5 ಜನ ಉತ್ತರ ಕನ್ನಡ, 5 ಶಿವಮೊಗ್ಗ, 6 ಜನ ಬೆಂಗಳೂರು ಹಾಗೂ ವಿವಿಧ ಭಾಗಕ್ಕೆ ಸೇರಿದ ನಿರ್ದೇಶಕರಿದ್ದರು.

- ಹವ್ಯಕ ಮಹಾಸಭಾ ಈ ಸಮುದಾಯದ ಗಂಡಸರಿಗಷ್ಟೇ ಸೀಮಿತವಾಗಿತ್ತಾ?

ಬಹಳ ಹಿಂದೆಯೇ ಅಂದರೆ 1951ರಲ್ಲಿ, ಹವ್ಯಕ ಮಹಾಸಭಾದ ಮೂರನೇ ಅಧ್ಯಕ್ಷರಾದದ್ದು ಆದದ್ದು ಶಿರಸಿಯ ಮಹಿಳೆ. ಐದನೇ ಅಧ್ಯಕ್ಷರೂ ಮಹಿಳೆಯೇ. ಆಮೇಲೆ ಮಹಾಸಭಾ ಇತಿಹಾಸದುದ್ದಕ್ಕೂ ಅಧ್ಯಕ್ಷ ಗಾದಿಯನ್ನು ಅನೇಕ ಮಹಿಳೆಯರು ಏರಿದ್ದಾರೆ. ಅಂದರೆ ಮಹಿಳೆ ಮನೆಯ ಹೊರಗೆ ಕಾಲಿಡಲೂ ಅಂಜುತ್ತಿದ್ದ 50ರ ದಶಕದಲ್ಲೇ ಮಹಿಳೆಯೊಬ್ಬರು ಇಡೀ ಹವ್ಯಕರನ್ನು ಪ್ರತಿನಿಧಿಸುವ ಸಂಸ್ಥೆಯ ಚುಕ್ಕಾಣಿ ಹಿಡಿದದ್ದು ಹವ್ಯಕರಲ್ಲಿ ಅಂದೇ ಸಮಾನತೆ, ದೂರದರ್ಶಿತ್ವಕ್ಕೆ ಜಾರಿಯಲ್ಲಿತ್ತು ಎಂಬುದರ ಸಂಕೇತವಾಗಿ ಕಾಣುತ್ತದೆ.

- ಹವ್ಯಕ ಮಹಾಸಭಾದ ಉದ್ದೇಶ?

ಇದು ಸಾಮಾಜಿಕ ಕಾರ್ಯಕ್ಕೆಂದೇ ಹುಟ್ಟುಹಾಕಿದ ಸಂಸ್ಥೆ. ಇದಕ್ಕೆ ಆರ್ಥಿಕ ಲಾಭ ಮಾಡುವ ಉದ್ದೇಶ ಇಲ್ಲ. ಇದು ಬೈಲಾದಲ್ಲೇ ಇದೆ. ಸಮಗ್ರ ಹವ್ಯಕ ಸಮುದಾಯದ ಪ್ರಾತಿನಿಧಿಕ ಅತ್ಯುಚ್ಛ ಸಂಸ್ಥೆಯಿದು. ಈ ಸಮುದಾಯಕ್ಕೆ ಆದಿ ಶಂಕರಾಚಾರ್ಯ ಪರಂಪರೆಯ ಮೂರು ಗುರುಪೀಠಗಳಿವೆ. ಇದರಲ್ಲಿ ರಾಮಚಂದ್ರಾಪುರ ಮಠಕ್ಕೆ ಶೇ.80ಕ್ಕೂ ಅಧಿಕ ಶಿಷ್ಯವರ್ಗವಿದೆ. ಶೇ. 18 ಹವ್ಯಕರು ಸ್ವರ್ಣವಲ್ಲೀ ಮಠಕ್ಕೆ, ಶೇ.1 ರಷ್ಟು ಮಂದಿ ನೆಲಮಾವು ಮಠಕ್ಕೆ ನಡೆದುಕೊಳ್ತಾರೆ.

- ಕನ್ನಡದ ಪ್ರಪ್ರಥಮ ನಾಟಕ ಕೃತಿ ಬಂದದ್ದೇ ಹವ್ಯಕ ಭಾಷೆಯಲ್ಲಿ. ಈ ಭಾಷೆಯ ವಿಶೇಷತೆ ಬಗ್ಗೆ ಹೇಳುವುದಾದರೆ?

