ಚೀನಿ ಆ್ಯಪ್‌ ದಂಧೆಕೋರರಿಗೆ ಭಾರತ ಪಾನ್‌ಕಾರ್ಡ್‌!

By Suvarna News  |  First Published Jan 2, 2021, 9:51 AM IST

ಸ್ಥಳೀಯ ಉದ್ಯಮಿಗಳೆಂದು ಬಿಂಬಿಸಿಕೊಳ್ಳಲು ಪಾನ್‌ಕಾರ್ಡ್‌ ಮಾಡಿಸಿಕೊಂಡಿದ್ದ ಚೀನಾ ಪ್ರಜೆಗಳಾದ ಹಾಂಗ್‌ಚುಂಗ್‌ ಲೀ | ಸಿಐಡಿ ಸೈಬರ್‌ ಕ್ರೈಂ ತನಿಖೆ ವೇಳೆ ಪತ್ತೆ | ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಗಳು ಪರಾರಿ | ವರದಿಯಲ್ಲಿ ಉಲ್ಲೇಖ?


ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಜ.02): ಸಾಲದ ಹೆಸರಿನಲ್ಲಿ ಜನರ ಗೌಪ್ಯ ಮಾಹಿತಿ ಸಂಗ್ರಹಕ್ಕೆ ಒಂದು ತಿಂಗಳು ರಾಜಧಾನಿಯಲ್ಲಿ ಬೀಡುಬಿಟ್ಟಿದ್ದ ಚೀನಾ ಕಂಪನಿಗಳ ಇಬ್ಬರು ದೂತರು ತಾವು ಸ್ಥಳೀಯ ಉದ್ದಿಮೆದಾರರು ಎಂಬಂತೆ ಬಿಂಬಿಸಿಕೊಳ್ಳಲು ಪಾನ್‌ ಕಾರ್ಡ್‌ ಸೇರಿದಂತೆ ಹಲವು ಸರ್ಕಾರಿ ದಾಖಲೆಗಳನ್ನು ಹೊಂದಿದ್ದರು ಎಂಬ ಮಹತ್ವದ ಸಂಗತಿ ಸಿಐಡಿ ಸೈಬರ್‌ ಕ್ರೈಂ ತನಿಖೆಯಿಂದ ಬೆಳಕಿಗೆ ಬಂದಿದೆ.

Latest Videos

undefined

ಚೀನಾ ದೇಶದ ಹಾಂಗ್‌ಚುಂಗ್‌ ಹಾಗೂ ಲೀ ಹೆಸರಿನ ವ್ಯಕ್ತಿಗಳು ಎಂದು ಗುರುತಿಸಲಾಗಿದ್ದು, ಲೋನ್‌ ಆ್ಯಪ್‌ಗಳ ವಂಚನೆ ಕೃತ್ಯ ಬೆಳಕಿಗೆ ಬಂದ ನಂತರ ಆರೋಪಿಗಳು ಅಜ್ಞಾತವಾಗಿದ್ದಾರೆ. ಆತನ ಪತ್ತೆಗೆ ಕೇಂದ್ರ ಗುಪ್ತಚರ ದಳದ ಜೊತೆಗೆ ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗೆಯೇ ಕೇಂದ್ರ ಗೃಹ ಹಾಗೂ ವಿದೇಶಾಂಗ ಇಲಾಖೆಗೆ ಸಹ ಚೀನಾ ನಾಗರಿಕರ ಬಗ್ಗೆ ಸಿಐಡಿ ವರದಿ ಸಲ್ಲಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಎಪಿಎಂಸಿ ತಿದ್ದುಪಡಿ ಮಸೂದೆಗೆ ರಾಜ್ಯಪಾಲ ವಾಲಾ ಅಂಕಿತ

