ಸರಳ ವಾಸ್ತುವಿನಿಂದ ದೇಶ ವಿದೇಶಗಳಲ್ಲಿ ಖ್ಯಾತರಾಗಿದ್ದ ಚಂದ್ರಶೇಖರ್ ಗುರೂಜಿ ಅವರ ಅಂತ್ಯಕ್ರಿಯೆ ಬುಧವಾರ ಹುಬ್ಬಳ್ಳಿಯಲ್ಲಿ ನೆರವೇರಿದೆ. ವೀರಶೈವ ಲಿಂಗಾಯತ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿದೆ.
ಹುಬ್ಬಳ್ಳಿ (ಜುಲೈ 6): ಆಪ್ತರಿಂದಲೇ ಭೀಕರವಾಗಿ ಹತ್ಯೆಗೀಡಾದ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ (Chandrashekhar Guruji) ಅವರ ಅಂತ್ಯ ಸಂಸ್ಕಾರ ಹುಬ್ಬಳ್ಳಿಯ ಸುಳ್ಳ (Sulla) ಗ್ರಾಮದಲ್ಲಿ ರವೇರಿದೆ. ಈ ವೇಳೆ ಅವರ ಪತ್ನಿ ಅಂಕಿತಾ, ಮಗಳು ಸ್ವಾತಿ ಹಾಗೂ ಸರಳ ವಾಸ್ತು ಸಂಸ್ಥೆಯ ಉದ್ಯೋಗಿಗಳ ಅಕ್ರಂದನ ಮುಗಿಲು ಮುಟ್ಟಿತ್ತು.
ವೀರಶೈವ ಲಿಂಗಾಯತ ವಿಧಿವಿಧಾನದ ಪ್ರಕಾರ ಅಂತ್ಯಕ್ರಿಯೆ ನೆರವೇರಿದ್ದು, ಈ ವೇಳೆ ನೂರಾರು ಉದ್ಯೋಗಿಗಳು ಕಣ್ಣೀರಿಟ್ಟರು. 8 ಸ್ವಾಮೀಜಿಗಳು ಅಂತ್ಯಕ್ರಿಯೆಯನ್ನು ನಡೆಸಿಕೊಟ್ಟರು. ಗುರೂಜಿಯ ಅಂತ್ಯಕ್ರಿಯೆಯಲ್ಲಿ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್, ನಿಡುಮಾಮಿಡಿ ಶ್ರೀಗಳು ಭಾಗಿಯಾಗಿದ್ದರು.
ಗುರೂಜಿಯ ಸಹೋದರನ ಹಿರಿಯ ಮಗ ಸಂತೋಷ್ ಈ ವೇಳೆ ಅಂತಿಮ ವಿಧಿವಿಧಾನವನ್ನು ನಡೆಸಿದರು. 10 ಜನ ಸ್ವಾಮೀಜಿಗಳಿಂದ ಈ ವೇಳೆ ಪೂಜೆ ಮಾಡಿಸಲಾಯಿತು. ಪತ್ನಿ ಅಂಕಿತಾ ಅವರ ಮಾಂಗಲ್ಯ ಬಳೆ ತೆಗೆಸಿ ಗೂರೂಜಿ ಮೃತ ದೇಹಕ್ಕೆ ಪೂಜೆ ಮಾಡಲಾಯಿತು.
ಪಂಚಾಕ್ಷರಿ ಮಂತ್ರ, ಮಂಗಳಾರತಿ ಬಳಿಕ ಮೃತದೇಹದ ಹಣೆಗೆ ವಿಭೂತಿ ಧಾರಣೆ ಮಾಡಿ ಅವರ ಪಾದದ ಮೆಲೆ ಸ್ವಾಮಿಜಿಗಳು ಪಾದ ಇಟ್ಟು ಪೂಜೆ ನಡೆಸಿದರು. ಅಷ್ಟ ದಿಕ್ಕುಗಳಲ್ಲಿ ಮಹಾಂತ್ರ ಬರೆದು ಇಡಲಾಯಿತು. ಕೊನೆಯಲ್ಲಿ ಪುಷ್ಪಾರ್ಚನೆ ಅಂತ್ಯಕ್ರಿಯೆಯ ವಿಧಿವಿಧಾನ ಮುಗಿಸಲಾಯಿತು. ಇದಕ್ಕೂ ಮುನ್ನ ಸಮಾಧಿ ಸ್ತಳದಲ್ಲಿ ಗುರೂಜಿ ಅವರ ಅಕ್ಕ ಕಣ್ಣೀರಿಡುತ್ತಲೇ ಮೂರ್ಛೆ ಹೋದ ಘಟನೆಯೂ ನಡೆಯಿತು.
ನಾಯಿಯ ಮೂಕರೋದನ: ಅಂತ್ಯಕ್ರಿಯೆಯ ವೇಳೆ ಚಂದ್ರಶೇಖರ್ ಗುರೂಜಿ ಅವರು ಸಾಕಿದ್ದ ನಾಯಿ ಎಲ್ಲರ ಗಮನಸೆಳೆಯಿತು. ಮೃತದೇಹವನ್ನು ವೀಕ್ಷಿಸಿದ ನಾಯಿ, ಸಾಕಷ್ಟು ಸಮಯದವರೆಗೆ ಸಮಾಧಿ ಸ್ಥಳದಲ್ಲಿಯೇ ಕುಳಿತುಕೊಂಡಿತ್ತು.