ಹೌದು. ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಅವರು 1887ರಲ್ಲೇ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನವು’ ಎಂಬ ನಾಟಕ ಕೃತಿ ಬರೆದರು. ಈ ಮೂಲಕ ಒಂದು ಭಾಷೆಗೆ ನಾಟಕ ಪ್ರಕಾರವನ್ನು ಕೊಡುಗೆಯಾಗಿ ನೀಡಿದವರು ಹವ್ಯಕರು. ಹವ್ಯಕ ಭಾಷಾ ಸಾಹಿತ್ಯವೂ ಸಮೃದ್ಧವಾಗಿದೆ. 6000ಕ್ಕೂ ಅಧಿಕ ಕೃತಿಗಳು ಹವ್ಯಕ ಭಾಷೆಯಲ್ಲಿ ಹೊರಬಂದಿವೆ. ಹಳೆಗನ್ನಡಕ್ಕೆ ಇದು ಹತ್ತಿರವಿದೆ.

ಇನ್ನೊಂದು ವಿಶೇಷತೆ ಎಂದರೆ ರಾಜ್ಯದ ಯಾವುದೇ ಭಾಷೆಯನ್ನಾದರೂ, ಕನಿಷ್ಠ ಮೂರ್ನಾಲ್ಕು ಸಮುದಾಯದವರು ಮಾತನಾಡುತ್ತಾರೆ. ಆದರೆ ಹವ್ಯಕರಿಗೆ ತಮ್ಮದೇ ಆದ ಭಾಷೆ ಇದೆ. ಅದನ್ನು ಆ ಸಮುದಾಯ ಮಾತ್ರ ಆಡುತ್ತದೆ. ಈ ಭಾಷೆಯಲ್ಲೇ ಏಳೆಂಟು ವೈವಿಧ್ಯಗಳಿವೆ. ಸುಳ್ಯ ಭಾಗದ ಪಂಜ ಸೀಮೆ, ಪುತ್ತೂರು ಸೀಮೆ, ಕುಂಬ್ಳೆ ಸೀಮೆ, ಶಿರಸಿ, ಶಿವಮೊಗ್ಗ ಹೊನ್ನಾವರ ಹೀಗೆ ಭೌಗೋಳಿಕತೆಗೆ ಅನುಸಾರವಾಗಿ ಭಾಷೆಯೂ ಭಿನ್ನವಾಗುತ್ತ ಹೋಗುತ್ತದೆ. ಹೀಗೆ ಒಂದು ಸಮುದಾಯಕ್ಕೆ ಏಳು ಭಾಷೆ ಇರುವುದು ವಿಶೇಷ.

- ಹವ್ಯಕ ಆಹಾರಕ್ರಮವೂ ಜನಪ್ರಿಯವಲ್ಲವೇ?

ಹವ್ಯಕರದೇ ಪ್ರತ್ಯೇಕ ಆಹಾರ ಶೈಲಿ ಇದೆ. ಇದು ಆಯುರ್ವೇದ ತತ್ವದ ಆಧಾರದಲ್ಲಿದೆ. ಬಡಿಸುವ ಕ್ರಮ, ಆಹಾರ ತಯಾರಿಯ ರೀತಿ ಎಲ್ಲವೂ ಪ್ರಾಚೀನ ಆಯುರ್ವೇದ ಗ್ರಂಥಗಳಲ್ಲಿ ಉಲ್ಲೇಖಿಸಿರುವಂತೇ ಇದೆ. ಸ್ವಾದಿಷ್ಠಕರ ಆಹಾರವೂ ಹೌದು. ತಂಬುಳಿಯ ಸೃಷ್ಟಿಕರ್ತರು ಹವ್ಯಕರು. ಇವರ ಪಾರಂಪರಿಕ ತೊಡೆದೇವು, ಮಜ್ಜಿಗೆಹುಳಿ, ಕಾಯಿ ಹೋಳಿಗೆ ಇತ್ಯಾದಿ ಆಹಾರಗಳಿವೆ. ಈ ಆಹಾರ ಸಮೃದ್ಧತೆಯ ಪಾಕೋತ್ಸವವೂ ಈ ಬಾರಿಯ ವಿಶ್ವ ಹವ್ಯಕ ಸಮ್ಮೇಳನದಲ್ಲಿದೆ.
ಇದರ ಜೊತೆಗೆ ಯಕ್ಷಗಾನ ಕಲೆಯಲ್ಲಿ ಹವ್ಯಕರೇ ಇದ್ದಾರೆ. ತಾಳಮದ್ದಳೆಯಲ್ಲೂ ಇವರದೇ ಪಾರಮ್ಯ. ಇತರ ಕಲೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ಶೈಕ್ಷಣಿಕವಾಗಿ ಪ್ರಗತಿ ಹೇಗಿದೆ?

