ನಾನು ಶಿವ, ನೀನು ಪಾರ್ವತಿ ಎಂದು ಅತ್ಯಾಚಾರ: ನಿತ್ಯಾನಂದ ವಿರುದ್ಧ ಸಿಡಿದೆದ್ದ 'ಶಿಷ್ಯೆ'!

By Web DeskFirst Published Nov 24, 2019, 7:30 AM IST
Highlights

ನಿತ್ಯಾನಂದ ವಿರುದ್ಧ ಕೆನಡಾ ಯುವತಿ ರೇಪ್‌ ದೂರು!| ನಾನು ಶಿವ, ನೀನು ಪಾರ್ವತಿ ಎಂದು ಅತ್ಯಾಚಾರ| ರಾಮನಗರ ಪೊಲೀಸರಿಗೆ ಇ-ಮೇಲ್‌ನಲ್ಲಿ ರವಾನೆ| ಸತತ 35 ತಿಂಗಳು ಲೈಂಗಿಕ ಶೋಷಣೆ ನೀಡಿದ್ದಾಗಿ ಹೇಳಿಕೆ|  ಕೆನಡಾ ಪೊಲೀಸರಿಗೂ ನಿತ್ಯಾನಂದನ ವಿರುದ್ಧ ದೂರು|  ಅತ್ಯಾಚಾರ ಕೇಸ್‌ ದಾಖಲಿಗೆ ರಾಮನಗರ ಪೊಲೀಸ್‌ ಸಿದ್ಧತೆ

ಬೆಂಗಳೂರು[ನ.24]: ಗುಜರಾತ್‌ನ ಯುವತಿಯರ ನಾಪತ್ತೆ ಪ್ರಕರಣದ ಬೆನ್ನಲ್ಲೇ ರಾಮನಗರ ಜಿಲ್ಲೆಯ ಬಿಡದಿ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದು, ಆತನ ವಿರುದ್ಧ ವಿದೇಶದ ಮಾಜಿ ಭಕ್ತೆಯೊಬ್ಬಳು ಅತ್ಯಾಚಾರ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಕೆನಡಾ ಮೂಲದ ಫ್ಲಾರಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಸಂತ್ರಸ್ತೆಯಾಗಿದ್ದು, ನ.12ರಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾಳೆ. ‘ನಾನು ದೈವ ಸ್ವರೂಪಿ’ ಎಂದು ನಂಬಿಸಿ ತನ್ನನ್ನು ನಿತ್ಯಾನಂದ ಲೈಂಗಿಕವಾಗಿ ಶೋಷಿಸಿದ್ದಾನೆ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎನ್ನಲಾಗಿದೆ.

ನಿತ್ಯಾನಂದ ಆಶ್ರಮದ ‘ಹಿಂಸೆ’ ಬಿಚ್ಚಿಟ್ಟ ಬಾಲಕಿ!

ಈ ದೂರು ಸ್ವೀಕರಿಸಿರುವ ರಾಮನಗರ ಪೊಲೀಸರು, ನಿತ್ಯಾನಂದನ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ 376 ಆರೋಪದಡಿ (ಅತ್ಯಾಚಾರ) ಎಫ್‌ಐಆರ್‌ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಈಗಾಗಲೇ ಗುಜರಾತ್‌ ಯುವತಿಯರ ನಾಪತ್ತೆ ಪ್ರಕರಣದಲ್ಲಿ ದೇಶ ತೊರೆದಿರುವ ನಿತ್ಯಾನಂದನಿಗೆ ಮತ್ತಷ್ಟುಸಂಕಷ್ಟಎದುರಾಗಿದೆ ಎಂದು ತಿಳಿದು ಬಂದಿದೆ.

ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆಯೇ ಸಂತ್ರಸ್ತೆ:

ಕೆನಡಾ ಮೂಲದ ಫ್ಲಾರಾ 2015ರಲ್ಲಿ ನಿತ್ಯಾನಂದನ ಅನುಯಾಯಿಯಾಗಿ ಆತನ ಆಶ್ರಮ ಸೇರಿದ್ದಳು. ಆಗ ತನ್ನ ಆಶ್ರಮದ ಪದ್ಧತಿಯಂತೆ ಆಕೆಗೆ ನಿತ್ಯಾ ಸುದೇವಿ ಎಂದು ಹೊಸದಾಗಿ ನಾಮಕರಣ ಮಾಡಿದ್ದ ನಿತ್ಯಾನಂದ, ಬಳಿಕ ಆಕೆಯನ್ನು ತನ್ನ ಆಶ್ರಮದ ಪ್ರಚಾರಕ್ಕೆ ಸಂಬಂಧಿಸಿದ ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥೆಯಾಗಿ ನೇಮಿಸಿದ್ದ. ಹೀಗೆ ಕಾಲ ಕಳೆದಂತೆ ನಿತ್ಯಾನಂದನ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಸಂತ್ರಸ್ತೆಯನ್ನು ಕ್ರಮೇಣ ಆತ ಲೈಂಗಿಕವಾಗಿ ಶೋಷಣೆ ಮಾಡಲು ಶುರುಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ.