ಚಂದ್ರಶೇಖರ ಗುರೂಜಿ ಕೊಲೆಯ ಹಿಂದಿನ ಇನ್‌ಸೈಡ್ ಸ್ಟೋರಿ..!
ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ: ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಅವರನ್ನು ಮಂಗಳವಾರ ಹುಬ್ಬಳ್ಳಿಯ ಉಣಕಲ್ ಕರೆಯ ಬಳಿಯ ಪ್ರೆಸಿಡೆಂಟ್ ಹೋಟೆಲ್‌ನ ರಿಸಪ್ಷನ್‌ನಲ್ಲಿ ಹತ್ತಆರು ಸಾರ್ವಜನಿಕರ ಮುಂದೆಯೇ ಅವರ ಆಪ್ತರು ಬರ್ಬರವಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಈ ಭೀಕರ ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕ್ಷಣಮಾತ್ರದಲ್ಲಿ ರಾಜ್ಯದ್ಯಂತ ವೈರಲ್ ಆಗಿತ್ತು. ಈ ಹಿಂದೆ ಚಂದ್ರಶೇಖರ್ ಗುರೂಜಿ ಅವರು ಆರಂಭಿಸಿದ್ದ ಸರಳ ವಾಸ್ತು ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಾಂತೇಶ ಶಿರೂರ ಮತ್ತು ಮಂಜುನಾಥ್ ಮರೆವಾಡ ಹಂತಕರು. ಘಟನೆ ನಡೆದ ಕೇವಲ 4 ಗಂಟೆಯೊಳಗೆ ಹಂತಕರನ್ನು ಬಂಧಿಸಲು ಹುಬ್ಬಳ್ಳಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದರು. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಸರಳ ವಾಸ್ತು ಗುರೂಜಿ ಹತ್ಯೆ ಮಾಡುವ ಸುಳಿವು ನೀಡಿದ್ದನಾ ಆರೋಪಿ? ಫೇಸ್‌ಬುಕ್ ಪೋಸ್ಟ್ ಈಗ ವೈರಲ್
ಚಂದ್ರಶೇಖರ್ ಗುರೂಜಿ ಅವರ ಎದೆಯ ಭಾಗಕ್ಕೆ ಹಾಗೂ ಸೊಂಟದ ಭಾಗಕ್ಕೆ ಹಂತಕರು 1 ನಿಮಿಷದಲ್ಲೂ 50ಕ್ಕೂ ಅಧಿಕ ಬಾರಿ ಇರಿದಿದ್ದರು. ತಮ್ಮ ಸಂಸ್ಥೆಯಲ್ಲಿ ಆಪ್ತನಾಗಿದ್ದ ಮಹಾಂತೇಶ ಎನ್ನುವವನ ಹೆಸರಿಗೆ ಗುರೂಜಿ ಕೆಲ ಆಸ್ತಿ ನೋಂದಾಯಿಸಿದ್ದರು. ಇದರಲ್ಲಿ ಕೆಲವು ಆಸ್ತಿಯನ್ನು ಆತ ಮಾರಿದ್ದ. ಈ ಬಗ್ಗೆ ಭಿನ್ನಾಭಿಪ್ರಾಯ ಬಂದು 2016ರಲ್ಲಿ ಈತ ಸಂಸ್ಥೆಯನ್ನು ತೊರೆದಿದ್ದ. ಅಸ್ತಿ ಕುರಿತಾಗಿ ಆಗಿರುವ ಗಲಾಟೆಯೇ ಕೊಲೆಗೆ ಮೂಲ ಕಾರಣ ಎನ್ನಲಾಗಿದೆ.
ಚಂದ್ರಶೇಖರ ಗುರೂಜಿ ಹತ್ಯೆ ಕುರಿತು ಅವರ ಸಹೋದರ ಸಂಬಂಧಿ ಸಂಜಯ ಅಂಗಡಿ ಎಂಬುವವರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರಶೇಖರ ಅಂಗಡಿ ಅವರು ‘ಚಂದ್ರಶೇಖರ ಗೌರಿ ಪ್ರೈ. ಲಿ.’ (ಸಿ ಜಿ.ಪರಿವಾರ ಪ್ರೈ.ಲಿ.) ಎನ್ನುವ ಹೆಸರಿನಲ್ಲಿ ಸರಳ ವಾಸ್ತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇದು ಸೇರಿ ಇನ್ನಿತರ ಇತರೆ ಕಂಪನಿಗಳಿಗೆ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 2008ರಲ್ಲಿ ಮಹಾಂತೇಶ ಶಿರೂರ ಎಂಬಾತನನ್ನು ಕೆಲಸಕ್ಕೆ ತೆಗೆದುಕೊಂಡಿದ್ದರು. ಬಳಿಕ 2015ರಲ್ಲಿ ಇವರನ್ನು ಈ ಕಂಪನಿಗೆ ವೈಸ್ ಪ್ರೆಸಿಡೆಂಟ್ ಎಂದು ನೇಮಕ ಮಾಡಲಾಗಿತ್ತು.