ಕಳೆದ 2019ರ ಡಿ.15ರಂದು ಚೀನಾದ ಬೀಜಿಂಗ್‌ ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಂಗ್‌ಚುಂಗ್‌ ಹಾಗೂ ಲೀ ಬಂದಿದ್ದಾರೆ. ಬಳಿಕ ಕೋರಮಂಗಲ ವ್ಯಾಪ್ತಿಯಲ್ಲಿ ಅವರು ವಾಸ್ತವ್ಯ ಹೂಡಿದ್ದರು. ತರುವಾಯ ಚೀನಾ ಕಂಪನಿಗಳ ಸಹಭಾಗಿತ್ವದಲ್ಲಿ ಮಡಿವಾಳ, ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ಕೋರಮಂಗಲ ಸೇರಿ ಮೂರು ಕಡೆ ತಮ್ಮ ಕಚೇರಿಗಳನ್ನು ತೆರೆದಿದ್ದರು ಎಂಬುದು ಲೋನ್‌ ಆ್ಯಪ್‌ಗಳ ವಂಚನೆ ಕೃತ್ಯದ ತನಿಖೆ ವೇಳೆ ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ ಕಂಪನಿಗಳ ಪೂರ್ವಾಪರ ಶೋಧಿಸಿದಾಗ ಚೀನಾದ ಪ್ರಜೆಗಳ ಹೆಸರಿನಲ್ಲಿ ಪಾನ್‌ ಕಾರ್ಡ್‌ ಸೇರಿ ಹಲವು ಸರ್ಕಾರಿ ದಾಖಲೆಗಳು ಲಭಿಸಿವೆ. ಸ್ಥಳೀಯ ಉದ್ದಿಮೆದಾರರಂತೆ ತೋರಿಸಲು ಸುಳ್ಳು ಮಾಹಿತಿ ನೀಡಿ ಅವರು ಸರ್ಕಾರಿ ದಾಖಲೆ ಪಡೆದಿರಬಹುದು. ಇದಕ್ಕೆ ಚೀನಾದ ನಾಗರಿಕರಿಗೆ ಸ್ಥಳೀಯರ ನೆರವು ಇರಲೇಬೇಕು. ಹೀಗಾಗಿ ವಿದೇಶಿಗರಿಗೆ ಪಾನ್‌ ಕಾರ್ಡ್‌ ದಾಖಲೆಗಳನ್ನು ಸೃಷ್ಟಿಸಿಕೊಟ್ಟಸ್ಥಳೀಯ ಜಾಲದ ಬಗ್ಗೆ ಪತ್ತೆದಾರಿಕೆ ಮುಂದುವರೆದಿದೆ. ಈ ಕುರಿತು ಗುಪ್ತದಳಗಳಿಗೆ ಸಹ ಮಾಹಿತಿ ಕೊಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದು ತಿಂಗಳಲ್ಲಿ ಅಸಂಖ್ಯ ಜನರ ಮಾಹಿತಿ:

ಅಂತರ್ಜಾಲದಲ್ಲಿ ನಾಗರಿಕರಿಗೆ ಆರ್ಥಿಕ ನೆರವು ನೀಡಲು ಅಸಂಖ್ಯಾತ ಲೋನ್‌ ಆ್ಯಪ್‌ಗಳು ಜನ್ಮತಾಳಿವೆ. ಇವುಗಳಲ್ಲಿ ಬಹುತೇಕ ಆ್ಯಪ್‌ಗಳು ಚೀನಾ ದೇಶದಿಂದ ಕಾರ್ಯನಿರ್ವಹಣೆಯಾಗುತ್ತವೆ. ಒಂದೇ ಕಂಪನಿಯೇ ಬೇರೆ ಬೇರೆ ಹೆಸರಿನಲ್ಲಿ ಸಹ ಬಂಡವಾಳ ಹೂಡಿಕೆ ಮಾಡಿ ಗ್ರಾಹಕರನ್ನು ಸೆಳೆದಿದೆ. ಈ ರೀತಿ ಕಂಪನಿಯೊಂದರ ಪ್ರತಿನಿಧಿಯಾಗಿ 2019ರಲ್ಲಿ ಡಿಸೆಂಬರ್‌ನಲ್ಲಿ ಬೆಂಗಳೂರಿಗೆ ಬಂದಿದ್ದ ಹಾಂಗ್‌ ಚುಂಗ್‌ ಹಾಗೂ ಲೀ ನಗರದಲ್ಲಿ ಒಂದು ತಿಂಗಳು ನೆಲೆಸಿದ್ದರು.

