ಹೊಸ ರೂಪಾಂತರ ವೈರಸ್ ನಡುವೆಯೂ ಕೊರೋನಾ ಎರಡನೇ ಅಲೆ ಹಬ್ಬುವ ಸಾಧ್ಯತೆ ಬಗ್ಗೆ ನಿವೃತ್ತ ವೈರಾಣು ತಜ್ಞರೊಬ್ಬರು ಎಚ್ಚರಿಸಿದ್ದಾರೆ.
ಬೆಂಗಳೂರು, (ಡಿ.31): ಜನರ ಬೇಜವಾಬ್ದಾರಿಯಿಂದಾಗಿ ಭಾರತದಲ್ಲಿ ಕೊರೋನಾ ಎರಡನೇ ಅಲೆ ಹಬ್ಬುವ ಸಾಧ್ಯತೆ ಹೆಚ್ಚು ಎಂದು ನಿಮ್ಹಾನ್ಸ್‍ನ ನಿವೃತ್ತ ವೈರಾಣು ತಜ್ಞ ಹಾಗೂ ರಾಜ್ಯ ಕೊವಿಡ್ ತಾಂತ್ರಿಕ ಸಮಿತಿ ಸದಸ್ಯ ಡಾ. ರವಿ ಅಭಿಪ್ರಾಯಪಟ್ಟರು.
ಪ್ರೆಸ್ ಇನ್ಫರಮೇಷನ್ ಬ್ಯುರೊ ಹಾಗೂ ಕರ್ನಾಟಕ ಪತ್ರಕರ್ತೆಯರ ಸಂಘ `ಕೊವಿಡ್‍ನ ವಿಭಿನ್ನ ಆಯಾಮ'ಗಳ ಕುರಿತು ಗುರುವಾರ ಜಂಟಿಯಾಗಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿ, ಯುರೋಪ್‍ನ ಹಲವು ದೇಶಗಳು ಹಾಗೂ ಅಮೆರಿಕದ ಸನ್ನಿವೇಶವನ್ನು ಗಮನಿಸಿದಾಗ ಮೊದಲ ಅಲೆ ಮುಕ್ತಾಯಗೊಂಡ ನಾಲ್ಕೈದು ತಿಂಗಳ ನಂತರ ಎರಡನೇ ಅಲೆ ಶುರುವಾಗಿದೆ. ಇಲ್ಲಿಯೂ ಹಾಗೆ ಆಗುವ ಸಂಭವವಿದೆ ಎಂದು ಎಚ್ಚರಿಸಿದರು.
ಬ್ರಿಟನ್‌ನಿಂದ ಬಂದು ನಾಪತ್ತೆಯಾಗಿದ್ದ 202 ಮಂದಿಯೂ ಪತ್ತೆ
ಕೊವಿಡ್ ಪ್ರಕರಣಗಳು ಕಡಿಮೆಯಾಗುತ್ತಿದೆ ಎಂದು ಜನ ಅಂತರ ಕಾಯ್ದುಕೊಳ್ಳದೇ, ಮಾಸ್ಕ್ ಧರಿಸದೇ, ಸಾನಿಟೈಸರ್ ಬಳಸದೇ ಇದ್ದಲ್ಲಿ ಈ ಸಾಧ್ಯತೆ ಹೆಚ್ಚು. ಮಾರುಕಟ್ಟೆಗೆ ಹೋದಾಗ, ಅಥವಾ ಸಮಾರಂಭಗಳಿಗೆ ಹೋದಾಗ ಅಂತರ ಕಾಯ್ದುಕೊಳ್ಳಬೇಕು. ಕೊವಿಡ್ ಮುಗಿಯಿತು ಎಂದು ಮದುವೆಯಂತಹ ಸಮಾರಂಭಗಳಿಗೆ ಹೆಚ್ಚು ಜನ ಸೇರುವುದು ತಪ್ಪು. ಅಲ್ಲಿ ಒಂದಿಬ್ಬರು ರೋಗಲಕ್ಷಣ ಇಲ್ಲದೇ ಕೊವಿಡ್ ಸೋಂಕಿಗೆ ಒಳಗಾಗಿರಬಹುದು. ಅಂತಹವರಿಂದ ವೈರಸ್ ಹಬ್ಬುತ್ತದೆ. ಹಾಗೆಯೇ ಹಳೆಯ ವೈರಸ್ ತನ್ನ ರೂಪ ಬದಲಿಸಿಕೊಂಡೂ ಸೋಂಕುಂಟುಮಾಡಬಹುದು ಎಂದು ಹೇಳಿದರು.