ನಿತ್ಯಾನಂದ ನಮ್ಮನ್ನು ಅಪಹರಿಸಿಲ್ಲ, ಅಪ್ಪನ ವಿರುದ್ಧ ಜನಾರ್ದನ ಶರ್ಮಾ ಪುತ್ರಿ ವಿಡಿಯೋ

ಅಂತೆಯೇ ಸುಮಾರು 35 ತಿಂಗಳು ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಕಿರುಕುಳ ಸಹಿಸಲಾರದೆ ಕೊನೆಗೆ ಫ್ಲಾರಾ 2018ರಲ್ಲಿ ಬಿಡದಿ ಆಶ್ರಮ ತೊರೆದು ಕೆನಡಾಕ್ಕೆ ಮರಳಿದ್ದಳು. ಇತ್ತೀಚೆಗೆ ಗುಜರಾತ್‌ ಯುವತಿಯರ ನಿಗೂಢ ನಾಪತ್ತೆ ಪ್ರಕರಣದ ಬಳಿಕ ತನ್ನ ಮೇಲೆ ನಡೆದ ಅತ್ಯಾಚಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ ಆಕೆ, ನ.12ರಂದು ರಾಮನಗರ ಹಾಗೂ ಕೆನಡಾ ಪೊಲೀಸರಿಗೆ ನಿತ್ಯಾನಂದನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ದೂರು ನೀಡಿದ್ದಾಳೆ ಎಂದು ಮೂಲಗಳು ಹೇಳಿವೆ.

ಬೆತ್ತಲೆ ಫೋಟೋ, ಚಾಟಿಂಗ್‌!

ನಾನು ಸಾಕ್ಷಾತ್‌ ಶಿವನ ಸ್ವರೂಪಿ. ನೀನು ಪಾರ್ವತಿ ಎಂದು ಹೇಳಿ ನಿತ್ಯಾನಂದ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.

ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸುತ್ತಿದ್ದ ನಿತ್ಯಾನಂದ, ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಧರ್ಮ ಮತ್ತು ಆಧ್ಯಾತ್ಮದಲ್ಲಿ ಒಂದಾಗಬೇಕಾದರೆ ನೀನು ಸಹಕರಿಸಬೇಕು. ನಾನು ಸಾಕ್ಷಾತ್‌ ಶಿವನ ಸ್ವರೂಪಿ, ನೀನು ಪಾರ್ವತಿ ಎಂಬುದಾಗಿ ಹೇಳಿ ನಂಬಿಸಿ ಶೋಷಣೆ ಮಾಡಿದ್ದ. ಅಲ್ಲದೆ, ನನ್ನ ಬೆತ್ತಲೆ ಭಾವಚಿತ್ರಗಳನ್ನು ಸಹ ಕಳುಹಿಸುವಂತೆ ನಿತ್ಯಾನಂದ ಕೇಳುತ್ತಿದ್ದ. ತನ್ನ ಮುಂದೆ ನೃತ್ಯ ಮಾಡಲು ಮಹಿಳಾ ಭಕ್ತರ ತಂಡವನ್ನೇ ನಿತ್ಯಾನಂದ ಕಟ್ಟಿದ್ದಾನೆ. ಅಪ್ರಾಪ್ತ ಮಕ್ಕಳನ್ನು ಸಹ ಆತ ಲೈಂಗಿಕವಾಗಿ ಶೋಷಿಸುತ್ತಾನೆ ಎಂದು ಫ್ಲಾರಾ ಗಂಭೀರ ಆರೋಪ ಮಾಡಿದ್ದಾಳೆ.

'ಯಾರನ್ನೂ ಬಂಧಿಸಿಟ್ಟಿಲ್ಲ, ಸನ್ಯಾಸಿಯರ ಭೇಟಿಗೆ ಕುಟುಂಬಗಳಿಗೆ ತಡೆ ಒಡ್ಡಿಲ್ಲ'

ನವೆಂಬರ್ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!