Chikkamagaluru: ಕಾಫಿನಾಡು ಮಲೆನಾಡಲ್ಲಿ ಕೈ ಕೊಟ್ಟ ಮಳೆರಾಯ: ಗಡಿ ಮಾರಿಗೆ ವಿಶೇಷ ಪೂಜೆ

Published : Jun 29, 2023, 10:43 PM IST
Chikkamagaluru: ಕಾಫಿನಾಡು ಮಲೆನಾಡಲ್ಲಿ ಕೈ ಕೊಟ್ಟ ಮಳೆರಾಯ: ಗಡಿ ಮಾರಿಗೆ ವಿಶೇಷ ಪೂಜೆ

ಸಾರಾಂಶ

ಮಲೆನಾಡಲ್ಲಿ ಮೂರು ದಶಕಗಳ ಬಳಿಕ ಜುಲೈ ಬಂದ್ರು ಮಳೆಯಿಲ್ಲ. ಈ ವೇಳೆಗೆ ಮಲೆನಾಡಲ್ಲಿ ಸಮೃದ್ಧ ಮಳೆಯಾಗ್ತಿತ್ತು. ಕಳೆದ ನಾಲ್ಕೈದು ವರ್ಷದಲ್ಲಂತು ಈ ಹೊತ್ತಿಗೆ ಅಲ್ಲೋಲ-ಕಲ್ಲೋಲ. ಆದ್ರೆ, ಈ ಬಾರಿ ಶೇಕಡ 20ರಷ್ಟು ಮಳೆಯಾಗಿಲ್ಲ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜೂ.29): ಮಲೆನಾಡಲ್ಲಿ ಮೂರು ದಶಕಗಳ ಬಳಿಕ ಜುಲೈ ಬಂದ್ರು ಮಳೆಯಿಲ್ಲ. ಈ ವೇಳೆಗೆ ಮಲೆನಾಡಲ್ಲಿ ಸಮೃದ್ಧ ಮಳೆಯಾಗ್ತಿತ್ತು. ಕಳೆದ ನಾಲ್ಕೈದು ವರ್ಷದಲ್ಲಂತು ಈ ಹೊತ್ತಿಗೆ ಅಲ್ಲೋಲ-ಕಲ್ಲೋಲ. ಆದ್ರೆ, ಈ ಬಾರಿ ಶೇಕಡ 20ರಷ್ಟು ಮಳೆಯಾಗಿಲ್ಲ. ಹಾಗಾಗಿ, ಮಲೆನಾಡ ಗ್ರಾಮೀಣ ಭಾಗದ ಜನ ಗಡಿಮಾರಿಗೆ ವಿಶೇಷ ಪೂಜೆ ಸಲ್ಲಿಸಿ ಮತ್ತೊಂದು ಹಳ್ಳಿಯ ಗಡಿಗೆ ಬಿಡ್ತಿದ್ದು, ಮಳೆ ಇಲ್ಲದೆ ಎದುರಾಗಿರೋ ಸಂಕಷ್ಟವನ್ನ ಮಳೆ ಸುರಿಸಿ ನಿವಾರಿಸುವಂತೆ ಬೇಡಿಕೊಂಡಿದ್ದಾರೆ.