ಬ್ರಿಟನ್‍ನಲ್ಲಿ ಈಗ ರೂಪ ಬದಲಿಸಿಕೊಂಡು ಹಬ್ಬುತ್ತಿರುವ ವೈರಸ್ ರಾಜ್ಯದಲ್ಲೂ ಕಾಣಿಸಿಕೊಂಡಿದೆ. ಸದ್ಯಕ್ಕೆ ಬ್ರಿಟನ್‍ನಿಂದ ಮರಳಿದವರಲ್ಲಿ ಮಾತ್ರ ಈ ವೈರಸ್ ಇರುವುದರಿಂದ ಭಯಪಡುವ ಅಗತ್ಯವಿಲ್ಲ. ಬ್ರಿಟನ್‍ನಲ್ಲಿ ಈ ಮಾರ್ಪಟ್ಟಿರುವ ವೈರಸ್ ವೇಗವಾಗಿ ಹಬ್ಬುತಿದ್ದರೂ ಅದರಿಂದ ಸಾವಿಗೀಡಾದವರ ಪ್ರಮಾಣವೂ ಕಡಿಮೆಯಿದೆ. ವೇಗವಾಗಿ ಹಬ್ಬುವ ವೈರಸ್‍ಗಳು ಕಡಿಮೆ ಅಪಾಯಕಾರಿಯಾಗಿರುತ್ತವೆ ಎಂದೂ ಅವರು ತಿಳಿಸಿದರು.
ಆರಂಭಿಕ ಹಂತದಲ್ಲೇ ಹೊಸ ವೈರಸ್ ತಡೆಯದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ: ICMR ಎಚ್ಚರಿಕೆ
`ಕೊವಿಡ್-19' ಗೆ ಸಿದ್ಧಪಡಿಸಿರುವ ಲಸಿಕೆ ರೂಪಾಂತರಗೊಂಡಿರುವ ವೈರಸ್‍ಗಳ ಸೋಂಕನ್ನು ತಡೆಯಬಲ್ಲದು. ಆ ಬಗ್ಗೆ ಭಯ ಬೇಡ. ಹಾಗೆಯೇ ಇದು ಜೈವಿಕ ಅಸ್ತ್ರವಾಗಿ ಸಿದ್ಧಪಡಿಸಿರುವ ಕೃತಕ ವೈರಸ್ ಅಲ್ಲ. ಬಾವಲಿಯಿಂದ ಮನುಷ್ಯರಿಗೆ ಹಬ್ಬಿರುವ ವೈರಸ್ ಎಂದು ಡಾ. ರವಿ ಸ್ಪಷ್ಟಪಡಿಸಿದರು.
