ಘಟ್ಟದ ವ್ಯಾಪಾರ ಸಾಂಬಾರಿಗೆ ಹಾಕುವುದಕ್ಕೆ ಉಪ್ಪಿಲ್ಲ ಎನ್ನುವ ಗಾದೆ ಮಾತನ್ನು ನೀವು ಕೇಳಿಯೇ ಇರುತ್ತೀರಾ. ಹಾಗೆ ಈ ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ, ಪಯಶ್ವಿನಿ ಸೇರಿದಂತೆ ಮೂರ್ನಾಲ್ಕು ನದಿಗಳು ಹುಟ್ಟಿ ಹರಿಯುತ್ತವೆ. ಆದರೂ ಈ ಗ್ರಾಮಕ್ಕೆ ಇಂದಿಗೂ ಕುಡಿಯುವ ನೀರಿಲ್ಲ
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.13) : ಘಟ್ಟದ ವ್ಯಾಪಾರ ಸಾಂಬಾರಿಗೆ ಹಾಕುವುದಕ್ಕೆ ಉಪ್ಪಿಲ್ಲ ಎನ್ನುವ ಗಾದೆ ಮಾತನ್ನು ನೀವು ಕೇಳಿಯೇ ಇರುತ್ತೀರಾ. ಹಾಗೆ ಈ ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ, ಪಯಶ್ವಿನಿ ಸೇರಿದಂತೆ ಮೂರ್ನಾಲ್ಕು ನದಿಗಳು ಹುಟ್ಟಿ ಹರಿಯುತ್ತವೆ. ಆದರೂ ಈ ಗ್ರಾಮಕ್ಕೆ ಇಂದಿಗೂ ಕುಡಿಯುವ ನೀರಿಲ್ಲ. ಸಾಕಷ್ಟು ಮಳೆ ಸುರಿಯುವ ಜಿಲ್ಲೆಯಾದರೂ ಕನಿಷ್ಠ ಮಳೆಗಾಲದಲ್ಲೂ ಕುಡಿಯುವ ನೀರು ಸಿಗುವುದಿಲ್ಲ ಎನ್ನುವುದು ನಿಜಕ್ಕೂ ಜಿಲ್ಲೆಗೆ ನಾಚಿಕೆಗೇಡಿನ ಸಂಗತಿ.
undefined
ಹೌದು ಕೊಡಗು ಜಿಲ್ಲೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ ಜೊತೆಗೆ ಪಯಶ್ವಿನಿ ನದಿಗಳು ಹುಟ್ಟಿ ಹರಿಯುತ್ತವೆ. ಆದರೂ ಮಡಿಕೇರಿ ತಾಲ್ಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಡಾವು ಗ್ರಾಮ(Chadavu village)ದಲ್ಲಿ ಇಂದಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. 30 ಕ್ಕೂ ಹೆಚ್ಚು ಕುಟುಂಬಗಳಿರುವ ಈ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳಾಗುತ್ತಿದ್ದರೂ ಶುದ್ಧ ಕುಡಿಯುವ ನೀರಿಲ್ಲ. ಒಂದೆಡೆ ಸರ್ಕಾರಗಳು, ಜಲಜೀವನ್ ಮಿಷನ್ ನಂತಹ ಯೋಜನೆಗಳನ್ನು ಜಾರಿಗೆ ತಂದು ಪ್ರತೀ ಮನೆಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದಾಗಿ ಹೇಳುತ್ತಿವೆ. ಆದರೆ ಈ ಗ್ರಾಮಕ್ಕೆ ಕಾಡಿನಲ್ಲಿ ಬೆಟ್ಟದ ತಪ್ಪಲಿನಿಂದ ಹರಿಯುವ ಝರಿಗೆ ಪೈಪುಗಳನ್ನು ಜೋಡಿಸಿ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿದೆ.
ಭೋರ್ಗರೆವ ಪಯಶ್ವನಿ ನದಿಯಲ್ಲಿ ಬಂಧಿಯಾದ ಬಂಡಡ್ಕ ಗ್ರಾಮಸ್ಥರ ಬದುಕು: ಕಣ್ಮುಚ್ಚಿ ಕುಳಿತ ಸರ್ಕಾರ
ಕಾಡಿನಲ್ಲಿ ಓಡಾಡುವ ಆನೆಗಳೋ, ಇಲ್ಲ ಮತ್ತಿನ್ಯಾವುದೋ ಪ್ರಾಣಿ ಪೈಪನ್ನು ತುಳಿದು ಹಾಳು ಮಾಡಿತ್ತೆಂದರೆ ಒಂದು ವಾರ ಅಥವಾ ಹದಿನೈದು ದಿನಗಳಾದರೂ ನೀರು ಬರುವುದಿಲ್ಲ. ಆಗ ಚಡಾವು ಗ್ರಾಮದ ಜನರ ನೀರಿನ ಭವಣೆ ಅಷ್ಟಿಷ್ಟಲ್ಲ. ಮತ್ತೆ ಕಾಡಿಗೆ ಹೋಗಿ ಆ ಪೈಪನ್ನು ಸರಿಪಡಿಸಬೇಕೆಂದರೆ ಕಾಡಾನೆ ಸೇರಿದಂತೆ ಇತರೆ ಪ್ರಾಣಿಗಳ ಭಯದಲ್ಲಿ ಹಲವು ಜನರು ಒಟ್ಟೊಟ್ಟಿಗೆ ಹೋಗಿ ಸರಿಪಡಿಸಬೇಕು. ಇಲ್ಲದಿದ್ದರೆ ಎಷ್ಟು ದಿನಗಳಾದರೂ ಗ್ರಾಮಕ್ಕೆ ನೀರೇ ಇರುವುದಿಲ್ಲ. ಇನ್ನು ಮಳೆಗಾಲದಲ್ಲಿ ಪೈಪು ಹೊಡೆದು ಹೋಗಲಿ, ಬಿಡಲಿ ಹೊಸ ನೀರು ಬರುವುದರಿಂದ ಆ ನೀರನ್ನು ಬಳಸುವುದಕ್ಕೆ ಸಾಧ್ಯವೇ ಇಲ್ಲ.