ಇದು ಸಂಪೂರ್ಣ ಸಾಕ್ಷರ ಸಮುದಾಯ. ನಿಮಗೆ ಒಬ್ಬರೇ ಒಬ್ಬರು ಅನಕ್ಷರಸ್ಥರು ಸಿಗುವುದಿಲ್ಲ. 100 ವರ್ಷ ಆದವರೂ ಹೆಬ್ಬೆಟ್ಟು ಒತ್ತುವುದಿಲ್ಲ. ಆರ್ಥಿಕವಾಗಿ ಎಷ್ಟೇ ಕಷ್ಟಪಟ್ಟರೂ ಶಿಕ್ಷಣದಲ್ಲಿ ಬಹಳ ಮುಂದಿದ್ದಾರೆ. ಎಸ್‌ಎಸ್‌ಎಲ್‌ಸಿ, ಯೂನಿವರ್ಸಿಟಿ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಅನೇಕ ಮೊದಲ ರ್‍ಯಾಂಕ್‌ಗಳು ಹವ್ಯಕರಿಗೇ ಬರುತ್ತವೆ. ಇವರು ಮಹಾ ಸ್ವಾಭಿಮಾನಿಗಳು. ಹವ್ಯಕರಲ್ಲಿ ಒಬ್ಬರೇ ಒಬ್ಬರು ಭಿಕ್ಷಕರಿಲ್ಲ. ಈ ಸಮುದಾಯ ಒಟ್ಟೂ ಜನಸಂಖ್ಯೆ ರಾಜ್ಯದ ಜನಸಂಖ್ಯೆ 0.5 ಕ್ಕಿಂತ ಕಡಿಮೆ ಇದ್ದರೂ ನಮ್ಮವರಲ್ಲಿ ಮುಖ್ಯಮಂತ್ರಿಗಳಾದವರು (ರಾಮಕೃಷ್ಣ ಹೆಗಡೆ), ಸ್ಪೀಕರ್‌ (ವಿಶೇಶ್ವರ ಹೆಗಡೆ ಕಾಗೇರಿ) ಗಳಾದವರಿದ್ದಾರೆ.

- ವಿಶ್ವ ಹವ್ಯಕ ಸಮ್ಮೇಳನದ ಉದ್ದೇಶ?

ಸಂಘಟನೆ. ಹವ್ಯಕರ ವಿಶಿಷ್ಟತೆಯನ್ನು ಜಗತ್ತು ನೋಡಲಿ ಎಂಬ ಉದ್ದೇಶ. ಹವ್ಯಕರು ಸೌಹಾರ್ದಯುತವಾಗಿ ಬದುಕುವವರು. ಇದರ ಪ್ರತೀಕವಾಗಿ ಈ ಸಮ್ಮೇಳನದಲ್ಲಿ ಬ್ರಾಹ್ಮಣ ಒಳ ಪಂಗಡವರಿಗೆ, ಹೆಚ್ಚಿನೆಲ್ಲ ಜಾತಿ, ಸಮುದಾಯದವರಿಗೆ ಸೌಹಾರ್ದ ಸನ್ಮಾನವಿದೆ. ಅಂದರೆ ಇಡೀ ಸಮಾಜ ಒಟ್ಟಿಗೆ ಸೌಹಾರ್ದದಿಂದ ಬದುಕಬೇಕು ಎಂಬುದು ಇದರ ಉದ್ದೇಶ. ಇದು ಹವ್ಯಕರ ಸಮ್ಮೇಳನವಾದರೂ ಎಲ್ಲರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ಸಮ್ಮೇಳನದಲ್ಲಿ ಸಾಧಕರನ್ನು ಸನ್ಮಾನಿಸಲು ಬರುವವರೂ ಬೇರೆ ಬೇರೆ ಪಂಗಡಗಳಿಗೆ ಸೇರಿದವರು. ಹವ್ಯಕರಲ್ಲ. ಬಹಳ ಮಂದಿ ಅತಿಥಿಗಳು ಹವ್ಯಕೇತರರಿದ್ದಾರೆ.

ಜನ ನಿರೀಕ್ಷೆ?

ಮೂರು ದಿನ ಸೇರಿ ಒಂದೂವರೆ ಲಕ್ಷ ಬರುವ ನಿರೀಕ್ಷೆ ಇದೆ. ಕಳೆದ ಸಮ್ಮೇಳನದಲ್ಲೇ 75,000ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು.

- ಈ ಸಮುದಾಯದ ಬಹುದೊಡ್ಡ ಸಮಸ್ಯೆ ಹವ್ಯಕ ಹುಡುಗರಿಗೆ ಹುಡುಗಿಯರು ಸಿಗದೇ ಇರುವುದು, ಈ ಕುರಿತ ಗೋಷ್ಠಿಗಳು?

ನೇರವಾದ ಗೋಷ್ಠಿಗಳಿಲ್ಲ. ಆದರೆ ಈ ಸಮಸ್ಯೆಗೆ ಪರಿಹಾರ ಸೂಚಿಸುವ ಪರ್ಯಾಯ ಉದ್ಯೋಗ ಸೃಷ್ಟಿಯಂಥಾ ಗೋಷ್ಠಿಗಳಿವೆ.

