ಬರಗಾಲದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಈಗ ಬೆಳೆದಿರುವ ಬೆಳೆಗಳ ಸಮೀಕ್ಷೆ ಅನುಮೋದನೆಯಾಗದೆ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಕೊಬ್ಬರಿ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಹಾಗೂ ಬೆಳೆ ಹಾನಿ ಪರಿಹಾರ ಪಡೆಯಲಾಗದೇ ಪರದಾಡುವಂತಾಗಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಜ.19): ಬರಗಾಲದಿಂದ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಈಗ ಬೆಳೆದಿರುವ ಬೆಳೆಗಳ ಸಮೀಕ್ಷೆ ಅನುಮೋದನೆಯಾಗದೆ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ, ಕೊಬ್ಬರಿ ಮತ್ತಿತರ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಹಾಗೂ ಬೆಳೆ ಹಾನಿ ಪರಿಹಾರ ಪಡೆಯಲಾಗದೇ ಪರದಾಡುವಂತಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಮಾಹಿತಿಯನ್ನು ಪಹಣಿಯಲ್ಲಿ (ಆರ್‌ಟಿಸಿ) ನೋಂದಣಿ ಮಾಡಿಸಿದರೆ ಮಾತ್ರ ಇದರ ಆಧಾರದಲ್ಲಿ ಬೆಳೆ ಹಾನಿ ಪರಿಹಾರ, ಕನಿಷ್ಟ ಬೆಂಬಲ ಬೆಲೆ ಯೋಜನೆ(ಎಂಎಸ್‌ಪಿ) ಪ್ರಯೋಜನ ಪಡೆಯಬಹುದು. ಬೆಳೆ ಸಮೀಕ್ಷೆ ಅಪ್ಲಿಕೇಷನ್ ಮೂಲಕ ಸ್ವತಃ ರೈತರೇ ಅಥವಾ ಕೃಷಿ ಇಲಾಖೆ ನೇಮಿಸಿದ ಖಾಸಗಿ ಸಮೀಕ್ಷೆದಾರರು (ಪಿಆರ್) ಆ್ಯಪ್ ಮೂಲಕ ಗ್ರಾಮವಾರು ಸಮೀಕ್ಷೆ ಕೈಗೊಂಡು ಯಾವ್ಯಾವ ಜಮೀನಿನಲ್ಲಿ ಯಾವ್ಯಾವ ಬೆಳೆ ಬೆಳೆಯಲಾಗಿದೆ ಎಂದು ನಮೂದಿಸಬೇಕಾಗುತ್ತದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಕೃಷಿ ಇಲಾಖೆಯು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಮಾಡಿಕೊಳ್ಳಲು ಅವಕಾಶ ನೀಡಿದ್ದು, ಬಹಳಷ್ಟು ರೈತರು ಸ್ವತಃ ಸಮೀಕ್ಷೆ ಮಾಡಿಕೊಂಡಿದ್ದಾರೆ. ರೈತರೇ ಮಾಡಿದ ಸಮೀಕ್ಷೆಗೆ ಇಲಾಖೆ ನಿಗದಿಪಡಿಸಿದ ಗ್ರಾಮ ಲೆಕ್ಕಾಧಿಕಾರಿ, ತೋಟಗಾರಿಕಾ ಇಲಾಖೆ ಸಿಬ್ಬಂದಿ ಮತ್ತಿತರರನ್ನು ಸೂಪರ್‌ವೈಸರ್‌ಗಳಾಗಿ ನೇಮಿಸಿದ್ದು ಇವರು ಅನುಮೋದನೆ ನೀಡಿದರೆ ಮಾತ್ರ ಆ ಸಮೀಕ್ಷೆ ಮಾನ್ಯವಾಗುತ್ತದೆ. ಪಿಆರ್‌ಗಳು ನಡೆಸಿರುವ ಬಹುತೇಕ ಸಮೀಕ್ಷೆಗೆ ಸೂಪರ್‌ವೈಸರ್‌ಗಳು ಅಸ್ತು ಎಂದಿದ್ದಾರೆ. ಆದರೆ ರೈತರು ನಡೆಸಿರುವ ಬಹಳಷ್ಟು ಸಮೀಕ್ಷೆಗೆ ಅನುಮೋದನೆ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಾಮನಗರದಲ್ಲಿ ರಾಮಮಂದಿರ ಕಟ್ಟಲು ಕಾಂಗ್ರೆಸ್ ಸರ್ಕಾರದಿಂದ ಆಗುವುದಿಲ್ಲ: ಸಿ.ಪಿ.ಯೋಗೇಶ್ವರ್
ಸಮೀಕ್ಷೆ ಕೈಗೊಂಡ ಬಳಿಕ ಇದನ್ನು ‘ಬೆಳೆ ದರ್ಶಕ ಆ್ಯಪ್’ ಮೂಲಕ ಖಚಿತಪಡಿಸಿಕೊಳ್ಳಬಹುದು. ಬಳಿಕ ಆಕ್ಷೇಪಣೆಗಳನ್ನು ಸಲ್ಲಿಸಲೂ ಅವಕಾಶವಿರುತ್ತದೆ. ಆದರೆ ಅನೇಕ ರೈತರು ಅನುಮೋದನೆಯಾಗಿರುವ ಬಗ್ಗೆ ಖಚಿತಪಡಿಸಿಕೊಂಡಿಲ್ಲ. ಜತೆಗೆ ಬಹಳಷ್ಟು ರೈತರ ಸಮೀಕ್ಷೆಯನ್ನು ಸೂಪರ್‌ವೈಸರ್‌ಗಳು ಅನುಮೋದಿಸಿಲ್ಲ. ಅನುಮೋದನೆಯಾಗಿರುವುದನ್ನು ಖಚಿತಪಡಿಸಿಕೊಳ್ಳದೇ ರೈತರು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಖರೀದಿ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಸಲು ಮುಂದಾದರೆ, ‘ನಿಮ್ಮ ಬೆಳೆ ಅನುಮೋದನೆಯಾಗಿಲ್ಲ. ನೀವು ರಾಗಿ ಮಾರಾಟ ಮಾಡಲು ಬರುವುದಿಲ್ಲ’ ಎಂಬ ಅಧಿಕಾರಿಗಳ ಮಾತು ಕೇಳಿ ಚಿಂತಿತರಾಗಿದ್ದಾರೆ.
