ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಖಾದರ್
ಬ್ರಹ್ಮಾವರ(ಜು.23): ಗುತ್ತಿಗೆದಾರ ಸಂತೋಷ್ ಪಾಟೀಲ್ ಜೀವ ಉಳಿಸಲು ನಿಮ್ಮಿಂದ ಆಗಿಲ್ಲ, ಅವರ ಪತ್ನಿಯ ಕಣ್ಣೀರನ್ನಾದರೂ ಒರೆಸಿ. ಈ ಪ್ರಕರಣವನ್ನು ಕನಿಷ್ಠ ತನಿಖೆಯಾದರೂ ಮಾಡಿಸಿ, ರಾಜ್ಯದ ಮಹಿಳೆಯರಿಗೆ ನಿಮ್ಮ ಪರ ಸರ್ಕಾರ ಇದೆ ಎಂಬ ಸಂದೇಶವಾದರೂ ಕೊಡಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸ್ವತಃ ಪಾಟೀಲ್ ಪತ್ನಿ ಅವರೇ ರಾಜ್ಯಪಾಲರಿಗೆ ದೂರು ನೀಡಿದ್ದರು. ಈಗ ಪ್ರಕರಣದಲ್ಲಿ ಪಾಟೀಲ್ ಅವರ ಪತ್ನಿಗೆ ನ್ಯಾಯ ಸಿಗದಿದ್ದರೆ ಇಡೀ ಕರ್ನಾಟಕದ ಮಹಿಳೆಯರಿಗೆ ದ್ರೋಹ ಬಗೆದಂತೆ. ಕರ್ನಾಟಕದ ಮಹಿಳೆಯರು ರಾಜ್ಯ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.
undefined
40% ಕಮಿಷನ್ : ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್‌ಚಿಟ್, ಮುಂದೇನು?
ಜಮೀರ್ ಹೇಳಿದ್ದು ಸರಿ:
ಒಂದು ಸಮುದಾಯದ ಬೆಂಬಲವಿದ್ದರೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಹೇಳಿರುವುದು ಸರಿಯಾಗಿದೆ. ಎಲ್ಲಾ ಸಮುದಾಯವನ್ನು ವಿಶ್ವಾಸದಿಂದ ತೆಗೆದುಕೊಂಡು ಹೋಗಿ ಎಂಬುದು ಜಮೀರ್ ಹೇಳಿಕೆ ಅರ್ಥ. ಕಾಂಗ್ರೆಸ್ ಪಕ್ಷದ ಜೊತೆ ಎಲ್ಲಾ ವರ್ಗ ಸಮುದಾಯದವರು ಇದ್ದಾರೆ. ಬಿಜೆಪಿ ಸರ್ಕಾರ ಲಿಂಗಾಯತ, ಒಕ್ಕಲಿಗ, ಎಸ್ಸಿ ಎಸ್ಟಿಯಾರಿಗೂ ಏನು ಮಾಡಿಲ್ಲ. ಆದರೆ ಕಾಂಗ್ರೆಸ್ ಎಲ್ಲಾ ಸಮುದಾಯದವರು ನೆಮ್ಮದಿಯಿಂದ ಜೀವನ ನಡೆಸುವಂತೆ ಆಡಳಿತ ಕೊಟ್ಟಿದೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು.
ಸಿದ್ದರಾಮ ಉತ್ಸವದಲ್ಲಿ ಸಂಪೂರ್ಣ ರಾಜ್ಯದ ಕಾಂಗ್ರೆಸ್ ನಾಯಕರು ಸಮಾವೇಶದಲ್ಲಿ ಭಾಗವಹಿಸುತ್ತಾರೆ, ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಈ ಬಗ್ಗೆ ಕರೆ ಕೊಟ್ಟಿದ್ದಾರೆ. ಸಮಾವೇಶದಲ್ಲಿ ಸಿದ್ದರಾಮಯ್ಯ ಆಡಳಿತ ಮತ್ತು ಈಗಿನ ಬಿಜೆಪಿ ಆಡಳಿತ ಜನರ ಮುಂದಿಡುತ್ತೇವೆ ಎಂದು ಖಾದರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.