ಅರಮನೆ ಮೈದಾನದ ರಾಯಲ್‌ ಸೆನೆಟ್‌ನಲ್ಲಿ ಡಿ. 27ರಿಂದ 3 ದಿನ ವಿಶ್ವ ಹವ್ಯಕ ಸಮ್ಮೇಳನ

- ನೀವು ಆಯುರ್ವೇದ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿದವರು. 10 ವರ್ಷಗಳಿಂದ ಹವ್ಯಕ ಮಹಾಸಭೆಯ ಚುಕ್ಕಾಣಿ ಹಿಡಿದಿದ್ದೀರಿ. ಸಮುದಾಯದ ಮೇಲಿನ ನಿಮ್ಮ ಈ ಪ್ರೀತಿಯ ಬಗ್ಗೆ ಹೇಳುವುದಾದರೆ?

ಇತರರ ಒತ್ತಾಯಕ್ಕೆ ನಾನು ಈ ಪದವಿ ಏರಿದ್ದು. ಆದರೆ ಒಂದು ನಿಸ್ವಾರ್ಥವಾದ, ಲೋಕ ಕಲ್ಯಾಣಕ್ಕೆ ತುಡಿಯುವ ಈ ಸಮುದಾಯದ ಆಶಯವನ್ನು ಎತ್ತಿ ಹಿಡಿಯಬೇಕು ಎಂಬುದಂತೂ ಮನಸ್ಸಲ್ಲಿತ್ತು. 1996 ರಲ್ಲಿ ವಿಶ್ವ ಸಮ್ಮೇಳನದಲ್ಲಿ ಹವ್ಯಕ ಪತ್ರಿಕೆಯ ಪ್ರಧಾನ ಸಂಪಾದಕನಾಗಿದ್ದೆ. ಸಮ್ಮೇಳನದಲ್ಲೂ ತೊಡಗಿಸಿಕೊಂಡಿದ್ದೆ. ಈ ಹೊತ್ತಿಗೆ ‘ಪ್ರತಿಬಿಂಬ’ ಎಂಬ ಕಾರ್ಯಕ್ರಮ ನಡೆಸುತ್ತ ಬಂದಿದ್ದೆ. ಇದು ಇಂದು ಅನೇಕ ಪ್ರದೇಶಗಳಲ್ಲಿ ನಡೆಯುತ್ತಿದೆ. ಹವ್ಯಕ ಪ್ರತಿಭೆಗಳನ್ನು ಗುರುತಿಸುವುದು ಮುಖ್ಯ ಉದ್ದೇಶ.

ನಮ್ಮ ಸಮುದಾಯದ ಮುಖ್ಯ ಉದ್ದೇಶ ಲೋಕ ಕಲ್ಯಾಣ. ನಮ್ಮ ಫೋಕಸ್‌ ಲೋಕ ಕಲ್ಯಾಣದ ಬಗ್ಗೆಯೇ ಇರಬೇಕು ಎಂಬುದು ನನ್ನ ಇಂಗಿತ. ಹೀಗಾದರೆ ದೇಶವೇ ಚೆನ್ನಾಗಿರುತ್ತದೆ. ಇದಕ್ಕೆ ಸಂಕೇತ ಎಂಬ ಹಾಗೆ ಕಳೆದ ಬಾರಿ 75 ಯೋಧರಿಗೆ ಸೈನ್ಯದಿಂದ ಪ್ರಶಸ್ತಿ ನೀಡಿದ್ದೆವು. ಅದಕ್ಕೂ ಮೊದಲು ಯೋಧರನ್ನು ಗೌರವಿಸುವ ಪರಂಪರೆ ಇರಲಿಲ್ಲ. ಈಗ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲೂ ಯೋಧರನ್ನು ಗೌರವಿಸಲಾಗುತ್ತಿದೆ. ದೇಶ ಕಾಯುವವರ ಜೊತೆ ಸಮಾಜ ಬೆರೆಯುತ್ತಿದೆ. ಅಲ್ಲದೇ ಈ ಬಾರಿ 81 ಯೋಧರಿಗೆ ದೇಶರತ್ನ ಸನ್ಮಾನವಿದೆ. ಒಟ್ಟಿನಲ್ಲಿ ದೇಶದ ಚಿಂತನೆಗೆ ಪೂರಕವಾಗಿ ಹವ್ಯಕರು ಬದುಕಬೇಕು ಎಂಬುದು ಸಮ್ಮೇಳನದ ಆಶಯ. ಇದು ಸಮಗ್ರ ಹವ್ಯಕರ ಆಶಯವೂ ಹೌದು.

click me!