ಇಂತಹ ಸಂದರ್ಭದಲ್ಲಿ ಗ್ರಾಮದಲ್ಲಿರುವ ತೆರೆದ ಬಾವಿಯಿಂದ ಸೆಳೆದು ನೀರನ್ನು ಉಪಯೋಗಿಸೋಣವೆಂದರೆ ಬಾವಿಯನ್ನು ಸ್ವಚ್ಛಗೊಳಿಸಿ 10 ವರ್ಷಗಳಿಗೂ ಮೇಲಾಗಿದೆ. ಬಾವಿಗೆ ಹಳೇ ಚಪ್ಪಲಿ, ಬಾಟೆಲ್ ಸೇರಿದಂತೆ ಹೇಳಬಾರದ ವಸ್ತುಗಳೆಲ್ಲಾ ಬಿದ್ದು ಕೊಳೆಯುತ್ತಿವೆ. ಇದನ್ನಾದರೂ ಸ್ವಚ್ಛಗೊಳಿಸಿ ಎಂದು ಗ್ರಾಮದವರೇ ಸ್ವಚ್ಛತೆಗೆ ಬೇಕಾದ ಪರಿಕರಗಳನ್ನು ತಂದುಕೊಟ್ಟರೂ ಪಂಚಾಯಿತಿಯಿಂದ ಬಾವಿಯನ್ನು ಸ್ವಚ್ಛಗೊಳಿಸುತ್ತಿಲ್ಲ ಎಂದು ಚಡಾವು ಗ್ರಾಮಸ್ಥರಾದ ನವೀನ್ ಆಚಾರಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಾವಿ ಸ್ವಚ್ಛಗೊಳಿಸದಿದ್ದರೂ ಪರವಾಗಿಲ್ಲ ಕೊನೆ ಪಕ್ಷ ಗ್ರಾಮದಲ್ಲಿರುವ ಏಳೆಂಟು ವರ್ಷಗಳಿಂದ ಕೆಟ್ಟು ನಿಂತಿರುವ ಕೊಳವೆ ಬಾವಿಯನ್ನಾದರೂ ಸರಿಪಡಿಸಿ ಎಂದರೆ, ಅದನ್ನೂ ಪಂಚಾಯಿತಿಯಿಂದ ಸರಿಪಡಿಸುತ್ತಿಲ್ಲ ಎಂದು ಪಂಚಾಯಿತಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂದಿಗೂ ಎಷ್ಟೋ ಸಂದರ್ಭ ಗ್ರಾಮದಲ್ಲಿ ಒಂದಿಬ್ಬರ ಮನೆಯಲ್ಲಿರುವ ಬಾವಿಗಳಿಂದ ಕೇಳಿ ಊರಿನವರೆಲ್ಲಾ ನೀರು ಪಡೆಯಬೇಕಾಗಿದೆ. ಹಾಗೆ ಎಷ್ಟು ದಿನಗಳು ಮತ್ತೊಬ್ಬರ ಮನೆಯ ಬಾವಿಗೆ ಹೋಗಿ ನೀರು ಕೇಳಲು ಸಾಧ್ಯ ಎಂದು ಗ್ರಾಮದ ಮಹಿಳೆ ರಮಣಿ ಅಳಲು ತೋಡಿಕೊಂಡಿದ್ದಾರೆ.
ಕೊಡಗಿನಲ್ಲಿ ತೆರಿಗೆ ಕಟ್ಟದಿದ್ದರೆ ಗೃಹಲಕ್ಷ್ಮಿ ಅರ್ಜಿ ಸಲ್ಲಿಸುವಂತಿಲ್ಲ?: ಜನರ ಆಕ್ರೋಶ
ಒಟ್ಟಿನಲ್ಲಿ ಇಂದಿಗೂ ಕೆಲವು ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ ಅನಾರೋಗ್ಯಕ್ಕೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿರುವ ಸ್ಥಿತಿ ಹಲವು ಜಿಲ್ಲೆಗಳಲ್ಲಿ ಇದೆ. ಆದರೆ ನದಿಗಳು ಹುಟ್ಟಿ ಹರಿಯುವ ಕೊಡಗಿನಲ್ಲೂ ಇಂತಹ ಸ್ಥಿತಿ ಇರುವುದು ನಿಜಕ್ಕೂ ನಮ್ಮ ವ್ಯವಸ್ಥೆಗೆ ಹಿಡಿದಿರುವ ಕೈಗನ್ನಡಿ.