Omicron ಭೀತಿ: ರಾಜ್ಯದಲ್ಲಿ ಸೋಂಕು ಮತ್ತಷ್ಟು ಏರಿಕೆ: ಎಚ್ಚರ ತಪ್ಪಿದ್ರೆ ಅಪಾಯ ಫಿಕ್ಸ್‌..!

By Kannadaprabha News  |  First Published Dec 4, 2021, 10:49 AM IST

*  ಒಮಿಕ್ರೋನ್‌ ಸೋಂಕಿತರಿಗೆ ವಿಶೇಷ ಐಸಿಯು ವಾರ್ಡ್
*  ಮಕ್ಕಳಿಗೆ ಪ್ರತ್ಯೇಕ ಐಸಿಯು, 18 ಸಾವಿರ ದಾದಿಯರಿಗೆ 1 ತಿಂಗಳು ತರಬೇತಿ
*  55 ಕೋಟಿ ಕೋವಿಡ್ ರಿಸ್ಕ್‌ ಭತ್ಯೆ ಬಿಡುಗಡೆ
 


ಬೆಂಗಳೂರು(ಡಿ.04):  ರಾಜ್ಯಕ್ಕೆ(Karnataka) ಒಮಿಕ್ರೋನ್‌(Omicron) ಪ್ರವೇಶಿಸಿರುವ ಆತಂಕದ ನಡುವೆಯೇ ಕೋವಿಡ್ ಸೋಂಕಿನ ಪ್ರಕರಣ ಏರಿಕೆಯಾಗಿದೆ. ಶುಕ್ರವಾರ 413 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 4 ಮಂದಿ ಮೃತರಾಗಿದ್ದಾರೆ. 256 ಮಂದಿ ಚೇತರಿಸಿಕೊಂಡಿದ್ದಾರೆ.  ಸಕ್ರಿಯ ಕೇಸು ಸಂಖ್ಯೆ ಮತ್ತೆ 7 ಸಾವಿರ ಸನಿಹಕ್ಕೆ ಬಂದಿದೆ. ನವೆಂಬರ್ 26 ರಂದು 402 ಪ್ರಕರಣ ದಾಖಲಾಗಿತ್ತು. ಅದಾದ ಏಳು ದಿನಗಳ ಬಳಿಕ ಮತ್ತೆ ಸೋಂಕಿನ ಪ್ರಕರಣಗಳ

ಸಂಖ್ಯೆ ನಾಲ್ಕು ನೂರರ ಗಡಿ ದಾಟಿದೆ. ಬೆಂಗಳೂರು(Bengaluru) ನಗರದಲ್ಲಿ 212 ಪ್ರಕರಣ ವರದಿಯಾಗಿದ್ದು ಸತತ ಎರಡನೇ ದಿನ 200ಕ್ಕಿಂತ ಹೆಚ್ಚು ಪ್ರಕರಣ ವರದಿಯಾಗಿದೆ. ಉಳಿದಂತೆ ಜಿಲ್ಲೆಗಳಲ್ಲಿಯೂ ಕೋವಿಡ್(Covid19) ಪ್ರಕರಣ ನಿಧಾನವಾಗಿ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಶುಕ್ರವಾರ ರಾತ್ರಿ 9 ಗಂಟೆವರೆಗೆ 5.20 ಲಕ್ಷ ಮಂದಿ ಕೋವಿಡ್ ಲಸಿಕೆ(Vaccine) ಪಡೆದುಕೊಂಡಿದ್ದಾರೆ 

Tap to resize

Latest Videos

undefined

Covid19 Vaccine: ಒಮಿಕ್ರೋನ್‌ ಮೇಲೆ ಲಸಿಕೆ ಎಷ್ಟು ಪರಿಣಾಮಕಾರಿ? ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