ಪರಿಸರ ನಾಶ ಹಾಗೂ ಮಾನವನ ದುರಾಸೆಯಿಂದಾಗಿ ಪ್ರಾಣಿಜನ್ಯ ವೈರಸ್‍ಗಳು ಮನುಷ್ಯರಿಗೆ ಹಬ್ಬುತ್ತವೆ. 15 ವರ್ಷಗಳ ಹಿಂದೆ ಆಗ್ನೇಯ ಏಷ್ಯಾ ದೇಶಗಳಲ್ಲಿ ಕಾಣಿಸಿಕೊಂಡ ಸಾರ್ಸ್- ಕೊವಿಡ್ ವೈರಸ್ ಬಾವಲಿಯಿಂದ ಇರುವೆ ತಿನ್ನುವ ಒಂದು ಪ್ರಬೇಧದ ಸಸ್ತನಿಯ ಮೂಲಕ ಮನುಷ್ಯರಿಗೆ ಹಬ್ಬಿತ್ತು. ಎಂಟು ವರ್ಷಗಳ ಹಿಂದೆ ಮಧ್ಯಪ್ರಾಚ್ಯದಲ್ಲಿ ಕಾಣಿಸಿಕೊಂಡಿದ್ದ `ಮರ್ಸ್' ವೈರಸ್ ಬಾವಲಿಯಿಂದ ಒಂಟೆಗೆ ಹಬ್ಬಿ ಆ ಮೂಲಕ ಮನುಷ್ಯರಲ್ಲಿ ಸೋಂಕುಂಟುಮಾಡಿತ್ತು. ಮುಂದೆಯೂ ಈ ಬಗೆಯ ವೈರಸ್‍ಗಳು ಮನುಷ್ಯರಲ್ಲಿ ಸೋಂಕುಂಟು ಮಾಡುತ್ತವೆ. ಕಾಡು ಪ್ರಾಣಿಗಳನ್ನು ತಿನ್ನುವ ಚೀನಾ, ಕಾಂಬೋಡಿಯಾ, ವಿಯೆಟ್ನಾಂ ದೇಶಗಳ `ವೆಟ್ ಮಾರ್ಕೆಟ್' ಅಥವಾ ದಕ್ಷಿಣ ಅಮೆರಿಕ ಖಂಡದ ಅಮೆಜಾನ್ ಅರಣ್ಯ ಪ್ರದೇಶದ ದೇಶಗಳು ಹಾಗೂ ಆಫ್ರಿಕಾದಿಂದ ಇಂತಹ ವೈರಸ್‍ಗಳು ಹಬ್ಬುವ ಸಾಧ್ಯತೆಯಿದೆ ಎಂದು ಅವರು ವಿವರಿಸಿದರು.
ಕೊವಿಡ್ ನಂತರದ ಆರೋಗ್ಯ ಸಮಸ್ಯೆಗಳ ಕುರಿತು ಮಾತನಾಡಿದ ಎಂ. ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಕೆ. ಸುಜನಿ, ಮಧುಮೇಹ ಹಾಗೂ ರಕ್ತದೊತ್ತಡ ಇರುವ ಗರ್ಭಿಣಿಯರಲ್ಲಿ ಕೊವಿಡ್ ಸೋಂಕು ಹೆಚ್ಚು ತೀವ್ರವಾಗಿರುತ್ತದೆ ಎಂದರು. ಸಾಮಾನ್ಯವಾಗಿ ಕೊವಿಡ್ ಸೋಂಕು 50 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚು ದುಷ್ಪರಿಣಾಮ ಬೀರುತ್ತದೆ. ಗರ್ಭಿಣಿಯರು ಈ ವಯೋಮಾನದಲ್ಲಿ ಬರದೇ ಇರುವುದರಿಂದ ತಮ್ಮ ರೋಗಿಗಳಲ್ಲಿ ಅಂತಹ ಸಂಕೀರ್ಣ ಸಮಸ್ಯೆಗಳು ಈವರೆಗೆ ಕಂಡುಬಂದಿಲ್ಲ ಎಂದು ತಿಳಿಸಿದರು.
ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಸ್ವಾಗತಿಸಿದರು. ಪಿಐಬಿ ಅಧಿಕಾರಿ ಕೆ. ವೈ. ಜಯಂತಿ, ಪತ್ರಕರ್ತೆಯರ ಸಂಘದ ಕಾರ್ಯದರ್ಶಿ ಮಾಲತಿ ಭಟ್, ಹಿರಿಯ ಪತ್ರಕರ್ತೆಯರಾದ ಎಂ.ಪಿ. ಸುಶೀಲಾ, ಕೆ. ಎಚ್. ಸಾವಿತ್ರಿ, ಆಯೇಷಾ ಖಾನಂ, ಅಫ್ಸಾ ಯಾಸ್ಮೀನ್, ಸುನೀತಾ ರಾವ್, ವಾಣಿಶ್ರೀ ಪತ್ರಿ, ಭಾರತಿ ಸಾಮಗ, ಚಿತ್ರಾ ಫಾಲ್ಗುಣಿ ಮತ್ತಿತರರು ವೆಬಿನಾರ್‍ನಲ್ಲಿ ಪಾಲ್ಗೊಂಡಿದ್ದರು.