ಬರ ಪರಿಹಾರ ಸಿಗದು: ಇದಷ್ಟೇ ಅಲ್ಲ, ರೈತರು ಎಂಎಸ್‌ಪಿ ಅಡಿ ಜೋಳವನ್ನೂ ಮಾರಾಟ ಮಾಡದಂತಾಗಿದೆ. ನಾಫೆಡ್‌ಗೆ ಕೊಬ್ಬರಿ ಮಾರಾಟ ಮಾಡಲೂ ಬರುವುದಿಲ್ಲ. ಮತ್ತೊಂದೆಡೆ, ಯಾವ್ಯಾವ ಜಮೀನಿನಲ್ಲಿ ಯಾವ್ಯಾವ ಬೆಳೆ ಬೆಳೆಯಲಾಗಿದೆ ಎಂಬ ಆಧಾರದಲ್ಲಿ ಬರ ಪರಿಹಾರವನ್ನೂ ಇದೇ ಬೆಳೆ ಸಮೀಕ್ಷೆಯ ಆಧಾರದಲ್ಲಿಯೇ ನೀಡುವುದರಿಂದ ರೈತರು ಬರ ಪರಿಹಾರದಿಂದಲೂ ವಂಚಿತರಾಗುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ತಡ ಮುಂಗಾರಿನಲ್ಲಿ 2.16 ಕೋಟಿ ಪ್ಲಾಟ್ (ಹಿಸ್ಸಾ) ಸಮೀಕ್ಷೆ ಮಾಡಬೇಕಿದ್ದು ಪಿಆರ್‌ಗಳು 2.03 ಕೋಟಿ ಪ್ಲಾಟ್‌ಗಳ ಸಮೀಕ್ಷೆ ಮಾಡಿ ಮಾಹಿತಿ ಅಪ್‌ಲೋಡ್ ಮಾಡಿದ್ದಾರೆ. ರೈತರು ಸ್ವತಃ 2.23 ಲಕ್ಷ ಪ್ಲಾಟ್‌ಗಳ ಸಮೀಕ್ಷೆ ಮಾಡಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಶೇ.98.08 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಷ್ಟೊಂದು ಭಾರೀ ಪ್ರಮಾಣದಲ್ಲಿ ರೈತರೂ ಸಮೀಕ್ಷೆ ಕೈಗೊಂಡಿರುವುದರಿಂದ ಬಾಕಿ ಉಳಿದಿರುವ ಯೋಗ್ಯ ಪ್ರಕರಣಗಳನ್ನು ಮಾನ್ಯ ಮಾಡಲು ಒಂದು ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಹಿಂದೂಗಳ ಭಾವನೆಗೆ ಅಪಮಾನ ಮಾಡುವುದೇ ಕಾಂಗ್ರೆಸ್ ಸರ್ಕಾರದ ಸಂಸ್ಕೃತಿ: ಶಾಸಕ ಯತ್ನಾಳ್
ಕೆಲವೆಡೆ ಬೆಳೆ ಇಲ್ಲದಿದ್ದರಿಂದ ಸೂಪರ್‌ವೈಸರ್‌ಗಳು ರೈತರ ಸಮೀಕ್ಷೆಗೆ ಅನುಮೋದನೆ ನೀಡಿಲ್ಲ. ಬೆಳೆ ಬೆಳೆದಿದ್ದರೂ ಸೂಪರ್‌ವೈಸರ್‌ಗಳು ಅನುಮೋದನೆ ನೀಡದಿದ್ದ ಪ್ರಕರಣಗಳಲ್ಲಿ ಆಯಾ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ.
-ವೈ.ಎಸ್.ಪಾಟೀಲ್, ಕೃಷಿ ಇಲಾಖೆ ಆಯುಕ್ತ