ರಾಜ್ಯದ 4 ಶಾಲಾ-ಕಾಲೇಜುಗಳಲಿ ಮತ್ತೆ 17 ವಿದ್ಯಾರ್ಥಿಗಳಿಗೆ ಸೋಂಕು

ಚಾಮರಾಜನಗರದಲ್ಲಿ(Chamarajanagar) ಮೂರನೇ ತರಗತಿ ವಿದ್ಯಾರ್ಥಿನಿ ಸೇರಿ ರಾಜ್ಯದ ನಾಲ್ಕು ಶಾಲಾ-ಕಾಲೇಜುಗಳಲ್ಲಿ ಹದಿನೇಳು ವಿದ್ಯಾರ್ಥಿಗಳಿಗೆ(Students) ಶುಕ್ರವಾರ ಕೊರೋನಾ(Coronavirus) ದೃಢಪಟ್ಟಿದೆ. ಇದರಿಂದಾಗಿ 10 ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು 420 ಮಂದಿಗೆ ಸೋಂಕು ತಗುಲಿದಂತಾಗಿದೆ. 

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಖಾಸಗಿ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ, ಕೊಡಗು(Kodagu) ಜಿಲ್ಲೆ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ 9 ವಿದ್ಯಾರ್ಥಿಗಳು, ತುಮಕೂರಿನ(Tumakuru) ವರದರಾಜ ನರ್ಸಿಂಗ್ ಕಾಲೇಜಿನಲ್ಲಿ ಐವರು ವಿದ್ಯಾರ್ಥಿಗಳು ಹಾಗೂ ಹುಬ್ಬಳ್ಳಿಯ(Hubbballi) ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. 

ಎಸ್‌ಡಿಎಂ ಒಪಿಡಿ ಮತ್ತೆ ಆರಂಭ: 

ಮುನ್ನೂರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ಧಾರವಾಡ ಎಸ್‌ಡಿಎಂ ಆಸ್ಪತ್ರೆಯ(Dharwad SDM Hospital) ಒಪಿಡಿಯನ್ನು ಶುಕ್ರವಾರದಿಂದ ಮತ್ತೆ ಆರಂಭಿಸಲಾಗಿದೆ.

ಒಮಿಕ್ರೋನ್‌ ಎದುರಿಸಲು ಸಿದ್ಧತೆ

ಬೆಂಗಳೂರು: ಕೋವಿಡ್‌ನ ಸಂಭವನೀಯ ಮೂರನೇ ಅಲೆ ಹಾಗೂ ಒಮಿಕ್ರೋನ್‌ ಎದುರಿಸಲು 18 ಸಾವಿರ ದಾದಿಯರಿಗೆ ಒಂದು ತಿಂಗಳ ತರಬೇತಿ, ಮಕ್ಕಳ ಐಸಿಯು, ಒಮಿಕ್ರೋನ್‌ ಸೋಂಕಿತರಿಗೆ ವಿಶೇಷ ಐಸಿಯು ಹಾಗೂ ವಾರ್ಡ್ ಸ್ಥಾಪನೆ ಸೇರಿದಂತೆ ಪರಿಸ್ಥಿತಿ ನಿಭಾಯಿಸಲು ಅಗತ್ಯ ಸಿದ್ಧತೆಗಳನ್ನು ಮಾಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್(K Sudhakar) ಹೇಳಿದ್ದಾರೆ.

ವೈದ್ಯ ಕಾಲೇಜುಗಳ ನಿರ್ದೇಶಕರೊಂದಿಗೆ ಸಭೆ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಮೊದಲ 2 ಅಲೆಯಲ್ಲಿ ಐಸಿಯುನಲ್ಲಿದ್ದ ಸೋಂಕಿತರಿಗೆ ಚಿಕಿತ್ಸೆ ನೀಡಲು ದಾದಿಯರ ಕೊರತೆಯಾಗಿತ್ತು. ಈಗ ಆ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಅಂತಿಮ ವರ್ಷದ ನರ್ಸಿಂಗ್, ಪ್ಯಾರಾ ಮೆಡಿಕಲ್ ನಲ್ಲಿ ಓದುತ್ತಿರುವ ಸುಮಾರು 18 ಸಾವಿರ ಮಂದಿ ಇದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಅವರಿಗೆ ಒಂದು ತಿಂಗಳ ತರಬೇತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಮಟ್ಟದಲ್ಲಿ ತೃತೀಯ ಹಂತದ ಆರೋಗ್ಯ ಸೇವೆ ನೀಡಲು 21 ವೈದ್ಯಕೀಯ ಕಾಲೇಜುಗಳಿವೆ. ವೈದ್ಯಕೀಯ ಕಾಲೇಜುಗಳ ವಿಭಾಗ ಮುಖ್ಯಸ್ಥರು, ಪ್ರೊಫೆಸರ್, ಹಿರಿಯ ವೈದ್ಯರು ಸೇರಿದಂತೆ ಪ್ರತಿಯೊಬ್ಬರೂ ಸಮಯೋಚಿತವಾಗಿ ವರ್ತಿಸಬೇಕು. ಗೃಹ ವೈದ್ಯರು, ಅಂತಿಮ ವರ್ಷದ ವೈದ್ಯ ವಿದ್ಯಾರ್ಥಿಗಳು ಸೇರಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