ಬೆಳಗಾವಿ: ಕನ್ನಡ ಧ್ವಜ ಹಾರಿಸಿದ್ದ ತಾಳೂಕರ ಅಂಗಡಿಗೆ ಬೆಂಕಿ

ಈ ವೇಳೆ ಮೂರು ಕಡೆ ಕಂಪನಿಯ ಕಚೇರಿಗಳನ್ನು ಆರಂಭಿಸಿದ ಆರೋಪಿಗಳು, ಸಾಲ ವಿತರಣೆಗೆ ಗ್ರಾಹಕರನ್ನು ಸೆಳೆಯಲು ನೂರಾರು ಏಜೆಂಟ್‌ಗಳನ್ನು ನೇಮಿಸಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಸಾವಿರಾರು ಜನರ ವಿದ್ಯಾರ್ಹತೆ ಸೇರಿದಂತೆ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಅವರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

500 ಏಜೆಂಟ್‌ಗಳಿಗೂ ದೋಖಾ

ಲೋನ್‌ ಆ್ಯಪ್‌ಗಳ ವಂಚನೆ ಸಂಬಂಧ ತನಿಖೆ ಮುಂದುವರೆಸಿರುವ ಸಿಐಡಿ ಅಧಿಕಾರಿಗಳು, ಆ ಕಂಪನಿಗಳ ಸುಮಾರು 500ಕ್ಕೂ ಅಧಿಕ ಏಜೆಂಟರುಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ತಮಗೆ ಗೊತ್ತಿಲ್ಲದೆ ತಪ್ಪು ಮಾಡಿದ್ದೇವೆ. ಕಮಿಷನ್‌ ಆಸೆಗೆ ಕಂಪನಿಯ ಸೂಚನೆ ಪಾಲಿಸಿರುವುದಾಗಿ ಏಜೆಂಟ್‌ಗಳು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದುವರೆಗೆ ತನಿಖೆಯಲ್ಲಿ ಏಜೆಂಟ್‌ಗಳು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಚೀನಾದಿಂದಲೇ ನಿಯಂತ್ರಣ

ಲೋನ್‌ ಆ್ಯಪ್‌ಗಳ ಕಚೇರಿಗಳು ಬೆಂಗಳೂರಿನಲ್ಲೂ ಇವೆ. ಆದರೆ ಅವುಗಳ ಸಂಪೂರ್ಣ ನಿಯಂತ್ರಣ ಚೀನಾದ ಕೇಂದ್ರ ಕಚೇರಿಯ ಕೈಯಲ್ಲಿದೆ. ಅಲ್ಲಿನ ಸರ್ವರ್‌ನಲ್ಲಿಯೇ ಗ್ರಾಹಕರ ಗೌಪ್ಯ ಮಾಹಿತಿ ಅಡಕವಾಗಿದೆ. ಹೀಗಾಗಿ ಈ ತಾಂತ್ರಿಕ ಸಮಸ್ಯೆಯೇ ತನಿಖೆಗೆ ಪ್ರಮುಖ ಅಡ್ಡಿಯಾಗಿದೆ. ಕೃತ್ಯದ ಸೂತ್ರಧಾರನ ಪತ್ತೆಯೇ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ಲೇಸ್ಟೋರ್‌ನಲ್ಲಿ 240 ಲೋನ್‌ ಆ್ಯಪ್‌ಗಳು!

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ 240 ಲೋನ್‌ ಆ್ಯಪ್‌ಗಳನ್ನು ಪತ್ತೆಹಚ್ಚಲಾಗಿದೆ. ಈಗಾಗಲೇ ಅವುಗಳ ಪೈಕಿ 100 ಆ್ಯಪ್‌ಗಳನ್ನು ನಿರ್ಬಂಧಿಸುವಂತೆ ಕೋರಿ ಕೇಂದ್ರ ಗೃಹ ಇಲಾಖೆ ಹಾಗೂ ಗೂಗಲ್‌ ಸಂಸ್ಥೆಗೆ ವರದಿ ಸಲ್ಲಿಸಲಾಗಿದೆ. ಇನ್ನುಳಿದ 140 ಆ್ಯಪ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

click me!