ಮಳೆ ಬಾರದ ಹಿನ್ನೆಲೆ ಗಡಿ ಮಾರಿಗೆ ಪೂಜೆ ಮಾಡಿದ ಮಲೆನಾಡಿಗರು: ನಿರ್ದಿಷ್ಟ ರೂಪ-ಆಕಾರ ಎರಡೂ ಇಲ್ಲ. ಮರದಿಂದ ಮಾಡಿದ ಮನುಷ್ಯ ರೂಪದ ಹೋಲಿಕೆಯೇ ಆಕೆಯ ದೈವತ್ವಕ್ಕೆ ಸಾಕ್ಷಿ. ಮರದಿಂದ ಮಾಡಿದ ಚಿಕ್ಕ ಗಾಡಿಗಳೇ ಆಕೆಯ ರಥ. ಇವತ್ತು ಈ ಊರಲ್ಲಿದ್ರೆ ನಾಳೆ ಮತ್ತೊಂದು ಊರಲ್ಲಿರ್ತಾಳೆ. ಆಕೆಗೊಂದು ನಿರ್ದಿಷ್ಠ ಸ್ಥಳವೂ ಇಲ್ಲ. ಅವಳಿರೋ ಜಾಗವೇ ಅವಳ ಧರ್ಮಸ್ಥಾನ. ಬಿಸಿಲಲ್ಲಿ ಒಣಗುತ್ತಾಳೆ. ಚಳಿಯಲ್ಲಿ ನಡುಗುತ್ತಾಳೆ. ಮಳೆಯಲ್ಲಿ ನೆನೆಯುತ್ತಾಳೆ. ಮಡಿವಾಳ ಸಮಾಜವೇ ಆಕೆಗೆ ಪೂಜೆ ಸಲ್ಲಿಸೋದು. 

ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ

ಮೂರು ದಶಕಗಳ ಬಳಿಕ ಮಳೆಯಿಲ್ಲದೆ ಕಂಗಾಲಾಗಿರೋ ಕಾಫಿನಾಡ ಮಲೆನಾಡು ಭಾಗ ಆಕಾರವಿಲ್ಲದ ಆಕೆಗೆ ಮಳೆಗಾಗಿ ವಿಶೇಷ ಪೂಜೆ ಮಾಡಿದ್ದಾರೆ. ಸದ್ಯ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸಿಂಸೆ ಗ್ರಾಮದಲ್ಲಿ ಮಳೆಗಾಗಿ ವಿಶೇಷವಾಗಿ ಗಡಿಮಾರಿ ಪೂಜೆ ಸಲ್ಲಿಸಿದ್ದಾರೆ. ಈ ಹಳ್ಳಿಯವರು ಪೂಜೆ ಮಾಡಿ ಮುಂದಿನ ಹಳ್ಳಿಗೆ ಬಿಟ್ರೆ, ಅವ್ರು ಪೂಜೆ ಮಾಡಿ ಮತ್ತೊಂದು ಹಳ್ಳಿ ಗಡಿ ಬಿಡ್ತಾರೆ. ಹಾಗಾಗಿ, ಈಕೆ ಗಡಿಮಾರಿ ಎಂದೇ ಖ್ಯಾತಿ. 

ಪೂಜೆ ನಡೆಯದಿದ್ದಾಗ ಈ ರೀತಿ ಬರಗಾಲ ಬರುತ್ತೆ ಅನ್ನೋ ನಂಬಿಕೆ: ಗಡಿಮಾರಿಗೆ ಪೂಜೆ ನಡೆಯದಿದ್ದಾಗ ಈ ರೀತಿ ಬರಗಾಲ ಬರುತ್ತೆ ಅನ್ನೋ ನಂಬಿಕೆ ಸ್ಥಳಿಯರದ್ದಾಗಿದೆ. ಹಾಗಾಗಿ, ರಸ್ತೆಬದಿ ಇರುವ ದೇವರಿಗೆ ಹೊಸ ಸೀರೆ, ಪಂಚೆ ಉಡಿಸಿ, ಗರ್ಭಗುಡಿಯ ದೇವಿಗೆ ಪೂಜೆ ಮಾಡುವಂತೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ, ಚಿಕ್ಕ ಗಾಡಿಯ ಮೇಲೆ ಇರುವ ದೇವರನ್ನ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಮುಂದಿನ ಊರಿನ ಗಡಿಗೆ ಕಳಿಸಿಕೊಡ್ತಾರೆ. ಹೀಗೆ ದೇವರು ಹೋಗುವಾಗ ಈ ದೇವಿಯನ್ನ ಪಂಜಿನ ಜೊತೆಯೇ ಕರೆದುಕೊಂಡ ಹೋಗಬೇಕು. ಅನಾದಿ ಕಾಲದಿಂದಲೂ ಈಕೆಗೆ ಮಡಿವಾಳ ಸಮಾಜವೇ ಪೂಜೆ ಮಾಡ್ತಿರೋದು. 