Omicron ಕರ್ನಾಟಕದಲ್ಲಿ ಈಗಾಗಲೇ ಹಬ್ಬಿದೆಯಾ?: ಆಘಾತಕಾರಿ ಸುದ್ದಿ ನೀಡಿದ ವೈದ್ಯರು

ಕೋವಿಡ್ ತಾಂತ್ರಿಕ ಸಮಿತಿ ಸಲಹೆಯ ಆಧಾರದ ಮೇಲೆ ಒಮಿಕ್ರೋನ್‌ ಸೋಂಕಿತರಿಗೆ ವಿಶೇಷ ಐಸಿಯು(ICU) ಹಾಗೂ ವಾರ್ಡ್ ಕಲ್ಪಿಸಲಾಗುವುದು. ಡೆಲ್ಟಾ(Delta) ಸೋಂಕಿತರಿಗೆ ಪ್ರತ್ಯೇಕ ವಾರ್ಡನಲ್ಲಿ ಚಿಕಿತ್ಸೆ(Treatment) ನೀಡಲು ನಿರ್ಧರಿಸಲಾಗಿದೆ. 

ಮಕ್ಕಳ ಐಸಿಯು ಸಿದ್ಧತೆಗೆ ಸೂಚನೆ:  

ಸಚಿವ ಸಂಪುಟ ನಿರ್ಧಾರದಂತೆ ಮಕ್ಕಳ ಐಸಿಯುಗಳ ಸಿದ್ಧತೆಗೆ ಸೂಚಿಸಲಾಗಿದೆ. ಅಗತ್ಯ ಉಪಕರಣಗಳ ಖರೀದಿ ಹಾಗೂ ಇತರ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಂಪೂರ್ಣ ವಿವರ ಪಡೆಯಲಾಗಿದೆ ಎಂದು ಡಾ. ಸುಧಾಕರ್ ಹೇಳಿದ್ದಾರೆ. 

55 ಕೋಟಿ ಕೋವಿಡ್ ರಿಸ್ಕ್‌ ಭತ್ಯೆ ಬಿಡುಗಡೆ

ಗೃಹ ವೈದ್ಯರ ಕೋವಿಡ್ ರಿಸ್ಕ್‌ ಭತ್ಯೆ ಬಾಕಿ ಇದ್ದು, ಹಣಕಾಸು ಇಲಾಖೆಯಿಂದ 55 ಕೋಟಿ ರು. ಬಿಡುಗಡೆ ಮಾಡಿಸಲಾಗಿದೆ. ಒಟ್ಟಾರೆಯಾಗಿ ಬೇಕಾಗಿದ್ದ 73 ಕೋಟಿ ರು.ಅನ್ನು ಒಂದೆರಡು ದಿನಗಳಲ್ಲಿ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸಲಾಗಿದೆ. ಪ್ರತಿ ತಿಂಗಳ ವೇತನ ಖಾತೆಗೆ ಜಮೆಯಾಗಲು ತಾಂತ್ರಿಕ ಸಮಸ್ಯೆಗಳಿದ್ದವು. ಡಿಸೆಂಬರ್ ನಿಂದ ವೇತನ ನೇರವಾಗಿ ಖಾತೆಗೆ ಜಮೆಯಾಗಲಿದೆ ಎಂದರು.
 

click me!