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ಕೈ ಬಿಟ್ಟ ಸರ್ಕಾರ: ಆದೇಶ ವಾಪಸ್‌ ಪಡೆದ ಸಹಕಾರ ಇಲಾಖೆ

ಈ ಬಾರಿಯೂ ಸಿಂಸೆ ಗ್ರಾಮದ ಸುತ್ತಮುತ್ತಲಿನ ಎಲ್ಲಾ ಜಾತಿ-ಧರ್ಮದವರು ಸೇರಿ ಈಕೆಗೆ ಅದ್ದೂರಿಯಾಗಿ ಪೂಜೆ ಮಾಡಿ ಮುಂದಿನ ಗಡಿಗೆ ಬಿಟ್ಟು ಬಂದಿದ್ದಾರೆ. ಹೀಗೆ ಮಳೆ ಇಲ್ಲದಾಗ ಗಡಿಮಾರಿಗೆ ಪೂಜೆ ಮಾಡಿದರೆ ಮಳೆಯಾಗುತ್ತೆ ಅನ್ನೋದು ಸ್ಥಳಿಯರ ನಂಬಿಕೆ. ಒಟ್ಟಾರೆ ಕಾಫಿನಾಡು ಚಿಕ್ಕಮಗಳೂರಲ್ಲಿ ಮಳೆಗಾಗಿ ದಶದಿಕ್ಕುಗಳಲ್ಲೂ ಪೂಜೆ ನಡೆಯುತ್ತಿದೆ. ಶೃಂಗೇರಿ ಶಾರದಾಂಭೆ, ಹೊರನಾಡು ಅನ್ನಪೂರ್ಣೇಶ್ವರಿ, ಮಳೆ ದೇವರೆಂದೇ ಖ್ಯಾತಿಯಾಗಿರುವ ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯ ಎಲ್ಲಾ ಕಡೆ ಮಳೆಗಾಗಿ ಪೂಜೆ ನಡೆಯುತ್ತಿದೆ. ಈ ಮಧ್ಯೆ ಗ್ರಾಮೀಣ ಭಾಗದ ನಂಬಿಕೆಯಂತೆ ಮಲೆನಾಡಿಗರು ಮಳೆಗಾಗಿ ಗಡಿಮಾರಿ ಮೊರೆ ಹೋಗಿದ್ದಾರೆ. ಯಾವ್ದೋ ಒಂದು ದೇವರ ದಯೆಯಿಂದ ರಾಜ್ಯಕ್ಕೆ ಸಮೃದ್ಧ ಮಳೆಯಾದರೆ ಸಾಕು. ಏಕೆಂದರೆ, ರಾಜ್ಯ ಮಳೆಯಿಲ್ಲದೆ ಕಂಗಾಲಾಗಿದೆ. ಅದರಲ್ಲೂ ಅರ್ಧ ಕರ್ನಾಟಕಕ್ಕೆ ಕುಡಿಯೋ ನೀರು ನೀಡೋ ಕಾಫಿನಾಡಲ್ಲೇ ಮಳೆ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕನ್ನಡ ಸಾಹಿತ್ಯದ 8 ಜ್ಞಾನಪೀಠ ವಿಜೇತರ ಸಮಾಗಮದ ಫೋಟೋ ವೈರಲ್; ಏನಿದರ ಅಸಲಿಯತ್ತು?
ನಮ್ಮ ಮೆಟ್ರೋದಲ್ಲೊಂದು ಬಂಗಾರದ ಬಳೆ ಕಥೆ; ಒಂದು ಫೊಟೋ ಕೇಳಿದರೆ, ಕೈಬಳೆ ಬಿಚ್ಚಿಕೊಟ್ಟ ಅಪರಿಚಿತೆ!